ಕಸದ ಸಮಸ್ಯೆ: ಮಂಡೂರಿನಿಂದ ಪಾದಯಾತ್ರೆ

7

ಕಸದ ಸಮಸ್ಯೆ: ಮಂಡೂರಿನಿಂದ ಪಾದಯಾತ್ರೆ

Published:
Updated:

 


ಬೆಂಗಳೂರು: ಬೆಂಗಳೂರಿನ ಕಸದಿಂದ ತೊಂದರೆಗೀಡಾದ ಮಂಡೂರಿನ ಜನರ ಕ್ಷಮೆ ಕೇಳುವ ಜೊತೆಗೆ ಅವರ ಕೂಗಿಗೆ ದನಿಗೂಡಿಸಲು ಇದೇ 22ರಂದು ಮಂಡೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಲೋಕಸತ್ತಾ ಪಕ್ಷದ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ಮೀನಾಕ್ಷಿ ಭರತ್ ಹೇಳಿದರು.

 

ಯಾವುದೇ ವೈಜ್ಞಾನಿಕ ಕ್ರಮಗಳನ್ನು ಪಾಲಿಸದೆ ಮಹಾನಗರದ ಕಸವನ್ನು ಹಳ್ಳಿಗಳಿಗೆ ತಂದು ಸುರಿಯುತ್ತಿರುವುದು ಅಮಾನವೀಯ. ಗ್ರಾಮೀಣ ಮತ್ತು ನಗರ ಜನರ ನಡುವೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ವಿರೋಧ ಪಕ್ಷಗಳೂ ದನಿ ಎತ್ತುತ್ತಿಲ್ಲ. ಇದರಿಂದಾಗಿ ಮಂಡೂರು ಗ್ರಾಮದ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

 

`ಆಯಾ ನಗರದ ಕಸವನ್ನು ಅದೇ ನಗರದಲ್ಲಿಯೇ ನಿರ್ವಹಣೆ ಮಾಡಬೇಕು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಬೇಕು' ಎಂದು ಅವರು ಒತ್ತಾಯಿಸಿದರು.

 

ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ರವಿಕೃಷ್ಣ ರೆಡ್ಡಿ ಮಾತನಾಡಿ, ಬೆಂಗಳೂರಿನ ಕಸದ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಪ್ರತ್ಯೇಕ ಕಾನೂನು ರೂಪಿಸಬೇಕಾದ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಕರಡು ಪ್ರತಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

 

ಬಿಬಿಎಂಪಿ ವ್ಯಾಪ್ತಿಯ ಹೊರಗೆ ಕಸ ಸಾಗಿಸಲು ಪರವಾನಗಿ ನೀಡಬಾರದು. ಒಂದು ವೇಳೆ ಸಾಗಿಸಲೇಬೇಕಾದರೆ ಅದಕ್ಕೆ ಸ್ಥಳೀಯ ನಾಗರಿಕರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಜೊತೆಗೆ ಆ ಕಸವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಧನಸಹಾಯವನ್ನೂ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 

ಕಾರ್ಯಕಾರಿ ಸಮಿತಿ ಸದಸ್ಯೆ ಶಾಂತಲಾ ದಾಮ್ಲೆ ಮಾತನಾಡಿ, `ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ನಮ್ಮ ನಗರದ ಮಕ್ಕಳ ಆರೋಗ್ಯದಂತೆಯೇ ಗ್ರಾಮೀಣ ಮಕ್ಕಳ ಆರೋಗ್ಯವೂ ಮುಖ್ಯ ಎನ್ನುವುದನ್ನು ನಾವು ಮನಗಾಣಬೇಕು' ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry