ಶನಿವಾರ, ಮೇ 8, 2021
24 °C

ಕಷ್ಟಗಳ ಮಳೆ

ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಬೆಂಗಳೂರು ಮಹಾನಗರ ಪಾಲಿಕೆಗೆ ಅಂಬೇಡ್ಕರ್ ಜಯಂತಿ ಆಚರಿಸುವ ಹಕ್ಕಿಲ್ಲ!

ಬಿಬಿಎಂಪಿಗಾಗಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರ ಕಾರ್ಮಿಕರು ಹಾಗೆನ್ನುತ್ತಿದ್ದಾರೆ. ಸಂವಿಧಾನಬದ್ಧವಾಗಿ ಸರ್ಕಾರವೇ ನಿಗದಿ ಪಡಿಸಿರುವ ಕನಿಷ್ಠ ಕೂಲಿಗಾಗಿ ನಾವು ಹೋರಾಟ ಮಾಡಬೇಕಾಗಿ ಬಂದಿದೆ. ಅಂದರೆ ಬಿಬಿಎಂಪಿ ಸಂವಿಧಾನವನ್ನು ಮಾನ್ಯ ಮಾಡುತ್ತಿಲ್ಲ. ಹಾಗಿದ್ದ ಮೇಲೆ ಬಿಬಿಎಂಪಿಗಾಗಲೀ ಅದಕ್ಕೂ ಮೇಲಿನ ಸ್ಥಾನದಲ್ಲಿರುವ ಸರ್ಕಾರಕ್ಕಾಗಲೀ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹುಟ್ಟು ಹಬ್ಬವನ್ನು ಆಚರಿಸುವ ಹಕ್ಕಿದೆಯೇ? ಎಂಬುದು ಪೌರ ಕಾರ್ಮಿಕರ ಸರಳ ಪ್ರಶ್ನೆ. ಅದಕ್ಕಾಗಿಯೇ ಅವರು ಏಪ್ರಿಲ್ 13ರಿಂದ ಮಹಾನಗರ ಪಾಲಿಕೆಯ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಪೌರ ಕಾರ್ಮಿಕರು ಈ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಏಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆಯ ಉತ್ತರ ಬಹಳ ಸಂಕೀರ್ಣವಾದುದು. ಬಿಬಿಎಂಪಿ ವಾರ್ಷಿಕ ಸರಾಸರಿ 120 ಕೋಟಿ ರೂಪಾಯಿಗಳನ್ನು ಕಸದ ನಿರ್ವಹಣೆಗಾಗಿ ಗುತ್ತಿಗೆದಾರರಿಗೆ ಕೊಡುತ್ತದೆ. ಇದರಲ್ಲಿ ವಾಸ್ತವದಲ್ಲಿ ಕಸವನ್ನು ನಿರ್ವಹಿಸುವ ಕಾರ್ಮಿಕರಿಗೆ ಸಿಗುವುದು ಕೇವಲ ಪುಡಿಗಾಸು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 13,000 ಪೌರ ಕಾರ್ಮಿಕರಿಗೆ ದೊರೆಯುವುದು ತಿಂಗಳಿಗೆ ಕೇವಲ 2000 ರೂಪಾಯಿ ಮಾತ್ರ. ಆದರೆ ಸರ್ಕಾರ ಇವರಿಗೆ ನಿಗದಿಪಡಿಸಿರುವ ಕನಿಷ್ಠ ಕೂಲಿ 7300 ರೂಪಾಯಿಗಳು.

ಅವರ ಮಾಸಿಕ ಸಂಬಳವೇ ಹೇಳುತ್ತಿರುವಂತೆ ಈ ಪೌರ ಕಾರ್ಮಿಕರಿಗೆ ಒಳ್ಳೆಯದೊಂದು ವಸತಿ ಇರಲು ಸಾಧ್ಯವೇ ಇಲ್ಲ. ಈ ಕೆಲಸಕ್ಕೆ ಸೇರಿಕೊಳ್ಳುವ ಬಹುತೇಕರು ದಲಿತರು. ಅವರು ಹೇಳಿಕೊಳ್ಳುವಂಥ ಶಿಕ್ಷಣ ಪಡೆದಿರುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಇವರೆಲ್ಲರೂ ವಲಸೆ ಕಾರ್ಮಿಕರು. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಇತರ ಪ್ರದೇಶಗಳಿಂದ ಬಂದ ಇವರಾರಿಗೂ ತಮ್ಮ ಗುತ್ತಿಗೆದಾರರ ವಿರುದ್ಧ ಪ್ರತಿಭಟನೆಗಿಳಿಯುವ ತ್ರಾಣವೇ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಸಿಗುವ 2000 ರೂಪಾಯಿಯೂ ಇಲ್ಲವಾಗುತ್ತದೆ.

ಸರ್ಕಾರದ ನಿಯಮಗಳು ಹೇಳುವಂತೆ ಕಸ ಸಂಗ್ರಹಿಸುವುದಕ್ಕೆ ಕೈಗಾಡಿಗಳನ್ನು ಒದಗಿಸಬೇಕು. ನಿರ್ದಿಷ್ಟ ಸಂಖ್ಯೆಯ ಕೈಗಾಡಿಗಳಿಗೆ ಒಂದು ತ್ರಿಚಕ್ರ ವಾಹನವಿರಬೇಕು. ಹಾಗೆಯೇ ಕಸ ಸಾಗಿಸುವ ಲಾರಿಗಳೂ ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಕಸ ಸಂಗ್ರಹಿಸುವ, ಬೀದಿ ಗುಡಿಸುವ, ಗಲೀಜು ತೆಗೆಯುವವರ ಆರೋಗ್ಯದ ದೃಷ್ಟಿಯಿಂದ ಕೈಗವಸು, ಬಟ್ಟೆ, ಗಮ್ ಬೂಟುಗಳನ್ನು ಒದಗಿಸಬೇಕು. ಆದರೆ ಗುತ್ತಿಗೆದಾರರು ಹೀಗೆಲ್ಲಾ ನಷ್ಟ ಮಾಡಿಕೊಳ್ಳಲು ಸಿದ್ಧರಿಲ್ಲ. ಎಷ್ಟರ ಮಟ್ಟಿಗೆಂದರೆ ತಿಂಗಳಿಗೆ ಬೇಕಿರುವ ಎರಡು ಪೊರಕೆಗಳನ್ನು ಪೌರಕಾರ್ಮಿಕರು ತಮ್ಮದೇ ಸಂಬಳದಲ್ಲಿ ಹೊಂದಿಸಿಕೊಳ್ಳಬೇಕು. ಗಾಡಿ ಹಾಳಾದರೆ ಅದನ್ನೂ ಅವರೇ ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಮಂಕರಿಯಲ್ಲೇ ಕಸ ಹೊರಬೇಕು.

ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆದಾರರು ತಮ್ಮ ಕೆಲಸ ಮಾಡಿಸಿಕೊಳ್ಳುವುದರ ಹಿಂದಿನ ಮರ್ಮವೇನು ಎಂಬ ಪ್ರಶ್ನೆಗೆ ಹಲವು ಉತ್ತರಗಳು ದೊರೆಯುತ್ತಿವೆ. ಕಸದ ಸುತ್ತ ಇರುವ `ರಾಜಕೀಯ~ ಬಹಳ ಸಂಕೀರ್ಣವಾದುದು. ಈಗಾಗಲೇ ಟೆಂಡರ್ ಅವಧಿ ಮುಗಿದಿದೆಯಾದರೂ ಮತ್ತೆ ಟೆಂಡರ್ ಕರೆಯದಂತೆ ಒತ್ತಡ ಹೇರಲು ಬೇಕಾಗಿರುವ ಎಲ್ಲಾ ಬಗೆಯ ಕೆಲಸಗಳನ್ನೂ ಕಸದ ಗುತ್ತಿಗೆದಾರರು ಮಾಡಿದ್ದಾರೆ ಎಂಬುದು ಒಂದು ಸಂಗತಿಯಾದರೆ ಹೊಸತಾಗಿ ಟೆಂಡರ್ ಕರೆದ ನಂತರವೂ ಕಾರ್ಮಿಕರಿಗೆ ಏನಾದರೂ ಉಪಯೋಗವಾಗಬಹುದೇ ಎಂಬುದು ಮತ್ತೂ ದೊಡ್ಡ ಪ್ರಶ್ನೆ. ಕಾರ್ಮಿಕರಿಗೇಕೆ ಕನಿಷ್ಠ ವೇತವನ್ನೂ ನೀಡುವುದಿಲ್ಲ ಎಂಬ ಪ್ರಶ್ನೆ ಕೇಳಿದಾಕ್ಷಣ ಗುತ್ತಿಗೆದಾರರು `ಕಸ ಎತ್ತುವವರು ಸಾರ್ವಜನಿಕರಿಂದಲೇ ಸಾಕಷ್ಟು ವಸೂಲು ಮಾಡುತ್ತಾರಲ್ಲ~ ಎಂಬ ಉದ್ಧಟತನದ ಮಾತುಗಳನ್ನೂ ಆಡುತ್ತಾರೆ.

ಸದಾ ಅಭದ್ರತೆಯಲ್ಲಿ ಬದುಕುವ ಗುತ್ತಿಗೆ ಪೌರ ಕಾರ್ಮಿಕರನ್ನು ಸಂಘಟಿಸುವ ಕೆಲಸವೂ ಬಹಳ ಕಷ್ಟವಾದುದೇ. ಎಸ್. ಬಾಲನ್ ಅವರ ನೇತೃತ್ವದಲ್ಲಿ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘಟನೆಯೊಂದಿದೆ. ಅವರು ಈತನಕ  ಕನಿಷ್ಠ ವೇತನಕ್ಕೆ ಆಗ್ರಹಿಸಿ ಏಳು ಸಾರಿ ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕ ಇಲಾಖೆಯ ಜಂಟಿ ಕಮೀಷನರ್ ಜತೆ 10 ಸಭೆ, ಬಿಬಿಎಂಪಿ ಅಧಿಕಾರಿಗಳ ಎದುರು 5-6 ಸಭೆ ನಡೆಸಿದ್ದಾರೆ. ಆದರೆ ಇವ್ಯಾವುದರಿಂದಲೂ ಅವರಿಗೆ ಪ್ರಯೋಜನ ಸಿಕ್ಕಿಲ್ಲ.

`ಪೌರ ಕಾರ್ಮಿಕರಿಗೆಂದೇ ಏನೇನೋ ಕಾನೂನುಗಳಿವೆ. ಗುತ್ತಿಗೆ ಕಾರ್ಮಿಕ ಪದ್ಧತಿಯ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ವೇತನ ನೀಡಿಕೆ ಕಾಯ್ದೆ, ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ, ಕನಿಷ್ಠ ವೇತನ ಕಾಯ್ದೆ, ಹೀಗೇ ಇನ್ನೂ ಏನೇನೋ! ಇವೆಲ್ಲವೂ ಜಾರಿಯಾಗುತ್ತಿಲ್ಲವಾ ಎಂದು ನೀವು ಕೇಳಿದರೆ, ಅದಕ್ಕೂ ನಾವು ಹೇಳುವುದು ಇಷ್ಟೇ- ದಯವಿಟ್ಟು ಸರ್ಕಾರವನ್ನು ಕೇಳಿ. ನಾವೂ ಅದನ್ನೇ ಕೇಳುತ್ತಿದ್ದೇವೆ; ಸರ್ಕಾರವನ್ನೂ, ನಿಮ್ಮನ್ನೂ~ ಎನ್ನುತ್ತಾರೆ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಬಾಲನ್.

`ಕೆಲವು ಕಡೆ ಪೌರ ಕಾರ್ಮಿಕರು ಮನೆ ಮನೆಗಳಿಂದ ಪ್ರತಿ ತಿಂಗಳು ಹಣ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ. ಹೌದು, ನಗರದ ಸುಶಿಕ್ಷಿತ ನಾಗರಿಕರಿಂದ ಸಾವಿರ ಮಾತು ಕೇಳಿಸಿಕೊಂಡು, ಕೆಲವು ನೂರು ರೂಪಾಯಿಗಳನ್ನು ಪಡೆದುಕೊಳ್ಳುತ್ತೇವೆ. ಇದು ಎಲ್ಲ ಕಡೆಯೂ ಇಲ್ಲ, ಎಲ್ಲ ಪೌರ ಕಾರ್ಮಿಕರೂ ಅದನ್ನು ಸಂಗ್ರಹಿಸುವುದೂ ಇಲ್ಲ. ಆ ರೀತಿ ತೆಗೆದುಕೊಳ್ಳುವ ಕಡೆ, ಎಲ್ಲ ಸೇರಿದರೆ ತಿಂಗಳಿಗೆ 1,000 ರೂ. ಆಗಬಹುದು. ಅದಕ್ಕಾಗಿ ನಾವು ಆಯಾ ಮನೆಯವರ ಅಕ್ಕಪಕ್ಕದ ಕಸವನ್ನು ವಿಶೇಷ ಮುತುವರ್ಜಿಯಿಂದ ಎತ್ತಿಹಾಕಿರುತ್ತೇವೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ~ ಎನ್ನುತ್ತಾರೆ ಅವರು.

ಪೌರ ಕಾರ್ಮಿಕ ವೃತ್ತಿಯನ್ನು ಆರಿಸಿಕೊಂಡ ಗಂಡಸರು ತಮ್ಮ ಸೇವಾವಧಿಯನ್ನು ಪೂರೈಸುವುದೇ ಇಲ್ಲ. ಬಿಬಿಎಂಪಿಯಲ್ಲಿ ಅನುಕಂಪಾಧಾರಿತ ಹುದ್ದೆಗಳನ್ನು ಪಡೆದುಕೊಂಡವರಲ್ಲಿ ಹೆಚ್ಚಿನವರು ಪೌರ ಕಾರ್ಮಿಕರ ಮಕ್ಕಳು. ಬಿಬಿಎಂಪಿಯ ನೌಕರರೇ ಆಗಿದ್ದರೆ ಕನಿಷ್ಠ ಈ ಸವಲತ್ತಾದರೂ ಇರುತ್ತಿತ್ತು. ಆದರೆ ಗುತ್ತಿಗೆ ಕಾರ್ಮಿಕರಿಗೆ ಇಂಥ ಯಾವ ಅನುಕೂಲಗಳೂ ಇಲ್ಲ. 40-45ಕ್ಕೇ ಪ್ರಾಣ ಕಳೆದುಕೊಳ್ಳುವ ಮನೆ ಯಜಮಾನ. ಮತ್ತೆ ಸಂಸಾರದ ರಥವನ್ನೆಳೆಯುವ ಹೊಣೆ ಪತ್ನಿಯದ್ದು. ಆಕೆಯ ಆಯಸ್ಸೂ ಕೆಲಸದ ಪರಿಣಾಮವಾಗಿ ಕುಸಿಯುತ್ತಲೇ ಹೋಗುತ್ತದೆ.

ಪೌರಕಾರ್ಮಿಕರನ್ನು ಆಗಾಗ ನೆನಪಿಸಿಕೊಳ್ಳಲಾಗುತ್ತಿರುತ್ತದೆ. ಅವರೇ ನಿಜವಾದ ಶ್ರಮಜೀವಿಗಳು ಎಂದು ಹೇಳುತ್ತಾರೆ. ಕೆಲವೊಮ್ಮೆ ವೇದಿಕೆಗಳಲ್ಲಿ ಹಾರ ತುರಾಯಿ ಹಾಕಿ ಅವರನ್ನು ಕರೆದು ಸನ್ಮಾನವನ್ನೂ ಮಾಡಲಾಗುತ್ತದೆ. ಪೌರಕಾರ್ಮಿಕರೇ ನಿಜವಾದ ವೈದ್ಯರು, ಏಕೆಂದರೆ ಅವರು ಊರು ಸ್ವಚ್ಛಗೊಳಿಸಿ ರೋಗ ಬರದಂತೆ ತಡೆಯುತ್ತಾರೆ. ಅವರಿಗೆ ಹೆಚ್ಚಿನ ಸಂಬಳ ನಿಗದಿಗೊಳಿಸಬೇಕು ಎಂದು ರಾಜಕಾರಣಿಗಳು ಭಾಷಣ ಬಿಗಿಯುತ್ತಾರೆ. ಆದರೆ ಇವರ ಸ್ಥಿತಿ ಮಾತ್ರ ಇಂದಿಗೂ ಸುಧಾರಿಸಿಲ್ಲ.

ಸರ್ಕಾರವೇ ನಿಗದಿ ಮಾಡಿರುವ ಕೂಲಿಗಾಗಿ ಹೋರಾಟ ಮಾಡುವ ಹಾಗೂ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನೀಡದವರಿಗೆ ಅಂಬೇಡ್ಕರ್ ಜಯಂತಿ ಆಚರಿಸುವ ನೈತಿಕ ಹಕ್ಕಿಲ್ಲ ಎಂಬುದನ್ನು ಎಲ್ಲರಿಗೂ ತಿಳಿಸಿಕೊಡುವ ಸಲುವಾಗಿ ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರ ಸಂಘ ಏಪ್ರಿಲ್ 13ರಿಂದ ಕಾರ್ಪೋರೇಷನ್ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟ ಕಾಲ ಮುಷ್ಕರ ಮತ್ತು ಪ್ರತಿಭಟನೆ ನಡೆಸಲು ಮುಂದಾಗಿದೆ. ಹಾಗೆಯೇ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಿದೆ ಎನ್ನುತ್ತಾರೆ ಬಾಲನ್.

ಸದ್ಯದಲ್ಲೇ ಅಂಬೇಡ್ಕರ್ ಜಯಂತಿ (ಏ.14) ಬರುತ್ತಿದೆ. ಮತ್ತೆ ಪೌರಕಾರ್ಮಿಕರನ್ನು ಕೇವಲ ಬಾಯಿ ಮಾತಿನಲ್ಲಿ ಹೊಗಳುವ ಮಾತುಗಳಿಗೆ ಚಾಲನೆ ಸಿಗಬಹುದು. ಅವರೂ ಮನುಷ್ಯರು, ಅವರಿಗೂ ಹಕ್ಕಿದೆ. ಸಮಾನರಾಗಿ ಬದುಕುವ ಎಲ್ಲ ಅವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿ ಹೋರಾಡಿದ್ದರು ಬಾಬಾಸಾಹೇಬರು. ಅವರ ಹೋರಾಟದ ಫಲದಿಂದಲೇ ಇಂದು ಪೌರಕಾರ್ಮಿಕರು ಸಮಾಜದಲ್ಲಿ ದನಿ ಎತ್ತಲು ಸಾಧ್ಯವಾಗಿದೆ. ಆದರೆ ಇಂದು ಅಂಬೇಡ್ಕರ್ ಪ್ರತಿಮೆಗಳನ್ನು ನಿಲ್ಲಿಸಿರುವವರು, ಫೋಟೋಗಳಿಗೆ ಹಾರ ಹಾಕುತ್ತಿರುವ, ರಜೆ ಘೋಷಿಸುವ ಈ ಸರ್ಕಾರಗಳು ಅವರ ಆಶಯಗಳಿಗೆ ಮಾಡುತ್ತಿರುವುದೇನನ್ನು? ಈ ಪ್ರಶ್ನೆಯನ್ನು ಪೌರ ಕಾರ್ಮಿಕರು ಸರ್ಕಾರದ ಮುಂದೆ ಈ ಏಪ್ರಿಲ್ 14ರಂದು ಕೇಳಬಯಸಲು ಸಜ್ಜಾಗಿದ್ದಾರೆ. ಜತೆಗೆ ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ, ಕಾರ್ಮಿಕ ಕಾನೂನಿನ ಪ್ರಕಾರ ಇಎಸ್‌ಐ ಮತ್ತು ಪಿಎಫ್ ಕಾರ್ಡ್ ವಿತರಣೆ ಹಾಗೂ ವೇತನವನ್ನು ಬ್ಯಾಂಕ್ ಮೂಲಕವೇ ವಿತರಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಲಿವೆ. ನಿಜವಾಗಿಯೂ ಪೌರಕಾರ್ಮಿಕರ ಬಗ್ಗೆ ಕಳಕಳಿ ಇರುವ ಜನತೆ ಇವರ ಹಕ್ಕುಗಳ ಈಡೇರಿಕೆಗಾಗಿ ಕೈಜೋಡಿಸಬೇಕು.

`ಏಪ್ರಿಲ್ 13ರಂದು ಬೆಳಿಗ್ಗೆ 11ಕ್ಕೆ ಕಾರ್ಪೋರೇಷನ್ ಕಚೇರಿಯ ಮುಂದೆ ಕೆಲವು ಸಂಘಟನೆಗಳು ಸೇರಿಕೊಂಡು ಪೌರ ಕಾರ್ಮಿಕರ ಪರವಾಗಿ ಅಹವಾಲು ಸಲ್ಲಿಸಲಿವೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಅಂದು ನಮ್ಮ ಕುರಿತ ವಿಚಾರಗಳಿರುವ ಒಂದು ಚಿಕ್ಕ ಪುಸ್ತಕವನ್ನೂ ಬಿಡುಗಡೆ ಮಾಡಲಿದ್ದಾರೆ. ಏಪ್ರಿಲ್ 14ರಂದು ನಾವು ಪ್ರಶ್ನೆ ಕೇಳುವ ದಿನ. ನಮಗೆ ಪ್ರಶ್ನೆ ಕೇಳುವುದನ್ನು ಕಲಿಸಿದ ಬಾಬಾಸಾಹೇಬರ ಹುಟ್ಟಿದ ದಿನ ಬೆಳಿಗ್ಗೆ 11.30ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಮುಂಭಾಗದಲ್ಲಿ ಸರ್ಕಾರವನ್ನು ಪ್ರಶ್ನೆ ಕೇಳಲು ನೀವೂ ಬರುತ್ತೀರಿ ತಾನೇ? ಅಥವಾ ಎಂದಿನಂತೆಯೇ ನಮ್ಮ ಕುರಿತೇ ಮಾತು, ಭಾಷಣ, ಬರಹ, ಕವನ, ಅನುಕಂಪಗಳಲ್ಲೇ ಮುಗಿಸುತ್ತೀರಾ?~ ಎನ್ನುತ್ತಾರೆ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಹಿರಿಯ ಕಾರ್ಮಿಕ ಮುಖಂಡ ಎಸ್.ಬಾಲನ್.(ಪ್ರಜಾವಾಣಿ ಸಂಗ್ರಹ ಚಿತ್ರಗಳು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.