ಕಷ್ಟ ಪಟ್ಟವರ ಬೆಟ್ಟದ ಸಾಧನೆ...

7

ಕಷ್ಟ ಪಟ್ಟವರ ಬೆಟ್ಟದ ಸಾಧನೆ...

Published:
Updated:

25 ವರ್ಷ ತುಂಬುವುದರೊಳಗೆ ಯಶಸ್ವಿ ಸಾಧಕರು ಎಂದು ಕರೆಸಿಕೊಳ್ಳುವುದು ಸುಲಭದ ಮಾತಲ್ಲ. ಅತಿ ಕಡಿಮೆ ಬಂಡವಾಳದಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಮತ್ತು ವೆಬ್‌ಡಿಸೈನಿಂಗ್ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ತೋರಿದ ಯಶಸ್ವಿ ಯುವಕರ ಕಿರು ಪರಿಚಯ ಈ ಬಾರಿ...ಸಬೀರುಲ್ಲಾ ಇಸ್ಲಾಂ

ಅವು ಕಷ್ಟದ ದಿನಗಳು. ನಾನು ಮತ್ತು ನನ್ನ ತಾಯಿ ಹಣ ಬೇಕಾದಾಗ ಚಿಕ್ಕಪ್ಪನ ಮುಖ ನೋಡಬೇಕಿತ್ತು. ಆಗ ನಾನಿನ್ನು 13 ವರ್ಷದ ಬಾಲಕ. ಹಣಕ್ಕಾಗಿ ಚಿಕ್ಕಪ್ಪನ ಮುಖ ನೋಡುವಾಗಲೆಲ್ಲ ನನ್ನ ಮನಸ್ಸಿನಲ್ಲಿ ಎನೋ ಒಂಥರ ಕಸಿವಿಸಿಯಾಗುತ್ತಿತ್ತು. ನಾನೇಕೆ ಚಿಕ್ಕಪ್ಪನ ಮೇಲೆ ಅವಲಂಬಿತನಾಗಿದ್ದೇನೆ ಎಂಬ ಪ್ರಶ್ನೆ ಪದೇ ಪದೇ ಕಾಡಲಾರಂಭಿಸಿತು. ಒಂದು ದಿನ, ನಿಮ್ಮ ಕಂಪೆನಿಯಲ್ಲಿ ನನಗೆ ಕೆಲಸ  ಕೊಡಿ ಎಂದು ಚಿಕ್ಕಪ್ಪನನ್ನು ಕೇಳಿದೆ. ಅವರು ನಗುತ್ತಲೇ ಕೆಲಸ ಮಾಡು ಎಂದು ಸಣ್ಣ ಕೆಲಸವನ್ನು ನನಗೆ ವಹಿಸಿಕೊಟ್ಟರು.ಹದಿನೈದು ದಿನ ಕೆಲಸ ಮಾಡಿದೆ. ಅದ್ಯಾಕೋ ಆ ಕೆಲಸ ಇಷ್ಟವಾಗಲಿಲ್ಲ. ಕೇವಲ 15 ಸಾವಿರ ರೂಪಾಯಿ ಬಂಡವಾಳದಲ್ಲಿ ಗೆಳೆಯರೊಂದಿಗೆ ಸೇರಿ ವೆಬ್‌ಡಿಸೈನಿಂಗ್ ಕಂಪೆನಿ ಪ್ರಾರಂಭಿಸಿದೆ. ಎರಡೇ ವಾರಗಳಲ್ಲಿ ಒಂದು ಲಕ್ಷ ರೂಪಾಯಿ ಹಣ ಸಂಪಾದಿಸಿದೆ.

ಇದು ಭಾರತೀಯ ಮೂಲದ ಸಬೀರುಲ್ಲಾ ಇಸ್ಲಾಂ ಅವರ ಯಶೋಗಾಥೆ. ಲಂಡನ್ ನಲ್ಲಿ ನೆಲೆಸಿರುವ ಸಬೀರುಲ್ಲಾ ಇಂದು ವಿಶ್ವದ ಖ್ಯಾತ ಲೇಖಕ ಮತ್ತು ವೆಬ್‌ಡಿಸೈನರ್ ಎಂಬ ಅಗ್ಗಳಿಕೆ ಪಡೆದಿದ್ದಾರೆ. ಸಬೀರುಲ್ಲಾ ಬರೆದ ‘ದ ವರ್ಲ್ಡ್ ಅಟ್ ಯುವರ್ ಫೀಟ್’ ಪುಸ್ತಕ ವಿಶ್ವದ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿದೆ. ಇಂಗ್ಲಿಷ್ ಅವತರಣಿಕೆಯ ಮೊದಲ ಮುದ್ರಣದಲ್ಲೇ ಸುಮಾರು 60,0000ಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿರುವುದು ದಾಖಲೆ.ಸ್ವತಂತ್ರವಾಗಿ ದುಡಿಯಬೇಕು, ಒಬ್ಬರ ಕೈಕೆಳಗೆ ಕೆಲಸ ಮಾಡಬಾರದು ಎಂಬ ನಿಲುವು ನನ್ನನ್ನು ಈ ಎತ್ತರಕ್ಕೆ ಬೆಳೆಸಿದೆ. ಕೆಲವರು ನಿನ್ನದು ಉದ್ಧಟತನ ಎಂದು ತೆಗಳಿದ್ದೂ ಇದೇ. ಈ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ ನನ್ನ ಬೆಳವಣಿಗೆ ಬಗ್ಗೆಯೇ ನಾನು ಯೋಚಿಸುತ್ತೇನೆ ಎನ್ನುತ್ತಾರೆ 25ರ ಹರೆಯದ ಸಬೀರುಲ್ಲಾ.ಪ್ರಸ್ತುತ ಪ್ರಕಾಶನ ಸಂಸ್ಥೆ ಮತ್ತು ವೆಬ್‌ಡಿಸೈನಿಂಗ್ ಕಂಪೆನಿ ನಡೆಸುತ್ತಿರುವ ಸಬೀರುಲ್ಲಾ ವಿಶ್ವದ ನಂ 1 ಪ್ರಕಾಶಕನಾಗಬೇಕೆಂಬ ಗುರಿ ಹೊಂದಿದ್ದಾರೆ.ಸೈಯದ್ ಬಾಲ್ಕಿ

ನಿದ್ದೆಯಿಂದ ಎದ್ದ ಬಳಿಕ ಅಬ್ಬಾ ಈ ರಾತ್ರಿ ನಾನು 1ಲಕ್ಷ ರೂ ಸಂಪಾದನೆ ಮಾಡಿದೆ ಎನ್ನುತ್ತ ಖುಷಿಯಿಂದ ದಿನವನ್ನು ಸ್ವಾಗತಿಸಿದರೆ ಎಷ್ಟು ಚೆನ್ನ ಅಲ್ಲವೇ! ಹೌದು ಇದನ್ನು ಸಾಧ್ಯವಾಗಿಸಿದವರು ಯುವ ಉದ್ಯಮಿ ಸೈಯದ್ ಬಾಲ್ಕಿ.ಆನ್‌ಲೈನ್ ಮಾರುಕಟ್ಟೆ ಕ್ಷೇತ್ರವೇ ಅಂತಹದ್ದು! ಪ್ರತಿ ಸೆಕೆಂಡ್‌ಗೂ ಹಣ ಸಂಪಾದನೆ ಮಾಡಬಹುದಾದ ಕ್ಷೇತ್ರವಿದು. ಲಾಭದ ಮೂಲ ಹಿಡಿದು ಸಾಗಿದ ಸೈಯದ್ ಇಂದು ಅತಿ ಕಿರಿಯ ವಯಸ್ಸಿಗೆ ಆನ್‌ಲೈನ್ ಮಾರುಕಟ್ಟೆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

