ಭಾನುವಾರ, ಜನವರಿ 19, 2020
26 °C
ನಗರ ಸಂಚಾರ

ಕಸದ ತೊಟ್ಟಿಯಲ್ಲಿ ಹಾನಿಕಾರಕ ಆಸ್ಪತ್ರೆ ತ್ಯಾಜ್ಯ

ಪ್ರಜಾವಾಣಿ ವಾರ್ತೆ/ ಕೆ.ಎಸ್‌. ಸುನಿಲ್‌ Updated:

ಅಕ್ಷರ ಗಾತ್ರ : | |

ಗದಗ: ನಗರದಲ್ಲಿ ಎಲ್ಲೆಂದರಲ್ಲಿ ಆಸ್ಪತ್ರೆಗಳ ತ್ಯಾಜ್ಯ ಬಿಸಾಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ನಿಯಮದ ಪ್ರಕಾರ ಆಸ್ಪತ್ರೆ ತ್ಯಾಜ್ಯವನ್ನು ರಸ್ತೆಬದಿ ಕಸದ ತೊಟ್ಟಿಗಳಲ್ಲಿ ಹಾಕುವಂತಿಲ್ಲ. ನಗರದ ಕೆಲ ನರ್ಸಿಂಗ್‌ ಹೋಂಗಳು ಮತ್ತು ಕ್ಲಿನಿಕ್‌ಗಳು ನಿಯಮ ಪಾಲಿಸದೇ ಬೇಕಾಬಿಟ್ಟಿ  ಸುರಿಯುತ್ತಿವೆ.ಕೆ.ಸಿ.ರಾಣಿ ರಸ್ತೆಯ ಎಡ ಮತ್ತು ಬಲ ಭಾಗದ ಭಂಗಿ ರಸ್ತೆಗಳಲ್ಲಿ ಮತ್ತು ರೋಟರಿ ವೃತ್ತದ ಬಳಿಯ ಕಸದ ತೊಟ್ಟಿಯಲ್ಲಿ ಬ್ಯಾಂಡೇಜ್‌ಗಳು, ಅವಧಿ ಮುಗಿದ ಮುಲಾಮು, ಸಿರಿಂಜ್‌ಗಳನ  ಇವುಗಳನ್ನು ತಿಂದ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಲಿವೆ. ಅಷ್ಟೇ ಅಲ್ಲದೆ ಚಿಂದಿ ಆಯುವವರು ಕೈಯಲ್ಲಿ ಮುಟ್ಟುವುದರಿಂದ ಸೋಂಕು ತಗುಲುವ ಸಾಧ್ಯತೆ ಇದೆ.ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆ 45 (ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು, ಜಿಲ್ಲಾ ಆಸ್ಪತ್ರೆ) ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 500 ಆಸ್ಪತ್ರೆಗಳು ಇವೆ. ಎಲ್ಲ ಆಸ್ಪತ್ರೆಗಳಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನು ನಗರದ ಹೊರವಲಯದ ನರಸಾಪುರ ರಸ್ತೆಯಲ್ಲಿ ಆರಂಭಿಸಿರುವ ಬಯೋ ಮೆಡಿಕಲ್‌ ಕಾಮನ್‌ ವೇಸ್ಟ್‌ ಟ್ರೀಟ್‌ಮೆಂಟ್‌ನಲ್ಲಿಯೇ ಹಾಕಬೇಕು.

ಆಸ್ಪತ್ರೆಗಳ ತ್ಯಾಜ್ಯವನ್ನು 48 ಗಂಟೆಗಳಲ್ಲಿ ವಿಲೇವಾರಿ ಮಾಡಬೇಕು. ಜೀವ ತ್ಯಾಜ್ಯ ವಸ್ತು ನಿರ್ವಹಣೆ ಕಾಯ್ದೆ 1998ರ ಪ್ರಕಾರ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ಬಯೋ ಮೆಡಿಕಲ್‌ ವೇಸ್ಟ್‌ ಕಾಮನ್‌ ಟ್ರಿಟ್‌ಮೆಂಟ್‌ ಜತೆ ಒಪ್ಪಂದ ಮಾಡಿಕೊಳ್ಳಬೇಕು. ಅದಕ್ಕಾಗಿಯೇ ಜಿಲ್ಲಾಡಳಿತ ದರವನ್ನು ನಿಗದಿ ಮಾಡಿದೆ.ದಿನ ಬಿಟ್ಟು ದಿನ ವಾಹನ ಬಂದು ಆಸ್ಪತ್ರೆಗಳಿಂದ ತ್ಯಾಜ್ಯ ಸಂಗ್ರಹಿಸಿ ಹೋಗುತ್ತದೆ. ತ್ಯಾಜ್ಯವನ್ನು ಬಯೋ ಮೆಡಿಕಲ್‌ ಘಟಕದಲ್ಲಿ ವಿಂಗಡಿಸಲಾಗುತ್ತದೆ. ಪರಿಸರಕ್ಕೆ ಹಾನಿಯಾಗದಂತೆ ಘಟಕದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯವನ್ನು ನಿಗದಿತ ಉಷ್ಣಾಂಶದಲ್ಲಿಯೇ ಸುಡಲಾಗುತ್ತದೆ.ಪ್ರತ್ಯೇಕ ಡಬ್ಬಿ ಇಡುವುದು ಅವಶ್ಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಂಪು, ನೀಲಿ, ಹಳದಿ ಡಬ್ಬಗಳನ್ನು ಇಡಲಾಗಿದೆ. ಮರು ಬಳಕೆ ವಸ್ತು, ಕೊಳೆತ ಆಹಾರ ಪದಾರ್ಥ, ಸೂಜಿ, ಗಾಜಿನ ಚೂರು, ಡ್ರಿಪ್‌ ಸೆಟ್‌ಗಳು, ಸಿರಿಂಜ್‌ಗಳು, ಡ್ರೆಸಿಂಗ್‌ ಮೆಟಿರಿಯಲ್ಸ್‌ಗಳನ್ನು ಯಾವ ಡಬ್ಬಗಳಲ್ಲಿ  ಹಾಕಬೇಕು ಎಂಬುದರ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅದೇ ರೀತಿ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದೆ.‘ಆಸ್ಪತ್ರೆ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಬಿಸಾಡಿದರೆ ಆಗುವ ತೊಂದರೆಗಳ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಆಸ್ಪತ್ರೆಗಳು ನಿಗದಿ ಪಡಿಸಿರುವ ಶುಲ್ಕ ಪಾವತಿಸಿ ತ್ಯಾಜ್ಯ ಸಂಗ್ರಹ ವಾಹನಕ್ಕೆ ತ್ಯಾಜ್ಯವನ್ನು ಹಾಕಬೇಕು. ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಕೇಂದ್ರದ ಘನತ್ಯಾಜ್ಯ ನಿರ್ವಹಣೆ ಅಧಿಕಾರಿ ಪ್ರಿಯದರ್ಶನಿ ತಿಳಿಸಿದರು.ದಂಡದ ಎಚ್ಚರಿಕೆ

‘ಆಸ್ಪತ್ರೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಈ ಬಗ್ಗೆ ನರ್ಸಿಂಗ್‌ ಹೋಂ ಮತ್ತು ಕ್ಲಿನಿಕ್‌ನವರಿಗೆ ಮಾಹಿತಿ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಿ.ಬಿ. ಚನ್ನಶೆಟ್ಟಿ  ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)