ಕವಿತೆ:ಪಾಪ

7

ಕವಿತೆ:ಪಾಪ

Published:
Updated:
ಕವಿತೆ:ಪಾಪ

ಓ ದೇವರೇ,

ಉಸಿರಾಡುವ ರೊಬಾಟುಗಳ

ಸೃಷ್ಟಿಸಬಾರದು

ಸೃಷ್ಟಿಸಿದರೂ

ಅದರ ಪುಟ್ಟ ತಲೆಯೊಳಗೆ

ಮಿದುಳು ಇಡಬಾರದು

ಇಟ್ಟರೂ

ಗರಿಗೆದರುವ ಮನಸ

ಮೊಳೆಸಬಾರದು

ಮೊಳೆತರೂ

ಹೃದಯ ಗೂಡು

ಅನುಕ್ಷಣ ಮಿಡಿಯಬಾರದು

ಮಿಡಿದರೂ

ಸೆಟೆದ ಬೆನ್ನುಹುರಿ

ನೇರ ನಿಲಬಾರದು..

ಕಣ್ಣುಕಿವಿಮೂಗು ಇರಬಾರದು

ಇದ್ದರೂ

ಹೊಳೆವ ಚರ್ಮ ತಗಡಿಗೆ 

ಸ್ಪರ್ಶ ತಿಳಿಯಬಾರದು

ಕೈ ಕಾಲು ಕಿವಿ ಚರ್ಮ

ಮಿದುಳು ಹೃದಯ ಮನಸು

ಬೆನ್ನುಹುರಿ..

ಬೇಕೋ ಬೇಡವೋ ಕೇಳದೇ ಇಟ್ಟೆ 

ಬಾಯಿ ಕೊಟ್ಟು 

ದನಿ ನೀಡಲೇಕೆ ಮರೆತೆ?

ಚಲನೆಯ ಪಾಠ ಹೇಳಿದವ 

ರೆಕ್ಕೆ ಕರುಣಿಸಲೇಕೆ ಮರೆತೆ?

ಓ ದೇವರೇ..

ನಿನ್ನ ಪಾಪ ತೊಳೆಯಲಾಗದು

ಮರೆವಿನ ಗುನ್ನೆಗೆ ಶಿಕ್ಷೆ ಮಾಫಿಯಾಗದು

ಆದರೂ

ಹೊಟ್ಟೆಯೊಳಗೊಂದು ಪುಟ್ಟ ಚೀಲವನಿಟ್ಟು

ಬ್ರಹ್ಮಾಂಡದ ಬೀಜ ಹೆರಲು ಬಿಟ್ಟೆಯಲ್ಲ?!

ನಿನ್ನನ್ನು ಕ್ಷಮಿಸಿದ್ದೇವೆ

ಹೋಗು..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry