ಕವಿಶೈಲದ ಕಲಾಕೃತಿಯ ಒಳಹೊರಗೆ...

7

ಕವಿಶೈಲದ ಕಲಾಕೃತಿಯ ಒಳಹೊರಗೆ...

Published:
Updated:
ಕವಿಶೈಲದ ಕಲಾಕೃತಿಯ ಒಳಹೊರಗೆ...

ಕುವೆಂಪು ಅವರ ಹುಟ್ಟೂರು ಕುಪ್ಪಳಿಗೆ ಹೋಗಿದ್ದೀರಾ? ಅಲ್ಲಿನ `ಕವಿಶೈಲ'ಕ್ಕೆ ಹೋಗುವ ದಾರಿಗಳಲ್ಲಿ ಒಂದು ಪೇಂಟಿಂಗ್ ಇದೆ. ಬೆಟ್ಟ ಸಾಲನ್ನೇ ಕ್ಯಾನ್‌ವಾಸ್ ಮಾಡಿಕೊಂಡು ಟನ್ನುಗಟ್ಟಳೆ ತೂಗುವ ಹೆಬ್ಬಂಡೆಗಳನ್ನು ಮಾಧ್ಯಮವಾಗಿಸಿಕೊಂಡು ಮಾಡಿರುವ ಶಿಲ್ಪಕಲಾಕೃತಿ ಅದು. ನಾಡಿನ ಹೆಸರಾಂತ ಕಲಾವಿದರಾದ ಕೆ.ಟಿ. ಶಿವಪ್ರಸಾದ್ ಅವರು ನಿರ್ಮಿಸಿದ ಕೃತಿ. ಅದರ ಬಗೆಗಿನ ಕೆಲವು ವಿಶೇಷ ಸಂಗತಿಗಳನ್ನು ನಿಮಗೆ ತಿಳಿಸಬೇಕು.ಮೊದಲನೆಯದಾಗಿ ನೀವೇ ನೇರವಾಗಿ ಆ ಪೇಂಟಿಂಗ್ ಒಳಕ್ಕೆ ಹೋಗಿ ಹೊರಬರಬಹುದು! ಇಲ್ಲಿ ಒಳಕ್ಕೆ ಹೋಗುವುದೇ ಹೊರಗೆ ಬರುವುದಕ್ಕೆ! ಅದು, ಈಗ ಯಾವ್ಯಾವುದರ ಒಳಕ್ಕೋ ಹೋಗಿ ಅವಕ್ಕೆ ಅಂಟಿ ಕೂತುಬಿಟ್ಟದ್ದೇವಲ್ಲಾ ಅವುಗಳಿಂದ ಹೊರಬನ್ನಿ, ಬಯಲಿಗೆ ಬನ್ನಿ ಎನ್ನುವುದರ ಅಭಿನಯದ ರೂಪದಂತಿದೆ. `ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ' ಎಂದು ಆ ಕಡೆಯಿಂದ ಕುವೆಂಪು ಕರೆದಂತಿದೆ. ಎರಡನೆಯದಾಗಿ ಇದು ಮಾಡಿ ಮುಗಿಸಿರುವ ಕಲಾಕೃತಿಯಲ್ಲ, ಯಾವತ್ತಿಗೂ ಆಗುತ್ತಲೇ ಇರುವ ಕಲಾಕೃತಿ, `ಆಗು ಆಗು ಆಗು ನೀ ಅನಿಕೇತನ' ಎಂದ ಕುವೆಂಪು ಅವರ ದರ್ಶನವನ್ನು, `ಲೋಕದಲ್ಲಿ ಆಗಿ ಇರುವುದು ಯಾವುದೂ ಇಲ್ಲ ಎಲ್ಲವೂ ಆಗುತ್ತಲೇ ಇರುತ್ತದೆ, ಎಲ್ಲವೂ ನಿರಂತರ ಚಲನೆಯಲ್ಲಿರುತ್ತದೆ, ಆಗುವಿಕೆಯ ನಿರಂತರತೆ ಇದೆಯೇ ಹೊರತು ನಿರಂತರತೆಯ ಆಗುವಿಕೆ ಇಲ್ಲ' ಎಂದ ಬುದ್ಧಗುರುವಿನ ನುಡಿಯನ್ನೂ, `ಕಲೆ-ಕಾವ್ಯ ಉಂಟಾಗುವುದು ನೋಡುಗನ/ಕೇಳುಗನ ಪಾಲ್ಗೊಳ್ಳುವಿಕೆಯಿಂದಲೇ' ಎನ್ನುವ ಪ್ರಕ್ರಿಯಾ ಮೀಮಾಂಸೆಯನ್ನೂ, `ಬರಡೇ ಹಯನು ಹಯನೇ ಬರಡು' ಎನ್ನುವ ತಾವೋ ದರ್ಶನವನ್ನೂ, `ಕಲಾಕೃತಿಯೊಂದು ಎಂದಿಗೂ ಸಿದ್ಧಗೊಳ್ಳುವುದಿಲ್ಲ, ಅದು ಪ್ರತಿಯೊಬ್ಬ ಪ್ರತಿಸಾರಿ ನೋಡಿದಾಗಲೂ ಆಗುತ್ತಲೇ ಇರುತ್ತದೆ, ಮೂಲಕೃತಿಯೆನ್ನುವುದು ಇರುವುದಿಲ್ಲ' ಎನ್ನುವ ಅನೇಕಾಂತವಾದಿ ನಿಲುವನ್ನೂ, ಇಂತಹ ಅನಂತ ಸಾಧ್ಯತೆಗಳನ್ನು ತೆರೆಯುವ ಈ ಕಲಾಕೃತಿಯನ್ನು ತಾವು ಕಂಡ ಯಾವುದೋ ಒಂದಕ್ಕೆ ಹೋಲಿಸುವವರು ಅದೊಂದನ್ನು ಮಾತ್ರವೇ ಕಂಡಿರುತ್ತಾರೆ. ಆದುದರಿಂದ `ನೋಟವೆಂಬುದು ನೇತ್ರದೆಂಜಲು' ಎನ್ನುವ  ಅಲ್ಲಮನ ವಚನವನ್ನೂ... ನೋಡುಗರೆದುರಿಗೆ ತೆರೆಯುತ್ತಲೇ ಹೋಗುತ್ತದೆ.ಮೂರನೆಯದಾಗಿ ಈ ಕಲಾಕೃತಿಯು ಆದಿ-ಅಂತ್ಯವಿಲ್ಲದ ನಿರಂತರ ಯಾನವಾಗಿದೆ. ಇದನ್ನು ಎಲ್ಲಿಂದಲಾದರೂ ಒಳಹೊಕ್ಕು ಎಲ್ಲಿಂದಲಾದರೂ ಹೊರಬರಬಹುದು. ಮತ್ತು, ಇದೊಂದು ವ್ಯೋಮ ಪ್ರತಿಮೆ cosmic image ಕೇವಲ ಗಾತ್ರದಿಂದಲ್ಲ; ಅದರ ಪ್ರತಿಭಾಪ್ರಕಾಶದಿಂದ ಹಾಗೂ ಅದು ಮಾಡುತ್ತಿರುವ ದುಃಖದ ಅನುಸಂಧಾನವೆಂಬ ಕಲಾ ಉದ್ದೇಶದಿಂದ. ಧರ್ಮವೊಂದಕ್ಕೆ, ಜಾತಿಯೊಂದಕ್ಕೆ, ದರ್ಶನವೊಂದಕ್ಕೆ, ಮೀಮಾಂಸೆಯೊಂದಕ್ಕೆ ಅಂಟಿಕೊಂಡು ಅಲ್ಲೇ ನಿಂತುಬಿಡುವುದರಿಂದ ಮತ್ತು ಲೋಕವನ್ನು ಜಡವೆಂದು ತಪ್ಪಾಗಿ ಪರಿಭಾವಿಸುವುದರಿಂದ ಸಂಘರ್ಷರೂಪದ ದುಃಖ ಉಂಟಾಗುತ್ತದೆ. ಈ ತಪ್ಪುಗ್ರಹಿಕೆಯಿಂದ ನಮ್ಮನ್ನು ಮುಕ್ತಗೊಳಿಸಿ ಮುಂದಕ್ಕೆ ಹರಿಯಬಿಡುವುದರಿಂದ ಲೋಕದೊಡನೆ ಸಾಮರಸ್ಯದ ನಡಿಗೆ ಸಾಧ್ಯವಾಗುತ್ತದೆ. ಬದಲಾಗುತ್ತಿರುವ ಎಲ್ಲವನ್ನೂ ಹಾಗೆಯೇ ಗ್ರಹಿಸುವುದರಿಂದ ದುಃಖದ ಬಿಡುಗಡೆಗೆ ದಾರಿ ಸಿಗುತ್ತದೆ. ಅಂತಹ ಅನೇಕ ಹೊರದಾರಿಗಳನ್ನು ಇದು ನಮ್ಮ ಮುಂದೆ ತೆರೆಯುತ್ತದೆ. ಹಾಗಾಗಿ ಇದೊಂದು ವ್ಯೋಮ ಪ್ರತಿಮೆ. ಇಂತಹ ಬೃಹತ್ ಶಿಲ್ಪಸ್ಮಾರಕ ಪ್ರಪಂಚದ ಮತ್ಯಾವ ಕವಿಗೂ ಇಲ್ಲವೆಂದು ತೋರುತ್ತದೆ.ಆದುದರಿಂದ, ಈ ಹೆಬ್ಬಂಡೆಗಳು ತೆರೆಯುವ ಬಾಗಿಲುಗಳು ನಮ್ಮನ್ನು ಹೊರಗೆ ಕರೆದೊಯ್ದು ಹಗುರಾಗಿಸುತ್ತವೆ. ಮುಂದಿನ ದಾರಿಯ ಆಯ್ಕೆಯನ್ನು ಸಲೀಸಾಗಿಸುತ್ತವೆ. `ನೀವು ನಡೆಯುವ ದಾರಿ ನಿಮ್ಮ ಆಯ್ಕೆಯೇ ಆಗಿರಲಿ, ಅದು ಈ ಲೋಕದ ನಡೆಯ ಜೊತೆಗಿನ ಕರುಣೆ ಮೈತ್ರಿಯ ನಡೆಯಾಗಿರಲಿ. ಹೋಗಿಬನ್ನಿ' ಎಂದು ಆ ಶಿಲ್ಪಕೃತಿ ನಿಮ್ಮನ್ನು ಬೀಳ್ಕೊಡುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry