ಕಸದ ಸಮಸ್ಯೆ: ಸರ್ಕಾರದ ಅಸಹಕಾರ, ಮೇಯರ್ ಬೇಸರ

7

ಕಸದ ಸಮಸ್ಯೆ: ಸರ್ಕಾರದ ಅಸಹಕಾರ, ಮೇಯರ್ ಬೇಸರ

Published:
Updated:

ಬೆಂಗಳೂರು: `ನಗರದಲ್ಲಿ ತ್ಯಾಜ್ಯದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಾಗಲೀ, ಉಪಮುಖ್ಯಮಂತ್ರಿಯೂ ಆದ ಬೆಂಗಳೂರು ನಗರ ಉಸ್ತುವಾರಿ ಸಚಿವ ಆರ್.ಅಶೋಕ ಅವರಾಗಲೀ ನಗರದ ಕಸದ ಸಮಸ್ಯೆಯ ಗಂಭೀರತೆ ತಿಳಿಯಲು ಈ ವರೆಗೆ ಒಂದು ಬಾರಿಯೂ ನಗರ ಪ್ರದಕ್ಷಿಣೆ ಮಾಡಿಲ್ಲ~ ಇದು ಬಿಬಿಎಂಪಿ ವಿರೋಧಪಕ್ಷದ ಸದಸ್ಯರ ಆರೋಪ ಮಾತ್ರವಲ್ಲ; ಮೇಯರ್ ಡಿ.ವೆಂಕಟೇಶಮೂರ್ತಿ ಅವರು ತಮ್ಮದೇ ಪಕ್ಷದ ರಾಜ್ಯ ಸರ್ಕಾರದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಹೀಗೆ.ಗುರುವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಬಿಬಿಎಂಪಿಯೊಂದಿಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬುದನ್ನು ಒಪ್ಪಿಕೊಂಡರು.`ಕಸದ ಸಮಸ್ಯೆ ಸೇರಿದಂತೆ ನಗರದ ಇನ್ನಿತರೆ ಸಮಸ್ಯೆಗಳ ಬಗ್ಗೆ ನಗರ ಪ್ರದಕ್ಷಿಣೆ ನಡೆಸುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ನಗರ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಆರ್.ಅಶೋಕ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದೇನೆ. ಆದರೆ, ಮುಖ್ಯಮಂತ್ರಿಯವರಿಗೆ ಶಾಸಕರ ಬಗ್ಗೆ ಇರುವ ಆದರ ಪಾಲಿಕೆಯ ಸದಸ್ಯರ ಬಗ್ಗೆ ಇಲ್ಲ~ ಎಂದು ಅವರು ದೂರಿದರು.`ನಗರದ ಆರು ಜನ ಸಚಿವರೂ ಆರು ದಿಕ್ಕಿನಂತಿದ್ದಾರೆ. ಎಲ್ಲರೂ ತಮ್ಮ ತಮ್ಮ ರಾಜಕೀಯದಲ್ಲೇ ಮುಳುಗಿದ್ದಾರೆ. ಯಾರೊಬ್ಬರಿಗೂ ನಗರದ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಮುಖ್ಯಮಂತ್ರಿಯವರು ಸೇರಿದಂತೆ ಯಾವ ಸಚಿವರೂ ನಗರ ಪ್ರದಕ್ಷಿಣೆ ಕಾರ್ಯಕ್ರಮದ ಬಗ್ಗೆ ಇದುವರೆಗೂ ಒಲವು ತೋರಿಲ್ಲ~ ಎಂದು ಅವರು ತಿಳಿಸಿದರು.ಬಿಬಿಎಂಪಿ ವಿರೋಧಪಕ್ಷದ ನಾಯಕ ಎಂ.ಕೆ.ಗುಣಶೇಖರ್, `ನಗರದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಕಸದ ಸಮಸ್ಯೆ ಹೆಚ್ಚುತ್ತಲೇ ಇದೆ. ಕಸದ ಸಮಸ್ಯೆಯನ್ನು ಪಾಲಿಕೆ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ನಗರದ ಉಸ್ತುವಾರಿ ಸಚಿವ ಆರ್.ಅಶೋಕ ಅವರು ನಗರದಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ಆದರೆ, ಈ ಕಾರ್ಯ ಇದುವರೆಗೂ ಆಗಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.`ಮಂಡೂರಿನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಸುರಿಯಲು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿ ಸ್ಥಳೀಯರ ಮನವೊಲಿಸುವ ಕಾರ್ಯವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಮಾಡಬೇಕಿತ್ತು. ಆದರೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಹೆಚ್ಚಾಗುತ್ತಿದ್ದರೂ ನಗರದ ಯಾವೊಬ್ಬ ಸಚಿವರೂ ಅತ್ತ ಸುಳಿದಿಲ್ಲ. ಅಲ್ಲಿನ ಸ್ಥಳೀಯರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲೂ ಸರ್ಕಾರ ಸೋತಿದೆ~ ಎಂದು ಅವರು ಆರೋಪಿಸಿದರು.ಮಾಜಿ ಮೇಯರ್ ರಾಮಚಂದ್ರಪ್ಪ, `ನಗರದ ಸಮಸ್ಯೆಗಳ ಬಗ್ಗೆ ವಿರೋಧಪಕ್ಷದ ಸದಸ್ಯರ ಸಭೆ ಕರೆದು ಸಲಹೆ ಪಡೆಯುವಂತೆ ಮುಖ್ಯಮಂತ್ರಿಯವರಿಗೆ ಅನೇಕ ಬಾರಿ ತಿಳಿಸಿದ್ದೇವೆ. ನಗರ ಪ್ರದಕ್ಷಿಣೆ ನಡೆಸಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಇನ್ನಾದರೂ ಮುಂದಾಗಬೇಕು~ ಎಂದು ಒತ್ತಾಯಿಸಿದರು.ಮಾಜಿ ಮೇಯರ್‌ಗಳು ಏನಂತಾರೆ?ಆದ್ಯತೆಯ ಮೇಲೆ ಕೆಲಸ ಮಾಡಿ

`ನಗರದಿಂದ ಸಾವಿರಾರು ಕೋಟಿ ರೂಪಾಯಿ ತೆರಿಗೆ ರಾಜ್ಯ ಸರ್ಕಾರಕ್ಕೆ ಹೋಗುತ್ತಿದೆ. ಹೀಗಾಗಿ ನಗರದ ಮೂಲಸೌಕರ್ಯಗಳಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪಾಲಿಕೆ ನಿರ್ವಹಿಸುವ ಆದ್ಯತೆಯ ಕೆಲಸಗಳಲ್ಲಿ ಕಸ ವಿಲೇವಾರಿ ಮುಖ್ಯವಾದುದು. ಆದರೆ, ಸರ್ಕಾರ ಹಾಗೂ ಪಾಲಿಕೆಗೆ ಈ ಬಗ್ಗೆ ಕಾಳಜಿ ಇಲ್ಲ~

-ಪಿ.ಆರ್.ರಮೇಶ್, ಮಾಜಿ ಮೇಯರ್ಗಮನ ನೀಡುತ್ತಿಲ್ಲ

`ನಗರದ ತ್ಯಾಜ್ಯದ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಆದರೆ, ಪಾಲಿಕೆಯ ಅಸಮರ್ಪಕ ನಿರ್ವಹಣೆಯಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ. ತ್ಯಾಜ್ಯದ ಸಮಸ್ಯೆಯ ನಿರ್ವಹಣೆಯ ಬಗ್ಗೆ ಮುಖ್ಯಮಂತ್ರಿಯವರು ಮಾಜಿ ಮೇಯರ್‌ಗಳು ಹಾಗೂ ಪಾಲಿಕೆಯ ಹಿರಿಯ ಸದಸ್ಯರನ್ನು ಕರೆಸಿ ಸಭೆ ನಡೆಸಬೇಕಿತ್ತು. ನಗರದ ಸಚಿವರು ನಗರದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಗಮನ ನೀಡಬೇಕಿತ್ತು. ಆದರೆ, ಇದು ಸಾಧ್ಯವಾಗಿಲ್ಲ~

-ಜೆ.ಹುಚ್ಚಪ್ಪ, ಮಾಜಿ ಮೇಯರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry