ಕವಿತಾ ಗರಡಿಯ ಕ್ರೇಜಿಲೋಕ

7

ಕವಿತಾ ಗರಡಿಯ ಕ್ರೇಜಿಲೋಕ

Published:
Updated:
ಕವಿತಾ ಗರಡಿಯ ಕ್ರೇಜಿಲೋಕ

ಐವತ್ತು ವರ್ಷದ ವಿಧುರ ಕಾಲೇಜು ವಿದ್ಯಾರ್ಥಿ. ಅವನು ತನ್ನ ಮಗನೊಂದಿಗೆ ಕಾಲೇಜಿಗೆ ಹೋಗುತ್ತಾನೆ. ಅಲ್ಲಿ ಮಗನಿಗೆ ಸಹಪಾಠಿಯೊಂದಿಗೆ ಪ್ರೇಮಾಂಕುರ. ಅಪ್ಪ ಅಧ್ಯಾಪಕಿಗೆ ಮನಸೋಲುತ್ತಾನೆ. ಆಗ ನಡೆಯುವ ಕಾಮಿಡಿ ಕತೆಯೇ `ಕ್ರೇಜಿಲೋಕ~.`ಪ್ರೇಮಲೋಕ~ದ ನಂತರ ಮತ್ತೊಮ್ಮೆ ಕಾಲೇಜು ಮೆಟ್ಟಿಲು ಏರಿರುವ ರವಿಚಂದ್ರನ್ `ಕ್ರೇಜಿಲೋಕ~ದ ಕೇಂದ್ರದಲ್ಲಿದ್ದಾರೆ. ಆದರೆ ಈ `ಲೋಕದ~ ನೇತೃತ್ವ ನಿರ್ದೇಶಕಿ ಕವಿತಾ ಲಂಕೇಶ್ ಅವರದು.`ಸೆನ್ಸಿಬಲ್ ಕತೆ ಇರುವ ಸಿನಿಮಾ ಮಾಡುವುದು ನನ್ನ ಗುರಿ. ನಾನು ಎರಡು ವರ್ಷ ಹೊಸೆದ ಕಥೆಗೆ ರವಿಚಂದ್ರನ್ ಸೂಕ್ತ ವ್ಯಕ್ತಿ ಎನಿಸಿತು. ಅಳುಕಿನಿಂದಲೇ `ತಂದೆಯ ಪಾತ್ರ ಮಾಡುವಿರಾ?~ ಎಂದು ರವಿ ಅವರನ್ನು ಕೇಳಿದೆ. ಅವರಿಂದ ಒಪ್ಪಿಗೆ ಸಿಕ್ಕಿತು.ಹಿಂದಿಯಲ್ಲಿಯೂ ಈ ಚಿತ್ರವನ್ನು ಮಾಡುವಾಸೆ ಇದೆ. ಇದು ಯುವಕರು ಮತ್ತು ಮಧ್ಯವಯಸ್ಕರಿಗೆ ಇಷ್ಟವಾಗುವ ಸಿನಿಮಾ. ಇದರಲ್ಲಿ ಲಾಜಿಕ್ಕೂ ಇದೆ, ಮ್ಯಾಜಿಕ್ಕೂ ಇದೆ. ರವಿ ದೊಡ್ಡ ತಂತ್ರಜ್ಞರಾದರೂ ನನ್ನ ಕೆಲಸದಲ್ಲಿ ಮೂಗು ತೂರಿಸುವುದಿಲ್ಲ. ಈಗಾಗಲೇ ಚಿತ್ರದ ಶೇ.35ರಷ್ಟು ಚಿತ್ರೀಕರಣ ಮುಗಿದಿದೆ.

 

`ಪ್ರೇಮಲೋಕ~ ಚಿತ್ರಕ್ಕೆ ಇದನ್ನು ಹೋಲಿಸಬೇಡಿ. ಆ ನಿರೀಕ್ಷೆಯೂ ಜನರಿಗೆ ಬೇಡ. ಅದರಲ್ಲಿ ಸಂಗೀತದ ಮೂಲಕ ಕಥೆ ಮುಂದುವರಿಯುತ್ತದೆ. ತಮ್ಮ ಚಿತ್ರದಲ್ಲಿ ಕಥೆಯೇ ಮುಖ್ಯ. ಹಾಗೆಂದು ಬೋಧನೆ ಇರುವುದಿಲ್ಲ. ಚಿತ್ರದ ಪ್ರತೀ ಭಾಗವೂ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಅನವಶ್ಯಕವಾಗಿ ಎಲ್ಲೂ ಖರ್ಚು ಮಾಡಿಲ್ಲ~ ಎಂದು ಕವಿತಾ ಮಾತಿಗೆ ತೆರೆದುಕೊಂಡರು.`ಅವಿನಾಶ್‌ಗೆ ಆಬ್ಸೆಂಟ್ ಮೈಂಡೆಂಡ್ ಪ್ರಿನ್ಸಿಪಾಲ್ ಪಾತ್ರ. ಅವರ ತಾಯಿಯಾಗಿ ಭಾರತಿ ವಿಷ್ಣುವರ್ಧನ್ ಬಾಬ್ ಕಟ್ ಮಾಡಿಕೊಂಡ ವೃದ್ಧೆಯಾಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಷಿಕಾ ಪೂಣಚ್ಚ ಕಾಲೇಜು ಹುಡುಗಿಯಾಗಿ ನಟಿಸಿದರೆ, ಅವರಿಗೆ ಜೊತೆಯಾಗಿ ಹೊಸ ಹುಡುಗ ಸೂರ್ಯ ನಟಿಸುತ್ತಿದ್ದಾನೆ~ ಎಂದು ಕವಿತಾ ಕ್ರೇಜಿಲೋಕದ ವಿವರ ತಿಳಿಸಿದರು.ಕವಿತಾರ ಕ್ರೇಜಿಲೋಕದಲ್ಲಿ ನಾಯಕಿ ಡೈಸಿ ಬೋಪಣ್ಣ ಅವರಿಗೆ ಎರಡು ವಿಭಿನ್ನ ಪಾತ್ರಗಳು ಸಿಕ್ಕಿವೆಯಂತೆ. ಮೊದಲರ್ಧ ಸತಿಸಾವಿತ್ರಿಯಂತಿರುವ ಡೈಸಿ, ನಂತರದಲ್ಲಿ ತದ್ವಿರುದ್ಧದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.`ಕ್ರೇಜಿಲೋಕ~ದೊಳಗೆ ತಡವಾಗಿ ಸೇರಿಕೊಂಡ ರವಿಚಂದ್ರನ್- `ಕವಿತಾ ಅವರದು ತಮಗೆ ಹೊಸ ಶಾಲೆ ಇದ್ದಂತೆ~ ಎಂದರು. `ನಿರ್ಮಾಪಕರು ಅಚ್ಚುಕಟ್ಟಾಗಿದ್ದಾರೆ. ಕವಿತಾ ನಮ್ಮನ್ನು ಕಟ್ಟಿ ಹಾಕಿದ್ದಾರೆ~ ಎಂದು ನಗೆ ಹರಡಿದರು.`ಐವತ್ತು ವರ್ಷದ ವ್ಯಕ್ತಿ ಕಾಲೇಜಿಗೆ ಬರುವುದು ಆಸಕ್ತಿಕರ ಎನಿಸಿತು. ಒಂದು ಸಾಲಿನ ಕಥೆ ಹೇಳಿ ಕವಿತಾ ಒಪ್ಪಿಸಿದರು. ಕ್ರೇಜಿತನ ಉಳಿಸಬೇಕಿರುವುದರಿಂದ ಕ್ರೇಜಿಲೋಕ ಬೆಳೆಸಬೇಕಿದೆ ಎನಿಸಿ ನಾನೂ ಒಪ್ಪಿಕೊಂಡೆ. ವಯಸ್ಸಾಯ್ತಲ್ವಾ ಅದಕ್ಕೆ ಅಪ್ಪನ ಪಾತ್ರ ಮಾಡುವುದಾಗಿಯೂ ಹೇಳಿದೆ. ಇದರಲ್ಲಿ ಕಾಲೇಜು ಲೆಕ್ಚರರ್‌ನ ನಾನು ಪಟಾಯಿಸ್ತೀನಿ...~ ಎನ್ನುತ್ತಾ ತುಂಟನಗೆ ಬೀರಿದರು.`ಅಂಜದ ಗಂಡು~ ಚಿತ್ರದಿಂದ ತಮ್ಮನ್ನು `ಕ್ರೇಜಿ ಸ್ಟಾರ್~ ಎಂದು ಕರೆಯಲಾಯಿತು. ಅದನ್ನು ಯಾರು, ಹೇಗೆ, ಎಲ್ಲಿ ಇಟ್ಟರೋ ತಿಳಿಯದು. ಕಾಲೇಜಿಗೆ ಮತ್ತೆ ಡೈ ಮಾಡಿಕೊಂಡು ಹೋಗೋಣ ಎಂದುಕೊಂಡಿರುವೆ. ಇಲ್ಲಿ ತಮಗೆ ಹೆಚ್ಚು ಮಾತನಾಡಲು ಅವಕಾಶವಿಲ್ಲ ಎಂದು ಕವಿತಾ ಕಡೆ ನೋಡಿದ ರವಿಚಂದ್ರನ್ ಕಣ್ಣು ಮಿಟುಕಿಸಿದರು.

ಅಂದಹಾಗೆ, `ಕಾನ್ಫಿಡೆಂಟ್ ಗ್ರೂಪ್~ ಈ ಚಿತ್ರ ನಿರ್ಮಿಸುತ್ತಿದ್ದು, ಕಾರ್ಯಕಾರಿ ನಿರ್ಮಾಪಕ ರವಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry