ಕವಿತಾ ಕನವರಿಕೆ

7

ಕವಿತಾ ಕನವರಿಕೆ

Published:
Updated:
ಕವಿತಾ ಕನವರಿಕೆ

ಕವಿತಾ ಲಂಕೇಶ್ ಅವರ ಹಸಿರು ಕಣ್ಣುಗಳಲ್ಲಿ ಕಾಂತಿ ತುಂಬಿಕೊಂಡಿದೆ. ಇತ್ತೀಚೆಗೆ ಅವರಿಗೆ ಕಲಾತ್ಮಕ ಸಿನಿಮಾಗಳಿಂದ ದೂರವಾದಂಥ ಭಾವ ಆವರಿಸಿಕೊಂಡಿತ್ತಂತೆ. ಸಿನಿಮಾಗಾಗಿ ಎರಡು ಗಂಭೀರ ಸಬ್ಜೆಕ್ಟ್‌ಗಳನ್ನು ಸಿದ್ಧಪಡಿಸಿದ ನಂತರ ಆ ಭಾವ ನಿವಾರಣೆಯಾಗಿದೆಯಂತೆ.ಪ್ರಸ್ತುತ ಝೀ ಕನ್ನಡ ವಾಹಿನಿಗಾಗಿ `ನನ್ನ ಪ್ರೀತಿಯ ಶ್ರೀಮತಿ~ ಧಾರಾವಾಹಿಯ ನಿರ್ದೇಶನದ ಹೊಣೆ ಹೊತ್ತಿರುವ ಅವರು `ಸಿನಿಮಾ  ಸದ್ಯಕ್ಕಿಲ್ಲ~ ಎನ್ನುತ್ತಲೇ `ಆದರೂ ಸಿನಿಮಾ ಬಿಟ್ಟು ಬದುಕೋಕಾಗುತ್ತೇನ್ರೀ?~ ಎಂದು ಪ್ರಶ್ನಿಸುತ್ತಾರೆ.`ನಾನು ಸಿನಿಮಾ ಬಿಟ್ಟು ಇರಲ್ಲ. ಅಲ್ಲಿ ಒದಿತಾ ಇದ್ರು ಬಿಡಲಾರೆವು~ ಎಂದು ನಗೆ ಚಿಮ್ಮಿಸುತ್ತಾರೆ. ಸಂಚಿಕೆ ನಿರ್ದೇಶಕರಿಗೆ ಧಾರಾವಾಹಿಯ ಜವಾಬ್ದಾರಿ ವಹಿಸಿ ಸುಮ್ಮನಾಗುವ ಜಾಯಮಾನ ಅವರದಲ್ಲ. ಹೆಸರು ಕೆಡಬಾರದು ಎಂಬ ಜಾಗೃತಿಯ ಜೊತೆಗೆ ಕತೆ ತಮ್ಮ ದೃಷ್ಟಿಕೋನದ ದಾರಿಯಲ್ಲಿಯೇ ಸಾಗಬೇಕೆಂಬ ಬದ್ಧತೆ ಅವರದು.ಕಸ್ತೂರಿ ವಾಹಿನಿಗಾಗಿ `ನೀ ನಡೆವ ಹಾದಿಯಲ್ಲಿ~ ಧಾರಾವಾಹಿ ನಿರ್ದೇಶಿಸಿದ್ದ ಕವಿತಾಗೆ ಕಿರುತೆರೆ ಹೊಸದೇನಲ್ಲ. ಆದರೂ ಕಿರುತೆರೆಗೆ ಬಂದು ಹಿಂಬಡ್ತಿ ಪಡೆದಿರಾ? ಎಂಬ ಪ್ರಶ್ನೆಯನ್ನು ಅವರು ಎದುರಿಸಿದ್ದಾರೆ. `ಕಿರುತೆರೆ- ಹಿರಿತೆರೆಯಲ್ಲಿ ನನಗ್ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಇದೆಲ್ಲಾ ಸಾಧ್ಯತೆಗಳ ಪ್ರಕ್ರಿಯೆ ಅಷ್ಟೇ~ ಎಂದು ಗಂಭೀರವಾಗಿ ನುಡಿಯುತ್ತಾರೆ.ಈ ನಡುವೆ ಹಿರಿಯ ಛಾಯಾಗ್ರಾಹಕ ಎಸ್.ರಾಮಚಂದ್ರ ಅವರ ಬಗ್ಗೆ ಸಾಕ್ಷ್ಯಚಿತ್ರ ರೂಪಿಸಿರುವ ಅವರು,  ಇದೀಗ `ಮಹಿಳೆ ಮತ್ತು ಭಾಷೆ~ ಎಂಬ ವಿಷಯವನ್ನು ಅರಸಿ ಸಾಕ್ಷ್ಯಚಿತ್ರ ತಯಾರಿಸುತ್ತಿದ್ದಾರಂತೆ.`ಖಾಲಿ ಕೂರುವ ಜಾಯಮಾನವೂ ನನ್ನದಲ್ಲ. ಹಾಗೆಂದು ಪ್ರತಿಯೊಂದು ಕೆಲಸವನ್ನು ಮಾಧ್ಯಮದ ಮುಂದೆ ಹೇಳುವ ಅಗತ್ಯ ಇಲ್ಲ. ಸಾಕ್ಷ್ಯಚಿತ್ರಗಳ ಕೆಲಸದ ನಡುವೆಯೇ ಎರಡು ಸಿನಿಮಾ ಸಬ್ಜೆಕ್ಟ್ ಯೋಚಿಸಿರುವೆ.

 

ಒಂದು ಫ್ಯಾಮಿಲಿ ಡ್ರಾಮಾ ಮತ್ತೊಂದು ತೀರಾ ಗಂಭೀರವಾದ ವಸ್ತು ಇರುವ ಸಿನಿಮಾ. ಕಮರ್ಷಿಯಲ್ ಸಿನಿಮಾದತ್ತ ಹೊರಳಿಕೊಂಡ ನಂತರ ನನಗೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಮತ್ತು  ಅಲ್ಲಿಯ ಚರ್ಚೆಗಳನ್ನು ಕಳೆದುಕೊಳ್ಳುತ್ತಿರುವ ಭಾವ ತೀವ್ರವಾಗುತ್ತಿದೆ.ಆದಷ್ಟು ಬೇಗ ನಾನು ಆ ಗುಂಪಿನಲ್ಲಿ ಸೇರುವೆ. ನಾನು ಕಮರ್ಷಿಯಲ್ ಬಗ್ಗೆ ದೂರುತ್ತಿಲ್ಲ. ಬಾಕ್ಸಾಫೀಸ್‌ನಷ್ಟೇ ಚರ್ಚೆಯೂ ಮುಖ್ಯ~ ಎಂಬ ಭಾವ ಅವರದು.

ಇದರೊಂದಿಗೆ ತಂದೆ ಪಿ.ಲಂಕೇಶರ `ಕಲ್ಲು ಕರಗುವ ಸಮಯ~ ಕತೆಯನ್ನು ಸಿನಿಮಾ ಮಾಡುವ ಕನಸೂ ಅವರಿಗಿದೆ. `ಕನ್ನಡ ಸಾಹಿತ್ಯದಲ್ಲಿ ಸಿನಿಮಾಗೆ ಹೊಂದಿಕೆಯಾಗುವ ಸಾವಿರಾರು ಕತೆಗಳಿವೆ.ನನಗೆ ಎಲ್ಲಾ ಲೇಖಕರ ಸಾಹಿತ್ಯವನ್ನು ಚಿತ್ರ ಮಾಡಬೇಕು ಎನಿಸುತ್ತದೆ. ಅವುಗಳನ್ನು ಹೇಗೆ ನಿರೂಪಣೆ ಮಾಡ್ತೀವಿ ಎಂಬುದರ ಮೇಲೆ ಅದು ನಿಲ್ಲುತ್ತೆ~ ಎನ್ನುವ ಕವಿತಾಗೆ ಕ್ಯಾಮೆರಾ ಎದುರು ನಿಲ್ಲುವುದು ಎಂದರೆ ಹಿಂಸೆಯಂತೆ.`ನನ್ನ ಪಾಡಿಗೆ ನನ್ನನ್ನು ಕೆಲಸ ಮಾಡಲು ಬಿಟ್ಟು. ಪ್ರಚಾರದ ವಿಚಾರವನ್ನು ಬೇರೆಯವರು ವಹಿಸಿಕೊಂಡರೆ ಸಾಕು. ಪ್ರಚಾರಕ್ಕಾಗಿ ಭಾಷಣ ಮಾಡುವುದು ಎಂದರೆ ಆಗುವುದಿಲ್ಲ~ ಎನ್ನುವ ಕವಿತಾ ತಮ್ಮ `ಕ್ರೇಜಿ ಲೋಕ~ ಚಿತ್ರ ವಿಫಲವಾದದ್ದರ ಬಗ್ಗೆ ಬೇಸರಗೊಂಡರು. `ಆ ಸಿನಿಮಾ ನಾನು ಅಂದುಕೊಂಡಂತೆ ಬರಲಿಲ್ಲ. ನನ್ನಿಷ್ಟದ ಸಬ್ಜೆಕ್ಟ್ ಅದು. ಆದರೆ ತಂದೆ, ತಂದೆಯಂತೆ ನಟಿಸಲಿಲ್ಲ. ಅಲ್ಲಿ ಆತ್ಮೀಯತೆ ಮಿಸ್ ಆಗಿತ್ತು~ ಎಂದು ನೊಂದುಕೊಳ್ಳುತ್ತಾರೆ.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry