ಶನಿವಾರ, ಮೇ 8, 2021
24 °C

ಕವಿತೆ: ಲೋಕದ ಚೇಷ್ಟೆಗೆ ರವಿ ಬೀಜವಾಗಿತ್ತು

ಎಚ್.ಎಸ್.ವೆಂಕಟೇಶಮೂರ್ತಿ Updated:

ಅಕ್ಷರ ಗಾತ್ರ : | |

ನಾವು ಏನನ್ನು ಬೇಕಾದರೂ ತಿನುತ್ತೇವೆ ಸ್ವಾಮಿ- ಏನನ್ನು

ಬೇಕಾದರೂ, ಎನ್ನುವ ವೃತ್ತಿಪರ ಪಾರಣೆ ಮಂದಿ ಮುಂದೆ

ನಾನು ಏನೂ ತಿನ್ನುವುದಿಲ್ಲ ಎಂದು ಮೊಂಡು ಹಿಡಿದು ಮೈ

ದಾನದಲ್ಲಿ ಮೈ ಮುರುಟಿ ಕೂತ ನಿತ್ಯೋಪವಾಸೀ ವ್ರತ

 

ಕ್ಕೆ ಜಯವಾಗಲಿ. ಭಯವಾಗಲಿ ಲಜ್ಜೆಯಾಗಲಿ ಇಲ್ಲದ

ಮೂರೂಬಿಟ್ಟ ಮಂದಿ ಬಂಡಿ ಬಂಡಿ ಅನ್ನವನ್ನ ಬಂಡಿ ಮತ್ತು

ಬಂಡಿಕಾರನ ಸಮೇತ ಗುಳುಂ ಮಾಡುತ್ತಿರುವ ಈ ಹೊತ್ತು

ಖಾಲಿ ಬಟ್ಟಲವನ್ನ ಕಲಸಮಾಡಿ ಒಳಜಲಕ್ಕಾಶಿಸಿ ಪರ್ಜನ್ಯಕ್ಕೆ

 

ಕೂತಿರುವಂಥ ಅಪ್ಪಟ ಕಕ್ಕುಲಾತಿಗೆ ಜಯವಾಗಲಿ. ಕಂಡದ್ದೇ ತಡ

ಮೂಡು ಬಾನಲ್ಲಿ ಧಗಧಗ ಪಂಜು, ನಾಡುದ್ದಕ್ಕೂ ಎದ್ದುಬಿದ್ದಾ

ಡಹತ್ತಿವೆ ನಿಷ್ಕಂಪ ಕೊಳೆಕಟ್ಟೆಗಳಲ್ಲಿ ತಳಮಳಿಸುವಲೆ.

ಈ ಅನಿರೀಕ್ಷಿತವಾದ ಮನಸ್ಸಿನಾಳದಪೇಕ್ಷಾ ಸಿಂಫನಿಗೆ

 

ಇಗೋ ತಗೋ ನನ್ನದೂ ಒಂದು ಅಲೆ. ಬಣ್ಣಗೆಟ್ಟ ಗಾಳಿಗೆ ತ್ರಿವರ್ಣದ

ರಂಗು ಮೆತ್ತಿದ ಹೊತ್ತು, ಅಂತಸ್ಥ ಮೌನಕ್ಕೆ ಮುತ್ತಿನಾಕೃತಿ

ಮೂಡ ಹತ್ತಿದ ಹೊತ್ತು, ಹೊಟ್ಟೆಬಾಕ ಕಬಂಧರನ್ನನಾಮತ್ತು ಎತ್ತಿ

ನಿಜದ ನೆಲಕ್ಕೆತ್ತಿ ಕುಕ್ಕುವ ಹೊತ್ತು, ಹಾರೈಸುತ್ತೇನೆ, ಗೇರೈಸಿದ

 

ಮುಗಿಲಿಗೆ ದಕ್ಕಲಪ್ಪಾ ದಕ್ಕಲಿ ಎಂದು ಬರ್ದಂಡು ಮಳೆ. ಬತ್ತಿದ ನದಿನದಕ್ಕೆ

ಸಿಕ್ಕಲಿ ಕಡಲಗುರಿಯೇಕಮುಖೀಚಲನೆಯಾವೇಶ. ತದ್ವಿರುದ್ಧ ಸೆಳೆತಗಳಿದ್ದೂ

ಗಟ್ಟಿಗೊಳಿಸಲಿ ಜಾಳಾಗದಂತೆ ಬಟ್ಟೆ. ಎಲ್ಲ ಅಬ್ಬರದುದ್ಘೋಷಗಳ ನಡುವೆ

ಮಿಡಿಯುತ್ತಿರಲಿ ಮಾತ್ರ ನಿತಾಂತಧ್ಯಾನದೇಕಶ್ರುತಿ-ಮಣಿದೀಪ ಪೋಣಿಸುವ ಹತ್ತಿಬತ್ತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.