ಮಂಗಳವಾರ, ನವೆಂಬರ್ 19, 2019
29 °C

ಕಸವಿಲ್ಲಿ ರಸವಾಗಿ

Published:
Updated:

`ಹಸಿ ಕಸ ಹೊರಗೆ ಎಸೆದು ಇಪ್ಪತ್ತು ವರ್ಷಗಳಾಯ್ತು. ಇಪ್ಪತ್ತೆರಡು ವರ್ಷಗಳ ಹಿಂದೆ ಲಾಲ್‌ಬಾಗ್‌ನಲ್ಲಿ ಹಸಿ ಕಸದಿಂದ ಗೊಬ್ಬರ ಮಾಡುವ ತರಬೇತಿ ಪಡೆದುಕೊಂಡ ಮೇಲೆ, ನಾನೆಂದೂ ಕಸವನ್ನು ಹೊರಗೆಸೆದಿಲ್ಲ, ಪಾಲಿಕೆಯವರಿಗೂ ಕೊಟ್ಟಿಲ್ಲ...' ಸೌತೆಕಾಯಿ ಸಿಪ್ಪೆ ಬಿಡಿಸಿ, ಹಸಿ ಕಸದ ಬುಟ್ಟಿಗೆ ಸೇರಿಸುತ್ತಾ, ಕಸವಿಲೇವಾರಿಯ ಮಾತಿಗಿಳಿದರು ಅನುಸೂಯಾ ಶರ್ಮ.`ಹಾಗಾದರೆ, ಕಸ ಎಲ್ಲಿ ಹಾಕ್ತೀರಿ - ಥಟ್ಟನೆ ಪ್ರಶ್ನಿಸಿದೆ. ಅದಕ್ಕೆ ಅನುಸೂಯಾ ಅವರು, `ಬನ್ನಿ ನನ್ನ ಜೊತೆ' ಎನ್ನುತ್ತಾ ಮನೆಯ ತಾರಸಿ ಮೇಲೆ ಕರೆದೊಯ್ದರು. ಮೂಲೆಯಲ್ಲಿದ್ದ ನೀರಿನ ಟ್ಯಾಂಕ್ ಕೆಳಗಿನ ಜಾಗ ತೋರಿಸುತ್ತಾ, `ನೋಡಿ, ಇಲ್ಲಿ ಹಾಕ್ತೀವಿ' ಎಂದರು. ಅವರು ತೋರಿಸಿದ್ದು ಓವರ್ ಹೆಡ್ ಟ್ಯಾಂಕ್ ಕೆಳಗಿನ ಆವರಣ. ಅಲ್ಲಿ 50 ಕೆ.ಜಿ. ತೂಕದ ನಾಲ್ಕೈದು ಮೂಟೆಗಳಿದ್ದವು. ತೇವವಾಗಿದ್ದ ಮೂಟೆಗಳ ತುಂಬಾ ಕಸದ ರಾಶಿ. ಅದರಲ್ಲಿ ಬಾಯಿತೆರೆದುಕೊಂಡಿದ್ದ ಒಂದು ಚೀಲದಲ್ಲಿ ಕಡುಗಪ್ಪು ಸಾವಯವ ಗೊಬ್ಬರ ಕಾಣುತ್ತಿತ್ತು.

ಆ ಗೊಬ್ಬರವನ್ನು ಬೊಗಸೆಯಲ್ಲಿ ಹಿಡಿದುಕೊಂಡು, `ನೋಡಿ ಇದೇ ನಮ್ಮ ಮನೆಯ ಕಸ. ಒಂದೂವರೆ ತಿಂಗಳಿನಿಂದ ಸಂಗ್ರಹಿಸಿ ಗೊಬ್ಬರ ಮಾಡಿದ್ದೇವೆ' ಎಂದು ಕಳಿತ ಎರೆಗೊಬ್ಬರವನ್ನು ತೋರಿಸಿದರು ಅನುಸೂಯಾ. ಅವರ ಗೊಬ್ಬರ ವಿವರಣೆ ಪೂರ್ಣಗೊಳ್ಳುವುದರೊಳಗೆ ಗೊಬ್ಬರ ಮಾಡಿದ ಕಾರ್ಮಿಕರು (ಎರೆಹುಳುಗಳು) ಬೊಗಸೆಯ ಬೆರಳು ಸಂದುಗಳಿಂದ ಇಣುಕುತ್ತಾ, ಕೆಳಗಿಳಿಯುತ್ತಿದ್ದರು!ಮಹಡಿ ಮೇಲೆ ತೋಟ

ಸಂಜಯನಗರದ ಅನುಸೂಯಾ ಶರ್ಮ `ತಾರಸಿ ಕೃಷಿ ಪರಿಣತೆ'. ಇವರದ್ದು ಇಪ್ಪತ್ತೈದು ವರ್ಷಗಳ ಸಸ್ಯ ಸಾಂಗತ್ಯ. ಕೈತೋಟ ಮಾಡುವವರಿಗೆ ಶರ್ಮ ಅವರದ್ದು ಪರಿಚಿತ ಹೆಸರು. ತಾರಸಿಯಲ್ಲಿ ಸುಮಾರು 400 ಕುಂಡಗಳಿವೆ. ಸಿಮೆಂಟ್ ಚೀಲ, ಪ್ಲಾಸ್ಟಿಕ್ ಬಕೆಟ್‌ಗಳು, ಬಿಸಾಡಿದ ಥರ್ಮಾಕೋಲ್ ಡಬ್ಬ, ಹಾಲಿನ ಕವರ್... ಅಷ್ಟೇ ಅಲ್ಲ, ಯಾವ ತ್ಯಾಜ್ಯ ವಸ್ತುವಿಗೆ ನೀರು, ಮಣ್ಣು, ಗಿಡ ಹಿಡಿಯುವ ಸಾಮರ್ಥ್ಯವಿರುತ್ತದೋ ಅಂಥ ವಸ್ತುಗಳಲ್ಲೆಲ್ಲಾ ಗಿಡಗಳನ್ನು ಬೆಳೆಸಿದ್ದಾರೆ. ಗಿಡಗಳಿಗೆ ಗೊಬ್ಬರ-ನೀರು ನಿರ್ವಹಣೆಗೆ ದಾರಿ, ಬಳ್ಳಿಗೆ ಆಶ್ರಯ ನೀಡಲು ತಂತಿ.. ಹೀಗೆ ಮಹಡಿಯಲ್ಲಿ ಎಲ್ಲವೂ ಶಿಸ್ತುಬದ್ಧ. ಮಹಡಿಯ ತುಂಬಾ ಹೂವು, ಹಣ್ಣು, ಗೆಡ್ಡೆ, ಬಳ್ಳಿ, ಮರ, ಚಪ್ಪರ.. ಹೀಗೆ ಎಲ್ಲ ಬಗೆಯ ಸಸ್ಯಗಳೂ ಮೇಳೈಸಿವೆ.ಈ ಬೃಹತ್ ಸಸ್ಯ ಸಂಸಾರಕ್ಕೆ ನಿತ್ಯ ಆಹಾರ (ಗೊಬ್ಬರ, ನೀರು) ಪೂರೈಸುವುದಕ್ಕಾಗಿ ಅನುಸೂಯಾ ಸಾವಯವ ಗೊಬ್ಬರ ತಯಾರಿಸುತ್ತಾರೆ. 1990ರಲ್ಲಿ ಲಾಲ್‌ಬಾಗ್‌ನಲ್ಲಿ ಗೊಬ್ಬರ ತಯಾರಿಕೆ ತರಬೇತಿ ಪಡೆದಿದ್ದಾರೆ. ತರಬೇತಿಯಲ್ಲಿ ಮನೆ ತ್ಯಾಜ್ಯದಿಂದ ಗೊಬ್ಬರ ಮಾಡುವುದನ್ನು ಕಲಿತಿದ್ದರು. `ಅಂದಿನಿಂದ ಮನೆಯ ತ್ಯಾಜ್ಯವೇ ಗೊಬ್ಬರಕ್ಕೆ ಒಳಸುರಿಯಾಯ್ತು. ಮನೆಯ ಕಸಕ್ಕೆ ಮುಕ್ತಿ ದೊರಕಿತು'- ಗತಕಾಲದ ಪ್ರಯತ್ನವನ್ನು ನೆನೆಯುತ್ತಾರೆ ಶರ್ಮ.

ಕಸ ವಿಂಗಡಣೆ ವಿಧಾನಶರ್ಮ ಅವರ ಅಡುಗೆಮನೆಯಲ್ಲಿ ಎರಡು ಪ್ರತ್ಯೇಕ ಚೀಲಗಳಿವೆ. ಒಂದರಲ್ಲಿ ಹಸಿ ಕಸ; ಇನ್ನೊಂದರಲ್ಲಿ ಒಣಗಿದ್ದು. ಹಿತ್ತಲಲ್ಲಿಟ್ಟಿರುವ ಕಾರ್ಟನ್ ಬಾಕ್ಸ್‌ನಲ್ಲಿ ಗಾಜು, ಪ್ಲಾಸ್ಟಿಕ್ ಹಾಗೂ ಮರುಬಳಕೆಯಾಗುವ ವಸ್ತುಗಳನ್ನು ತುಂಬುತ್ತಾರೆ. ಅಡುಗೆ ತ್ಯಾಜ್ಯ, ಸಿಪ್ಪೆ, ತರಕಾರಿ ಉಳಿಕೆಯಂತಹ ಕಸ ಹಸಿ ಕಸದ ಬಕೆಟ್ ಸೇರುತ್ತದೆ. ಒಣಗಿದ ಸಿಪ್ಪೆ, ಕರಗುವ ಪೇಪರ್ ಚೀಲದಂತಹ ಒಣಗಿದ ವಸ್ತುಗಳು ಒಣ ಕಸದ ಬಕೆಟ್‌ಗೆ ಸೇರುತ್ತವೆ.  

`ಎರಡು ದಿನಕ್ಕೆ ಒಂದು ಕೆ.ಜಿ ಹಸಿ ಕಸ ಸಂಗ್ರಹವಾಗುತ್ತದೆ. ಒಣಗಿದ ಕಸ ಲೆಕ್ಕಕ್ಕಿಲ್ಲ. ಸಂಗ್ರಹವಾದ ಕಸ ತಾರಸಿಗೆ ರವಾನೆ. ಮುಂದಿನ ಕೆಲಸ ