ಮಂಗಳವಾರ, ಜೂನ್ 22, 2021
29 °C

ಕವಿತೆ: ಬೀಜ ದೀಪದ ಬೆಳಕಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಕುವೋಕಾ ಎಂಬ ಸಹಜ ಜೀವ

ಪತಂಗಗಳ ಬಣ್ಣೋತ್ಕರ್ಷ

ಎರೆಹುಳುವಿನ ಹಿಕ್ಕೆ, ಹುರುಳಿ ಸೊಪ್ಪಿನ ತೇವದ ಜೊತೆ

ಸಂಗ ಮಾಡಿ

ಒಂದು ಸೌಟು ಪ್ರೀತಿ ಒಂದು ಗುಕ್ಕು ಸಹನೆ

ಪಡೆದು ತಂದು, ಇರುವೆ ಗೊದ್ದ ಗೆದ್ದಲಿನ ಸಮ್ಮುಖದಲ್ಲಿ

ಮನುಷ್ಯರಿಗೆ ಹಂಚಿದ್ದಕ್ಕೆ ಈಗಲೂ ಪರೇವು ನಡೆಯುತ್ತಿವೆ

ಫುಕುವೋಕಾ ಎಂಬ ನೆಲದ ಹುಚ್ಚ

ಮಣ್ಣ ಮುಖದ ಮೇಲೆ ತನ್ನ ಮುಖವನಿಟ್ಟು

ಬೆಚ್ಚಗೆ ಬೇರೊಡೆದು ಗೆಡ್ಡೆಗೆಣಸುಗಳ ಸೀಳಲ್ಲಿ ಬೆರಳುಗಳ ಇಳಿಬಿಟ್ಟು

ಹಗಲಿಗೆ ಹೆಗಲು ಕೊಟ್ಟು ಕಾಲದ ಕೈಲಿ ಕಪಾಳಕ್ಕೆ ಹೊಡೆಸಿಕೊಂಡದ್ದಕ್ಕೆ

ಒಂದಿಷ್ಟು ಕನಸಿನ ಕಾಳಿನ ಹೊಲದಲ್ಲಿ ಫಸಲು ಕಾಣುತ್ತಿದೆ

ಫುಕುವೋಕಾ ಎಂಬ ಹಾಡ ಬೆಳೆಗಾರ

ತಿಂಗಳ ಬೆಳಕಲ್ಲಿ ಕುಂಬಳಕಾಯಿ ಎಡವಿ ಮೂರುಲ್ಡಾಗಿ

ಪಲ್ಟಿ ಹೊಡೆದು ನಕ್ಕು ಗಾಯಗೊಂಡು

ಬೀಜ ದೀಪದ ಬೆಳಕ ಉರಿಸಿ

ಮಿಂಚುಗುಡುಗಿನ ತಾಳಕ್ಕೆ

ಕಣ್ಣುಮನಗಳ ಬೆಳಕಲ್ಲಿ ಹಾಡಿ ನರ್ತಿಸಿದ್ದಕ್ಕೆ

ಇಡಿ ಭೂಮಿ ಅನ್ನದ ತಟ್ಟೆಯಾಗಿನ್ನೂ ಉಳಿದಿದೆ

ಫುಕುವೋಕಾ ಎಂಬ ಚಿಗುರುಕಡ್ಡಿ

ಒಂದೆಸಳು ಹುಲ್ಲು ಹಿಡಿದು ಮುಡಿದು

ಕೋಡು ಮೂಡಿಸಿಕೊಂಡು

ಈ ಹುಲ್ಲಲ್ಲು ಹುಲಿಗೆ ಹಸುವಿಗೆ ಮನುಷ್ಯರಿಗೆ ಕೂಡ ಮೇವು  ಎಂದು

ಒಂದೆಸಳು ಹುಲ್ಲು, ಹುಲ್ಲ ಮೇಲಿನೊಂದು ಹನಿಯೆ

ಕಡಲ ಕುಡಿ ಎಂದು

ಹುಲ್ಲು ಹನಿ ಒಡಗೂಡಿ ಬೇರಿನೆಡೆಗೆ ಹೆಜ್ಜೆ ಹಾಕಿದ್ದಕ್ಕೆ

ತಾಯಿ ಬೇರಿನ್ನೂ ತಾವು ಪಡೆದಿದೆ

ಒಣನೆಲದ ಕಲಾಪಕ್ಕೆ ಚಿಲುಕು ನೀರಿನ ಸಂಗ

ಸೊಪ್ಪುಸೆದೆ ಕಸಕಡ್ಡಿಗಳು ಕೀಟದುಳುಮೆಯ ಪಾಠಗಳು

ಸೂರ್ಯ ಸಂಗದ ಹಣ್ಣು ಹಂಪಲು

ಹಸಿವ ಗೆಲುವಿನ ಆಸೆ

ಸುಡುವ ನೆಲ ಒಳಗೆ ಮೆಲ್ಲಮೆಲ್ಲನೆ ನಡಿಗೆ

ಸುಣ್ಣಕಲ್ಲಿನ ಒಳಗೆ ಹರಿದು ಕುದಿಯದ ಹಾಗೆ

ಮಣ್ಣಿನೂಟವ ಮಾಡೋ ದೀಪದ ಗುರುವು

ಬೆಂಕಿಗೋಪುರದೊಳಗೆ ತಣ್ಣನೆ ಗೆದ್ದಲು

ಕತ್ತಲ ಹೊಲದ ಬಿತ್ತನೆ ಬೀಜ ಈ ಫುಕುವೋಕಾ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.