ಕವಿಗಳು ಹೆಚ್ಚಾದಷ್ಟೂ ದುಷ್ಟರ ಸಂಖ್ಯೆ ಕಡಿಮೆ

7

ಕವಿಗಳು ಹೆಚ್ಚಾದಷ್ಟೂ ದುಷ್ಟರ ಸಂಖ್ಯೆ ಕಡಿಮೆ

Published:
Updated:

ಡಾ.ದೇವೇಂದ್ರಕುಮಾರ ಹಕಾರಿ ವೇದಿಕೆ (ಕುಷ್ಟಗಿ): ಸಮಾಜಕ್ಕೆ ಕವಿದ ಭ್ರಮೆ, ಮಂಪರು ಪೊರೆಯನ್ನು ಕಳಚುವ ತಾಕತ್ತು  ಕಾವ್ಯಕ್ಕಿದೆ, ಶೀಲಗೆಟ್ಟ ನಾಗರಿಕ ಸಮಾಜದಲ್ಲಿ ಪ್ರಜಾಪ್ರಭುತ್ವ ಕಾಪಾಡುವ ಸಾಮಾಜಿಕ ಕಳಕಳಿಯೊಂದಿಗೆ ಬರಹಗಾರರು, ಕವಿಗಳು ಗಂಭೀರ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಲೇಖಕ ಈರಪ್ಪ ಎಂ.ಕಂಬಳಿ ಭಾನುವಾರ ಇಲ್ಲಿ ಹೇಳಿದರು. ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನದಲ್ಲಿನ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾರೂ ಹಳ್ಳಿಗಳತ್ತ ತಿರುಗಿ ನೋಡುತ್ತಿಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸ್ನಾತಕೋತ್ತರ ಪದವಿಪಡೆದವರೂ ಗಾರ್ಡ್‌ಗಳಾಗಿ ಬಾಗಿಲು ಕಾಯುವ ಕೆಲಸ ಮಾಡುತ್ತಿರುವ ಬಗ್ಗೆ ಗಂಭೀರ ಆಲೋಚನೆ ಇಲ್ಲ ಎಂದು ವಿಷಾದಿಸಿದರು.  ಕವಿಗಳು, ಕವಿ ಮನಸ್ಸುಗಳು ಹೆಚ್ಚಾದಷ್ಟು ಸಮಾಜದಲ್ಲಿ ನೀಚರು, ದುಷ್ಟರ ಸಂಖ್ಯೆ ಕನಿಷ್ಟಮಟ್ಟದಲ್ಲಾದರೂ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಕಂಬಳಿ, ಪ್ರಜಾಪ್ರಭುತ್ವದ ಯಶಸ್ವಿಯಲ್ಲಿ ಪ್ರಮುಖ ಪಾತ್ರ ವಹಿಸುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳು ಯಾವುವೂ ನೆಟ್ಟಗಿಲ್ಲ ಇಂಥ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾದರೆ ಗಂಭೀರ ಆಲೋಚನೆಗಳನ್ನು ಹರಿಬಿಡುವಂಥ ಹೊಣೆಗಾರಿ ಕಾವ್ಯಗಳಲ್ಲಿ ಅಭಿವ್ಯಕ್ತಿಗೊಳ್ಳಬೇಕು ಎಂದರು.ಬರವಣಿಗೆ ಎಂಬುದು ಹುಡುಗಾಟವಲ್ಲ, ದಟ್ಟವಾದ ಅನುಭವ ಇದ್ದರೂ ಅಭಿವ್ಯಕ್ತಿಗೆ ಬೇಕಾದ ತಾಲೀಮು, ಸಾಧನೆ ಸಿದ್ಧತೆಗಳು ಇಂದಿನ ಕವಿಗಳಲ್ಲಿ ಕಂಡುಬರುತ್ತಿಲ್ಲ. ಕಾವ್ಯ ಸಮಾಜಮುಖಿ ನೆಲೆಯಲ್ಲಿ ನಿಲ್ಲಬೇಕೆಂದರೆ ಯಾವುದಾದರೂ ಒಂದು ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು, ಕೇವಲ ಹನಿಗವನದಿಂದ ಕಾವ್ಯರಚನೆಗಿಳಿಯದೇ ದೀರ್ಘಕಾವ್ಯ ಬರೆಯುವುದಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಕವಿಗೋಷ್ಠಿಯಲ್ಲಿ ಕವನಗಳನ್ನು ವಿಶ್ಲೇಷಿಸಿದ ಕಂಬಳಿ, ಅಸ್ಪಷ್ಟ ಕೆಲವೇ ವಿಷಯಗಳತ್ತ ಕವನಗಳು ಗಿರಕಿಹೊಡೆದವು ಆದರೆ ಕಾವ್ಯ ವರದಿ, ಘೋಷಣೆ, ಪ್ರತಿಕ್ರಿಯೆ ಆಗದೇ ಕವನ ರಚನೆ ಕರಕುಶಲ ಕಸುಬಿನಂತೆ ಹೊರಹೊಮ್ಮಬೇಕು ಎಂದರು. ಇತರರು ಹಾಡಬೇಕೆಂದು ನಾಡಿನ ಹಿರಿಯ ಕವಿಗಳು ಕಾವ್ಯ ರಚನೆ ಮಾಡಲಿಲ್ಲ,ಕವಿಯಾಗಬೇಕೆಂಬ ಕನಸು ಹೊತ್ತವರು ಅಂಥ ಕಾವ್ಯಗಳನ್ನು ಓದಿ ಸ್ವತಃ ಅನುಭವಿಸಬೇಕು, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಕಮ್ಮಟಗಳು ನಡೆಯಬೇಕು ಎಂದರು.ಆಶಯ ಭಾಷಣ ಮಾಡಿದ ಸಾಹಿತಿ ವಿ.ಹರಿನಾಥಬಾಬು, ಬರವಣಿಗೆಯಿಂದ ಬದುಕಿಗೆ ಕಂದಕ ಸೃಷ್ಟಿಯಾಗದಂತೆ ಬರೆಯುವ ಕೌಶಲ ಬೆಳೆಸಿಕೊಳ್ಳಬೇಕು ಬರಹಗಾರ, ಚಿಂತಕರು ನಾಣ್ಯದ ಎರಡು ಮುಖಗಳಿದ್ದ ಹಾಗೆ, ಸಾರ್ವಜನಿಕರ ಬದುಕಿಗೆ ಸ್ಪಂದಿಸುವ ವಿಚಾರಗಳು, ಸಂದೇಶಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಗುರುತರ ಹೊಣೆ ಇವರ ಮೇಲಿದೆ ಎಂದರು.ಹೈದರಾಬಾದ್ ಕರ್ನಾಟಕ ಸೇರಿಂದಂತೆ ಸದ್ಯ ಕನ್ನಡ ನಾಡು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಜನನಾಯಕರು ಅದರತ್ತ ಗಮನಹರಿಸುತ್ತಿಲ್ಲ, ಜನನಾಯಕರಿಗೆ ಬಿಸಿಮುಟ್ಟಿಸುವಂತಹ ಚಳುವಳಿಗಳೂ ಈ ಭಾಗದಲ್ಲಿ ನಡೆಯುತ್ತಿಲ್ಲ ಎಂದು ಹೇಳಿದ ಅವರು, ದಪ್ಪ ಚರ್ಮದವರು ಬೆಚ್ಚಿ ಬೀಳುವಂತಹ ಚಳುವಳಿಗಳು ನಡೆಯಬೇಕಾದ ಅನಿವಾರ್ಯತೆ ಇದೆ ಎಂದರು.ಆಧುನಿಕತೆಯ ಸ್ಪರ್ಶ ನೀಡಿದ ಇಂದಿನ ದಿನಗಳಲ್ಲೂ ನಾವು ಜ್ಯೋತಿಷ್ಯ ನಂಬಿಕೊಂಡಿದ್ದೇವೆ. ವೈಜ್ಞಾನಿಕ ಯುಗದಲ್ಲೂ ಮಾಧ್ಯಮಗಳು ಬಿತ್ತರಿಸುವ ಜ್ಯೋತಿಷ್ಯಕ್ಕೆ ಶರಣಾಗಿದ್ದೇವೆ, ಇಂತಹ ಮೌಢ್ಯತೆಯ ವಿರುದ್ದ ಧ್ವನಿ ಎತ್ತಬೇಕಾಗಿದ್ದ ವಿಚಾರವಾದಿಗಳ ಚಿಂತನೆ ನಿರ್ಲಿಪ್ತವಾಗಿದೆ ಎಂದು ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry