ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ

7

ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ

Published:
Updated:

ಶಿವಮೊಗ್ಗ: ಅವರೆಲ್ಲರ ಮನೆಯ ಆರ್ಥಿಕ ಸ್ಥಿತಿ ಅಷ್ಟೇನೂ ಅನುಕೂಲಕರವಾಗಿಲ್ಲ; ಆದರೂ ಅವರಿಗೆ ಇರುವುದು ಒಂದೇ ಗುರಿ, ಒಂದೇ ದೃಷ್ಟಿ. ಸಾಧನೆ ಮಾಡಬೇಕು; ಸಮಾಜಕ್ಕೆ ಒಳ್ಳೆಯದು ಮಾಡಬೇಕು.

ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಬೇಟೆಯಾಡಿದ ಪ್ರತಿಭಾವಂತರಿವರು.ಎರಡನೇ ಅತಿ ಹೆಚ್ಚು ಎಂದರೆ ನಾಲ್ಕು ಸ್ವರ್ಣ ಪದಕ ಹಾಗೂ 1ನಗದು ಬಹುಮಾನ ಪಡೆದ ಪಿ. ಪ್ರವೀಣ್‌ಗೆ ಒಂದು ಕಣ್ಣಿನ ದೃಷ್ಟಿಯೇ ಇಲ್ಲ. ಆದರೂ ಒಳಗಣ್ಣಿನ ಛಲ, ಪರಿಶ್ರಮದಿಂದ ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದ ಬಿವಿಎ ಪದವಿ ರ‌್ಯಾಂಕ್‌ನೊಂದಿಗೆ ಪೂರ್ಣಗೊಳಿಸಿದ್ದಾರೆ. ಮನೆಯಲ್ಲಿ ಹಣಕಾಸಿಗೆ ತೊಂದರೆ; ಆದರೆ ಅವರಲ್ಲಿ ಸಾಧನೆಗೆ ಕೊರತೆ ಇಲ್ಲ.ನಾಲ್ಕು ಸ್ವರ್ಣ ಪದಕ ಪಡೆದ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಎಂ.ಎ. ಕನ್ನಡ ಮಾಡಿದ ವೈ.ಎನ್. ನವೀನ್‌ಕುಮಾರ್ ಅವರನ್ನು ಅವರ ತಂದೆ-ತಾಯಿ ಕೂಲಿ ಮಾಡಿ ಓದಿಸಿದ್ದಾರೆ. ಸೋದರಮಾವನ ಮಾರ್ಗದರ್ಶನದಿಂದ ರ‌್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳುತ್ತಿದ್ದಾಗ ಅವರ ಕಣ್ಣುಗಳು ತುಂಬಿ ಬಂದವು.ಸದ್ಯ ಕಡೂರಿನ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ನವೀನ್‌ಕುಮಾರ್‌ಗೆ ಕೆಎಎಸ್ ಅಧಿಕಾರಿಯಾಗಬೇಕೆಂಬ ಆಸೆ. ಕವನ, ಕಾದಂಬರಿ ಬರೆಯುವ ಹವ್ಯಾಸದ ಇವರು, ಸದ್ಯ ವ್ಯವಸ್ಥೆಯ ವಾಸ್ತವ ಚಿತ್ರಣದ `ಬಲಿ~ ಕಾದಂಬರಿಯ ರಚನೆ ಸಾಗಿದೆ ಎನ್ನುತ್ತಾರೆ.ಮೂರು ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದ ಶಂಕರಘಟ್ಟದ ಕನ್ನಡ ಅಧ್ಯಯನ ವಿಭಾಗದ ಎಂ.ಎ. ವಿದ್ಯಾರ್ಥಿನಿ ಡಿ. ಸೌಮ್ಯಾಳ ತಂದೆ ಟೈಲರ್. ಕೆನರಾ ಬ್ಯಾಂಕ್‌ನಲ್ಲಿ ಮಾಡಿದ ಶಿಕ್ಷಣ ಸಾಲದಿಂದ ಎಂ.ಎ. ವಿದ್ಯಾಭ್ಯಾಸ ಮುಗಿಸಿದ್ದಾರೆ. ಕೆಎಎಸ್ ಅಧಿಕಾರಿಯಾಗಬೇಕೆಂಬುದು ಗುರಿ. ಅದಕ್ಕಾಗಿ ಈಗ ಬೆಂಗಳೂರಿನಲ್ಲಿ ಮಲೆನಾಡು ಕೋಚಿಂಗ್ ಸೆಂಟರ್‌ನಲ್ಲಿ ತಯಾರಿ. ಊರು ತೀರ್ಥಹಳ್ಳಿಯ ಕೋಡೂರು.ಅತಿ ಹೆಚ್ಚು ಎಂದರೆ ಆರು ಚಿನ್ನದ ಪದಕ ಪಡೆದ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಬಿ.ಇ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಮಲ್ಲಿಕಾ ಭಟ್ ಮೂಲ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಮೊದಲಿನಿಂದಲೂ ಓದಿನಲ್ಲಿ ಮುಂದೆ. ಅದಕ್ಕಾಗಿಯೇ ಈಗಾಗಲೇ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಬೆಂಗಳೂರಿನ ಟಿಸಿಎಸ್ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿ. ಮುಂದೆ ಸಂಶೋಧನೆ ಕಡೆ ಒಲವು ಇದೆ. ಇಂತಹದ್ದೇ ಎಂಬ ಗಟ್ಟಿ ನಿರ್ಧಾರ ಇಲ್ಲ. ಆ ಸಂದರ್ಭಕ್ಕೆ ಅನುಗುಣವಾಗಿ ಕೆಲಸ ಮಾಡುವ ಪ್ರವೃತ್ತಿ ಮಲ್ಲಿಕಾಭಟ್ ಅವರದ್ದು.

ಶಂಕರಘಟ್ಟದ ಬಯೋಟೆಕ್ನಾಲಜಿ ವಿದ್ಯಾರ್ಥಿನಿ ಆಶಾಜ್ಯೋತಿ, ದಾವಣಗೆರೆಯ ಎಸ್‌ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪಿ. ಅನುಷಾ ತಲಾ ನಾಲ್ಕು ಸ್ವರ್ಣ ಪದಕಗಳನ್ನು ಹಂಚಿಕೊಂಡಿದ್ದಾರೆ.

ಎರಡೂ ಕಣ್ಣಿನ ದೃಷ್ಟಿ ಇಲ್ಲದ ರಂಜಿತ್ ರೆಬೆಲ್ಲೊ ರಾಜ್ಯಶಾಸ್ತ್ರ ಎಂ.ಎ.ದಲ್ಲಿ ಪ್ರಥಮ ರ‌್ಯಾಂಕ್ ಗಳಿಸಿ, ಒಂದು ಸ್ವರ್ಣ ಪದಕ ಪಡೆದಿದ್ದಾರೆ.ಹಾಗೆಯೇ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಎಂ.ಸಿ. ಮಂಜುನಾಥ ಅವರಿಗೆ `ನೆಟ್ಟಕಲ್ಲಪ್ಪ ಸ್ಮಾರಕ ಸ್ವರ್ಣ ಪದಕ~ ಪ್ರದಾನ ಮಾಡಲಾಯಿತು.ಗೌರವ ಡಾಕ್ಟರೇಟ್ ಪ್ರದಾನ:
ಘಟಿಕೋತ್ಸವದಲ್ಲಿ ಶಿಕ್ಷಣ ತಜ್ಞೆ ಅಜ್ರ, ಪ್ರಗತಿಪರ ಕೃಷಿಕ ದೇವಂಗಿ ಆರ್.ಪ್ರಫುಲ್ಲಚಂದ್ರ, ರಂಗಭೂಮಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕೆ. ಜಗನ್ನಾಥಶಾಸ್ತ್ರಿ, ಸಹಕಾರಿ ಧುರೀಣ ಆರ್.ಎಂ. ಮಂಜುನಾಥಗೌಡ, ಆಯುರ್ವೇದ ತಜ್ಞ ಡಾ.ಪಿ.ಆರ್. ಕೃಷ್ಣಕುಮಾರ್, ಯೋಗತಜ್ಞೆ ಡಾ.ರಘುರಾಮ್ ನಾಗರತ್ನಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಇಸ್ರೋ ಮಾಜಿ ಅಧ್ಯಕ್ಷ ಡಾ.ಜಿ. ಮಾಧವನ್ ನಾಯರ್ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ.ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ.ಟಿ.ಆರ್. ಮಂಜುನಾಥ, ಪ್ರೊ.ಎಸ್.ಎ. ಜಾವೀದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry