ಕವಿಗಳ ಹಾಡಿಗೆ ಕೊರಳಾದ ಗಾಯಕರು...

7

ಕವಿಗಳ ಹಾಡಿಗೆ ಕೊರಳಾದ ಗಾಯಕರು...

Published:
Updated:

ಭಾರತೀಸುತ ವೇದಿಕೆ (ಮಡಿಕೇರಿ): 

‘ಕಿನ್ನರಿಯೇರಿ ಕನ್ಯೆಯಂತೆ ಕನಸುವುದು ಸೊಗಸಲ್ಲ

ನೆಲಕ್ಕಿಳಿದು ನರ್ತಿಸಲೆ ಮದಮತ್ತ ನವಿಲೆ’

-–ಎಂದು ಲಕ್ಷ್ಮೀಪತಿ ಕೋಲಾರ ಅವರು ಓದಿದ ಕವಿತೆಗೆ ಪರಶುರಾಮ್‌ ಅವರು ಕೊರಳಾದರು. ಲಕ್ಷ್ಮೀಪತಿ ಅವರ ಕವಿತೆಯ ಆಶಯವನ್ನು ಸೊಗಸಾಗಿ ಹಾಡಿದರು ಪರಶುರಾಮ್.ಇದಕ್ಕೂ ಮೊದಲು ಎಂ.ಎನ್‌. ವ್ಯಾಸರಾವ್‌ ಅವರು.

‘ಮಳೆಯಿಲ್ಲದ ನೆಲದಲ್ಲಿ ಮಳೆಯಾಗುವ ನಾವು

ಹೂವು ಹಸಿರು ಕಾವ್ಯ ಚಿಗುರು’

–ಎಂದು ಓದಿದ ಹಾಡಿಗೆ ಶ್ರೀನಿವಾಸ ಉಡುಪ ರಾಗ ಸಂಯೋಜಿಸಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ನಂತರ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಅವರುಹರಿದಿದೆ ನೋಡಿ ಕನ್ನಡ ರಥವು ಪಶ್ಚಿಮದ ಕಡೆಗೆ

ಕಾಣದಾಗಿವೆ ನಮ್ಮ ದಿಕ್ಕುಗಳು

ಪೊರೆ ಬಂದಿವೆ ಕಣ್ಣಿಗೆ

–ಎಂಬ ಹಾಡನ್ನು ಸೀಮಾ ರಾಯ್ಕರ್‌ ಅವರು ಸೊಗಸಾಗಿ ಹಾಡಿದರು. ನಂತರ ಹಿರಿಯ ಕವಿ ವಿ.ಸಿ. ಐರಸಂಗ ಅವರುಎನಿತು ಸೊಗದ ಸೃಷ್ಟಿ ಇಂದು ಚೆಲುವುಗೊಂಡಿದೆ

ಮಳೆ ಸುರಿದು ಮೋಡ ಸರಿದು ಬಿಸಿಲು ಮೂಡಿದೆ

–ಎಂದು ನಿಸರ್ಗವನ್ನು ಬಣ್ಣಿಸಿದ ಬಗೆ ಮಡಿಕೇರಿ ಕುರಿತೇ ಎನ್ನುವ ಹಾಗಿತ್ತು. ಇದನ್ನು ಶ್ರೀನಿವಾಸ ಉಡುಪ ಅವರು ಇನ್ನಷ್ಟು ಚೆಂದಾಗಿ ಹಾಡುವ ಮೂಲಕ ಹಿಡಿದಿಟ್ಟರು.ಸೃಷ್ಟಿಕರ್ತ ಸೊಗಸುಗಾರ ಅವನೇ ಶ್ರೇಷ್ಠ ಚಿತ್ರಕಾರ

ಭೂಮಿಗೆ ಹೊಸತು ಬಣ್ಣ ಬಳಿದ ಹಾಗೆ ಕಂಡಿದೆ

–ಎಂದು ಐರಸಂಗ ಅವರ ಆಶಯವನ್ನು ಉಡುಪ ಅವರು ಉತ್ತಮ ರಾಗ ಸಂಯೋಜನೆಯಲ್ಲಿ ಹಾಡಿದರೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.ರಂಜಿನಿಪ್ರಭು ಅವರ

‘ಒಂದೇ ಒಂದು ಗಳಿಗೆಯಲಿ ಹಿಡಿಯ ಬದುಕು ನೀಡಿದೆ

ಒಂದು ಪುಟ್ಟ ಶಂಖದಲಿ ಕಡಲ ಮೊರೆತ ಅಡಗಿದೆ’

–ಎನ್ನುವ ಕವಿತೆಯನ್ನು ಗಟ್ಟಿಧ್ವನಿಯಲ್ಲಿ ಹಾಡಿದವರು ಸೀಮಾ ರಾಯ್ಕರ್. ಆಮೇಲೆ ಕೊಡಗು ಜಿಲ್ಲೆಯವರೇ ಆದ ಬಿ.ಎ. ಷಂಶುದ್ದಿನ್‌ ಅವರು

ಕೊಡಗು ನಾಡು ಸುಂದರ ನೋಡಲೆನಿತು ಬಂಧುರ

ಮನದ ತುಂಬ ಇಂಚರ ತುಂಬಿದೆ ಕಾತರ–ಎನ್ನುವ ಕವಿತೆಯನ್ನು ಪುತ್ತೂರು ನರಸಿಂಹ ನಾಯಕ ಅವರು ತಮ್ಮ ಸಿರಿಕಂಠದಲ್ಲಿ ಸವಿಯಾಗಿ ಹಾಡಿದರು. ವಿನಯಾ ವಕ್ಕುಂದ ಅವರು

ಒಂದಲ್ಲ ಒಂದು ದಿನ ಈ ನೆಲದ ತುಂಬ

ಹೆಣ್ಣುಗಳು ಮೆರವಣಿಗೆ ಹೊರಡುತ್ತಾರೆ–ಎನ್ನುವ ಬಂಡಾಯದ ಕವಿತೆಯನ್ನು ಪುತ್ತೂರು ನರಸಿಂಹ ನಾಯಕ ಅವರು ಹೋರಾಟದ ಹಾಡಿನಂತೆ ಹಾಡಿದರೂ ಭಾವಗೀತೆಯ ಛಾಪಿನಿಂದ ಹೊರತಾಗಿರಲಿಲ್ಲ.

ಡಾ.ಧರಣಿದೇವಿ ಮಾಲಗತ್ತಿ ಅವರ

ಕಪ್ಪುಗತ್ತಲಲ್ಲಿ ದಟ್ಟ ಮೌನದಲಿ

ಎದ್ದು ಬರುತ್ತಾಳೆ ಮಲ್ಲಿ

ಬೊಗಸೆ ತುಂಬಿರುವ ಬೆಳ್ಳಿದೀಪದಲಿ

ನಸುವೆ ಬೆಳಕ ಮುಂಚೆಲ್ಲಿ–ಎನ್ನುವ ಕವಿತೆಯನ್ನು ಎಸ್‌. ಸುನೀತಾ ಅವರು ಹಾಡಿದರು. ಕವಿತಾಕೃಷ್ಣ ಅವರು ‘ಕರುನಾಡ ಸಿರಿದೇವಿ ನನ್ನ ತೇರನೇರು ಬಾ’ ಹಾಡನ್ನು ಸೀಮಾ ರಾಯ್ಕರ್‌ ಹಾಡಿದರು.

ವಿಜಯಶ್ರೀ ಸಬರದ ಅವರ

‘ಕೊಟ್ಟ ಕುದುರೆಯ ಬಿಟ್ಟು ಬಿಸಿಲ ಕುದುರೆಯನೇರಿ ಎತ್ತ ಹೋದನು ಅವನು ಚೆಲುವ ಚೆನ್ನಿಗ’

ಎನ್ನುವ ಹಾಡನ್ನು ಎಸ್‌. ಸುನೀತಾ ಹಾಡಿದರು.ಅಧ್ಯಕ್ಷತೆ ವಹಿಸಿದ್ದ ಡಾ.ನಾ.ಮೊಗಸಾಲೆ ಅವರು ‘ಅಕ್ಷರ ಲೋಕದ ಕಣ್ಣುಗಳಲ್ಲಿ’ ಹಾಡನ್ನು ಮತ್ತೆ ಪುತ್ತೂರು ನರಸಿಂಹ ನಾಯಕ ಹಾಡಿ ಕಾರ್ಯಕ್ರಮ ಅಂತ್ಯಗೊಳಿಸಿದರು.ಸಾಥ್‌ ನೀಡದ ಸಂಗೀತ ಉಪಕರಣ: ಎಂ.ಎನ್‌. ವ್ಯಾಸರಾವ್‌ ಅವರು ಕವಿತೆ ಓದಿದ ನಂತರ ಹಾಡಲು ನಿಂತ ಶ್ರೀನಿವಾಸ ಉಡುಪ ಅವರಿಗೆ ಸಂಗೀತ ಉಪಕರಣಗಳು ಸಾಥ್‌ ನೀಡಲಿಲ್ಲ. ಹೀಗಾಗಿ 20 ನಿಮಿಷಗಳ ತಡವಾಗಿ ಗಾಯನ ಶುರುವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry