ಕಷ್ಟಗಳ ನಡುವೆ ಇಷ್ಟವಾದ ಗೆಲುವು

7

ಕಷ್ಟಗಳ ನಡುವೆ ಇಷ್ಟವಾದ ಗೆಲುವು

Published:
Updated:
ಕಷ್ಟಗಳ ನಡುವೆ ಇಷ್ಟವಾದ ಗೆಲುವು

ಪರ್ತ್: ಕಷ್ಟವಾದೀತು ಜಯವೆಂದು ಯೋಚಿಸಿದ್ದಾಗಲೇ ಭಾರತದ ಇನಿಂಗ್ಸ್‌ಗೆ ಚೈತನ್ಯ. ರವೀಂದ್ರ ಜಡೇಜಾ ಹಾಗೂ `ಪಂದ್ಯ ಶ್ರೇಷ್ಠ~ ಗೌರವ ಪಡೆದ ರವಿಚಂದ್ರನ್ ಅಶ್ವಿನ್ ಗಟ್ಟಿಯಾಗಿ ನಿಂತರು. ಶ್ರೀಲಂಕಾ ಎದುರು ನಾಲ್ಕು ವಿಕೆಟ್‌ಗಳ ಅಂತರದ ವಿಜಯ ಸಾಧ್ಯವಾಗುವಂತೆಯೂ ಮಾಡಿದರು.ಮುರಿಯದ ಏಳನೇ ವಿಕೆಟ್ ಜೊತೆಯಾಟದ ಬಲವೇ ಭಾರತದ ಗೆಲುವಿನ ರೋಚಕ ಕಾರಣ. ಈ ಜೋಡಿ ಅಲುಗಾಡಿದ್ದರೆ ಖಂಡಿತ ಕಷ್ಟಕಾಲ ಎದುರಾಗುವ ಅಪಾಯವಿತ್ತು. ಅಂಥ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು ಯುವ ಕ್ರಿಕೆಟಿಗರು. ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್‌ಗೆ ಒದಗಿಸಿದ ಗಟ್ಟಿಯಾದ ಅಡಿಪಾಯವೂ ಜಯಕ್ಕೆ ಕಾರಣವಾದ ಹೂರಣದಲ್ಲಿನ ಸಿಹಿ.ಆಸ್ಟ್ರೇಲಿಯಾ ಎದುರು ಸೋಲಿನ ಕಹಿಯೊಂದಿಗೆ ತ್ರಿಕೋನ ಸರಣಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಗೆ ಶ್ರೀಲಂಕಾದವರೂ ಸವಾಲಾಗಿ ನಿಲ್ಲುವ ಪ್ರಯತ್ನ ಮಾಡಿದರು. ಆದರೆ ಏರಿಳಿತ ಕಂಡರೂ `ಮಹಿ~ ಬಳಗವು ಯಶಸ್ಸಿನ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಿತು. ನಾಲ್ಕು ಪಾಯಿಂಟುಗಳನ್ನು ಕೂಡ ಗಿಟ್ಟಿಸಿತು. ಆದರೆ ಬೋನಸ್ ಪಾಯಿಂಟ್ ಗಿಟ್ಟಿಸುವಷ್ಟು ಚುರುಕಾಗಿ ಗುರಿ ಮುಟ್ಟಲು ಮಾತ್ರ ಭಾರತದಿಂದ ಸಾಧ್ಯವಾಗಲಿಲ್ಲ.ಮೊದಲ ಪಂದ್ಯದಲ್ಲಿ ಭಾರತದ ಎದುರು 65 ರನ್‌ಗಳ ಅಂತರದಿಂದ ಜಯಿಸಿದ್ದ ಆಸ್ಟ್ರೇಲಿಯಾ ಒಂದು ಬೋನಸ್ ಸೇರಿದಂತೆ ಐದು ಪಾಯಿಂಟ್ ಗಳಿಸಿದೆ. ಆದ್ದರಿಂದ ಪಾಯಿಂಟು ಪಟ್ಟಿಯಲ್ಲಿ ಭಾರತವು ಆತಿಥೇಯರಿಗಿಂತ ಕೆಳಗಿದೆ. ಅದೇನೇ ಇರಲಿ ಗೆಲುವೊಂದು ಸಿಕ್ಕು ಭಾರತದವರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿತು ಎನ್ನುವುದೇ ದೊಡ್ಡ ಸಂತಸ. ಆಸ್ಟ್ರೇಲಿಯಾ ಕಷ್ಟದ ಎದುರಾಳಿ, ಆದ್ದರಿಂದ ಈ ಸರಣಿಯಲ್ಲಿ ಲಂಕಾ ತಂಡವನ್ನು ಮಣಿಸುತ್ತಾ ಸಾಗಿ, ಫೈನಲ್ ತಲುಪುವುದೇ ಸ್ವಲ್ಪ ಸುಲಭದ ಮಾರ್ಗ.ಆ ನಿಟ್ಟಿನಲ್ಲಿ ಮೊದಲ ಯಶಸ್ಸಿನ ಹೆಜ್ಜೆ ಇಟ್ಟಾಗಿದೆ. ಬುಧವಾರದ ಪಂದ್ಯದಲ್ಲಿ ಶ್ರೀಲಂಕಾದವರು ಎಂಟು ವಿಕೆಟ್ ಕಳೆದುಕೊಂಡು ಪೇರಿಸಿಟ್ಟ 233 ರನ್ ಮೊತ್ತ ಅಸಾಧ್ಯದ ಗುರಿಯಾಗಲಿಲ್ಲ. 46.4 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 234 ರನ್‌ಗಳನ್ನು ಗಳಿಸಿತು ದೋನಿ ನೇತೃತ್ವದ ತಂಡ. ಭಾರತವು ಗೆಲುವಿನೆಡೆ ನುಗ್ಗದಂತೆ ತಡೆದು ನಿಲ್ಲಿಸಲು ಮಾಹೇಲ ಜಯವರ್ಧನೆ ನಾಯಕತ್ವದ ಪಡೆಯಿಂದ ಸಾಧ್ಯವಾಗಲಿಲ್ಲ. ಏಳನೇ ವಿಕೆಟ್ ಜೊತೆಯಾಟ ಮುರಿಯಲು ಸಾಧ್ಯವಾಗಿದ್ದರೆ ಖಂಡಿತವಾಗಿ ಪಂದ್ಯ ತಿರುವು ಪಡೆಯುತಿತ್ತು. ಆದರೆ ಹಾಗೆ ಆಗಲಿಲ್ಲ.ಮೂವರು ವಿಕೆಟ್ ಕೆಡವಿ ಬೌಲಿಂಗ್‌ನಲ್ಲಿ ಮಿಂಚಿದ್ದ ಅಶ್ವಿನ್ (ಔಟಾಗದೆ 30; 38 ಎಸೆತ, 3 ಬೌಂಡರಿ) ಬ್ಯಾಟಿಂಗ್‌ನಲ್ಲಿಯೂ ಬಲ ತೋರಿದರು. ಜಡೇಜಾ (24; 28 ಎ., 1 ಬೌಂಡರಿ) ಅವರಿಂದಲೂ ಜೊತೆಯಾಟ ಬೆಳೆಸಲು ತಕ್ಕ ಬೆಂಬಲ ಸಿಕ್ಕಿತು. ವಿಕೆಟ್ ಕಾಯ್ದುಕೊಳ್ಳುವುದು ಮುಖ್ಯವೆಂದು ಅರಿತಿದ್ದ ಜಡೇಜಾ ಆತುರ ಮಾಡಲಿಲ್ಲ. ಗುರಿ ಮುಟ್ಟಲು ಸಾಧ್ಯವೆನ್ನಿಸುವಷ್ಟು ಎಸೆತಗಳು ಬಾಕಿ ಇದ್ದ ಕಾರಣ ಅವರು ಸಹನೆಯಿಂದ ಆಡಿದ್ದು ಸಮಯೋಚಿತ. ಅಶ್ವಿನ್ ಕೂಡ ಪರಿಸ್ಥಿತಿಯನ್ನು ಅರಿತು ಆಡಿದರು. ನೂರುಗಳ ನೂರರ ನಿರೀಕ್ಷೆಯಲ್ಲಿಯೇ ಮುಂದೆ ಸಾಗಿರುವ ತೆಂಡೂಲ್ಕರ್ (48; 63 ಎ., 5 ಬೌಂಡರಿ) ಹಾಗೂ ರನ್‌ಔಟ್ ಬಲೆಗೆ ಬೀಳುವ ಜೊತೆಗೆ ಸ್ನಾಯು ಸೆಳೆತಕ್ಕೊಳಗಾದ ಕೊಹ್ಲಿ (77; 94 ಎ., 8 ಬೌಂಡರಿ, 1 ಸಿಕ್ಸರ್) ಸುರಿಸಿದ ಬೆವರು ಕೂಡ ವ್ಯರ್ಥವಾಗಲಿಲ್ಲ. ವೀರೇಂದ್ರ ಸೆಹ್ವಾಗ್ ಬೇಗ ವಿಕೆಟ್ ಒಪ್ಪಿಸಿದರೂ ಎರಡನೇ ವಿಕೆಟ್‌ನಲ್ಲಿ ಸಚಿನ್-ವಿರಾಟ್ ತಂಡವು ಬೇಗ ಕುಸಿತದ ಹಾದಿ ಹಿಡಿಯದಂತೆ ಎಚ್ಚರವಹಿಸಿದರು.

 

`ಲಿಟಲ್ ಚಾಂಪಿಯನ್~ ಅರ್ಧ ಶತಕದಿಂದ ಎರಡು ರನ್ ಅಂತರದಲ್ಲಿ ಇದ್ದಾಗ ಆ್ಯಂಜೆಲೊ ಮ್ಯಾಥ್ಯೂಸ್ ಎಸೆತದಲ್ಲಿ ಬೌಲ್ಡ್ ಆಗಿದ್ದು ಇಲ್ಲಿ ಸೇರಿದ್ದ ಅಪಾರ ಅಭಿಮಾನಿ ಬಳಗಕ್ಕಂತೂ ಭಾರಿ ಬೇಸರ ತಂದಿತು. ಆದರೂ ಸಚಿನ್ ಕ್ರೀಸ್‌ನತ್ತ ಬಂದಾಗ ಹಾಗೂ ಔಟಾಗಿ ನಿರ್ಗಮಿಸಿದಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಕೂಡ ಉಪುಲ್ ತರಂಗ ವಿಕೆಟ್ ಅನ್ನು ಬೇಗ ಕಳೆದುಕೊಂಡರೂ ಸಾವರಿಸಿಕೊಂಡಿತು.ತಿಲಕರತ್ನೆ ದಿಲ್ಶಾನ್ (48; 79 ಎ., 6 ಬೌಂಡರಿ) ಹಾಗೂ ದಿನೇಶ್ ಚಂಡಿಮಾಲ (64; 81 ಎ., 4 ಬೌಂಡರಿ) ಚೈತನ್ಯದ ಚಿಲುಮೆಯಾದರು. ಔಟಾಗದೆ ಉಳಿದ ಮ್ಯಾಥ್ಯೂಸ್ (33; 28 ಎ., 2 ಬೌಂಡರಿ) ಕೂಡ ಕೊನೆಯ ಹತ್ತು ಓವರುಗಳಲ್ಲಿ ಚುರುಕಾಗಿ ರನ್ ಗಳಿಸುವ ಪ್ರಯತ್ನ ಮಾಡಿದರು. ಆದರೆ ಬೌಲಿಂಗ್ ವಿಭಾಗದಲ್ಲಿ ಎಲ್ಲವೂ ಸಿಂಹಳೀಯರು ಬಯಸಿದಂತೆ ನಡೆಯಲಿಲ್ಲ.

ಸ್ಕೋರ್ ವಿವರ

ಶ್ರೀಲಂಕಾ: 50 ಓವರುಗಳಲ್ಲಿ

8 ವಿಕೆಟ್‌ಗಳ ನಷ್ಟಕ್ಕೆ 233

ಉಪುಲ್ ತರಂಗ ಸಿ ಸಚಿನ್ ತೆಂಡೂಲ್ಕರ್ ಬಿ ಜಹೀರ್ ಖಾನ್  04

ತಿಲಕರತ್ನೆ ದಿಲ್ಶಾನ್ ಸಿ ವಿರಾಟ್ ಕೊಹ್ಲಿ ಬಿ ರವೀಂದ್ರ ಜಡೇಜಾ  48

ಕುಮಾರ ಸಂಗಕ್ಕಾರ ಸಿ ಮಹೇಂದ್ರ ಸಿಂಗ್ ದೋನಿ ಬಿ ಜಹೀರ್ ಖಾನ್  26

ದಿನೇಶ್ ಚಂಡಿಮಾಲ ಸ್ಟಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ರವಿಚಂದ್ರನ್ ಅಶ್ವಿನ್  64

ಮಾಹೇಲ ಜಯವರ್ಧನೆ ಸಿ ರೋಹಿತ್ ಶರ್ಮ ಬಿ ರವಿಚಂದ್ರನ್ ಅಶ್ವಿನ್  23

ತಿಸಾರ ಪೆರೆರಾ ಸ್ಟಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ರವಿಚಂದ್ರನ್ ಅಶ್ವಿನ್  07

ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ  33

ಲಾಹಿರು ತಿರುಮನ್ನೆ ರನ್‌ಔಟ್ (ರೋಹಿತ್ ಶರ್ಮ/ಮಹೇಂದ್ರ ಸಿಂಗ್ ದೋನಿ)  07

ನುವಾನ್ ಕುಲಶೇಖರ ಸಿ ರೋಹಿತ್ ಶರ್ಮ ಬಿ ವಿನಯ್ ಕುಮಾರ್  07

ಲಸಿತ್ ಮಾಲಿಂಗ ಔಟಾಗದೆ  01

ಇತರೆ: (ಲೆಗ್‌ಬೈ-6, ವೈಡ್-7)  13

ವಿಕೆಟ್ ಪತನ: 1-12 (ಉಪುಲ್ ತರಂಗ; 2.4), 2-74 (ಕುಮಾರ ಸಂಗಕ್ಕಾರ; 16.4), 3-100 (ತಿಲಕರತ್ನೆ ದಿಲ್ಶಾನ್; 24.3), 4-152 (ಮಾಹೇಲ ಜಯವರ್ಧನೆ; 35.5), 5-172 (ತಿಸಾರ ಪೆರೆರಾ; 39.4), 6-189 (ದಿನೇಶ್ ಚಂಡಿಮಾಲ; 43.2), 7-204 (ಲಾಹಿರು ತಿರುಮನ್ನೆ; 45.5), 8-228 (ನುವಾನ್ ಕುಲಶೇಖರ; 49.2).

ಬೌಲಿಂಗ್: ಜಹೀರ್ ಖಾನ್ 10-1-44-2, ಪ್ರವೀಣ್ ಕುಮಾರ್ 10-0-54-0 (ವೈಡ್-2), ಆರ್.ವಿನಯ್ ಕುಮಾರ್ 10-1-56-1 (ವೈಡ್-2), ರವೀಂದ್ರ ಜಡೇಜಾ 10-0-41-1, ರವಿಚಂದ್ರನ್ ಅಶ್ವಿನ್ 10-1-32-3 (ವೈಡ್-2).

ಭಾರತ: 46.4 ಓವರುಗಳಲ್ಲಿ

6 ವಿಕೆಟ್‌ಗಳ ನಷ್ಟಕ್ಕೆ 234

ವೀರೇಂದ್ರ ಸೆಹ್ವಾಗ್ ಸಿ ನುವಾನ್ ಕುಲಶೇಖರ ಬಿ ಲಸಿತ್ ಮಾಲಿಂಗ  10

ಸಚಿನ್ ತೆಂಡೂಲ್ಕರ್ ಬಿ ಆ್ಯಂಜೆಲೊ      ಮ್ಯಾಥ್ಯೂಸ್    48

ವಿರಾಟ್ ಕೊಹ್ಲಿ ರನ್‌ಔಟ್ (ಲಸಿತ್ ಮಾಲಿಂಗ) 77

ರೋಹಿತ್ ಶರ್ಮ ಸಿ ತಿಲಕರತ್ನೆ ದಿಲ್ಶಾನ್ ಬಿ ತಿಸಾರ ಪೆರೆರಾ  10

ಸುರೇಶ್ ರೈನಾ ಸಿ ಸೇನನಾಯಕೆ (ಬದಲಿ ಆಟಗಾರ) ಬಿ ಆ್ಯಂಜೆಲೊ ಮ್ಯಾಥ್ಯೂಸ್  24

ಮಹೇಂದ್ರ ಸಿಂಗ್ ದೋನಿ ಸಿ ಲಸಿತ್ ಮಾಲಿಂಗ ಬಿ ಧಮ್ಮಿಕಾ ಪ್ರಸಾದ್  04

ರವೀಂದ್ರ ಜಡೇಜಾ ಔಟಾಗದೆ  24

ರವಿಚಂದ್ರನ್ ಅಶ್ವಿನ್ ಔಟಾಗದೆ  30

ಇತರೆ: (ಲೆಗ್‌ಬೈ-5, ವೈಡ್-2)  07

ವಿಕೆಟ್ ಪತನ: 1-14 (ವೀರೇಂದ್ರ ಸೆಹ್ವಾಗ್; 2.3), 2-89 (ಸಚಿನ್ ತೆಂಡೂಲ್ಕರ್; 18.5), 3-122 (ರೋಹಿತ್ ಶರ್ಮ; 25.5), 4-157 (ಸುರೇಶ್ ರೈನಾ; 32.1), 5-167 (ಮಹೇಂದ್ರ ಸಿಂಗ್ ದೋನಿ; 33.4), 6-181 (ವಿರಾಟ್ ಕೊಹ್ಲಿ; 35.6).

ಬೌಲಿಂಗ್: ಲಸಿತ್ ಮಾಲಿಂಗ 9-0-49-1 (ವೈಡ್-1), ನುವಾನ್ ಕುಲಶೇಖರ 8-0-38-0, ಧಮ್ಮಿಕಾ ಪ್ರಸಾದ್ 10-0-47-1, ಆ್ಯಂಜೆಲೊ ಮ್ಯಾಥ್ಯೂಸ್ 9.4-1-31-2, ತಿಸಾರ ಪೆರೆರಾ 5-0-37-1 (ವೈಡ್-1), ತಿಲಕರತ್ನೆ ದಿಲ್ಶಾನ್ 5-0-27-0

ಫಲಿತಾಂಶ: ಭಾರತಕ್ಕೆ 4 ವಿಕೆಟ್‌ಗಳ ಅಂತರದ ಗೆಲುವು.

ಪಾಯಿಂಟ್ಸ್: ಭಾರತ-4, ಶ್ರೀಲಂಕಾ-0

ಪಂದ್ಯ ಶ್ರೇಷ್ಠ: ರವಿಚಂದ್ರನ್ ಅಶ್ವಿನ್ (ಭಾರತ).         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry