ಮಂಗಳವಾರ, ಮೇ 17, 2022
26 °C

ಕವಿತಾಳ: ಬಾರದ ಮಳೆ ಬೀಜ ಖರೀದಿಗೆ ರೈತರ ಅನಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾಳ: ಮುಂಗಾರು ಮಳೆ ವಿಳಂಬವಾಗಿದ್ದು ಮಳೆಯ ನಿರೀಕ್ಷೆಯಲ್ಲಿರುವ ರೈತ ಬಿತ್ತನೆ ಬೀಜ ಖರೀದಿ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಹೀಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿನ ಬೀಜಕ್ಕೆ ಬೇಡಿಕೆ ಇಲ್ಲದಂತಾಗಿದೆ.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ, ಭತ್ತದ ಬೀಜಗಳ ಅಂದಾಜು 15ಕ್ವಿಂಟಾಲ್ ದಾಸ್ತಾನು ಉಳಿದಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಭತ್ತದ ಬೀಜ ಅಂದಾಜು 137 ಕ್ವಿಂಟಾಲ್ ಮತ್ತು ಸಜ್ಜೆ ಹಾಗೂ ಹೆಸರು ಕ್ರಮವಾಗಿ ಕೇವಲ 5.5 ಕೆ.ಜಿ, 25ಕೆ.ಜಿ. ಮಾತ್ರ ಮಾರಾಟ ಮಾಡಲಾಗಿದೆ.ಕವಿತಾಳ ಸೇರಿದಂತೆ ಹೋಬಳಿ ವ್ಯಾಪ್ತಿಯ 20 ಹಳ್ಳಿಗಳ 45289 ಹೆಕ್ಟರ್ ಭೌಗೋಳಿಕ ವಿಸ್ತೀರ್ಣದಲ್ಲಿ ಅಂದಾಜು 38655 ಹೆಕ್ಟರ್ ಸಾಗುವಳಿ ಕ್ಷೇತ್ರ ಇದೆ. ಇದರಲ್ಲಿ 9203 ಹೆಕ್ಟರ್ ನೀರಾವರಿ ಮತ್ತು 29458 ಹೆಕ್ಟರ್ ಖುಷ್ಕಿ ಭೂಮಿ ಇದೆ. ಚಿಂಚಿರಿಕಿ, ಹುಸೇನಪುರ ಮತ್ತು ತಿಮ್ಮಾಪುರ ಗ್ರಾಮಗಳಲ್ಲಿ ನಿಯಮಕ್ಕೆ ಎಂದುಕೊಂಡು ಮುಂಗಾರು ಬಿತ್ತನೆಗೆ ಕೆಲವರು ಚಾಲನೆ ನೀಡಿದ್ದು ಹೊರತು ಪಡಿಸಿದರೆ ಬಹುತೇಕ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.ಮುಂಗಾರು ಮಳೆಯಾಗಿದ್ದರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಕ್ಕಾಗಿ ರೈತರು ಪರದಾಡುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು ಆದರೆ ಮಳೆ ಬಾರದ ಕಾರಣ ಬೀಜ ಖರೀದಿಗೆ ಯಾವೊಬ್ಬ ರೈತ ಆಸಕ್ತಿ ತೋರ‌್ತುತಿಲ್ಲ.ಹೆಚ್ಚಿನ ರೈತರು ಹತ್ತಿ ಬಿತ್ತನೆ ಬಗ್ಗೆ ಆಸಕ್ತಿ ತೋರುತ್ತಿದ್ದು ಅಗತ್ಯವಿರುವಷ್ಟು ಬೀಜಗಳನ್ನು ಖಾಸಗಿ ಅಂಗಡಿಗಳಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ. ಭೂ ಚೇತನ ಯೋಜನೆಯಡಿ ಶೇ.50 ರಿಯಾಯಿತಿ ದರದಲ್ಲಿ ಪೋಷಕಾಂಶಗಳಾದ ಜಿಂಕ್, ಜಿಪ್ಸ್‌ಂ ಮತ್ತು ಬೋರೆಕ್ಸ್ ಲಭ್ಯವಿದ್ದು ಉತ್ತಮ ಇಳುವರಿಗೆ ಸಹಾಯಕವಾಗಿದ್ದರೂ ರೈತರು ಖರೀದಿ ಬಗ್ಗೆ ಆಸಕ್ತಿ ಹೊಂದಿಲ್ಲ ಹೀಗಾಗಿ ಅವುಗಳ ದಾಸ್ತಾನು ಹಾಗೆಯೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.