ಕಸವಿಲ್ಲಿ ರಸವಾಗಿ...

7

ಕಸವಿಲ್ಲಿ ರಸವಾಗಿ...

Published:
Updated:
ಕಸವಿಲ್ಲಿ ರಸವಾಗಿ...

ಒಂದು ಕೋಟಿ ಮೀರಿದ ಜನಸಂಖ್ಯೆಯ ನಗರಿ ಬೆಂಗಳೂರು. ಸಾವಿರಾರು ಹೋಟೆಲ್‌ಗಳು, ವರ್ಷಕ್ಕೆರಡು ಹೊಸ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಆಸ್ಪತ್ರೆಗಳು ಕಾರ್ಯಾರಂಭ ಮಾಡುತ್ತಿರುವ ಬೆನ್ನಲ್ಲೇ ತ್ಯಾಜ್ಯದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ನಿರ್ವಹಣೆ ಈಗ ಬಿಬಿಎಂಪಿ ಸೇರಿದಂತೆ ಸರ್ಕಾರಕ್ಕೆ ಬಹುದೊಡ್ಡ ತಲೆನೋವು.

ತ್ಯಾಜ್ಯ ಉತ್ಪಾದನೆಯಾಗುವ ಹಂತದಲ್ಲೇ ಅದರ ನಿರ್ವಹಣೆ ಸಮರ್ಪಕವಾಗಿ ನಡೆದಲ್ಲಿ ಊರ ಹೊರಗೆ ಸುರಿಯಲಾಗುತ್ತಿರುವ ತ್ಯಾಜ್ಯಗಳ ಪ್ರಮಾಣ ಶೇ 85ರಿಂದ 90ರಷ್ಟು ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ `ತ್ಯಾಜ್ಯ ಮೇಳ' ನಡೆಯುತ್ತಿದೆ. ಬೆಂಗಳೂರಿನ ಹಾಗೂ ದೇಶದ ನಾನಾ ಭಾಗಗಳಿಂದ ಬಂದ ಹಲವಾರು ತ್ಯಾಜ್ಯ ನಿರ್ವಹಣಾ ಘಟಕ ತಯಾರಕರು ಹಾಗೂ ಕೆಲ ಸಂಘ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಿವೆ.

ನಿತ್ಯ ಐದು ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುವ ಬೆಂಗಳೂರಿನಲ್ಲಿ ಶೇ 2-5ರಷ್ಟು ಪ್ಲಾಸ್ಟಿಕ್ ತ್ಯಾಜ್ಯ. ಜತೆಗೆ ನಗರದಲ್ಲಿರುವ 1200 ಹೋಟೆಲ್‌ಗಳ ತ್ಯಾಜ್ಯವೇ 200-300 ಟನ್‌ಗಳಷ್ಟು. ಇವುಗಳು ಆಯಾ ಹಂತಗಳಲ್ಲೇ ಬಹುಪಾಲು ನಿರ್ವಹಣೆ ಮಾಡುವ ಬಹಳಷ್ಟು ಸುಧಾರಿತ ಸಾಧನಗಳು ಮೇಳದಲ್ಲಿವೆ.

ಇವುಗಳಲ್ಲಿ ಕೆಲವು ಹೋಟೆಲ್, ಮದುವೆ ಸಮಾರಂಭಗಳು ನಡೆಯುವ ಕಲ್ಯಾಣ ಮಂಟಪಗಳು, ಮಾಲ್‌ಗಳು, ಕಾಲೇಜು ಹಾಗೂ ಕಂಪೆನಿ ಕ್ಯಾಂಟೀನ್‌ಗಳಂಥ ಬೃಹತ್ ತ್ಯಾಜ್ಯ ಉತ್ಪಾದಿಸುವ ಘಟಕಗಳು ಬಳಸಲು ಯೋಗ್ಯ. ಇಬ್ಬರೇ ಇರುವ ಸಣ್ಣ ಕುಟುಂಬದವರೂ ತಮ್ಮ ಮನೆಯ ತ್ಯಾಜ್ಯ ನಿರ್ವಹಿಸಲು ಅನುಕೂಲವಾಗುವಂಥ ಹಾಗೂ ಅದರಿಂದ ಲಾಭ ಗಳಿಸಬಹುದಾದ ಪ್ರಾತಕ್ಷಿಕೆಗಳು ಕೂಡ ಮೇಳದಲ್ಲಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕ್ರಡೈ, ಕೆಎಸ್‌ಬಿಡಿಬಿ, ಎಫ್‌ಕೆಸಿಸಿಐ, ದಿ ಆಲ್ಟರ್ನೇಟಿವ್, ಸೃಷ್ಟಿ, ಬೆಂಗಳೂರು ಸಿಟಿ ಕನೆಕ್ಟ್ ಪ್ರತಿಷ್ಠಾನಗಳು ಸೇರಿ ಆಯೋಜಿಸಿರುವ ತ್ಯಾಜ್ಯ ಮೇಳ ಒಂದು ವಾರ ನಡೆಯಲಿದೆ.

ನಗರದ ತ್ಯಾಜ್ಯದಿಂದ ಇಂಧನ, ಅನಿಲ ಹಾಗೂ ಗೊಬ್ಬರ ಉತ್ಪಾದಿಸಬಹುದಾದ ಬೃಹತ್ ಹಾಗೂ ಸಣ್ಣ ಪ್ರಮಾಣದ ಬಗೆಬಗೆಯ ಯಂತ್ರೋಪಕರಣಗಳು ಇಲ್ಲಿವೆ. `1.3ಟನ್ ಟೆಟ್ರಾಪ್ಯಾಕ್‌ಗಳನ್ನು ನವೀಕರಿಸಿದಲ್ಲಿ 17 ಮರಗಳನ್ನು ಉಳಿಸಿದಂತೆ' ಎಂದು ಟೆಟ್ರಾಪ್ಯಾಕ್ ಕಂಪೆನಿಯು ತನ್ನ ಮಳಿಗೆಯ ಮುಂದೆ ಘೋಷವಾಕ್ಯದ ಫಲಕ ತೂಗುಹಾಕಿದೆ. ತಂಪು ಪಾನೀಯ, ಹಾಲು ಇತ್ಯಾದಿ ದಿನನಿತ್ಯ ಬಳಕೆಯ ಆಹಾರಗಳನ್ನು ಕೆಡದಂತೆ ಸಂಸ್ಕರಿಸಿ ಇಡುವ ಟೆಟ್ರಾಪ್ಯಾಕ್‌ಗಳ ನಿರ್ವಹಣೆ ಈ ಕಂಪೆನಿಯದ್ದು.

ಟೆಟ್ರಾಪ್ಯಾಕ್‌ನ ಬಹುಪಾಲು ಇರುವ ಕಾಗದ ಸಿಡಿ ಕವರ್, ಬರೆಯಲು ಪುಸ್ತಕ, ಇತ್ಯಾದಿಗೆ ಬಳಕೆಯಾದರೆ, ಅಲ್ಯುಮಿನಿಯಂ ಹಾಗೂ ಪಾಲಿಥಿನ್‌ನಿಂದ ತಯಾರಾದ ಮನೆಯ ಛಾವಣಿ, ಮೇಜು- ಕುರ್ಚಿ, ಉಯ್ಯಾಲೆಯಂಥ ಸಾಧನಗಳು ಗಮನ ಸೆಳೆದವು.

ಪುಣೆ ಹಾಗೂ ಗುಜರಾತ್‌ನಲ್ಲಿರುವ ಟೆಟ್ರಾಪ್ಯಾಕ್ ನಿರ್ವಹಣಾ ಘಟಕಗಳಿಗೆ ತ್ಯಾಜ್ಯ ಪೂರೈಸುವ ಸಂಘಟನೆಗಳು ಬೆಂಗಳೂರಿನಲ್ಲಿವೆ. ಇವುಗಳಿಗೆ ಯಾರು ಬೇಕಾದರೂ ತಮಗೆ ದೊರೆತ ಟೆಟ್ರಾಪ್ಯಾಕ್‌ಗಳನ್ನು ನೀಡಬಹುದು. ಒಂದು ಕೆ.ಜಿ. ಟೆಟ್ರಾ ಪ್ಯಾಕ್‌ಗೆ ಐದು ರೂಪಾಯಿ ನೀಡಲಾಗುತ್ತಿದೆ ಎಂದು ಟೆಟ್ರಾಪ್ಯಾಕ್ ಕಂಪೆನಿಯ ಪ್ರತಿನಿಧಿ ತಿಳಿಸಿದರು.

ಪ್ಲಾಸ್ಟಿಕ್‌ನಿಂದ ದುಡ್ಡು

ಸಾಲುಸಾಲಾಗಿ ಬರುತ್ತಿದ್ದ ಶಾಲಾ ಮಕ್ಕಳಿಗೆ ಕೆಎಸ್‌ಪಿಎ ಮಳಿಗೆಯಲ್ಲಿ `ಪ್ಲಾಸ್ಟಿಕ್‌ನಿಂದ ಏನು ಸಿಗುತ್ತದೆ?' ಎಂಬ ಪ್ರಶ್ನೆ ಮುಂದಿಡುತ್ತಿದ್ದಂತೆ, ಬಾಲಕನೊಬ್ಬ `ದುಡ್ಡು' ಎಂದು ಉತ್ತರಿಸಿ ಭೇಷ್ ಎನಿಸಿಕೊಂಡ. ಪ್ಲಾಸ್ಟಿಕ್ ತ್ಯಾಜ್ಯ ಅಲ್ಲವೇ ಅಲ್ಲ. ಪ್ಲಾಸ್ಟಿಕ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದಲ್ಲಿ ಸಂಪೂರ್ಣವಾಗಿ ಪುನರ್‌ಬಳಕೆ ಮಾಡಬಹುದು. ಎಜಿಎಲ್‌ಒ ಎಂಬ ಯಂತ್ರ ಅಭಿವೃದ್ಧಿಪಡಿಸಿರುವ ಕೆಎಸ್‌ಪಿಎ ಸಂಸ್ಥೆಯು ಈ ಸಾಧನದ ಮೂಲಕ 100ರಿಂದ 1000 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪುನರ್‌ಬಳಕೆಯ ಕಚ್ಚಾಸಾಮಾಗ್ರಿಯನ್ನಾಗಿ ಮಾಡಬಹುದಾಗಿದೆ.

ಪಿವಿಸಿ, ಪಾಲಿಎಥಿಲಿನ್, ಪಾಲಿಪ್ರೊಪಲಿನ್, ಹೈ ಮಾಲಿಕ್ಯುಲಾರ್, ಅಧಿಕ ಸಾಂದ್ರತೆಯ ಪಾಲಿ ಎಥಿಲಿನ್ ಸಂಗ್ರಹಿಸಿ ಕಚ್ಚಾ ಸಾಮಗ್ರಿ ಉತ್ಪಾದಿಸಬಹುದು. ಜತೆಗೆ ಈ ತ್ಯಾಜ್ಯ ಸಂಗ್ರಹಿಸಿ ನೀಡುವವರಿಗೆ 8-20 ರೂಪಾಯಿ ಹಣವನ್ನೂ ನೀಡಬಹುದು. ಹೀಗೆ ಆದಲ್ಲಿ ವಸತಿ ಸಮುಚ್ಚಯಗಳು, ಹೋಟೆಲ್, ಆಸ್ಪತ್ರೆ ಇತ್ಯಾದಿ ತಮ್ಮಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಾವೇ ನಿರ್ವಹಿಸಬಹುದಾಗಿದೆ.

40 ಮೈಕ್ರಾನ್‌ಗಿಂತ ಕಡಿಮೆ ಸಾಂದ್ರತೆ ಇರುವ ಪ್ಲಾಸ್ಟಿಕ್‌ಗಳ ಬಳಕೆಯನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ಮೇಲೆ ಕರ್ನಾಟಕದಲ್ಲಿ ಅದು ತಯಾರಾಗುತ್ತಿಲ್ಲ. ಆದರೂ ಬೆಂಗಳೂರಿನಲ್ಲಿ ಇವು ಮುಕ್ತವಾಗಿ ದೊರೆಯುತ್ತಿವೆ. ಇದಕ್ಕೆ ಮುಖ್ಯ ಕಾರಣ ಧಾಮನ್ ಹಾಗೂ ತಮಿಳುನಾಡಿನಿಂದ ಹೂವಿನ ಅಡಿಯಲ್ಲಿ ಸಾವಿರಾರು ಕಿಲೋ ಪ್ಲಾಸ್ಟಿಕ್ ಕವರ್‌ಗಳ ಹಾವಳಿ. ಹೀಗಾಗಿ ಕೇವಲ ಭೂಮಿ ಸೇರಿದ ಪ್ಲಾಸ್ಟಿಕ್ ಕೇವಲ ಮೂರು ತಿಂಗಳಲ್ಲಿ ಮಣ್ಣಾಗುವ ಆಕ್ಸೋ ಬಯೋ ಡಿಗ್ರೇಡಬಲ್ ಕವರ್‌ಗಳನ್ನು ಪ್ಲಾಸ್ಟೋಬ್ಯಾಗ್ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಮನೆಯೊಳಗೆ ಬಯೋಗ್ಯಾಸ್

ಬಯೋಜೆನ್ ಎಂಬ ಕಂಪೆನಿಯು ಮನೆಯಲ್ಲೇ ಕಿರು ಬಯೋಗ್ಯಾಸ್ ಉತ್ಪಾದನಾ ಘಟಕ ಪರಿಚಯಿಸಿದೆ. ಇಬ್ಬರು ಸದಸ್ಯರಿರುವ ಪುಟ್ಟ ಮನೆಯಿಂದ 12 ಸದಸ್ಯರಿರುವ ದೊಡ್ಡ ಕುಟುಂಬದವರೂ ತಮ್ಮ ಮನೆಯ ಅಡುಗೆ ತ್ಯಾಜ್ಯದಿಂದ ಅಡುಗೆ ಅನಿಲ ಉತ್ಪಾದಿಸಬಹುದಾದ ಒಂದು ಸಾಧನ ಇದು.

ಮನೆ ಮೇಲೆ ನೀರು ತುಂಬಿಸಿಡಲು ಇಡುವ ಪ್ಲಾಸ್ಟಿಕ್ ಟ್ಯಾಂಕ್ ಹೋಲುವ ಈ ಸಾಧನಕ್ಕೆ ಮನೆಯ ಅಡುಗೆ ಮನೆ ತ್ಯಾಜ್ಯವನ್ನು ಸುರಿದಲ್ಲಿ ಆರಂಭದಿಂದ ಹದಿನೈದು ದಿನಗಳ ನಂತರ ಅನಿಲ ಉತ್ಪಾದನೆ ಇದು ಆರಂಭಿಸುತ್ತದೆ. ಇದರ ಬೆಲೆ 18ರಿಂದ 48 ಸಾವಿರ.

ಗೊಬ್ಬರ ತಯಾರಿಸುವ ಡಸ್ಟ್‌ಬಿನ್

ಅಡುಗೆ ಮನೆಯಲ್ಲಿರುವ ಡಸ್ಟ್‌ಬಿನ್ ಮಾದರಿಯ ತ್ಯಾಜ್ಯ ಘಟಕ ಗ್ರೀನ್‌ಟೆಕ್‌ಲೈಫ್ ಕಂಪೆನಿಯ ಮಳಿಗೆಯಲ್ಲಿದೆ. 1500 ರೂಪಾಯಿಗೆ ಎರಡು ವಿಶಿಷ್ಟವಾದ ಕಸದ ಬುಟ್ಟಿ ಹಾಗೂ ಗೊಬ್ಬರ ತಯಾರಿಕೆಗೆ ಸಹಕರಿಸುವ ಕಾಂಪೋಸ್ಟ್‌ನೊಂದಿಗೆ ನೀಡಲಾಗುವ ಇದರಿಂದ ವಾರಕ್ಕೊಂದರಂತೆ ಬಳಸಿ ಜೈವಿಕ ಗೊಬ್ಬರ ಗೊಬ್ಬರ ತಯಾರಿಸಬಹುದು.

ಜತೆಗೆ `ಡೈಲಿ ಡಂಪ್' ಕಂಪೆನಿಯು ಟೆರ‌್ರಾಕೋಟಾದಿಂದ ತಯಾರಿಸಿದ ಕಂಬ, ಮೊಟಾ ಲೊಟಾ, ಲೀವ್ ಇಟ್ ಪಾಟ್ ಇತ್ಯಾದಿ ಮಾದರಿಯ ತ್ಯಾಜ್ಯ ಘಟಕಗಳನ್ನು ಪ್ರದರ್ಶಿಸಿದೆ. 800 ರೂಪಾಯಿಗೆ ಲಭ್ಯವಿರುವ ಇಂಥ ತ್ಯಾಜ್ಯ ಘಟಕಗಳು ಮನೆಯ ಅಂದ ಹೆಚ್ಚಿಸುವಂತಿವೆ.

ಕಲ್ಯಾಣ ಮಂಟಪ, ಹೋಟೆಲ್, ಮಾಲ್‌ಗಳು, ಕಾಲೇಜು ಕ್ಯಾಂಪಸ್‌ಗಳಂತೆ ದಿನಕ್ಕೆ 50 ಕೆ.ಜಿಗಿಂತ ಅಧಿಕ ತ್ಯಾಜ್ಯ ಉತ್ಪಾದಿಸುವ ಘಟಕಗಳು ತಾವೇ ತ್ಯಾಜ್ಯ ನಿರ್ವಹಣೆಗೆ ಮುಂದಾದಲ್ಲಿ 1-1.5ಲಕ್ಷ ರೂಪಾಯಿ ಖರ್ಚು ಮಾಡಿ ಬಯೋಗ್ಯಾಸ್ ಘಟಕವನ್ನು ಸ್ಥಾಪಿಸಲು ಅರ್ಜುನ್ ಎನರ್ಜಿ ಕಂಪೆನಿ ಸಹಕರಿಸಲಿದೆ. ಬಲೂನ್ ಮಾದರಿಯ ಈ ಘಟಕದಿಂದ ಕೇವಲ ಒಂದೂವರೆ ವರ್ಷದೊಳಗೆ ಹಾಕಿದ ದುಡ್ಡನ್ನು ಮರಳಿ ಪಡೆಯಬಹುದು ಎನ್ನುವುದು ಸಂಸ್ಥೆಯ ಅಂಬೋಣ.

ನೀರು ಬೇಡದ ಮೂತ್ರಾಲಯ

ಮನೆಯಲ್ಲಿ ಪೋಲಾಗುವ ನೀರಿನ ಪ್ರಮಾಣ ಕಡಿಮೆ ಮಾಡಲು ಹೊಸ ದಾರಿ. ಕೇವಲ 75 ರೂಪಾಯಿ ಬೆಲೆಗೆ ಶೇ 80ರಷ್ಟು ನೀರು ಪೋಲಾಗುವುದನ್ನು ತಡೆಯುವ ಜಾಲರಿಗಳು ತ್ಯಾಜ್ಯ ಮೇಳದಲ್ಲಿವೆ. ಆಕೃತಿ ಕಾನ್ಸೆಪ್ಟ್ ಸಂಸ್ಥೆಯು ಜರ್ಮನಿ ತಂತ್ರಜ್ಞಾನದ ಆಧಾರದ ಮೇಲೆ ಅಭಿವೃದ್ಧಿಪಡಿಸಿರುವ ಈ ಸಾಧನಗಳ ಜತೆಗೆ ನೀರೇ ಬೇಡದ ಮೂತ್ರಾಲಗಳೂ ಇವೆ.

ಹೈಡ್ರೋಫೋಬಿಕ್ ಎಂಬ ಪೇಟೆಂಟ್ ಪಡೆದ ತಂತ್ರಜ್ಞಾನ ಬಳಸಿರುವ ಈ ಮೂತ್ರಾಲಯಗಳಿಗೆ ಯಾವುದೇ ರೀತಿಯ ಕಾಟ್ರಿಡ್ಜ್, ರಾಸಾಯನಿಕ, ಜೆಲ್ ಇತ್ಯಾದಿಗಳು ಬಳಕೆಯಾಗಿಲ್ಲ. ಬ್ಯಾಕ್ಟೀರಿಯಾ ಮುಕ್ತ ತಂತ್ರಜ್ಞಾನ ಬಳಸಲಾಗಿದೆ. ಈಗಾಗಲೇ ಇಸ್ರೊದಲ್ಲಿ ಬಳಸಿರುವ ಈ ಮೂತ್ರಾಲಯ ವರ್ಷಕ್ಕೆ ಒಂದು ಲಕ್ಷ ಲೀಟರ್ ನೀರನ್ನು ಉಳಿಸಲಿದೆ.

ಕೇವಲ ಮನೆ ತ್ಯಾಜ್ಯಗಳು ಮಾತ್ರವಲ್ಲ, ಇ-ತ್ಯಾಜ್ಯ ನಿರ್ವಹಣೆಯ ಮಳಿಗೆಯೂ ಮೇಳದಲ್ಲಿದೆ. `ಇ-ಪರಿಸರ' ಎಂಬ ಸಂಸ್ಥೆಯು ಕಂಪ್ಯೂಟರ್ ಹಾಗೂ ಇತರ ಎಲೆಕ್ಟ್ರಾನಿಕ್ ಉಪಕರಣಗಳ ತ್ಯಾಜ್ಯಗಳನ್ನು ಸಂಗ್ರಹಿಸಿ ಅದರಿಂದ ಇತರ ಉಪಕರಣಗಳನ್ನು ತಯಾರಿಸುತ್ತಿದೆ. ಜತೆಗೆ ರ‌್ಯಾಮ್, ಪ್ರೊಸೆಸ್ಸರ್ ಹಾಗೂ ಪಿಸಿ ಬೋರ್ಡ್‌ನಲ್ಲಿರುವ ಚಿನ್ನವನ್ನು ಪಡೆದು ಅದರಿಂದ ದೇವಸ್ಥಾನದ ಗೋಪುರಗಳಿಗೆ ಕಲಶ ಇತ್ಯಾದಿಗಳನ್ನು ತಯಾರಿಸುತ್ತಿದೆ.

ಒಟ್ಟಿನಲ್ಲಿ ಸಾರ್ವಜನಿಕರು ಸರ್ಕಾರಿ ಅಧಿಕಾರಿಗಳು, ಹೋಟೆಲ್, ಮಾಲ್, ಕಾರ್ಖಾನೆ ಮಾಲೀಕರು ಇತ್ಯಾದಿ ಕ್ಷೇತ್ರದಲ್ಲಿರುವವರಿಗೆ ತ್ಯಾಜ್ಯ ಕುರಿತು ಹೆಚ್ಚಿನ ಜ್ಞಾನ ಮೂಡಿಸುವ ಹಾಗೂ ಕಸದಿಂದ ಲಾಭ ಗಳಿಸುವ ಹಲವು ಮಾರ್ಗೋಪಾಯಗಳು ಮೇಳದಲ್ಲಿವೆ. ತ್ಯಾಜ್ಯ ಮೇಳದಲ್ಲಿ ಒಂದೊಂದು ದಿನ ಒಂದೊಂದು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಂಗಳವಾರ ಹೋಟೆಲ್ ಮಾಲೀಕರಿಗೆ, ಬುಧವಾರ ಆಸ್ಪತ್ರೆಗಳಿಗೆ ಹಾಗೂ ಮಧ್ಯಾಹ್ನ ಪೌರ ಕಾರ್ಮಿಕರಿಗೆ, ಗುರುವಾರ ಕಾರ್ಪೋರೇಟ್ ಸಂಸ್ಥೆಗಳಿಗೆ, ಶುಕ್ರವಾರ ವಸತಿ ಸಮುಚ್ಛಯ ಮಾಲೀಕರಿಗೆ, ಶನಿವಾರ ಕಸ ವಿಲೇವಾರಿ ಗುತ್ತಿಗೆದಾರರಿಗೆ ಕಾರ್ಯಾಗಾರ.

ಶನಿವಾರ ಮತ್ತು ಭಾನುವಾರ ಸಾರ್ವಜನಿಕರಿಗೆ ಮೇಳ ಮುಕ್ತ. ನಗರದ 125 ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಐದು ಸಾವಿರ ಮಕ್ಕಳು ಮೇಳಕ್ಕೆ ಭೇಟಿ ನೀಡಲಿದ್ದಾರೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗದಿದ್ದಲ್ಲಿ ಮುಂದಿನ ಪೀಳಿಗೆ ಅನುಭವಿಸಬಹುದಾದ ಕಷ್ಟಗಳ ಕುರಿತು ದೃಶ್ಯಕಲೆಯೊಂದು ಇಲ್ಲಿದೆ. ಜತೆಗೆ ಬೀದಿ ನಾಟಕಗಳು, ಸ್ಥಳದಲ್ಲೇ ಚಿತ್ರ ಬರೆಯುವವರನ್ನೂ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಣಬಹುದು.

ನಿರ್ವಹಣೆಗೆ ದಾರಿದೀಪ

ಬಿಬಿಎಂಪಿ ಸಹಯೋಗದಲ್ಲಿ ಆಯೋಜಿಸಲಾಗಿರುವ ತ್ಯಾಜ್ಯ ಮೇಳದ ಮೂಲಕ ಕಸ ಉತ್ಪತ್ತಿಯಾಗುವಲ್ಲೇ ಕಸದ ನಿರ್ವಹಣೆ, ಹಸಿ ಹಾಗೂ ಒಣ ತ್ಯಾಜ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ನಗರದ ಹೊರಗೆ ಸುರಿಯುವ ಕಸದ ಪ್ರಮಾಣ ತಗ್ಗಿಸುವುದು, ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತಿಂಡಿ ತಿನಿಸು ಅಥವಾ ಇತ್ಯಾದಿ ವಸ್ತುಗಳನ್ನು ನೀಡುವ ಕಂಪೆನಿಗಳು ಅವುಗಳ ಬಳಕೆಯ ನಂತರ ಬಿಸಾಡುವ ಪ್ಲಾಸ್ಟಿಕ್ ಕವರ್‌ಗಳ ನಿರ್ವಹಣೆ ಕುರಿತು ಚಿಂತಿಸುವುದು ಮೊದಲಾದ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಭಂಡಾರವಿದೆ.

ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವ ಕೇಂದ್ರಗಳು ಪ್ರತ್ಯೇಕವಾಗಿ ತಾವೇ ಹೇಗೆ ತ್ಯಾಜ್ಯ ನಿರ್ವಹಿಸಬಹುದು ಎನ್ನುವುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನವೂ ಇದೆ.

ಬೆಂಗಳೂರಿನ ಎಲ್ಲಾ ಮನೆಗಳಿಂದ ದಿನಕ್ಕೆ ಸರಾಸರಿ 1600 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದನ್ನು ಬಿಬಿಎಂಪಿ ನಿರ್ವಹಿಸುತ್ತಿದೆ. ಆದರೆ 800ರಿಂದ ಒಂದು ಸಾವಿರ ಟನ್‌ನಷ್ಟು ತ್ಯಾಜ್ಯ ಹೋಟೆಲ್, ಆಸ್ಪತ್ರೆ, ವಸತಿ ಸಮುಚ್ಚಯದಿಂದ ಉತ್ಪತ್ತಿಯಾಗುತ್ತಿದೆ. ಇದನ್ನು ಆ ಕೇಂದ್ರಗಳೇ ನಿರ್ವಹಿಸಿದಲ್ಲಿ ಬೆಂಗಳೂರಿನ ಮುಕ್ಕಾಲು ಭಾಗ ಕಸದ ಸಮಸ್ಯೆ ನಿವಾರಣೆಯಾಗಲಿದೆ.

- ವಿ.ರವಿಚಂದರ್, ಬಿಎಟಿಎಫ್ ಮಾಜಿ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry