ಕವಿವಿ: ವಿಜ್ಞಾನ ನಿಕಾಯ ಪ್ರಮೀಳಾ ಪ್ರಪಂಚ!

7

ಕವಿವಿ: ವಿಜ್ಞಾನ ನಿಕಾಯ ಪ್ರಮೀಳಾ ಪ್ರಪಂಚ!

Published:
Updated:

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ, ವಾಣಿಜ್ಯಶಾಸ್ತ್ರ, ಶಿಕ್ಷಣ ನಿಕಾಯಕ್ಕಿಂತ ಹೆಚ್ಚಾಗಿ ವಿಜ್ಞಾನ ನಿಕಾಯದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ಒಟ್ಟಾರೆ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚುತ್ತಿರುವುದು ಇತ್ತೀಚಿನ ಬೆಳವಣಿಗೆ.ವಿಜ್ಞಾನ ನಿಕಾಯದಲ್ಲಿ 2011-12ನೇ ಸಾಲಿನಲ್ಲಿ 725 ಜನ ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ವಿದ್ಯಾರ್ಥಿಗಳ ಸಂಖ್ಯೆ 527. 2012-13ನೇ ಶೈಕ್ಷಣಿಕ ವರ್ಷದಲ್ಲಿ 729 ಜನ ವಿದ್ಯಾರ್ಥಿನಿಯರು ವಿಜ್ಞಾನ ನಿಕಾಯದ ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ, ಗಣಿತ ವಿಭಾಗಗಲ್ಲಿ, ಜೈವಿಕ ರಸಾಯನಶಾಸ್ತ್ರ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹಿಂದಿನ ಸಾಲಿಗಿಂತ ಕೊಂಚ ಕುಸಿತ ಕಂಡಿದ್ದು, 498 ಜನ ಮಾತ್ರ ಓದುತ್ತಿದ್ದಾರೆ.ಒಟ್ಟಾರೆ ವಿ.ವಿ. ಆವರಣದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಸರಾಸರಿ ಶೇ 45ರಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಆದರೆ ಬರೀ ವಿಜ್ಞಾನ ನಿಕಾಯವನ್ನು ಗಮನಿಸಿದಾಗ ವಿದ್ಯಾರ್ಥಿನಿಯರ ಸಂಖ್ಯೆ ಶೇ 58ರಷ್ಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು ವಿಜ್ಞಾನ ನಿಕಾಯದ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡಲು ಇಷ್ಟಪಡುತ್ತಿದ್ದರೆ, ವಿದ್ಯಾರ್ಥಿಗಳು ಮಾತ್ರ ನಿಧಾನವಾಗಿ ಈ ವಿಷಯಗಳಿಂದ ವಿಮುಖರಾಗುತ್ತಿದ್ದಾರೆ ಎಂಬ ಅಂಶ ವಿಶ್ವವಿದ್ಯಾಲಯ ನೀಡಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.ವಿದ್ಯಾರ್ಥಿನಿಯರಿಗೆ ಬಂಕರ್ ಕಾಟ್: ವರ್ಷದಿಂದ ವರ್ಷಕ್ಕೆ ವಿ.ವಿ.ಯಲ್ಲಿ ಓದುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರು ವಿ.ವಿ. ಆವರಣದ ಹಾಸ್ಟೆಲ್‌ಗಳಲ್ಲೇ ವಾಸಿಸಲು ಬಯಸುತ್ತಾರೆ. ಇದನ್ನು ಅರಿತಿರುವ ವಿ.ವಿ. ಆಡಳಿತ ಹೆಚ್ಚುವರಿಯಾಗಿ ರಾಣಿ ಚನ್ನಮ್ಮ ಹಾಸ್ಟೆಲ್‌ನಲ್ಲಿ ಅಂದಾಜು 25 ಕೊಠಡಿಗಳ ನೂತನ ಬ್ಲಾಕ್ ನಿರ್ಮಿಸಿದೆ.ಇದರಲ್ಲೇನೂ ವಿಶೇಷ ಇಲ್ಲ. ಆದರೆ ವಿಶೇಷ ಇರುವುದು ವಿದ್ಯಾರ್ಥಿನಿಯರಿಗೆ ಒದಗಿಸಲಾಗುವ ಕಾಟ್ (ಒಂದು ಕಾಟ್‌ನಲ್ಲಿ ಮೇಲ್ಭಾಗದಲ್ಲಿ ಒಬ್ಬರು, ಕೆಳಭಾಗದಲ್ಲಿ ಮಲಗಬಹುದಾದ ವ್ಯವಸ್ಥೆ).62 ವರ್ಷಗಳ ಹಿಂದೆ ಕಟ್ಟಲಾದ ವಿ.ವಿ.ಯ ಅಕ್ಕಮಹಾದೇವಿ ಹಾಸ್ಟೆಲ್‌ನಲ್ಲಿ ಎರಡು ಕಾಟ್, ಹೆಚ್ಚೆಂದರೆ ಮೂರು ಸಿಂಗಲ್ ಕಾಟ್‌ಗಳನ್ನು ಹಾಕಲಾಗಿದೆ. ಅಂದರೆ ಮೂವರು ವಿದ್ಯಾರ್ಥಿನಿಯರು ಮಾತ್ರ ಅಲ್ಲಿ ಉಳಿದುಕೊಳ್ಳಬಹುದು.`ಕಡಿಮೆ ಸ್ಥಳದಲ್ಲಿ ಹೆಚ್ಚು ವಿದ್ಯಾರ್ಥಿನಿಯರು ಉಳಿದುಕೊಳ್ಳಲು ಅನುವಾಗುವಂತೆ ಬಂಕರ್ ಕಾಟ್‌ಗಳನ್ನು ಹಾಕಲು ಉದ್ದೇಶಿಸಲಾಗಿದೆ. ರಾಣಿ ಚನ್ನಮ್ಮ ಹಾಸ್ಟೆಲ್‌ನ ನೂತನ `ಬಿ' ಬ್ಲಾಕ್‌ನಲ್ಲಿ ಈ ಕಾಟ್‌ಗಳನ್ನು ಹಾಕುವ ಸಂಬಂಧ ಈಗಾಗಲೇ ಟೆಂಡರ್ ಆಹ್ವಾನಿಸಿದ್ದು, ಒಂದು ತಿಂಗಳಲ್ಲಿ ಕಾಟ್‌ಗಳನ್ನು ಅಳವಡಿಸಲಾಗುತ್ತದೆ' ಎಂದು ಕರ್ನಾಟಕ ವಿ.ವಿ. ಕುಲಪತಿ ಡಾ. ಎಚ್.ಬಿ.ವಾಲೀಕಾರ `ಪ್ರಜಾವಾಣಿ'ಗೆ ತಿಳಿಸಿದರು. ಈಗಾಗಲೇ ಅಂತಹ ಒಂದು ಕಾಟ್‌ನ್ನು ಪ್ರಾತ್ಯಕ್ಷಿಗೆ ಇಡಲಾಗಿದೆ.ಅಕ್ಕಮಹಾದೇವಿ ಹಾಸ್ಟೆಲ್‌ನಲ್ಲಿ ಮಾನವಿಕ ಶಾಸ್ತ್ರ, ಸಮಾಜ ವಿಜ್ಞಾನ ನಿಕಾಯಗಳ ವಿದ್ಯಾರ್ಥಿನಿಯರು ವಾಸಿಸುತ್ತಾರೆ. ರಾಣಿ ಚನ್ನಮ್ಮ ಹಾಸ್ಟೆಲ್‌ನಲ್ಲಿ ವಿಜ್ಞಾನ ನಿಕಾಯದ ವಿದ್ಯಾರ್ಥಿನಿಯರು ಮಾತ್ರ ವಾಸಿಸುತ್ತಾರೆ. ಹೆಚ್ಚುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಒದಗಿಸಲು ಬಂಕರ್ ಕಾಟ್‌ಗಳನ್ನೇ ಇತರ ಹಾಸ್ಟೆಲ್‌ಗಳಲ್ಲಿಯೂ ಹಾಕುವ ಪ್ರಸ್ತಾವವೂ ವಿ.ವಿ.ಯ ಮುಂದಿದೆ.2012-13ನೇ ಶೈಕ್ಷಣಿಕ ವರ್ಷದಲ್ಲಿ 2,938 ವಿದ್ಯಾರ್ಥಿನಿಯರು ವಿ.ವಿ. ಆವರಣದ ಸ್ನಾತಕೋತ್ತರ ವಿಭಾಗಗಳಲ್ಲಿ ಪ್ರವೇಶ ಪಡೆದಿದ್ದರು. ಸಮಾಜ ಕಲ್ಯಾಣ ಇಲಾಖೆಯ ಒಂದು ಹಾಸ್ಟೆಲ್, ಕರ್ನಾಟಕ ವಿ.ವಿ.ಯ ಅಕ್ಕಮಹಾದೇವಿ, ರಾಣಿ ಚನ್ನಮ್ಮ, ಸರಸ್ವತಿ ಹಾಗೂ ಉದ್ಯೋಗಸ್ಥ ಮಹಿಳೆಯರ ವಸತಿಗೃಹಗಳು ಇದ್ದರೂ ವಿದ್ಯಾರ್ಥಿನಿಯರಿಗೆ ಸಾಕಾಗುತ್ತಿಲ್ಲ.ಅನಿವಾರ್ಯವಾಗಿ ಇಬ್ಬರು ಉಳಿಯಬೇಕಾದ ಹಾಸ್ಟೆಲ್‌ನಲ್ಲಿ ನಾಲ್ಕು ಜನರನ್ನು ಅವರ ಸಮ್ಮತಿಯ ಮೇರೆಗೆ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ಹಾಸ್ಟೆಲ್‌ನ ವಾರ್ಡನ್ ಒಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry