ಭಾನುವಾರ, ಜನವರಿ 19, 2020
29 °C

ಕಸದಿಂದ ಡ್ರಮ್ ಕಾಂಪೋಸ್ಟ್

ಸುಮಲತಾ ಎನ್‌. Updated:

ಅಕ್ಷರ ಗಾತ್ರ : | |

ಕಸದಿಂದ ಡ್ರಮ್ ಕಾಂಪೋಸ್ಟ್

ಕಸ ವಿಲೇವಾರಿ ಇದೀಗ ಎಲ್ಲೆಡೆಯೂ ಇರುವ ಸಮಸ್ಯೆ. ಇದರ ನಿವಾರಣೆಗೆ ಪ್ರತಿದಿನ ಹೊಸ ಹೊಸ ಯೋಜನೆಗಳೂ ಹುಟ್ಟಿಕೊಳ್ಳುತ್ತಿವೆ. ಆದರೆ ಬುದ್ಧಿವಂತಿಕೆಯಿಂದ ತ್ಯಾಜ್ಯವನ್ನು ಬಳಸಿಕೊಂಡರೆ ಸಮಸ್ಯೆ ಸುಲಭವಾಗಿ ನೀಗುವುದರೊಂದಿಗೆ ಗೊಬ್ಬರವನ್ನೂ ತಯಾರಿಸಬಹುದು.ಹೌದು. ಕೇವಲ ಅಡುಗೆ ಮನೆ ತ್ಯಾಜ್ಯವನ್ನು ಬಳಸಿಕೊಂಡು, ‘ಡ್ರಮ್ ಕಾಂಪೋಸ್ಟಿಂಗ್’ ಪದ್ಧತಿಯಿಂದ 75 ಕೆ.ಜಿ ಗೊಬ್ಬರ ಉತ್ಪಾದಿಸಬಹುದು ಎನ್ನುತ್ತಾರೆ ಬೆಂಗಳೂರು ಕೃಷಿ ವಿವಿ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಎಚ್‌.ಸಿ. ಪ್ರಕಾಶ್.‘ಕೃಷಿ ವಿಕಾಸ’ ಯೋಜನೆಯಡಿ ನಡೆಸಿದ ಸಂಶೋಧನೆಯಲ್ಲಿ, ಡ್ರಮ್‌ ಕಾಂಪೋಸ್ಟಿಂಗ್ ಅತಿ ಕಡಿಮೆ ಖರ್ಚಿನ ಹಾಗೂ ಸರಳವಾಗಿ ನಿರ್ವಹಿಸಬಹುದಾದ ಪದ್ಧತಿ ಎಂಬುದನ್ನು ಕಂಡುಕೊಳ್ಳಲಾಗಿದೆ.‘ಹಸಿ ಕಸವನ್ನು ಒಂದೆಡೆ ಶೇಖರಿಸಿ, ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಹಾಕಿ, ಕೊಳೆಸಿ ಅದರಿಂದ ಗೊಬ್ಬರ ತಯಾರಿಸುವ ಪ್ರಕ್ರಿಯೆಯೇ ‘ಡ್ರಮ್‌ ಕಾಂಪೋಸ್ಟಿಂಗ್’ ಎಂದು ಮಾಹಿತಿ ನೀಡುತ್ತಾರೆ ಪ್ರಕಾಶ್.ಕೇವಲ ಮನೆ ತ್ಯಾಜ್ಯವಲ್ಲದೇ, ತರಕಾರಿ ಅಂಗಡಿಯಲ್ಲಿ ಉಳಿದು, ಕೊಳೆತು ಹೋದ ಹಣ್ಣು ಹಂಪಲು, ಸೊಪ್ಪು, ತರಕಾರಿ, ಕಲ್ಯಾಣ ಮಂಟಪಗಳಲ್ಲಿನ ಕಸ, ಹೀಗೆ ಯಾವುದೇ ಹಸಿ ಕಸವನ್ನೂ ಉತ್ತಮ ಗೊಬ್ಬರವಾಗಿ ಪರಿವರ್ತಿಸಬಹುದು. ಇದರಿಂದ ಮನೆಗೆ ಗೊಬ್ಬರವಾಗುವುದಷ್ಟೇ ಅಲ್ಲದೆ, ಕೃಷಿ ಆಧರಿತ ಕೈಗಾರಿಕೆಗಳ ತ್ಯಾಜ್ಯ ಸಂಸ್ಕರಿಸಿ ದೊಡ್ಡ ಪ್ರಮಾಣದಲ್ಲಿ ಈ ಪದ್ಧತಿ ಕೈಗೊಂಡರೆ, ಸ್ವಯಂ ಉದ್ಯೋಗ ಆರಂಭಿಸಿ ಗೊಬ್ಬರ ಮಾರಾಟ ಮಾಡಿ ಹಣ ಸಂಪಾದಿಸಬಹುದು ಎನ್ನುತ್ತಾರೆ ಅವರು.ಡ್ರಮ್‌ನಲ್ಲಿ ಗೊಬ್ಬರ ತಯಾರಿಸುವ ಪ್ರಕ್ರಿಯೆ

ಡ್ರಮ್‌ ಕಾಂಪೋಸ್ಟಿಂಗ್‌ನಲ್ಲಿ ಎರಡು ವಿಧ. ಜೈವಿಕ್ ಡ್ರಮ್‌ ಕಾಂಪೋಸ್ಟಿಂಗ್ ಮತ್ತು ಎರೆಹುಳು ಡ್ರಮ್ ಕಾಂಪೋಸ್ಟಿಂಗ್.

ಡ್ರಮ್‌ಗಳನ್ನು ಅಡ್ಡಡ್ಡ ಇರಿಸಿ, ಅದಕ್ಕೆ ತ್ಯಾಜ್ಯ ತುಂಬಿ ಮೂರು ವಾರ ಹಾಗೇ ಬಿಡಬೇಕು. ಮೂರು ವಾರಗಳ ನಂತರ ಅರ್ಧ ಕೆ.ಜಿ ಎರೆಹುಳುವನ್ನು ಡ್ರಮ್‌ಗೆ ಬಿಡಬೇಕು. ಈ ಮೂರು ವಾರದ ಅವಧಿಯಲ್ಲಿ ಡ್ರಮ್‌ ಒಳಗಿನ ತಾಪಮಾನ ಕಡಿಮೆಯಾಗಿರುತ್ತದೆ. ಎರೆಹುಳು ಬಿಟ್ಟ ನಂತರ ತೇವಾಂಶ ಇರುವಂತೆ ಕಾಯ್ದುಕೊಳ್ಳಬೇಕು. ಎರೆಹುಳುಗಳು ತ್ಯಾಜ್ಯವನ್ನು ತಿಂದು ಹಿಕ್ಕೆಯ ರೂಪದಲ್ಲಿ ಹೊರಬಿಡುವುದೇ ಗೊಬ್ಬರವಾಗಿರುತ್ತದೆ. ಇದನ್ನೇ ‘ಎರೆಹುಳು ಡ್ರಮ್‌ ಕಾಂಪೋಸ್ಟಿಂಗ್’ ಎನ್ನುತ್ತಾರೆ. ಎರೆಹುಳುವನ್ನು ಡ್ರಮ್‌ಗೆ ಬಿಟ್ಟ ನಂತರ ಮತ್ತೆ ಕಸವನ್ನು ಹಾಕಬಾರದು. ಆದ್ದರಿಂದ ಎರಡು ಡ್ರಮ್‌ಗಳನ್ನು ಇಟ್ಟುಕೊಂಡರೆ ಅನುಕೂಲ. ಒಂದಾದರೊಂದಂತೆ ಕಸ ಶೇಖರಿಸಬಹುದು. ಜೈವಿಕ ಡ್ರಮ್ ಕಾಂಪೋಸ್ಟಿಂಗ್‌ ಪದ್ಧತಿಯಲ್ಲಿ ಪ್ರತಿ ದಿನ ಹಸಿ ತ್ಯಾಜ್ಯವನ್ನು ತುಂಬುತ್ತಾ, ದಿನಕ್ಕೆರಡು ಬಾರಿ ಹದಿನೈದರಿಂದ ಇಪ್ಪತ್ತು ಬಾರಿ ಡ್ರಮ್‌ ಅನ್ನು ತಿರುಗಿಸಬೇಕು. ಇದರಿಂದ ಗಾಳಿ ಸಂಚಾರವಾಗಿ ತ್ಯಾಜ್ಯ ವಿಭಜನೆಗೆ ಅನುಕೂಲವಾಗುತ್ತದೆ. ಇದಕ್ಕೆ ಸಗಣಿ ಬಗ್ಗಡ ಬೆರೆಸಿದರೆ ಗೊಬ್ಬರ ಇನ್ನಷ್ಟು ವೇಗವಾಗಿ ತಯಾರಾಗುತ್ತದೆ. ಇದನ್ನೇ ಜೈವಿಕ ಡ್ರಮ್‌ ಕಾಂಪೋಸ್ಟಿಂಗ್ ಎನ್ನುತ್ತಾರೆ.ಈ ಡ್ರಮ್‌ಗಳಿಗೆ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಬೇಕು. ಇದರಿಂದ ಒಳಗಿರುವ ನೀರು ಹೊರಗೆ ಬಂದು ಗೊಬ್ಬರ ತಯಾರಿಕೆಗೆ ಅನುಕೂಲವಾಗುತ್ತದೆ. ಆ ನೀರಿನಲ್ಲೂ ಪೋಷಕಾಂಶಗಳಿದ್ದು, ಅದನ್ನೂ ಗಿಡಗಳಿಗೆ ಬಳಸಬಹುದು. ಪ್ಲಾಸ್ಟಿಕ್‌, ಗಾಜು ಅಥವಾ ಮಾಂಸಾಹಾರಿ ವಸ್ತುಗಳು ತ್ಯಾಜ್ಯದಲ್ಲಿ ಸೇರಿರಬಾರದು.

ಈ ಎರಡೂ ಪದ್ಧತಿಯಿಂದ 75 ದಿನಗಳಲ್ಲಿ 75ಕೆ.ಜಿಯಷ್ಟು ಗೊಬ್ಬರ ತಯಾರಾಗಿರುತ್ತದೆ. 200 ಲೀಟರ್ ಸಾಮರ್ಥ್ಯವುಳ್ಳ ಡ್ರಮ್‌ 75ಕೆ.ಜಿ ಗೊಬ್ಬರ ಉತ್ಪತ್ತಿ ಮಾಡಬಲ್ಲದು.ಎಲ್ಲೆಲ್ಲಿ ಇಡಬಹುದು?

ಈ ಡ್ರಮ್‌ಗಳನ್ನು ಇರುವ ಸಣ್ಣ ಜಾಗದಲ್ಲೇ ಅಳವಡಿಸಬಹುದು. ಮನೆಯ ಅಂಗಳ, ಹಿತ್ತಲುಗಳಲ್ಲಿ ಇಡಬಹುದು. ನಗರ ಪ್ರದೇಶದಲ್ಲಿ ಜಾಗದ ಕೊರತೆಯಿರುವುದರಿಂದ ಟೆರೇಸ್‌ ಮೇಲೆ ಅಳವಡಿಸಿಕೊಳ್ಳಬಹುದು. ಪಾರ್ಕ್‌ಗಳಲ್ಲಿ ಇಟ್ಟು ಇದರ ಉಪಯೋಗ ಹೊಂದಬಹುದು. ಆದರೆ ಸೂಕ್ತ ನಿರ್ವಹಣೆ ಇರುವುದು ಅವಶ್ಯಕ.  ಹಲವರು ಈ ತ್ಯಾಜ್ಯದಿಂದ ಸೊಳ್ಳೆ, ಕ್ರಿಮಿಕೀಟಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಡ್ರಮ್‌ ಮುಚ್ಚಿರುವ ಕಾರಣ ಇಂಥ ಸಮಸ್ಯೆ ಎದುರಾಗುವುದಿಲ್ಲ ಎನ್ನುತ್ತಾರೆ ಪ್ರಕಾಶ್.ಪರಿಸರಸ್ನೇಹಿಯಾದ ಈ ಎರೆಹುಳು ಕಾಂಪೋಸ್ಟ್‌ ಡ್ರಮ್‌ಗೆ ₨ 5,500ರಿಂದ 6ಸಾವಿರ ತಗುಲಿದರೆ, ಜೈವಿಕ ಗೊಬ್ಬರ ಡ್ರಮ್‌ಗೆ ₨ 6ದಿಂದ 7 ಸಾವಿರ ಖರ್ಚಾಗುತ್ತದೆ. ಮಾಹಿತಿಗೆ: 9481094315.

 

ಪ್ರತಿಕ್ರಿಯಿಸಿ (+)