ಶನಿವಾರ, ನವೆಂಬರ್ 23, 2019
18 °C

ಕವಿತೆ : ಚಿರತೆ

Published:
Updated:

ಚಿರತೆ

ಸಲಾಕೆಗಳ ಪಕ್ಕದಲ್ಲೇ ನಿರಂತರ ಶತಪಥ ಹಾಕಿ

ಬೇರೆ ಏನನ್ನೂ ಗ್ರಹಿಸಲಾಗದಷ್ಟು ಸೋತಿದೆ

ಅವನ ದೃಷ್ಟಿ. ಅವನಿಗೆ ಕಾಣಿಸುವದು ಕೇವಲ

ಸಲಾಕೆ, ಸಾವಿರ ಸಾವಿರ ಸಲಾಕೆ. ಅದರಾಚೆಗೆ ಏನೂ ಇಲ್ಲ.

ಆತನ ಮೆತ್ತನೆಯ ಪಂಜಗಳ ದಾಪುಗಾಲಿನ ನಡಿಗೆ

ಸಂಕುಚಿತ ವರ್ತುಳಗಳಲ್ಲೇ ಮರಮರಳಿ ಸುತ್ತಿ

ಕೋಲದ ಕುಣಿತವಾಗಿದೆ. ಕೇಂದ್ರದಲ್ಲಿ

ಮರವಟ್ಟು ನಿಂತಿದೆ ಆ ಬಗ್ಗದ ಛಲ.

ಕೆಲವೊಮ್ಮೆ ಮಾತ್ರ ಅವನ ಕಣ್ಣೆವೆಯ ಪಡದೆ

ಸದ್ದಿಲ್ಲದೆ ಎತ್ತಿದಾಗ, ದೂರದ ದೃಶ್ಯವೊಂದು

ಅದರಡಿಗೆ ನುಸುಳಿ, ಬಿಗಿದ ಸ್ನಾಯುಗಳ

ಸ್ತಬ್ಧತೆಯಲ್ಲಿ ಹರಿಯುತ್ತದೆ. ಎದೆಯಾಳಕ್ಕೆ ಧುಮುಕುತ್ತದೆ.

ಕಣ್ಮರೆಯಾಗುತ್ತದೆ.

ಪ್ರತಿಕ್ರಿಯಿಸಿ (+)