ಮಂಗಳವಾರ, ನವೆಂಬರ್ 12, 2019
25 °C
ನೆಲಸಿರಿ

ಕವಿ, ರಾಜ ಕೂಡಿ ರೂಪಿಸಿದ `ಮಾರ್ಗ'

Published:
Updated:

`ಕವಿರಾಜ ಮಾರ್ಗ' ಕನ್ನಡದ ಮೊದಲ ಉಪಲಬ್ಧ ಕೃತಿ. 1828ರಷ್ಟು ಹಿಂದೆ ವಿಲ್ಸನ್ ಸಿದ್ಧಪಡಿಸಿದ ಕರ್ನಲ್ ಮೆಕೆಂಜಿ ಸಂಗ್ರಹಿಸಿದ ಹಸ್ತಪ್ರತಿ ಸೂಚಿಯ ಮೂಲಕ ಕನ್ನಡಿಗರಿಗೆ ಪರಿಚಿತವಾಗಿ 1897 ರಲ್ಲಿ ಮೊದಲ ಬಾರಿಗೆ ಕೆ. ಬಿ. ಪಾಠಕ್ ಅವರಿಂದ ಸಂಪಾದಿತವಾಗಿ ಪ್ರಕಟವಾಯಿತು. ಅಂದಿನಿಂದ ಇಂದಿನವರೆಗೆ ಕನ್ನಡ ಮನಸ್ಸು ಈ  ಕೃತಿಯನ್ನು ಮತ್ತೆ ಮತ್ತೆ ಅವಲೋಕಿಸಿದೆ.ಸಾಕಷ್ಟು ಚರ್ಚಿಸಿದೆ. ಆದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಜಾಗತೀಕರಣದ  ಪ್ರವಾಹಕ್ಕೆ ಸಿಕ್ಕು ತತ್ತರಿಸುತ್ತಿರುವ ಹೊತ್ತಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪುನರ್ ಸಂಘಟಿಸಬೇಕಾದ ಜರೂರಿನಲ್ಲಿ `ಕವಿರಾಜ ಮಾರ್ಗ'ದ ಅಧ್ಯಯನ ಹೆಚ್ಚು ಪ್ರಸ್ತುತ.ಕವಿರಾಜ ಮಾರ್ಗಕ್ಕಿಂತ ಮೊದಲೂ ಕನ್ನಡದಲ್ಲಿ ಕೃತಿಗಳು ರಚಿತವಾಗಿದ್ದವು ಎಂದು ಖಚಿತವಾಗಿ ನಮಗೆ ತಿಳಿದು ಬರುತ್ತದೆ. ವಿಮಳ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮೊದಲಾದವರ ಬಗ್ಗೆ ಕವಿರಾಜ ಮಾರ್ಗದಲ್ಲಿಯೇ ನಮಗೆ ಉಲ್ಲೇಖ ದೊರಕುತ್ತದೆ. ಆದರೆ ಅವರ ಯಾವ ಕೃತಿಗಳೂ ನಮಗೆ ದೊರೆತಿಲ್ಲ. ಹೀಗಾಗಿ ಕವಿರಾಜಮಾರ್ಗಕ್ಕೆ ಕನ್ನಡದ ಮೊದಲ ಉಪಲಬ್ಧ ಕೃತಿ ಎಂಬ ಐತಿಹಾಸಿಕ ಮಹತ್ವ ಇಂದಿಗೂ ಉಳಿದುಕೊಂಡಿದೆ.`ಕವಿರಾಜ ಮಾರ್ಗ' ಒಂದು ಲಕ್ಷಣ ಗ್ರಂಥ. ಈ ಕೃತಿಯ ಕರ್ತೃತ್ವದ ಬಗ್ಗೆ ಸಾಕಷ್ಟು ಚರ್ಚೆಯಿದೆ, ಒಮ್ಮತವಿಲ್ಲ. ಕ್ರಿ.ಶ. 814 ರಿಂದ 877ರ ಅವಧಿಯಲ್ಲಿ ರಾಷ್ಟ್ರಕೂಟರ ಚಕ್ರವರ್ತಿಯಾಗಿದ್ದ ನೃಪತುಂಗನ ಆಸ್ಥಾನದಲ್ಲಿದ್ದ ಶ್ರೀ ವಿಜಯನು ಇದನ್ನು ರಚಿಸಿದನೆಂದು ಭಾವಿಸಲಾಗಿದೆ. ಆದರೆ ರಾಜ ನೃಪತುಂಗನ ಅಭಿಮತವನ್ನು ಪಡೆದೇ ಇದು ರೂಪುಗೊಂಡಿದೆ ಎಂಬ ಅಂಶ ಕೃತಿಯಿಂದ ತಿಳಿದು ಬರುತ್ತದೆ. ಕವಿರಾಜಮಾರ್ಗ ಜಗತ್ತಿನ ಅತ್ಯಂತ ಪ್ರಾಚೀನ ಕಾವ್ಯಮಿಮಾಂಸೆಯ ಗ್ರಂಥಗಳಲ್ಲಿ ಒಂದು. ಸಂಸ್ಕೃತ, ಪ್ರಾಕೃತ, ಪಾಲಿ, ಚೈನೀಸ್, ಗ್ರೀಕ್, ಲ್ಯಾಟಿನ್ ಭಾಷೆಗಳನ್ನು ಬಿಟ್ಟರೆ ಈ ಬಗೆಯ ಕಾವ್ಯಚಿಂತನೆಯ ಕೃತಿ ಸಿಗುವುದು ಕನ್ನಡದಲ್ಲಿಯೇ.ತಮಿಳಿನ `ತೋಳ್ಳಾಪ್ಪಿಯಂ' ಕೃತಿಯನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಕವಿರಾಜಮಾರ್ಗಕ್ಕೂ ತೋಳ್ಳಾಪ್ಪಿಯಂಗೂ ಅನೇಕ ಸಾಮ್ಯ ವೈಷಮ್ಯಗಳಿವೆ. ಕನ್ನಡ ಪರಂಪರೆ, ದೇಸಿ ಸಂಸ್ಕೃತಿ, ವಸಾಹತೋತ್ತರದ ಪರಿಣಾಮ, ಜಾಗತೀಕರಣದ ಆಕ್ರಮಣ - ಈ ಚರ್ಚೆಗಳ ಗೊಂದಲದಲ್ಲಿರುವ ನಮಗೆ ಕವಿರಾಜಮಾರ್ಗ ಅನ್ಯಾಕ್ರಮಣದ ವಿರುದ್ಧ ಕನ್ನಡದ ಅನನ್ಯತೆಯನ್ನು ಮಂಡಿಸಿದ ಬಗೆ, ಕನ್ನಡ ಸಂಸ್ಕೃತಿಯನ್ನು ಕಟ್ಟಿ ಕೊಡುವ ರೀತಿ ಒಂದು ಅತ್ಯುತ್ತಮ ಮಾದರಿಯನ್ನು ಒದಗಿಸುತ್ತದೆ.ಕವಿರಾಜಮಾರ್ಗದರ್ಶನ ಚಿಂತನೆಗಳು ಹೊರಜಗತ್ತಿನ ಜೊತೆ ಕನ್ನಡ ಸಂಸ್ಕೃತಿ ಸೃಷ್ಟಿಸಿಕೊಳ್ಳಬಹುದಾದ ಸಂಬಂಧದ ಸಾಧ್ಯತೆಗಳ ಸ್ವರೂಪದ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಕನ್ನಡ ಪರಂಪರೆಯನ್ನು ಈ ಬಗೆಯ ಅನುಸಂಧಾನ -  ಅನ್ಯಾಕ್ರಮಣಗಳಿಗೆ ಎದುರಾಗಿ ತನ್ನನ್ನು ಸ್ಥಾಪಿಸಿಕೊಳ್ಳುವ ಕ್ರಮ - ಒಂದು ನಿರಂತರ ಪ್ರಕ್ರಿಯೆಯೆಂಬಂತೆ ನಡೆದು ಬಂದಿದೆ.ಪಂಪ, ವಚನಕಾರರು, ಹರಿಹರ - ರಾಘವಾಂಕ, ಕುಮಾರವ್ಯಾಸ, ರತ್ನಾಕರವರ್ಣಿ ಇವರೆಲ್ಲರ ಸೃಜನಶೀಲ ಪ್ರತಿಭೆ ಇದೇ ಮಾದರಿಯದು. ಕೆ. ವಿ. ಸುಬ್ಬಣ್ಣನವರಿಗೆ `ಕವಿರಾಜಮಾರ್ಗ' ಇಂದು ಅತ್ಯಂತ ಪ್ರಸ್ತುತವೆನ್ನಿಸುವುದೂ ಈ ಹಿನ್ನೆಲೆಯಲ್ಲಿಯೇ. ಸ್ಥಳೀಯ ನೆಲೆಯಲ್ಲಿಯೇ ದೃಢವಾಗಿ ನಿಂತು ವಿಶ್ವವನ್ನು ಒಳಗೊಳ್ಳುವ ಹೆಗ್ಗೋಡಿನ ಚಟುವಟಿಕೆಗಳಿಗೂ, ತೇಜಸ್ವಿಯವರ ಚಿಂತನೆಗಳಿಗೂ, ಕವಿರಾಜಮಾರ್ಗಕ್ಕೂ ಇರುವ ಆಂತರಿಕ ಸಂಬಂಧ ಅಧ್ಯಯನ ಯೋಗ್ಯ.`ಕವಿರಾಜಮಾರ್ಗ' ಒಂದು ಲಕ್ಷಣ ಗ್ರಂಥವಾದರೂ ಕನ್ನಡ ವಿದ್ವತ್‌ವಲಯ ಇದನ್ನು ಒಂದು `ಸಾಂಸ್ಕೃತಿಕ ಪಠ್ಯ' ವಾಗಿಯೇ ಚರ್ಚಿಸುತ್ತ ಬಂದಿದೆ. ಇಂದು ಇಂಗ್ಲಿಷ್ ಭಾಷೆಯ ಆಕ್ರಮಣದಿಂದ ಪ್ರಾಂತೀಯ ಭಾಷೆಗಳು ತತ್ತರಿಸುತ್ತಿರುವಂತೆಯೇ ಅಂದು ಕವಿರಾಜಮಾರ್ಗಕಾರನ ಕಾಲಕ್ಕೆ ಸಂಸ್ಕೃತದ ದಟ್ಟ ಪ್ರಭಾವಕ್ಕೆ ದೇಸೀ ಭಾಷೆಗಳು ಸಿಲುಕಿದ್ದವು. ಆ ಸಂದರ್ಭದಲ್ಲಿ ಸಂಸ್ಕೃತದ ಎದುರು ನಿಂತು ಕನ್ನಡವೆಂಬ ಪುಟ್ಟ ದೇಸಿ ಸಂಸ್ಕೃತಿಯು ತನ್ನನ್ನು ಸಂಘಟಿಸಿಕೊಂಡ ಮಾದರಿ `ಕವಿರಾಜಮಾರ್ಗ' ದಲ್ಲಿದೆ.ಸಂಸ್ಕೃತವನ್ನು ನಿರಾಕರಿಸದೆ ಕೆಲವನ್ನು ಉಳಿಸಿಕೊಂಡು, ಹಲವನ್ನು ಕಳಚಿಕೊಂಡು, ತನ್ನ ಅನನ್ಯತೆಯ್ನು ಸಾಬೀತುಪಡಿಸುತ್ತ ಕನ್ನಡ ಸಂಸ್ಕೃತಿ ತನ್ನನ್ನು ಕಟ್ಟಿಕೊಂಡಿದೆ. ಸ್ಥಳೀಯವಾಗಿ ತನ್ನ ಪ್ರದೇಶವನ್ನು ಗುರ್ತಿಸಿಕೊಳ್ಳುತ್ತ (ಕಾವೇರಿಯಿಂದಮಾ ಗೋದಾವರಿವರೆಮಿರ್ದ ನಾಡದಾ ಕನ್ನಡದೋಳ್ ...) ಕನ್ನಡ ಮೌಖಿಕ ಪರಂಪರೆಯ ಬಗ್ಗೆ ಪ್ರಸ್ತಾಪಿಸುತ್ತ (ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್), ಕನ್ನಡ ಜನರ ಗುಣಸ್ವಭಾವಗಳನ್ನು ಪ್ರಶಂಸಿಸುತ್ತ (ಸುಭಟರ್ಕಳ್, ಚೆಲ್ವರ್ಕಳ್,  ಗುಣಿವಳಿ,  ಅಭಿಮಾನಿಗಳ್, ಅತ್ಯುಗ್ರರ್, ವಿವೇಕಿಗಳ್...) ಕನ್ನಡಕ್ಕೇ ವಿಶಿಷ್ಟವಾದ ಗುಣಲಕ್ಷಣ, ಛಂದೋರೂಪಗಳನ್ನು ನಿರೂಪಿಸುತ್ತ (ಚತ್ತಾಣ ಬೆದಂಡೆ ಯತಿವಿಲಂಘನ ಇತ್ಯಾದಿ) ಕವಿರಾಜಮಾರ್ಗಕಾರ ಕನ್ನಡ ಸಂಸ್ಕೃತಿಯನ್ನು ಸ್ಥಾಪಿಸುವ ಕ್ರಮ ಈ ಹೊತ್ತು ನಮಗೆ ಮಾದರಿಯಾಗಬೇಕಿದೆ. ಸಂಸ್ಕೃತದ ದಂಡಿಯ `ಕಾವ್ಯಾದರ್ಶ' ದಿಂದ ಕವಿರಾಜಮಾರ್ಗಕಾರ ಪ್ರೇರಣೆ ಪಡೆದಿದ್ದರೂ, ಅದರಿಂದ ಭಿನ್ನವಾಗುತ್ತಾ ಕನ್ನಡ ಜಗತ್ತನ್ನು ಆತ ಕಟ್ಟಿಕೊಡುವ ರೀತಿಯಲ್ಲಿ ಈ ಕೃತಿಯ ಮಹತ್ವವಿದೆ.`ಕವಿರಾಜಮಾರ್ಗ'ದ ಹೆಸರೇ ವಿಶಿಷ್ಟವಾಗಿದೆ. ಸಂಸ್ಕೃತ ಅಲಂಕಾರ ಗ್ರಂಥಗಳ ಹೆಸರುಗಳಿಗಿಂತ ಇದು ಭಿನ್ನವಾಗಿದ್ದು ಅರ್ಥಪೂರ್ಣವಾಗಿದೆ. ಈ ಹೆಸರನ್ನು ಸಾಮಾನ್ಯವಾಗಿ ಎರಡು ರೀತಿ ವ್ಯಾಖ್ಯಾನಿಸುತ್ತಾರೆ: ಇದು ಕವಿಗಳಿಗೆ `ರಾಜಮಾರ್ಗ'ವನ್ನು ತೋರಿಸುವ ಕೃತಿ, ಹೀಗಾಗಿ ಇದು ಕವಿರಾಜಮಾರ್ಗ. ಇದು ಒಂದು ವ್ಯಾಖ್ಯಾನ. ಮತ್ತೊಂದು ಕವಿರಾಜರು ಅಂದರೆ ಪ್ರಮುಖ ಕವಿಗಳು ಸವೆಸಿದ ಮಾರ್ಗ ಅಥವಾ ತೋರಿಸಿದ ಮಾರ್ಗ.ಕೆ.ವಿ. ಸುಬ್ಬಣ್ಣ ಈ ಶೀರ್ಷಿಕೆಯ ಮತ್ತೊಂದು ಅರ್ಥಸಾಧ್ಯತೆಯನ್ನು ಸೂಚಿಸುತ್ತಾರೆ. ನನಗೆ ಅದು ಮಹತ್ವದ್ದೆನ್ನಿಸಿದೆ. ಅವರು ಹೇಳುತ್ತಾರೆ: `ಈ ಗ್ರಂಥದ ಸಂದರ್ಭದಲ್ಲಿ `ಕವಿರಾಜಮಾರ್ಗ' ಎಂಬುದಕ್ಕೆ ಸರಳವಾಗಿ ನೇರವಾಗಿ ಹೊರಡಬೇಕಾದ ಮುಖ್ಯಾರ್ಥವೆಂದರೆ - `ಕವಿ  ಮತ್ತು ರಾಜ ಕೂಡಿ ನಿರ್ಮಿಸಿದ ಮಾರ್ಗ' ಎನ್ನುವುದೇ. ಯಾಕೆಂದರೆ  ಅದು ವಾಸ್ತವವಾದದ್ದು. ಶ್ರೀವಿಜಯ ಮತ್ತು ನೃಪತುಂಗರು ಇದರ ಜಂಟಿ ಕರ್ತೃಗಳು. ಈ ಜಂಟಿ ಕರ್ತೃತ್ವದ ವಿಷಯವನ್ನು ಗ್ರಂಥದ ಉದ್ದಕ್ಕೂ ಅನೇಕ ಕಡೆಗಳಲ್ಲಿ ಮತ್ತೆ ಮತ್ತೆ ಖಚಿತಗೊಳಿಸಿ ಹೇಳಲಾಗಿದೆ ಹಾಗೂ ಅದನ್ನೇ ಗ್ರಂಥಶೀರ್ಷಿಕೆಯಲ್ಲಿ ಕೂಡಾ ದೃಢೀಕರಿಸಲಾಗಿದೆ. ಈ ಅರ್ಥವು ಕವಿಕಾಯಕ ಮತ್ತು ರಾಜಕಾರ್ಯಗಳ, ಅರ್ಥಾತ್ ಕಾವ್ಯ (ಭಾಷೆ) ಮತ್ತು ಪ್ರಭುತ್ವಗಳ ಶಕ್ತಿಯುತ ಸಂಬಂಧವನ್ನು ಸೂಚಿಸುವಂತೆ ಉದ್ಭೋದಕವಾಗಿದೆ. ಕವಿಕಾಯಕವು ಭಾವದ ಸೂಕ್ಷ್ಮಸ್ತರಕ್ಕೆ ಸಂಬಂಧಿಸಿದ್ದು ಮತ್ತು ಪ್ರಭುತ್ವ ಕಾಯಕವು `ಭವ'ದ ಮೂರ್ತಸ್ತರಕ್ಕೆ ಸಂಬಂಧಿಸಿದ್ದು. ಮೊದಲು `ಭಾವಲೋಕ'ದ ನಿರ್ಮಾಣವಾಗಿ ಅನಂತರ ಅದರ ಅಸ್ತಿವಾದ ನಕ್ಷೆಯ ಮೇಲೆ `ಭವಲೋಕ'ವು ನಿರ್ಮಾಣಗೊಳ್ಳುತ್ತದೆ. ಭಾವದಲ್ಲಿ ಸ್ಫುರಿಸಿ ಭಾಷೆಯಲ್ಲಿ ನಾಮರೂಪಗಳಾಗಿ ಚಿತ್ರಗೊಳ್ಳದೆ ಯಾವುದೇ ಕ್ರಿಯೆಯೂ ಘಟಿಸಲಾರದಷ್ಟೇ? ಕವಿಯೂ ರಾಜನೂ ಕೂಡಿಕೊಂಡು ಭಾವಕನ್ನಡ ಭವಕನ್ನಡಗಳ ಸಂಯುಕ್ತ ಸೃಷ್ಟಿಗೆ ಕೈಚಾಚಿರುವುದನ್ನು ದಾಖಲಿಸುವ ಕವಿರಾಜಮಾರ್ಗ ಆ ಕಾರಣದಿಂದ ಅನನ್ಯವಾಗಿದೆ' (ಅರೆ ಶತಮಾನದ ಅಲೆ ಬರಹಗಳು ಪುಟ 437).ಸುಬ್ಬಣ್ಣನವರು `ಕವಿರಾಜಮಾರ್ಗ'ದ ಬಗೆಗೆ ನೀಡುವ ಈ ಅರ್ಥಸಾಧ್ಯತೆಯ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ.

ಇತಿಹಾಸವನ್ನು ಗಮನಿಸಿದಾಗ ಧರ್ಮ ಮತ್ತು ರಾಜಕೀಯ ಅನೇಕ ನೆಲೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದನ್ನು ಗಮನಿಸುತ್ತೇವೆ. ನಮ್ಮ ಕಾಲದಲ್ಲಂತೂ ಇವೆರಡರ ಅನೈತಿಕ ಒಗ್ಗೂಡುವಿಕೆ ಆತಂಕಕ್ಕೆ ಕಾರಣವಾಗುವಷ್ಟು ಅಪಾಯಕಾರಿಯಾಗಿದೆ. ಆದರೆ ರಾಜಕಾರಣ ಮತ್ತು ಸಾಹಿತ್ಯದ ಸಂಬಂಧ ಇತಿಹಾಸದುದ್ದಕ್ಕೂ ಅತ್ಯಂತ ಜಟಿಲವಾಗಿದೆ. ಜರ್ಮನಿಯ ಮಹತ್ವದ ದಾರ್ಶನಿಕ ನೀಷೆ  ಸಹ ಪ್ರಭುತ್ವ ಮತ್ತು ಸಂಸ್ಕೃತಿಗಳೆರಡೂ ಒಟ್ಟಿಗೆ ಹೋಗಲಾರವು ಎಂದೇ ಅಭಿಪ್ರಾಯ ಪಡುತ್ತಾನೆ. ಪ್ರಭುತ್ವ ಬಲಿಷ್ಠವಾದಷ್ಟೂ ಸಂಸ್ಕೃತಿ ಸೊರಗುತ್ತದೆ, ಜರ್ಮನಿ ರಾಜಕೀಯವಾಗಿ ಪ್ರಬಲವಾದಾಗಲೇ ಅಲ್ಲಿ ಸಂಸ್ಕೃತಿ ಸಾವಿನ ಅಂಚಿಗೆ ಬಂದದ್ದು ಎಂದು ಆತ ವಾದಿಸುತ್ತಾನೆ. ನೀಷೆಯಂತೆಯೇ ವಾದಿಸುವವರು ಬಹು ಮಂದಿ. ಆದರೆ ಇದನ್ನು ನಾವು ಸಂಪೂರ್ಣ ಒಪ್ಪಬೇಕಿಲ್ಲ. ಭಾಷಾ ಬೆಳವಣಿಗೆಯಲ್ಲಿ ರಾಜಕೀಯದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಷೆಲ್ಡನ್ ಪೊಲಾಕ್ ತಮ್ಮ ಲೇಖನವೊಂದರಲ್ಲಿ (ದಿ ಕಾಸ್ಮೊಪಾಲಿಟನ್ ವರ್ನಾಕ್ಯುಲರ್) ಕವಿರಾಜಮಾರ್ಗದ ಬಗ್ಗೆ ಚರ್ಚಿಸುತ್ತ ಕರ್ನಾಟಕದಲ್ಲಿ, ನೃಪತುಂಗನ ಕಾಲದಲ್ಲಿ ಇತಿಹಾಸವನ್ನು ಬಹು ಅಪರೂಪವೆನ್ನುವಂತೆ ಸಾಹಿತ್ಯ ಮತ್ತು ರಾಜಕೀಯ ಸಹಧಾರೆಗಳಾಗಿ ಒಂದನ್ನೊಂದು ಪ್ರಭಾವಿಸುತ್ತ ಸಮೀಕರಣಗೊಂಡಿರುವುದನ್ನು ಪ್ರಸ್ತಾಪಿಸುತ್ತಾನೆ.ಜನಸಮುದಾಯದ ಹೊರಜಗತ್ತನ್ನು ನಿಯಂತ್ರಿಸುವ ರಾಜಕೀಯ ಹಾಗೂ ಒಳಜಗತ್ತನ್ನು ರೂಪಿಸುವ ಸಾಹಿತ್ಯ - ಇವೆರಡೂ ಒಂದಾಗಿ ಜನತೆಯ ಬದುಕು ಹಸನಾಗುವುದರ ಬಗೆಗೆ ಚಿಂತಿಸಲು ಸಾಧ್ಯವಾದರೆ ಬಹುಶಃ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕೀತು. ಕವಿಗೆ ಕನಸುಗಳಿವೆ, ಅಧಿಕಾರವಿಲ್ಲ. ರಾಜಕಾರಣಿಗೆ ಅಧಿಕಾರವಿದೆ, ಕನಸುಗಳೇ ಇಲ್ಲ. ಇವರಿಬ್ಬರೂ ಇಂದು ಗಾವುದ ದೂರದಲ್ಲಿದ್ದಾರೆ. ಪ್ರಭುತ್ವ ಸಾಹಿತ್ಯ ಸಮಾನ ನೆಲೆಯಲ್ಲಿ ಸಂವಾದ ಮಾಡುವ ವಾತಾವರಣ ಇಂದು ಇಲ್ಲ.ಕವಿರಾಜಮಾರ್ಗ ಕವಿಕಾಯಕ ಹಾಗೂ ಪ್ರಭುತ್ವಕಾಯಕವನ್ನು ಸಮಾನ ನೆಲೆಯಲ್ಲಿರಿಸಿ, ಸಮೀಕರಿಸುವ ಪ್ರಯತ್ನ ಮಾಡಿದೆ.

ಡಿ.ಆರ್. ನಾಗರಾಜ್ ಒಮ್ಮೆ ಹೇಳಿದ್ದರು: `ಕಳೆದ ಎರಡು ಸಾವಿರ ವರ್ಷಗಳಲ್ಲಿ ಬಂದ ಪ್ರಪಂಚದ ಹತ್ತು - ಹನ್ನೆರಡು ಅತ್ಯಂತ ಮಹತ್ವದ ರಾಜಕೀಯ ಕೃತಿಗಳ ಪಟ್ಟಿಯೊಂದನ್ನು ಮಾಡುವುದಾದಲ್ಲಿ `ಕವಿರಾಜಮಾರ್ಗ' ನಿಸ್ಸಂದೇಹವಾಗಿ ಅದರಲ್ಲಿ ಸೇರುತ್ತದೆ.

`ಕವಿರಾಜಮಾರ್ಗ' ವನ್ನು ಇಂದು ನಾವು ಕಾವ್ಯಲಕ್ಷಣ ಗ್ರಂಥವಾಗಿ, ಸಾಂಸ್ಕೃತಿಕ ಪಠ್ಯವಾಗಿ ಮಾತ್ರವಲ್ಲದೆ ರಾಜಕೀಯ ಪಠ್ಯವಾಗಿಯೂ ಪರಿಭಾವಿಸುವ ಅಗತ್ಯವಿದೆ.

 

ಪ್ರತಿಕ್ರಿಯಿಸಿ (+)