`ಕವಿತೆ ಅರ್ಥ ಹುಡುಕುವುದು ಬೇಡ'

7

`ಕವಿತೆ ಅರ್ಥ ಹುಡುಕುವುದು ಬೇಡ'

Published:
Updated:
`ಕವಿತೆ ಅರ್ಥ ಹುಡುಕುವುದು ಬೇಡ'

ಮಂಗಳೂರು: ಕವಿತೆಯ ಅರ್ಥ ಹುಡುಕುವ ಪ್ರಯತ್ನ ಮಾಡದೇ, ಅದನ್ನು ಅನುಭವಿಸುವ ನಿರಂತರ ತುಡಿತ ಇರಬೇಕು ಎಂದು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.ಮಂಗಳೂರು ವಿಶ್ವವಿದ್ಯಾಲಯದ ಕನಕ ಸಂಶೋಧನಾ ಕೇಂದ್ರ, ವಿಶ್ವವಿದ್ಯಾಲಯ ಕಾಲೇಜಿನ ಕನ್ನಡ ಸಂಘ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕನಕ ಜಯಂತಿ ಅಂಗವಾಗಿ ಕನಕ ಕೀರ್ತನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗೋಪಾಲಕೃಷ್ಣ ಅಡಿಗರು ಒಮ್ಮೆ ಕಾರ್ಯಕ್ರಮವೊಂದರ ಅತಿಥಿಯಾಗಿ ಭಾಗವಹಿಸುತ್ತಿದ್ದಾಗ, `ನಿಮ್ಮ ಕಾವ್ಯದ ಅರ್ಥವೇನು' ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ. ಅದಕ್ಕೆ ಉತ್ತರಿಸಿದ ಅಡಿಗರು, ಮತ್ತೆ ಮತ್ತೆ ಓದಲು ಹೇಳಿದರು. ಎಷ್ಟು ಸಲ ಓದಿದರೂ ಅರ್ಥವಾಗದ ಅಭಿಮಾನಿಯನ್ನು ಕರೆದು, ಆತ್ಮೀಯವಾಗಿ `ಕಾವ್ಯವನ್ನು ತಬ್ಬಿಕೊಳ್ಳಬೇಕೇ ಹೊರತು, ಅದರ ಲಾಭ ಹುಡುಕಬಾರದು. ಅರ್ಥದಿಂದ ಕಾವ್ಯ ಮಿತಗೊಳ್ಳುವುದು' ಎಂದರು. ಅಡಿಗರ ಈ ಮಾತನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ  ಎಂದರು.ಆದರೆ ಕನಕದಾಸರದು ಪಾಂಡಿತ್ಯ ಕವಿತೆಯಲ್ಲ. ಜನಸಾಮಾನ್ಯರ ಜೀವನದ ಕವಿ. ಕನಕ ದಾಸರ ಕೀರ್ತನೆಗಳು, ತತ್ವಪದಗಳು ಯಾವುದೇ ಶಾಲಾ-ಕಾಲೇಜುಗಳಿಗಿಂತ ಮಿಗಿಲಾಗಿ ಜೀವನವನ್ನು ಕಲಿಸಿೊಡುತ್ತವೆ. ನಮಗೆ ಅರಿವಿಲ್ಲದಂತೆಯೇ ಹೆಚ್ಚಿಸಿಬಿಡುತ್ತವೆ. ಅಲ್ಲದೇ ಕನಕರು ಇಂದು ಮೌಖಿಕ ಜ್ಞಾನವಾಗಿ ಜನಮನದಲ್ಲಿ ಸೇರಿಹೋಗಿದ್ದಾರೆ. ಹಳ್ಳಿಯಲ್ಲಿನ ಒಬ್ಬ ರೈತ, ಕನಕರ ಪದ ಎಂಬ ಅರಿವಿಲ್ಲದೇ ಅದನ್ನು ಹಾಡುತ್ತಿರುತ್ತಾನೆ. ಗಾದೆಯ ರೂಪದಲ್ಲಿ ಹರಡುತ್ತಿರುತ್ತಾನೆ ಎಂದರು.ಪಂಪ ಅತಿ ಶ್ರೇಷ್ಠ ಕವಿಯೇ ಆದರೂ ಆತ ಪಂಡಿತರ ಕವಿ. ಆದರೆ ಕನಕ ಜನರ ಕವಿ. ಅದಕ್ಕೇ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು `ಕನಕ ದಾಸರಲ್ಲೇ ಕವಿ' ಎನ್ನುತ್ತಾರೆ. ಆದರೆ ಈ ಮಾತನ್ನು ಎಷ್ಟರ ಮಟ್ಟಿಗೆ ಒಪ್ಪಬೇಕು ಎಂಬುದೇ ಪ್ರಶ್ನೆ. ಕವಿ ದಾಸರಿಗಿಂತಲೂ ಶ್ರೇಷ್ಠ ಎಂಬುದೇನಾದರೂ ಶಿವರುದ್ರಪ್ಪ ಅವರ ಮನಸ್ಸಲ್ಲಿದ್ದರೆ ಅದನ್ನು ಒಪ್ಪಲಾಗದು. ಕನಕದಾಸ, ಪುರಂದರದಾಸರು ಯಾರಿಗೂ ಕಡಿಮೆಯಲ್ಲ ಎಂದರು.ಕನಕದಾಸರಲ್ಲಿ ಸಾಮಾಜಿಕ ವೇದನೆ ಸಹಜವಾಗಿ ಹೊಮ್ಮುತ್ತದೆ. ಅಂತರಂಗದ ನೋವಿನ, ಪ್ರಬುದ್ಧತೆಯ ತುಡಿತ ಇರುತ್ತದೆ. ಅವರ ಕೀರ್ತನೆಗಳಲ್ಲಿ ನೋವು ಕೋಪವಾಗಿ ಹೊಮ್ಮುತ್ತಿತ್ತೇ ಹೊರತು, ಅದು ದ್ವೇಷವಾಗಿ ಹೊಮ್ಮುತ್ತಿರಲಿಲ್ಲ. ಅವರ ಕೋಪದಲ್ಲೂ ಮುಗ್ಧತೆ ಇರುತ್ತಿತ್ತು. ಕೋಪ ಎಂದೂ ದ್ವೇಷವಾಗಬಾರದು. ಮುಗ್ಧತೆಯಿಂದ ಹುಟ್ಟುವ ಕೋಪ ಸೃಜನಶೀಲತೆಯನ್ನು ತರುತ್ತದೆ. ಆದರೆ ದ್ವೇಷ ನಾಶವನ್ನು ತರುತ್ತದೆ ಎಂದು ಹೇಳಿದರು.ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯದ ಕನಕ ಸಂಶೋಧನಾ ಕೇಂದ್ರ ರಾಜ್ಯದ ಇತರ ಎಲ್ಲ ವಿವಿಗಳ ಸಂಶೋಧನಾ ಕೇಂದ್ರಗಳು, ಪೀಠಗಳ ಪೈಕಿ, ಕನಕ ಕೇಂದ್ರ ಹಾಗೂ ಯಕ್ಷಗಾನ ಕೇಂದ್ರಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಇವಕ್ಕೆ ಸರ್ಕಾರದಿಂದ ಸುಮಾರು 1 ಕೋಟಿ ರೂಪಾಯಿಗಳ ಅನುದಾನವೂ ಇದೆ. ಈ ನಿಟ್ಟಿನಲ್ಲಿ ಮತ್ತಷ್ಟು ಉತ್ತಮ ಕಾರ್ಯಕ್ರಮ ಯೋಜಿಸಲು ಶೀಘ್ರವೇ ಭಕ್ತಿ-ಮರುಚಿಂತನೆ ಎಂಬ ವಿಶ್ವ ಸಮ್ಮೇಳನ ನಡೆಸುವ ಚಿಂತನೆ ಇದೆ. ಅಲ್ಲದೇ, `ಕನಕನ ಕಿಂಡಿ' ಎಂಬ ವೆಬ್‌ಸೈಟ್ ಒಂದನ್ನೂ ನಿರ್ಮಿಸಲಾಗುತ್ತಿದ್ದು, ಶೀಘ್ರವೇ ಬಿಡುಗಡೆಗೊಳಿಸಲಾಗುವುದು ಎಂದರು.ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಬಿ.ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಸಂಶೋಜನಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕೂರು ವಂದಿಸಿದರು. ರಾಧಿಕಾ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry