ಕವಿ ವಿಕ್ರಮ ವಿಸಾಜಿಗೆ ಪ್ರಪ್ರಥಮ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ

7

ಕವಿ ವಿಕ್ರಮ ವಿಸಾಜಿಗೆ ಪ್ರಪ್ರಥಮ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ

Published:
Updated:

ಬೆಂಗಳೂರು: ಕವಿ, ಸಂಶೋಧಕ ಡಾ. ವಿಕ್ರಮ ವಿಸಾಜಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ `ಶ್ರೀವಿಜಯ ಸಾಹಿತ್ಯ ಪ್ರಶಸ್ತಿ~ ಸಂದಿದೆ. ಪ್ರಶಸ್ತಿಯು 1,11,111 ರೂಪಾಯಿ ಹಾಗೂ ಫಲಕವನ್ನು ಒಳಗೊಂಡಿದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್.ಕೃಷ್ಣಯ್ಯ, ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ, ಹರಿಹರಪ್ರಿಯ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಹಾಗೂ ಪದಾಧಿಕಾರಿಗಳನ್ನು ಒಳಗೊಂಡ ಆಯ್ಕೆ ಸಮಿತಿ ವಿಸಾಜಿ ಅವ ರನ್ನು ಪ್ರಶಸ್ತಿಗೆ  ಒಮ್ಮತ ದಿಂದ  ಆಯ್ಕೆ ಮಾಡಿದೆ. ಪ್ರಸ್ತುತ ಗುಲ್ಬರ್ಗದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿಸಾಜಿ ಅವರು ಗಾಳಿಪಟ, ನನ್ನ ಸುತ್ತಲಿನ ಜನ (ಮಕ್ಕಳ ಕವಿತೆಗಳು), ವಿಭಾ ಕವಿತೆಗಳು, ಗೋಕಾಕರ ಆಯ್ದ ಲೇಖನಗಳು (ಸಂಪಾದನೆ), ನೀನೇಕೆ ಕತ್ತಲ ಕಡೆ, ತಮಾಷಾ, ಗೂಡು ಕಟ್ಟುವ ಚಿತ್ರ (ಕವನ ಸಂಕಲನಗಳು),  ಹುಚ್ಚು ದಾಳಿಂಬೆ ಗಿಡ (ಗ್ರೀಕ್ ಕವಿತೆಗಳ ಅನುವಾದ), ಬೆಳಗಿನ ಮುಖ, ನಾದಗಳು ನುಡಿಯಾಗಲೇ (ಸಂಶೋಧನೆ), ಇತ್ಯಾದಿ ಕೃತಿಗಳ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಲ್ಲೂರು ಪ್ರಸಾದ್, `ಕನ್ನಡದ ಮೊದಲ ಕೃತಿಕಾರ ಶ್ರೀವಿಜಯನ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂದು ಆಯ್ಕೆ ಸಮಿತಿ ತೀರ್ಮಾನಿಸಿದೆ. ಇದುವರೆಗೆ ದತ್ತಿ ಪ್ರಶಸ್ತಿಗಳನ್ನು ಮಾತ್ರ ನೀಡುತ್ತಿದ್ದ ಪರಿಷತ್ತು ಇದೇ ಮೊದಲ ಬಾರಿಗೆ ತನ್ನದೇ ನಿಧಿಯಿಂದ ಪ್ರಶಸ್ತಿಯೊಂದನ್ನು ನೀಡುತ್ತಿದೆ. ಇದಕ್ಕಾಗಿ 20 ಲಕ್ಷ ರೂಪಾಯಿಗಳನ್ನು ಶಾಶ್ವತ ನಿಧಿಯಾಗಿ ಕಾಯ್ದಿರಿಸಿದೆ. ಸಾಹಿತ್ಯ ಸಮ್ಮೇಳನದ ನಂತರ ಪರಿಷತ್ತಿನ ಆವರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು~ ಎಂದು ತಿಳಿಸಿದರು.ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಪುಂಡಲೀಕ ಹಾಲಂಬಿ, ಗೌರವ ಕಾರ್ಯದರ್ಶಿಗಳಾದ ಸಂಗಮೇಶ ಬಾದವಾಡಗಿ, ಪ್ರೊ.ಮಳಲಿಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry