ಕವಿವಿಯಲ್ಲಿ ಮಹಿಳಾ ಅಧ್ಯಯನ ಮೇಲ್ದರ್ಜೆಗೆ

7

ಕವಿವಿಯಲ್ಲಿ ಮಹಿಳಾ ಅಧ್ಯಯನ ಮೇಲ್ದರ್ಜೆಗೆ

Published:
Updated:
ಕವಿವಿಯಲ್ಲಿ ಮಹಿಳಾ ಅಧ್ಯಯನ ಮೇಲ್ದರ್ಜೆಗೆ

ಮಹಿಳಾ ಅಧ್ಯಯನ ಹಾಗೂ ಲಿಂಗ ಸಂಬಂಧಿ ಸೂಕ್ಷ್ಮತೆಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಇದೀಗ 25 ವರ್ಷಗಳಷ್ಟು ಹಳೆಯದಾದ ಮಹಿಳಾ ಅಧ್ಯಯನ ಸಂಶೋಧನಾ ಕೇಂದ್ರವನ್ನು ಡಿಪ್ಲೊಮಾ ಕೋರ್ಸ್‌ನಿಂದ ಸ್ನಾತಕೋತ್ತರ (ಪಿಜಿ) ಕೋರ್ಸ್‌ನ್ನಾಗಿ ಮೇಲ್ದರ್ಜೆಗೆ ಏರಿಸುವ ಚಿಂತನೆಯಲ್ಲಿದೆ.ಈಗಾಗಲೇ ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು, ಗುಲ್ಬರ್ಗ ಹಾಗೂ ವಿಜಾಪುರದ ಮಹಿಳಾ ವಿ.ವಿ ಗಳಲ್ಲಿ ಮಹಿಳಾ ಅಧ್ಯಯನವನ್ನು ಒಂದು ಪಿಜಿ ಕೋರ್ಸ್ ಆಗಿಯೇ ನಡೆಸಲಾಗುತ್ತಿದೆ. ಮಹಿಳಾ ಅಧ್ಯಯನಕ್ಕೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಇಲ್ಲದೇ ಇರುವುದರಿಂದಾಗಿ ಕವಿವಿ ಆಡಳಿತ ಸಹ ಒಂದು ಡಿಪ್ಲೊಮಾ ಕೋರ್ಸ್‌ ಆಗಿಯೇ ನಡೆಸುತ್ತಿತ್ತು.ಸಮಾಜಶಾಸ್ತ್ರ, ಮನಃಶಾಸ್ತ್ರ ಹಾಗೂ ಸಾಮಾಜಿಕ ಕಾರ್ಯ ವಿಭಾ­ಗಗಳಲ್ಲಿ ಸ್ನಾತಕೋತ್ತರ ಅಧ್ಯಯನ­ವನ್ನು ಮಾಡುತ್ತಿರುವವರು ಆ ಕೋರ್ಸ್‌ಗೆ ಪೂರಕವಾಗಿ ಈ ಡಿಪ್ಲೊಮಾ ಕೋರ್ಸ್‌ ತೆಗೆದುಕೊಳ್ಳು­ತ್ತಿದ್ದರು. ಮಹಿಳಾ ಅಧ್ಯಯನ ಮಾಡಿದವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಲ್ಲಿ ವಿಶೇಷ ಆದ್ಯತೆ ಡುತ್ತಿರುವುದರಿಂದ ಕೋರ್ಸ್‌ಗೆ ಇದೀಗ ಬೇಡಿಕೆ ಹೆಚ್ಚಿದೆ.  ವಿ.ವಿ.ಯಲ್ಲಿ 25 ಸೀಟುಗಳನ್ನು ಈ ಕೋರ್ಸ್‌ಗೆ ಭರ್ತಿ ಮಾಡಿಕೊಳ್ಳುವುದರ ಜೊತೆಗೆ 10 ಸೀಟುಗಳನ್ನು ಆಡಳಿತ ಮಂಡಳಿ ಕೋಟಾದಲ್ಲಿ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.ಲಿಂಗ ಸೂಕ್ಷ್ಮತೆಗೆ ಸಂಬಂಧಿಸಿದ ಧೋರಣೆಯಲ್ಲಿ ಬದಲಾವಣೆ ತರುವುದು, ವಿದ್ಯಾರ್ಥಿನಿಯರಿಗೆ ಸಮಾನತೆಯ ಬಗ್ಗೆ ಅರಿವು ಮೂಡಿಸುವುದು, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ವಿವಿಧ ಸಂಘಟನೆ ಹಾಗೂ ವಿ.ವಿ.ಗಳಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುವುದು ಇಲ್ಲವೇ ಅಲ್ಲಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಹಂಚುವುದನ್ನು ಮಹಿಳಾ ಅಧ್ಯಯನ ಸಂಶೋಧನಾ ಕೇಂದ್ರ ಮಾಡುತ್ತಿದೆ.ಸಂಸ್ಥೆ 1988ರಲ್ಲಿ ಆರಂಭವಾದರೂ ಒಂದು ‘ಸಂಶೋಧನಾ ಕೇಂದ್ರ’ದ ಪರಿಪೂರ್ಣ ರೂಪ ಪಡೆದಿದ್ದು ಮಾತ್ರ 1991–92ರಲ್ಲಿ. ಆದರೆ, ಇಲ್ಲಿಯವರೆಗೂ ಈ ಕೇಂದ್ರಕ್ಕಾಗಿಯೇ ಕಾಯಂ ಬೋಧಕ ಸಿಬ್ಬಂದಿ ಇಲ್ಲ. ಅತಿಥಿ ಉಪನ್ಯಾಸಕರೇ  ಬೋಧನೆ ಮಾಡುತ್ತಾರೆ. ಪ್ರಸ್ತುತ ಕೇಂದ್ರಕ್ಕೆ ಒಬ್ಬ ಗೌರವ ನಿರ್ದೇಶಕಿ, ಸಹ ಸಂಶೋಧನಾ ಪ್ರಾಧ್ಯಾಪಕರು ಹಾಗೂ ಸಹಾಯಕ ಸಂಶೋಧನಾ ಉಪನ್ಯಾಸಕರು ಇದ್ದಾರೆ.ಗೌರವ ನಿರ್ದೇಶಕಿಯಾಗಿರುವ ಡಾ.ಎಸ್‌.ಸಿ.ಶೆಟ್ಟರ್‌ ಅವರು ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ. ಮಹಿಳಾ ಅಧ್ಯಯನ ವಿಷಯ ಇನ್ನೂ ಪದವಿ ತರಗತಿಗಳಲ್ಲಿ ಒಂದು ವಿಷಯವಾಗಿ ಕಲಿಸಲಾಗುತ್ತಿಲ್ಲ. ಪದವಿ ಹಂತದಲ್ಲಿ ಅತಿ ಜರೂರಾಗಿ ‘ಮಹಿಳಾ ಅಧ್ಯಯನ’ವನ್ನು ಒಂದು ವಿಷಯವನ್ನಾಗಿ ಪರಿಚಯಿಸಿದರೆ ವಿದ್ಯಾರ್ಥಿಗಳು ಈ ಕೋರ್ಸ್‌ ಕಲಿಕೆಗೆ ಮುಂದಾಗಬಹುದು. ಸರ್ಕಾರ ಅಗತ್ಯವಿರುವಲ್ಲಿ ಈ ಕೋರ್ಸ್‌ ಓದಿರುವವರನ್ನೇ ನೇಮಕ ಮಾಡಿಕೊಳ್ಳಲು ಸೂಕ್ತ ಮಾರ್ಗಸೂಚಿಗಳನ್ನು ರಚಿಸಬೇಕು ಎನ್ನುವುದು ಕೇಂದ್ರದ ನಿರ್ದೇಶಕ ಡಾ.ಶೆಟ್ಟರ್‌ ಅವರ ಒತ್ತಾಯ.

‘ಸ್ನಾತಕೋತ್ತರ ಕೇಂದ್ರವಾಗಿ ಮೇಲ್ದರ್ಜೆಗೆ’

ಮಹಿಳಾ ಅಧ್ಯಯನ ಪಿಜಿ ಡಿಪ್ಲೊಮಾ ಕೋರ್ಸನ್ನು ಒಂದು ಸ್ವತಂತ್ರ ಸ್ನಾತಕೋತ್ತರ ವಿಭಾಗವನ್ನಾಗಿ ಮಾಡುವ ಸಂಬಂಧ ನಾವು ಮುಂದಡಿ ಇಟ್ಟಿದ್ದೇವೆ. ಈ ಸಂಬಂಧ ವರದಿ ನೀಡಲು ಸಮಿತಿಯೊಂದನ್ನು ರಚಿಸಬೇಕಾಗಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ, ಬೋಧನಾ ಅವಧಿಯನ್ನು ನಿರ್ಧರಿಸುವಂತೆಯೂ ಸಮಿತಿಗೆ ಸೂಚಿಸಲಾಗಿದೆ. ಅದರ ವರದಿ ಬಳಿಕ ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಬಹುತೇಕ ಬರುವ ಶೈಕ್ಷಣಿಕ ವರ್ಷದಿಂದಲೇ ಮಹಿಳಾ ಅಧ್ಯಯನ ಸ್ನಾತಕೋತ್ತರ ಕೋರ್ಸ್‌ ಆಗಲಿದೆ.

–ಪ್ರೊ.ಎಚ್‌.ಬಿ.ವಾಲೀಕಾರ, ಕುಲಪತಿಗಳು, ಕರ್ನಾಟಕ ವಿ.ವಿ.‘ಎನ್‌ಜಿಒಗಳಲ್ಲಿ ಅಧಿಕ ಅವಕಾಶ’

ಮಹಿಳಾ ಅಧ್ಯಯನ ಕೋರ್ಸ್‌ ಮಾಡಿದವರಿಗೆ ಸರ್ಕಾರಿ ಇಲಾಖೆಗಳಲ್ಲಿ ಇತ್ತೀಚೆಗೆ ಉದ್ಯೋಗ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಸರ್ಕಾರೇತರ ಸಂಸ್ಥೆಗಳಲ್ಲಿ ಮೊದಲಿನಿಂದಲೂ ಈ ಕೋರ್ಸ್ ಮಾಡಿದವರಿಗೆ ಉದ್ಯೋಗವಕಾಶಗಳಂತೂ ಇದ್ದೇ ಇವೆ. ನಮ್ಮಲ್ಲಿ ಪ್ರತಿ ವರ್ಷವೂ ಕನಿಷ್ಟ ಐದರಿಂದ ಆರು ಜನರಿಗೆ ಕೆಲಸ ದೊರೆಯುತ್ತಿದೆ.

–ಪ್ರೊ.ಎಸ್‌.ಸಿ.ಶೆಟ್ಟರ್‌, ಗೌರವ ನಿರ್ದೇಶಕಿ,

ಮಹಿಳಾ ಅಧ್ಯಯನ ಕೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry