ಕಸವನ್ನು ಹೊರಗೆ ಕಳಿಸಿ; ಹಸಿರನ್ನು ಬೆಳೆಸಿ

7
ನೂತನ ಮೇಯರ್-ಉಪ ಮೇಯರ್‌ಗೆ ಕುಟುಂಬ ಸದಸ್ಯರ ಕಿವಿಮಾತು

ಕಸವನ್ನು ಹೊರಗೆ ಕಳಿಸಿ; ಹಸಿರನ್ನು ಬೆಳೆಸಿ

Published:
Updated:

ಬೆಂಗಳೂರು: ಬಿಬಿಎಂಪಿ ಸಭಾಂಗಣದಲ್ಲಿ ಬುಧವಾರ ಮೇಯರ್-ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಎರಡು ಕುಟುಂಬಗಳ ಸದಸ್ಯರ ಸಂಭ್ರಮ ಎಲ್ಲೆ ಮೀರಿತ್ತು. ಚುನಾವಣಾಧಿಕಾರಿ ಗೌರವ್ ಗುಪ್ತ ಅವರಿಂದ ಘೋಷಣೆ ಹೊರಬಿದ್ದಾಗ ಆ ಸಂಭ್ರಮ ಇಮ್ಮಡಿಗೊಂಡಿತ್ತು.ಮೇಯರ್ ಬಿ.ಎಸ್. ಸತ್ಯನಾರಾಯಣ ಮತ್ತು ಉಪ ಮೇಯರ್ ಎನ್. ಇಂದಿರಾ ಅವರ ಕುಟುಂಬಗಳ ಸಂಭ್ರಮ ಅದು. ಸತ್ಯನಾರಾಯಣ ಅವರ ಪತ್ನಿ ಉಷಾ, ಮಗ ಸುಜಯ್, ಮಗಳು ಶ್ರುತಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಿದರು. ಶ್ರುತಿ ಅವರಂತೂ ಅಪ್ಪ ಮೇಯರ್ ಆಗುವ ಕ್ಷಣವನ್ನು ಚಿತ್ರೀಕರಣ ಮಾಡಿಕೊಳ್ಳುವ ಮೂಲಕ ಖುಷಿ ಅನುಭವಿಸಿದರು.`ಮೇಯರ್ ಹುದ್ದೆ ಅತ್ಯಂತ ಜವಾಬ್ದಾರಿ ಹುದ್ದೆ. ನನ್ನ ಪತಿ ಆ ಹುದ್ದೆಗೆ ಏರಿದ್ದಾರೆ. ನಗರದ ಸಮಸ್ಯೆಗಳ ಅರಿವು ಅವರಿಗಿದ್ದು, ಅವುಗಳನ್ನು ಹೇಗೆ ಬಗೆಹರಿಸಬೇಕು ಎನ್ನುವ ವಿವೇಚನೆಯೂ ಅವರಿಗಿದೆ' ಎಂದು ಉಷಾ ಹೇಳಿದರು. `ನನ್ನ ಪತಿ ಮೇಯರ್ ಆಗುವ ಸಮಾಚಾರ ಮಂಗಳವಾರ ಸಂಜೆಯೇ ಸಿಕ್ಕಿತು. ತಕ್ಷಣ ಮನೆ ಮಂದಿಯನ್ನು ಕರೆದು, ನಾನು ಮೇಯರ್ ಆಗಿರುವವರೆಗೆ ಕುಟುಂಬದ ಯಾವ ಹೊಣೆಯನ್ನೂ ನನಗೆ ವಹಿಸಬಾರದು ಎಂಬ ತಾಕೀತು ಮಾಡಿದರು' ಎಂದು ತಿಳಿಸಿದರು. `ನಮ್ಮ ಯಜಮಾನರಿಗೆ ತಿಳಿ ಸಾರು-ಅನ್ನ, ಬೋಂಡಾ ಎಂದರೆ ಪಂಚಪ್ರಾಣ. ಆಗಾಗ ಕುರುಕುಲು ತಿಂಡಿಯೂ ಬೇಕು' ಎಂದರು.ಎಂಬಿಎ ಓದುತ್ತಿರುವ ಸುಜಯ್, `ನನ್ನ ಅಪ್ಪ ಭ್ರಷ್ಟಾಚಾರದಿಂದ ಮುಕ್ತವಾಗಿದ್ದಾರೆ. ಸುದೀರ್ಘ ಅನುಭವವೂ ಅವರ ಬೆನ್ನಿಗಿದೆ. ತಮ್ಮ ಪಕ್ಷವಲ್ಲದೆ ವಿರೋಧ ಪಕ್ಷದ ಸದಸ್ಯರ ಜತೆಗೂ ಒಳ್ಳೆಯ ಒಡನಾಟ ಹೊಂದಿದ್ದಾರೆ' ಎಂದು ಹೆಮ್ಮೆಯಿಂದ ಹೇಳಿದರು. `ನಾನು ಅರ್ಥಶಾಸ್ತ್ರದ ವಿದ್ಯಾರ್ಥಿ. ಬಿಬಿಎಂಪಿ ಆದಾಯ ಹೆಚ್ಚಿಸುವಲ್ಲಿ ನನಗೆ ಹೊಳೆದ ವಿಚಾರಗಳನ್ನು ಅಪ್ಪನಿಗೆ ತಿಳಿಸುತ್ತೇನೆ. ರಾಜಕೀಯದ ಕಡೆಗೆ ಸುಳಿಯದೆ ನನ್ನ ಅಧ್ಯಯನದತ್ತ ಗಮನ ಹರಿಸುತ್ತೇನೆ' ಎಂದು ತಿಳಿಸಿದರು. `ಹಸಿರನ್ನು ಹೆಚ್ಚಾಗಿ ಬೆಳೆಸಬೇಕು' ಎಂದರು.ಗೋಕಾಕ್ ಚಳವಳಿಯಲ್ಲಿ ಪಾಲ್ಗೊಳ್ಳಲು ಸತ್ಯನಾರಾಯಣ ಕಟ್ಟೆ ಬಳಗ ಕಟ್ಟಿದ್ದರು. ಆಗಿನಿಂದ `ಕಟ್ಟೆ ಸತ್ಯ' ಎಂದೇ ಅವರು ಜನಜನಿತರಾಗಿದ್ದಾರೆ. ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಮೈದಾನದ ರಕ್ಷಣೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ರಾಜಕೀಯ ಕುಟುಂಬ: ಉಪಮೇಯರ್ ಆಗಿರುವ ಎನ್. ಇಂದಿರಾ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಅವರ ಮುತ್ತಾತ, ತಾತ, ಅಮ್ಮ ಎಲ್ಲರೂ ಸಕ್ರಿಯ ರಾಜಕಾರಣದಲ್ಲಿ ಪಾಲ್ಗೊಂಡವರು. ಇಂದಿರಾ ಅವರ ಪತಿ ಮೋಹನ್‌ಕುಮಾರ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದಾರೆ.ಇಂದಿರಾ ಉಪಮೇಯರ್ ಆಗುವ ಕ್ಷಣವನ್ನು ವೀಕ್ಷಿಸಲು ಅವರ ಅಪ್ಪ ನಾರಾಯಣಪ್ಪ, ಅಮ್ಮ ಜಯಮ್ಮ, ಪತಿ ಮೋಹನ್‌ಕುಮಾರ್, ಪುತ್ರಿ ಹರ್ಷಿಕಾ ಎಲ್ಲರೂ ಬಂದಿದ್ದರು. `ನಮ್ಮ ಮಗಳು ಜನರ ಕೆಲಸ ಮಾಡಬೇಕು. ಆಕೆಯ ಕಾರ್ಯದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ಜಯಮ್ಮ ಹೇಳಿದರು. ದಶಕಗಳ ಹಿಂದೆ ಅವರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.`ಬೆಂಗಳೂರನ್ನು ಮತ್ತೆ ಉದ್ಯಾನ ನಗರವನ್ನಾಗಿ ಪರಿವರ್ತಿಸಬೇಕು' ಎಂದು ಹರ್ಷಿಕಾ ಅಮ್ಮನಿಗೆ ಸಲಹೆ ನೀಡಿದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry