ಬುಧವಾರ, ಏಪ್ರಿಲ್ 21, 2021
30 °C

ಕವಿವಿಗೆ ಆರ್ಥಿಕ ಮುಗ್ಗಟ್ಟು: ವೇತನ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: 62 ವರ್ಷಗಳಷ್ಟು ಹಳೆಯದಾದ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಲಾಗದಷ್ಟು `ತಾತ್ಕಾಲಿಕ ಆರ್ಥಿಕ ಬಿಕ್ಕಟ್ಟು~ ಸೃಷ್ಟಿಯಾಗಿದೆ!ರಾಜ್ಯ ಸರ್ಕಾರದೊಂದಿಗೆ ನಿಯಮಿತವಾಗಿ ವೇತನ ಬಿಡುಗಡೆ ಸಂಬಂಧ ಸಂಪರ್ಕ ಹೊಂದದೇ ಇರುವುದರಿಂದ ವೇತನ ಸಕಾಲಕ್ಕೆ ಬಿಡುಗಡೆಯಾಗಿಲ್ಲ. ಆಗಸ್ಟ್ 6 ಆದರೂ ಪಿಂಚಣಿದಾರರ ಜುಲೈ ತಿಂಗಳ ವೇತನ ಬಿಡುಗಡೆಯಾಗಿಲ್ಲ. ಬೋಧಕ ಸಿಬ್ಬಂದಿಗೆ ಕಳೆದ ಒಂದು ವರ್ಷದಿಂದ, ಬೋಧಕೇತರ ಸಿಬ್ಬಂದಿಗೆ ಕಳೆದ ಏಪ್ರಿಲ್‌ನಿಂದ ವೇತನದಲ್ಲಿ ಹೆಚ್ಚಳವಾಗಿದೆ. ಆದರೆ ಆ ಹೆಚ್ಚಳದ ಮೊತ್ತ ಇನ್ನೂ ಬಿಡುಗಡೆಯಾಗಿಲ್ಲ. ಸುಮಾರು 650 ಗುತ್ತಿಗೆ ಕಾರ್ಮಿಕರು ಹಾಗೂ 100 ಮಂದಿ ಕಾಯಂ ನೌಕರರ ವೇತನವೂ ಬಿಡುಗಡೆಯಾಗಿಲ್ಲ.ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ವೇತನ ಪಡೆಯುತ್ತಿರುವ ಪ್ರಾಧ್ಯಾಪಕರನ್ನು ಹೊರತುಪಡಿಸಿದರೆ ಉಳಿದ ಸಿಬ್ಬಂದಿಯ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ತಿಂಗಳ ಕೊನೆಯ ದಿನವೇ ವೇತನ ಪಡೆಯುತ್ತಿದ್ದ ನಿವೃತ್ತರು ಆರು ದಿನ ಕಳೆದರೂ ಇನ್ನೂ ವೇತನ ಜಮಾ ಆಗದಿರುವುದರಿಂದ ಕಂಗೆಟ್ಟಿದ್ದು, ಇದೇ 7ರವರೆಗೆ ವೇತನ ಪಾವತಿಸಬೇಕು ಎಂದು ವಿಶ್ವವಿದ್ಯಾಲಯಕ್ಕೆ ಗಡುವು ನೀಡಿದ್ದು, ಗಡುವು ಮೀರಿದ ಮರುದಿನವೇ ವಿಶ್ವವಿದ್ಯಾಲಯ ಆ.8ರಂದು ಬಂದ್‌ನಂತಹ ಉಗ್ರ ಪ್ರತಿಭಟನೆಗೆ ಇಳಿಯಲು ನಿರ್ಧರಿಸಿದ್ದಾರೆ.`ಕವಿವಿ ನಿವೃತ್ತರ ಸಂಘವೂ ಸೇರಿದಂತೆ ಬೋಧಕೇತರ ನೌಕರರ ಸಂಘ ಹಾಗೂ ಗುತ್ತಿಗೆ ಕಾರ್ಮಿಕರನ್ನೂ ಸೇರಿಸಿಕೊಂಡು ಈ ಹೋರಾಟ ನಡೆಸಲಾಗುವುದು. ವಿ.ವಿ ಇತಿಹಾಸದಲ್ಲಿಯೇ ನೌಕರರಿಗೆ ವೇತನ ನೀಡದಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ~ ಎಂದು ವಿ.ವಿ. ನಿವೃತ್ತರ ಸಂಘದ ಅಧ್ಯಕ್ಷ ತೋಟೇಶ್ವರ ಗುಡಗೂರ ಆರೋಪಿಸಿದರು.ಘೋಷಣೆಯಾದ ವೇತನ ಹೆಚ್ಚಳದ ಪ್ರಕಾರ ಬೋಧಕ ಸಿಬ್ಬಂದಿಗೆ ಒಂದು ವರ್ಷದ ವೇತನ ಸುಮಾರು 27 ಕೋಟಿ ಹಾಗೂ ಬೋಧಕೇತರ ಸಿಬ್ಬಂದಿಯ ವೇತನ ತಿಂಗಳಿಗೆ 2.5 ಕೋಟಿಯಂತೆ ಇನ್ನೂ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ. ಗುತ್ತಿಗೆ ಕಾರ್ಮಿಕರ ವೇತನ ತಿಂಗಳಿಗೆ ಸುಮಾರು 44 ಲಕ್ಷದಂತೆ 2ತಿಂಗಳ ವೇತನ ನೀಡಬೇಕಾಗಿದೆ.`ಪತ್ರ ಬರೆದಿದ್ದೇವೆ~

`ಸರ್ಕಾರಕ್ಕೆ ಈ ಸಂಬಂಧ ಹಲವು ಬಾರಿ ಪತ್ರ ಬರೆಯಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ವೇತನ ಬಿಡುಗಡೆ ಕಡತಕ್ಕೆ ಅನುಮೋದನೆ ನೀಡ ಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ವಿ.ವಿ. ಹಣಕಾಸು ವಿಭಾಗದ ಸಿಬ್ಬಂದಿಯನ್ನು ಬೆಂಗ ಳೂರಿಗೆ ಕಳಿಸಲಾಗಿತ್ತು. ಗುತ್ತಿಗೆ ಕಾರ್ಮಿಕರ ಒಂದು ತಿಂಗಳ ವೇತನವನ್ನು ಶೀಘ್ರದಲ್ಲಿಯೂ ನೀಡಲಾಗುವುದು. ಈ ಸಂಬಂಧ ಹಣಕಾಸು ಇಲಾಖೆಗೆ ಸೂಚಿಸಲಾಗಿದೆ~ ಎಂದು ಕುಲಸಚಿವ ಡಾ.ಎಸ್.ಬಿ.ಹಿಂಚಿಗೇರಿ ತಿಳಿಸಿದರು.

 

`ಶುಲ್ಕವನ್ನೂ ಬಳಿದು ಕೊಡ್ತಿದ್ದೀವಿ~

`ವೇತನಕ್ಕಾಗಿ ಪ್ರತಿ ತಿಂಗಳೂ 7 ಕೋಟಿ ಬೇಕಾಗುತ್ತದೆ. ಅದರಲ್ಲಿ ರಾಜ್ಯ ಸರ್ಕಾರ 4.5 ಕೋಟಿ ರೂಪಾಯಿಗಳನ್ನು ನೀಡುತ್ತದೆ. ಉಳಿದ 2.5 ಕೋಟಿ ಖೋತಾ ಆಗುತ್ತಿದೆ. ಇಲ್ಲಿಯವರೆಗೆ ವಿದ್ಯಾರ್ಥಿಗಳ ಶುಲ್ಕವನ್ನೂ ಬಳಿದು ಸಂಬಳ ಕೊಡಲಾಯಿತು. ಆದರೀಗ ವಿ.ವಿ.ಗೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡದಿದ್ದರೆ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ. ನೌಕರರ ಸಂಘದವರು ಈ ಸಂಬಂಧ ಪ್ರತಿ ಭಟನೆ ಮಾಡುತ್ತೇನೆ ಎಂದಿದ್ದಾರೆ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ~ 

- ಡಾ.ಎಚ್. ಬಿ.ವಾಲೀಕಾರ, ಕುಲಪತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.