ಪಾಕಿಸ್ತಾನ ಮೂಲದ ಸೈಯದ್ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.  12ನೇ ವಯಸ್ಸಿಗೆ ಆನ್‌ಲೈನ್ ಮಾರ್ಕೆಟಿಂಗ್ ಪ್ರವೇಶಿ ಇಂದು ಯಶಸ್ವಿ ಯುವ ಉದ್ಯಮಿ ಎನಿಸಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆ ಮತ್ತು ಮಾಹಿತಿ ಸಂಗ್ರಹಕ್ಕೆ ಸೀಮಿತವಾಗಿಲ್ಲ, ಇವುಗಳಿಂದ ಸಾಕಷ್ಟು ಹಣಗಳಿಸಬಹುದು ಎಂಬುದನ್ನು ಸೈಯದ್ ತೋರಿಸಿಕೊಟ್ಟಿದ್ದಾರೆ. ಪದವಿ ಓದುವಾಗ ಗೆಳೆಯರೊಂದಿಗೆ ಸೇರಿ ‘ಉಜ್’ ಎಂಬ ಆನ್‌ಲೈನ್ ಮಾರ್ಕೆಟಿಂಗ್ ವೆಬ್‌ಸೈಟ್ ಆರಂಭಿಸಿದರು. ಇಂದು ಇದರ ಮುಖಾಂತರ 145,000 ಲಕ್ಷ ಜನರು  ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಇಷ್ಟೂ ಗ್ರಾಹಕರನ್ನು ಸೈಯದ್ ಮತ್ತು ತಂಡ ಅವರ ಮನೆ ಅಥವಾ ಕಚೇರಿ ಬಾಗಿಲುಗಳಿಗೆ ತೆರಳಿ ನೀವು ನಮ್ಮ ಕಂಪೆನಿಯ ಗ್ರಾಹಕರಾಗಿ ಎಂದು ಪೀಡಿಸಿಲ್ಲ. ಟ್ವಿಟ್ಟರ್, ಫೇಸ್‌ಬುಕ್, ಮತ್ತು ಆರ್ಕುಟ್‌ನಂತಹ ಜಾಲ ತಾಣಗಳ ಮುಖಾಂತರ ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಸೆಳೆದದ್ದು ಒಂದು ಸಾಧನೆಯೇ ಸರಿ.ಮಹಾನಗರಗಳ ಬಹುತೇಕ ಜನರು ಸದಾ ಒತ್ತಡದಲ್ಲೇ ಬದುಕುತ್ತಿರುತ್ತಾರೆ. ಅವರಿಗೆ ಶಾಪಿಂಗ್ ಮಾಡುವಷ್ಟು ಸಮಯವಿರುವುದಿಲ್ಲ. ಈ ಜನರೇ ಆನ್‌ಲೈನ್ ವ್ಯಾಪಾರದ ಪ್ರಮುಖ ಗ್ರಾಹಕರು ಎನ್ನುತ್ತಾರೆ ಸೈಯದ್.ಇಂಟರ್‌ನೆಟ್‌ನ ಸಾಮಾನ್ಯ ಜ್ಞಾನ ಗೊತ್ತಿದ್ದವರು ಈ ಕ್ಷೇತ್ರಕ್ಕೆ ಸುಲಭವಾಗಿ ಪ್ರವೇಶ ಮಾಡಬಹುದು. ಉತ್ತಮ ಸಂವಹನ ಕೌಶಲ್ಯವಿದ್ದರಂತೂ ಸುಲಭವಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಬಹುದು ಎಂದು ಸೈಯದ್ ಯುವಕರಿಗೆ ಕಿವಿ ಮಾತು ಹೇಳುತ್ತಾರೆ.

 

ಅರ್ಜುನ್ ರೈ

ಕಾಡು ಹೂಗಳನ್ನು ಹರಿದು ತಂದು ಹಾರ ಕಟ್ಟಿ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಅರ್ಜುನ್ ರೈ ಇಂದು ಯಶಸ್ವಿ ಯುವ ಬ್ಯುಜಿನೆಸ್‌ಮ್ಯಾನ್ ಎನಿಸಿಕೊಂಡಿದ್ದಾರೆ.ಪ್ರಾಥಮಿಕ ಶಾಲೆಯಲ್ಲಿ ಹೂವಿನ ಹಾರಗಳನ್ನು ಮಾರುತ್ತಿದ್ದ ಅರ್ಜುನ್ ಪದವಿ ಮುಗಿಯುವ ವೇಳೆಗೆ ಹೂವಿನ ಅಂಗಡಿಯನ್ನೇ ಇಟ್ಟರು. ಬೆಳಿಗ್ಗೆ ಮತ್ತು ಸಂಜೆ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದರು. ಕಾಲೇಜು ಮತ್ತು ಹೂವಿನ ವ್ಯಾಪಾರವೇ ಇವರ ಪ್ರಪಂಚವಾಗಿತ್ತು. ಈ ನಡುವೆ ಖಾಸಗಿ ಸುದ್ದಿವಾಹಿನಿಯೊಂದು ಅರ್ಜುನ್‌ಹಣೆ ಬರಹವನ್ನೇ ಬದಲಿಸಿತು.ಆ ವಾಹಿನಿ ಅಮೆರಿಕದ ಯುವ ಉದ್ಯಮಿಯ ಸಂದರ್ಶನವನ್ನು ಪ್ರಸಾರ ಮಾಡಿತ್ತು. ಇದರಿಂದ  ಪ್ರಭಾವಿತರಾದ ಅರ್ಜುನ್ ಪದವಿ ಮುಗಿದ ಬಳಿಕ ಅತಿ ಕಡಿಮೆ ಬಂಡವಾಳದಲ್ಲಿ ಆನ್‌ಲೈನ್ ಜಾಹೀರಾತು ಕಂಪೆನಿ ಆರಂಭಿಸಿದರು. ಆರಂಭದಲ್ಲಿ ಗೃಹ ಬಳಕೆ ವಸ್ತುಗಳ ಬಗ್ಗೆ ಜಾಹೀರಾತು ಪಡೆಯುತ್ತಿದ್ದರು. ಇಂದು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಜಾಹೀರಾತುಗಳನ್ನು   ಭಿತ್ತರಿಸುವ ಮೂಲಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.ನಾನು ಚಿಕ್ಕವನಿದ್ದಾಗ ಕಂಪ್ಯೂಟರ್ ಬಗ್ಗೆ ಅತೀವ ಆಸಕ್ತಿ ಇತ್ತು. ಹೊಸದನ್ನು ಕಲಿಯಬೇಕೆಂಬ ಹಂಬಲವಿತ್ತು. ಕಲಿಕೆಯ ದಾಹ ಇಂದು ನನ್ನನ್ನು ಸಾಧಕನನ್ನಾಗಿಸಿದೆ ಎಂದು ಅರ್ಜುನ್ ಹೆಮ್ಮೆಯಿಂದ ನುಡಿಯುತ್ತಾರೆ.ನನ್ನ ಓದಿಗೂ ಮತ್ತು ಆನ್‌ಲೈನ್ ವ್ಯಾಪಾರಕ್ಕೂ ಯಾವುದೇ ಸಂಬಂಧವಿರಲಿಲ್ಲ. ಹಾಗಾಗಿ ‘ಒಡಿಸಿಯಾಡ್’ ಕಂಪೆನಿ ಆರಂಭಿಸುವಾಗ ಮನೆಯವರು, ಸಂಬಂಧಿಕರು ಮತ್ತು ಸ್ನೇಹಿತರು ವಿರೋಧ ವ್ಯಕ್ತಪಡಿಸಿದರು.  ನಾನು ಅವರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ನನ್ನ ಪಾಡಿಗೆ ನಾನು ಕಂಪೆನಿ ಪ್ರಾರಂಭಿಸಿದೆ. ಇಂದು ಕಂಪೆನಿಯ ವಹಿವಾಟು ಕಂಡು ಅಂದು ವಿರೋಧಿಸಿದ್ದವರೆಲ್ಲ ಅಚ್ಚರಿ ಪಡುತ್ತಾರೆ ಎನ್ನುತ್ತಾರೆ ಅರ್ಜುನ್.ಕಷ್ಟಕಾಲದ ಸಂದರ್ಭದಲ್ಲೂ ಸಕರಾತ್ಮಕವಾಗಿಯೇ ಚಿಂತಿಸಬೇಕು. ಇದೇ ಯಶಸ್ವಿಯ ಮೊದಲ ಹೆಜ್ಜೆ ಎಂದು ಅರ್ಜುನ್ ಯುವಕರಿಗೆ ಕಿವಿಮಾತು ಹೇಳುತ್ತಾರೆ.ಕಿಂಗ್ ಸಿದ್ಧಾರ್ಥ

‘ಸಾಮಾನ್ಯವಾಗಿ ಯುವಕ ಯುವತಿಯರು ಪದವಿ ಪಡೆದು ಸರ್ಕಾರಿ ಅಥವಾ ಖಾಸಗಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿ ಜೀವನವನ್ನು ಬಿಂದಾಸ್ ಆಗಿ ಕಳೆಯಬೇಕೆಂದು ಹಂಬಲಿಸುತ್ತಾರೆ.ಎಲ್ಲರೂ ಈ ರೀತಿ ಯೋಚಿಸಿದರೆ ಇವರಿಗೆಲ್ಲ ಕೆಲಸ ಕೊಡುವವರು ಯಾರು? ನನ್ನ ಪ್ರಕಾರ ಸೃಜನಶೀಲತೆ ಇರುವವರು ಈ ರೀತಿ ಯೋಚಿಸುವುದಿಲ್ಲ. ಕಂಪೆನಿ ಅಥವಾ ಉದ್ಯಮವೊಂದನ್ನು ಆರಂಭಿಸಿ ಹತ್ತಾರು ಜನರಿಗೆ ಕೆಲಸ ಕೊಡಬೇಕು ಎಂದು ಯೋಚಿಸುವವರೇ ನಿಜವಾದ ಸಾಧಕರು’ ಇದು ಯುವ ಉದ್ಯಮಿ ಮತ್ತು ಖ್ಯಾತ ಭಾಷಣಕಾರನೆಂದೇ ಖ್ಯಾತಿ ಪಡೆದಿರುವ ಕಿಂಗ್ ಸಿದ್ದಾರ್ಥ ಭಾಷಣದ ಒಂದು ತುಣುಕು.ಉತ್ತರ ಭಾರತದವರಾದ ಸಿದ್ದಾರ್ಥ ಇಂದು ಯಶಸ್ವಿ ಯುವ ಉದ್ಯಮಿಯಾಗಿದ್ದಾರೆ. ವೆಬ್‌ಡಿಸೈನಿಂಗ್  ಕಂಪೆನಿ ತೆರೆದಿದ್ದಾರೆ. ನೂರಾರು ಆನ್‌ಲೈನ್ ಪತ್ರಿಕೆಗಳಿಗೆ ವೆಬ್‌ಡಿಸೈನಿಂಗ್ ಮಾಡಿಕೊಟ್ಟಿರುವ ಹೆಗ್ಗಳಿಕೆ ಸಿದ್ಧಾರ್ಥ ಅವರದ್ದು. ಹದಿಹರೆಯದವರಿಗಾಗಿಯೇ ಪ್ರಕಟಗೊಳ್ಳುತ್ತಿರುವ ‘ಫ್ರೆಂಡ್ಜ್’ ಎಂಬ ಇ-ಪತ್ರಿಕೆಯ ಅಂಕಣಕಾರರಾಗಿದ್ದಾರೆ.  ಇದರಲ್ಲಿ ಯುವಕರಿಗೆ ಅನುಕೂಲ ವಾಗುವಂತಹ ಯಶಸ್ಸಿನ ಸೂತ್ರಗಳ ಬಗ್ಗೆ ಬರೆಯುತ್ತಿದ್ದಾರೆ. ಯುವಕರಿಗಾಗಿಯೇ ‘ಫ್ರೆಂಡ್ಜ್’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.ಸಿದ್ದಾರ್ಥ ಚಿಕ್ಕವನಿದ್ದಾಗ ಸ್ನೇಹಿತರೊಂದಿಗೆ ಸೇರಿ ರಸಪ್ರಶ್ನೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ ಗೆದ್ದವರಿಗೆ ಬಹುಮಾನ ನೀಡುತ್ತಿದ್ದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪ್ರವೇಶ ಶುಲ್ಕವನ್ನು ನೀಡಬೇಕಿತ್ತು.ಬಾಲಕನಾಗಿರುವಾಗಲೇ ಯಶಸ್ಸಿನ ರುಚಿ ಕಂಡಿದ್ದ ಸಿದ್ಧಾರ್ಥಗೆ ಸ್ವಂತ ಕಂಪೆನಿ ತೆರೆಯುವುದು ಕಷ್ಟವಾಗಲಿಲ್ಲ. ಇಂದು ದೇಶ ಮತ್ತು ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದಾರೆ.ಜೀವನದಲ್ಲಿ ಸ್ಪರ್ಧೆ ಇರಬೇಕು. ಆಗ ಬದುಕನ್ನು ಅನುಭವಿಸಲು ಸಾಧ್ಯ. ಬರೀ ಸಂತೋಷವಾಗಿರುವುದೇ ಜೀವನವಲ್ಲ, ನಾವು ಇತರರಿಗಿಂತ ಭಿನ್ನ ಎಂಬುದನ್ನು  ಸಾಧಿಸಿ ತೋರಿಸಬೇಕು ಎಂದು ಸಿದ್ಧಾರ್ಥ ಯುವಕರಿಗೆ ಕಿವಿಮಾತು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry