ಕಷ್ಟಗಳ ಅಂಗಳದಲ್ಲೂ ಇಷ್ಟವಾಗುವ ಆಟ

ಭಾನುವಾರ, ಜೂಲೈ 21, 2019
26 °C

ಕಷ್ಟಗಳ ಅಂಗಳದಲ್ಲೂ ಇಷ್ಟವಾಗುವ ಆಟ

Published:
Updated:

ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ಮಿನುಗುತ್ತಿದ್ದಾರೆ. ಕಳೆದ ಒಂದೆರಡು ವರ್ಷ ಸಾಧಾರಣ ಯಶಸ್ಸು ಪಡೆದಿದ್ದ ಸಾನಿಯಾ ಪ್ರಸ್ತುತ ಸಾಲಿನಲ್ಲಿ ತಮ್ಮ ಹಿಂದಿನ ಸಾಧನೆಗಳನ್ನು ಮೀರಿ ಯಶಸ್ಸು ಕಾಣುತ್ತಿದ್ದಾರೆ.ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಜೀವಮಾನದ ಅತ್ಯುನ್ನತ ಸಾಧನೆಯನ್ನು ಅವರು ತೋರಿದ್ದಾರೆ. ರಷ್ಯಾದ ಎಲೆನಾ ವೆಸ್ನಿನಾ ಜತೆ ಕೆಲಕಾಲದಿಂದ ಡಬಲ್ಸ್ ಆಡುತ್ತಿರುವ ಸಾನಿಯಾ ನಿರೀಕ್ಷೆಗೂ ಮೀರಿದ ಯಶಸ್ಸು ಸಂಪಾದಿಸಿದ್ದಾರೆ. ಆವೆ ಮಣ್ಣಿನ ಅಂಕಣದಲ್ಲಿ ಈ ಜೋಡಿ ಪ್ರಶಸ್ತಿಯ ಸನಿಹ ಬಂದು ಮುಗ್ಗರಿಸಿದರೂ ಚೊಚ್ಚಲ ಬಾರಿ ರನ್ನರ್ ಅಪ್ ಸ್ಥಾನ ಪಡೆದ ತೃಪಿ ಪಡೆಯಿತು. ಇದು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್‌ಷಿಪ್‌ನಲ್ಲಿ ಸಾನಿಯಾ-ಎಲೆನಾ ಜೋಡಿಯ ಗರಿಷ್ಠ ಸಾಧನೆಯಾಗಿದೆ.ಸಿಂಗಲ್ಸ್ ಅಥವಾ ಮಿಶ್ರ ಡಬಲ್ಸ್‌ನಲ್ಲೂ ಸಾನಿಯಾ ಅವರು ಯಾವುದೇ ಗ್ರ್ಯಾಂಡ್ ಸ್ಲಾಮ್‌ನಲ್ಲಿ ಈ ಹಂತವನ್ನು ತಲುಪಿರಲಿಲ್ಲ. ಎಲೆನಾ ಜತೆ ಪ್ರಸಕ್ತ ಸಾಲಿನಲ್ಲಿ ಡಬ್ಲ್ಯುಟಿಎ ಟೆನಿಸ್ ಟೂರ್ನಿಗಳಲ್ಲಿ ಎರಡು ಪ್ರಶಸ್ತಿಗಳ ಒಡೆತನ ಗಳಿಸಿರುವ ಸಾನಿಯಾ ಡಬ್ಲ್ಯುಟಿಎ ವಿಶ್ವ ಟೆನಿಸ್ ರ‌್ಯಾಂಕಿಂಗ್‌ನಲ್ಲೂ ಜೀವಮಾನದ ಸಾಧನೆಯಾಗಿರುವ 14ನೇ ಸ್ಥಾನ ಪಡೆದಿದ್ದಾರೆ. ಅದೂ 11 ಸ್ಥಾನಗಳ ಜಿಗಿತದ ಸಾಧನೆಯಾಗಿದೆ!

ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಸೋತಿದ್ದು ಕಹಿ ಗುಳಿಗೆಯನ್ನು ನುಂಗಿದಂತಾಗಿದೆ ಎನ್ನುವ ಸಾನಿಯಾ ಯಾವುದೇ ಹಂತದಲ್ಲಿ ಸೋಲುವುದು ಕೆಟ್ಟ ಅನುಭವವೇ ಸರಿ ಎಂದೂ ಒಪ್ಪಿಕೊಳ್ಳುತ್ತಾರೆ.ಆದರೂ ಹಿಂದಿನ ಸಾಧನೆಗಳನ್ನು ಅವಲೋಕಿಸಿದಾಗ ಪ್ರಸ್ತುತ ರನ್ನರ್ ಅಪ್ ಆಗಿರುವುದು ಅಪರಿಮಿತ ಸಂತೋಷವನ್ನುಂಟು ಮಾಡಿದೆ ಎನ್ನುತ್ತಾರವರು.

ಯಾವುದೇ ಶ್ರೇಯಾಂಕವಿಲ್ಲದೆ ಫೈನಲ್ ತಲುಪಿದ್ದ ಚೆಕ್ ಗಣರಾಜ್ಯದ ಆಂಡ್ರಿಯಾ ಮತ್ತು ಲೂಸಿ ಜೋಡಿಯನ್ನು ಸಾನಿಯಾ ಜೋಡಿ ಮಣಿಸಿ ಪ್ರಶಸ್ತಿ ಗಳಿಸಬಹುದು ಎಂದು ಭಾವಿಸಲಾಗಿತ್ತು. ಫೈನಲ್ ಪಂದ್ಯ ನಡೆದ ವೇಳೆ ಜೋರಾಗಿ ಬೀಸುತ್ತಿದ್ದ ಗಾಳಿಯ ಅಡ್ಡಿ ನಡುವೆಯೂ ಸಾನಿಯಾ ಜೋಡಿ ಎಸಗಿದ ತಪ್ಪುಗಳ ಲಾಭ ಪಡೆದ ಚೆಕ್ ಜೋಡಿ ಪ್ರಶಸ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.ಸಿಂಗಲ್ಸ್‌ನಲ್ಲಿ ಸಾನಿಯಾ ಎರಡನೇ ಸುತ್ತಿನಲ್ಲೇ ನಿರ್ಗಮಿಸಿದರೂ ಮೊದಲ ಸುತ್ತಿನ ಗೆಲುವಿನಿಂದಾಗಿ   ಸಿಂಗಲ್ಸ್‌ನ ರ‌್ಯಾಂಕಿಂಗ್‌ನಲ್ಲಿ 72ರಿಂದ 58ನೇ ಸ್ಥಾನಕ್ಕೇರಿ ಕೊಂಚ ಸುಧಾರಣೆ ಕಂಡಿದ್ದಾರೆ.ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಅತ್ಯುನ್ನತ ಸಾಧನೆ ಮಾಡಿದಂತೆ ಸಿಂಗಲ್ಸ್‌ನಲ್ಲಿ ಚೀನಾದ ನಾ ಲೀ ಒಂದು ಹೆಜ್ಜೆ ಮುಂದೆ ಹೋಗಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗಿಟ್ಟಿಸಿಕೊಂಡಿದ್ದಾರೆ.ಏಷ್ಯಾದ ಮಹಿಳೆಯರು ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಗಮನಾರ್ಹ ಸಾಧನೆ ಮಾಡುವುದು ವಿರಳ. ಇತ್ತೀಚಿನ ಕೆಲ ವರ್ಷಗಳಿಂದ ಸಾನಿಯಾ ಮಿರ್ಜಾ ಮತ್ತು ನಾ ಲೀ ಮಾತ್ರ ಕೊಂಚ ಮಟ್ಟಿಗೆ ಮಿಂಚುತ್ತಿರುವರಾದರೂ ಪ್ರಶಸ್ತಿ ಪಡೆದಿರಲಿಲ್ಲ. ಈ ವರ್ಷ ಆಸ್ಟ್ರೇಲಿಯಾ ಓಪನ್‌ನಲ್ಲಿ ನಾ ಲೀ ಅವರು ಪ್ರಶಸ್ತಿಯ ಹೆಬ್ಬಾಗಿಲವರೆಗೂ ಹೋಗುವುದರಲ್ಲಿ ಯಶಸ್ವಿಯಾದರೂ  ಬರಿಗೈಲಿ ಹಿಂತಿರುಗಿದ್ದರು.ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಲೀ ಎಂದೂ ನಾಲ್ಕನೇ ಸುತ್ತು ದಾಟಿರಲಿಲ್ಲ. ಅದು ಬಿಟ್ಟರೆ ವಿಂಬಲ್ಡ್‌ನ್‌ನಲ್ಲಿ ಎರಡು ಬಾರಿ (2006, 2010) ಮಾತ್ರ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದರು. ಈ ಹಿನ್ನೆಲೆಯಲ್ಲಿ ಲೀ ಈ ಬಾರಿ ಪ್ರಶಸ್ತಿ ಗೆದ್ದಿರುವುದು ಪ್ರಶಂಸಾರ್ಹ. ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಈ  ಇಬ್ಬರು ಏಷ್ಟಾ ಆಟಗಾರ್ತಿಯರು ಗರಿಷ್ಠ ಸಾಧನೆ ಮಾಡಿರುವುದು ಗಮನಾರ್ಹ.ಜೂನ್ 20ರಂದು ಆರಂಭವಾಗುವ ಮತ್ತೊಂದು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್‌ಷಿಪ್ ವಿಂಬಲ್ಡನ್‌ನತ್ತ ಈ ಆಟಗಾರ್ತಿಯರ ಚಿತ್ತ ಹರಿದಿದೆ. ಆದರೆ ಇಲ್ಲಿ ಫ್ರೆಂಚ್ ಓಪನ್‌ನಂತೆ ಆವೆ ಮಣ್ಣಿನ ಅಂಕಣಕ್ಕೆ ಬದಲಾಗಿ ಹುಲ್ಲು ಹಾಸಿನ ಅಂಕಣವಿರುತ್ತದೆ.ಇಲ್ಲಿ ಪ್ರಬಲ ಆಟಗಾರ್ತಿಯರಾದ ವೀನಸ್ ಮತ್ತು ಸೆರೆನಾ ವಿಲಿಯಮ್ಸ ಸಹೋದರಿಯರು ಸಿಂಗಲ್ಸ್ ಮತ್ತು ಡಬಲ್ಸ್‌ಗಳಲ್ಲಿ ಭಾಗವಹಿಸುವ ಸಂಭವವಿದೆ. ಇವೆರಡೂ ವಿಭಾಗಗಳಲ್ಲಿ ಅವರು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅಲ್ಲದೆ ಇತರ ಪ್ರಮುಖ ಆಟಗಾರ್ತಿಯರೂ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದ್ದರಿಂದ ಸಾನಿಯಾ ಮತ್ತು ಲೀ ತಮ್ಮ ಫ್ರೆಂಚ್ ಓಪನ್ ಸಾಧನೆಯನ್ನು ಇಲ್ಲಿ ತೋರುವುದು ಕಠಿಣಕರವಾಗಿದ್ದರೂ ಕೂತೂಹಲವನ್ನುಂಟು ಮಾಡಿದೆ.`ಮಣ್ಣಿನ ರಾಜ~ನಿಗೆ ಸಾಟಿಯಿಲ್ಲ:

`ಮಣ್ಣಿನ ರಾಜ~ ಸ್ಪೇನ್‌ನ ರಫೆಲ್ ನಡಾಲ್ ಮತ್ತೊಮ್ಮೆ ಆವೆ ಮಣ್ಣಿನ ಅಂಕಣದಲ್ಲಿ ತಮಗೆ ರೋಜರ್ ಫೆಡರರ್ ಅಥವಾ ಇನ್ಯಾವ ಆಟಗಾರ ಸಾಟಿಯಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.ಪುರುಷರ ಸಿಂಗಲ್ಸ್‌ನಲ್ಲಿ ಇಲ್ಲಿ ಆರನೇ ಬಾರಿ ಪ್ರಶಸ್ತಿಯ ಕಿರೀಟವನ್ನು ಧರಿಸಿದ್ದಾರೆ. ಆ ಮೂಲಕ ಬೋರ್ನ್ ಬೋರ್ಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಮೊದಲ ಸುತ್ತಿನಲ್ಲೇ ಕಠಿಣ ಸ್ಪರ್ಧೆಯನ್ನು ಎದುರಿಸಿದರಾದರೂ ಆನಂತರ ಹೆಚ್ಚಿನ ಒತ್ತಡವಿಲ್ಲದೆ ಮುನ್ನಡೆದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ವಿಶೇಷವೆಂದರೆ ನಾಲ್ಕು ಬಾರಿ ಫೈನಲ್‌ನಲ್ಲಿ ರೋಜರ್ ಫೆಡರರ್ ಅವರನ್ನು ಮಣಿಸಿದ್ದಾರೆ. ಇಲ್ಲಿ ನಡಾಲ್ ಅವರನ್ನು ಒಮ್ಮೆಯಾದರೂ ಸೋಲಿಸಬೇಕೆನ್ನುವ ಫೆಡರರ್ ಆಸೆ ಇನ್ನೂ ಈಡೇರಿಲ್ಲ. ಪ್ರತಿ ಬಾರಿ ತಮ್ಮ ಆಸೆ ಈಡೇರುತ್ತದೆ ಎಂಬ ಮನೋಭಾವದಿಂದ ಅವರು ಕಣಕ್ಕಿಳಿಯುತ್ತಾರೆ. ಆದರೆ ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ.ಈಗ ವಿಶ್ವದ ನಂಬರ್ 1 ಆಟಗಾರನಾಗಿರುವ ನಡಾಲ್ ತಮ್ಮ ಪ್ರಶಸ್ತಿಗಳ ಕಪಾಟಿನಲ್ಲಿ 10 ಗ್ರ್ಯಾಂಡ್ ಸ್ಲಾಮ್ ಪಾರಿತೋಷಕಗಳನ್ನು ಇಟ್ಟುಕೊಂಡಿದ್ದಾರೆ. ಫೆಡರರ್ ಈಗಾಗಲೇ 16 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ದಾಖಲೆ ಹೊಂದಿದ್ದಾರೆ. ನಡಾಲ್ ಈ ದಾಖಲೆಯನ್ನು ಮುರಿಯುತ್ತಾರೆ ಎಂದು ಟೆನಿಸ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.ಪುರುಷರ ಸಿಂಗಲ್ಸ್‌ನಲ್ಲಿ ಅತ್ಯಧಿಕ ಗ್ರ್ಯಾಂಡ್ ಸ್ಲಾಮ್ ಗಳಿಸಿದವರ ಪಟ್ಟಿಯಲ್ಲಿ ಅಮೆರಿಕದ ಪೀಟ್ ಸಾಂಪ್ರಸ್ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಈ ಸ್ಥಾನಕ್ಕೇರಲು ನಡಾಲ್‌ಗೆ ಇನ್ನೂ ಎರಡು ಗ್ರ್ಯಾಂಡ್ ಸ್ಲಾಮ್ ಗಳಿಸಬೇಕಿದೆ.ಭಾರತದ ಇತರ ಆಟಗಾರರಿಂದ ಗಮನಾರ್ಹ ಪ್ರದರ್ಶನ ಕಂಡು ಬರಲಿಲ್ಲ. ಪುರುಷರ ಡಬಲ್ಸ್‌ನಲ್ಲಿ `ಇಂಡೋ-ಪಾಕ್ ಎಕ್ಸ್‌ಪ್ರೆಸ್~ ಎಂದು ಖ್ಯಾತವಾಗಿರುವ ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಖುರೇಷಿ ಜೋಡಿ ಇತ್ತೀಚೆಗೆ ಉತ್ತಮ ಆಟದ ಪ್ರದರ್ಶನ ನೀಡುತ್ತಿದ್ದರೂ ಈ ಜೋಡಿಗೆ ಯಾವುದೇ ಗ್ರ್ಯಾಂಡ್ ಸ್ಲಾಮ್ ಇನ್ನೂ ಕೈಗೆಟುಕಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry