ಕವಿವಿ ಪತ್ರಿಕೋದ್ಯಮ ವಿಭಾಗಕ್ಕೆ 30ರ ಸಂಭ್ರಮ

7

ಕವಿವಿ ಪತ್ರಿಕೋದ್ಯಮ ವಿಭಾಗಕ್ಕೆ 30ರ ಸಂಭ್ರಮ

Published:
Updated:

ಧಾರವಾಡ: ಪತ್ರಿಕೋದ್ಯಮ ವಿಭಾಗವನ್ನು ಆರಂಭಿಸಿದ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಮೂರನೇಯದು. ಮೈಸೂರು ವಿ.ವಿ ಪ್ರಥಮವಾಗಿ ಪತ್ರಿಕೋದ್ಯಮ ವಿಭಾಗವನ್ನು ಆರಂಭಿಸಿದರೆ ಬೆಂಗಳೂರು ವಿ.ವಿ 1970ರ ದಶಕದಲ್ಲಿ ವಿಭಾಗವನ್ನು ಆರಂಭಿಸಿತು. 1982-83ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಪತ್ರಿಕೋದ್ಯಮ ವಿಭಾಗವನ್ನು ಇಂದಿನ ಎಂಬಿಎ ವಿಭಾಗದ ಕಟ್ಟಡದಲ್ಲಿ ಆರಂಭಿಸಿತು.ಅಂದು ಕುಲಪತಿಗಳಾಗಿದ್ದ ಡಿ.ಎಂ.ನಂಜುಂಡಪ್ಪ ಅವರ ವಿಶೇಷ ಆಸಕ್ತಿಯಿಂದಾಗಿ, ಅದರಲ್ಲೂ ಉತ್ತರ ಕರ್ನಾಟಕ ವಿದ್ಯಾರ್ಥಿಗಳೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಈ ವಿಭಾಗವನ್ನು ಆರಂಭಿಸಲಾಯಿತು. ಇಂದು ವಿಭಾಗವು ಹೆಮ್ಮರವಾಗಿ ಬೆಳೆದು ತನ್ನ 30 ವರ್ಷಗಳ ಅವಧಿಯಲ್ಲಿ ಸಾವಿರಾರು ಪತ್ರಕರ್ತರನ್ನು ಟಿವಿ, ಪತ್ರಿಕೆಗಳಿಗೆ ಪೂರೈಸಿದೆ. ತನ್ನ ಹರವನ್ನು ಇನ್ನಷ್ಟು ವಿಸ್ತರಿಸಿಕೊಂಡಿರುವ ವಿಭಾಗವು ಕಳೆದ ವರ್ಷವಷ್ಟೇ `ಎಲೆಕ್ಟ್ರಾನಿಕ್ ಮಿಡಿಯಾ~ ಎಂಬ ಸ್ನಾತಕೋತ್ತರ ಪದವಿ ಆರಂಭಿಸಿದೆ.ವಿಭಾಗವನ್ನು ಮೊದಲಿಗೆ ಕಟ್ಟಿದವರು ಗ್ರಂಥಾಲಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಕುಂಬಾರ ಎಂಬುವವರು. ಆ ಬಳಿಕ ಡಾ.ಎಂ.ಗಂಗಾಧರಪ್ಪ ಹಾಗೂ ಡಾ.ಎ.ಎಸ್‌ಬಾಲಸುಬ್ರಹ್ಮಣ್ಯ ಅವರು ವಿಭಾಗವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಬರೀ ಪಾಠ-ಪ್ರವಚನಗಳಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳದ ಪತ್ರಿಕೋದ್ಯಮ ವಿಭಾಗವು ಕಾಲಕಾಲಕ್ಕೆ ಹಲವಾರು ಜನ ಹಿರಿಯ ಪತ್ರಿಕೋದ್ಯಮಗಳನ್ನು ಕರೆಸಿ ಅವರಿಂದ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ಕೊಡಿಸಿದೆ. ಹಿರಿಯ ಪತ್ರಕರ್ತರಾದ ಖುಷ್ವಂತ್ ಸಿಂಗ್, ಖಾದ್ರಿ ಶಾಮಣ್ಣ, ತ.ಸು.ಶಾಮರಾವ್ ಅವರಂತಹ ದಿಗ್ಗಜರು ವಿಭಾಗಕ್ಕೆ ಭೇಟಿ ನೀಡಿದ್ದಾರೆ.ಜೊತೆಗೆ ವಿದ್ಯಾರ್ಥಿಗಳಿಗೆ ಖುಷಿ ಕೊಡುತ್ತಿದ್ದ ಸಂಗತಿ ಎಂದರೆ, ಪ್ರತಿವರ್ಷವೂ ಅಧ್ಯಯನ ಪ್ರವಾಸಕ್ಕೆಂದು ದೆಹಲಿ ಪ್ರವಾಸ ಮಾಡುತ್ತಿದ್ದುದು. ವಾರ್ತಾ ಏಜೆನ್ಸಿಗಳು, ದಿನಪತ್ರಿಕೆ, ರಾಷ್ಟ್ರೀಯ ಚಾನೆಲ್‌ಗಳು, ವಾರ ಪತ್ರಿಕೆಗಳ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯುವುದು ಹಾಗೂ ಸಂಪಾದಕರು, ಹಿರಿಯ ಸುದ್ದಿಗಾರರನ್ನು ಭೇಟಿಯಾಗಿ ಅವರ ಅನುಭವಗಳನ್ನು ಪಡೆಯುವುದು ಈ ಪ್ರವಾಸಕ್ಕೆ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಂದ ಪಾಸುಗಳನ್ನು ಪಡೆದು ಸಂಸತ್ ಭವನದ ಕಲಾಪಗಳನ್ನು ವೀಕ್ಷಿಸುವುದು ಸಹ ಕಾರ್ಯಕ್ರಮದ ಭಾಗವಾಗಿತ್ತು.ವಿದ್ಯಾರ್ಥಿಗಳು ವರದಿಗಾರಿಕೆ. ಪುಟ ವಿನ್ಯಾಸ, ಆನ್‌ಲೈನ್ ಪತ್ರಿಕೆ ನಡೆಸಲು ಅನುಕೂಲವಾಗುವಂತೆ ವಿಭಾಗವು ಪ್ರತಿ ವಾರವೂ `ವಿದ್ಯಾ ಸಮಾಚಾರ~ ಎಂಬ ಖಾಸಗಿ ಪ್ರಸಾರದ ಪತ್ರಿಕೆಯನ್ನು ಹೊರಡಿಸುತ್ತಿದೆ. ಇದು ವಿಭಾಗ ಆರಂಭವಾದಾಗಿನಿಂದಲೇ ಹೊರ ಬರುತ್ತಿದ್ದು, ಇದೀಗ `ಸಂಜೆ ಸಮಾಚಾರ~ ಎಂಬ ಸಂಜೆ ಪತ್ರಿಕೆಯನ್ನೂ ಹೊರತರುವ ಮೂಲಕ ವಿದ್ಯಾರ್ಥಿಗಳು ಹೆಚ್ಚು ವೃತ್ತಿಪರರಾಗಲು ಸಹಕಾರಿಯಾಗಿದೆ ಎನ್ನುತ್ತಾರೆ ವಿಭಾಗದ ಮುಖ್ಯಸ್ಥ ಡಾ.ಎ.ಎಸ್.ಬಾಲಸುಬ್ರಹ್ಮಣ್ಯ.ವಿಭಾಗವು ಸಾರ್ಥಕ 30 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ನಂಜುಂಡಪ್ಪನವರ ಕನಸಿನ ಕೂಸಾಗಿ ಮೈದಳೆದ ವಿಭಾಗವು ರಾಜ್ಯ ಹಾಗೂ ರಾಷ್ಟ್ರೀಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಲವಾರು ಪತ್ರಕರ್ತರನ್ನು ನೀಡಿದೆ. ಇತ್ತೀಚೆಗೆ ಬೆಳೆಯುತ್ತಿರುವ ಸಾರ್ವಜನಿಕ ಸಂಪರ್ಕ ಕ್ಷೇತ್ರ, ವೆಬ್ ಡಿಸೈನಿಂಗ್ ಹಾಗೂ ಎಲೆಕ್ಟ್ರಾನಿಕ್ ಚಾನೆಲ್‌ನಲ್ಲಿಯೂ ನಮ್ಮ ವಿಭಾಗದ ವಿದ್ಯಾರ್ಥಿಗಳು ಸಾಕಷ್ಟು ಛಾಪು ಮೂಡಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವಾರಪತ್ರಿಕೆಗಳಲ್ಲೂ ವಿಭಾಗದಲ್ಲಿ ಅಧ್ಯಯನ ಮಾಡಿದವರು ಕೆಲಸ ಮಾಡುತ್ತಿದ್ದಾರೆ. ಚಾನೆಲ್, ದಿನಪತ್ರಿಕೆ ಮುಖ್ಯಸ್ಥರಾಗಿ, ಬ್ಯುರೊ ಮುಖ್ಯಸ್ಥರಾಗಿ, ಹಿರಿಯ ವರದಿಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ~ ಎಂದರು.ಅತ್ಯಂತ ಬೇಡಿಕೆಯ ಕೋರ್ಸ್ ಆಗಿರುವ ಪತ್ರಿಕೋದ್ಯಮ ವಿಭಾಗಕ್ಕೆ ಉಪನ್ಯಾಸಕರ ಕೊರತೆಯೂ ಕಾಡುತ್ತಿದೆ. ಪಠ್ಯಕ್ರಮ ಹೆಚ್ಚಾಗಿರುವುದರಿಂದ ಆರು ಜನ ಉಪನ್ಯಾಸಕರು ಅಗತ್ಯವಿದ್ದು ಪ್ರಸ್ತುತ ಡಾ.ಗಂಗಾಧರಪ್ಪ, ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಹಾಗೂ ಡಾ.ಸಂಜೀವಕುಮಾರ ಮಾಲಗತ್ತಿ ಅವರೇ ವಿಭಾಗವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry