ಕವಿತೆ : ನನ್ನ ದೇವರು

7

ಕವಿತೆ : ನನ್ನ ದೇವರು

Published:
Updated:
ಕವಿತೆ : ನನ್ನ ದೇವರು

ನಾನು ಶಿಲ್ಪಿ

ಕೈಯಿಂದ ಅಲ್ಲ; ಕಣ್ಣಿಂದಹೋಗಿ ನಿಂತುಕೊಂಡಾಗ ಒಂದು ದೇವಸ್ಥಾನದ ಎದುರು

ನೆನೆಯುತ್ತ ಶಿಲ್ಪಿಯ

ದೇವರನ್ನು ಅಲ್ಲಿ ಸೃಷ್ಟಿಸಿದ

ಗರ್ಭಗುಡಿಯಲ್ಲಿ ಶೇಷಶಯನ

ಶಯನಿಸಿದ್ದ ನಿರಾಳವಾಗಿ ಇದ್ದಂತೆ

ಬಾಗಿಲಲ್ಲಿ ಇಬ್ಬರು ದ್ವಾರಪಾಲಕರು

ತಾವು ದೇವರಾಗಲಿಲ್ಲ ಶಿಲ್ಪಿಯ ಕೈಯಲ್ಲಿ ಎಂದು

ಕೊರಗಿದ ಹಾಗೆ

ಗುಡಿಯ ಮೆಟ್ಟಿಲುಗಳಲ್ಲಿದ್ದ ಕಲ್ಲುಗಳು

ಶೂದ್ರರ ಮೈಯ ಹಾಗೆ ಹೊಳೆಯುತ್ತಿದ್ದುವು

ಕಪ್ಪುಕಪ್ಪಾಗಿ

ದೇವರಾಗುವ ಬಯಕೆ ಇಲ್ಲದೆ

ತುಳಿಸಿಕೊಳ್ಳುತ್ತಿದ್ದರು ಭಕ್ತರಿಂದ ಅದು

ತುಳಿತವೆಂದು ತಿಳಿಯದ ಹಾಗೆ

ತುಂಬ ಹೊತ್ತು ನಿಂತೆ

ದೇವರ ದರ್ಶನಕ್ಕೆ ಕ್ಯೂನಲ್ಲಿ

ತುಂಬಿಸಿಕೊಳ್ಳುತ್ತ ಎದೆಯ ಮೌನವನ್ನು

ಅವನ ಕಣ್ಣುಗಳಲ್ಲಿ

ಶೇಷಶಯನ

ಅಸ್ಪೃಶ್ಯನ ಹಾಗೆ ಕಾಣಿಸತೊಡಗಿದ

ಇಡೀ ಊರು ಅವನನ್ನು ಸ್ಪರ್ಶಿಸದೆ

ಇದ್ದುದರಿಂದ ಎಂಬಂತೆ

ತಿರುಗಿದೆ ದ್ವಾರಪಾಲಕರತ್ತ

ಅವರು ಭಕ್ತರು ಮೆತ್ತಿದ ಗಂಧ ಮತ್ತು ತೀರ್ಥದಲ್ಲಿ

ಇದೇ ತಾನೇ ಮಿಂದು ಬಂದವರಂತೆ

ಘಮಘಮಿಸುತ್ತಿದ್ದರು

ಚಲಿಸುತ್ತ ನಿಶ್ಶಬ್ದದೆಡೆಗೆ

ಮೆಟ್ಟಿಲ ಕಲ್ಲುಗಳನ್ನು ಸುಮ್ಮನೆ ನೋಡಿದೆ:

ಭಕ್ತರ ಕಾಲ್ತುಳಿತಕ್ಕೆ ಸಿಕ್ಕಿದ ಅವು

ಅವರು ಕುಡಿಯುವಾಗ ಕೈ ಜಾರಿ ಬಿದ್ದ ತೀರ್ಥದಲ್ಲಿ ಮಿಂದೆದ್ದು

ರೋಮಾಂಚನಗೊಂಡವರಂತೆ ಇದ್ದುವು

ದೇವರಾದರೂ ದೇವರಾಗದ ಹಾಗೆ.

ಶೇಷಶಯನನಿಗೆ

ಕೈ ಮುಗಿಯದ ನನ್ನ ಕಣ್ಣುಗಳು

ಅರಳಿದುವು ಕಾಮನಬಿಲ್ಲಾಗಿ

ಆ ಮೆಟ್ಟಿಲ ಕಲ್ಲುಗಳ ಮೇಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry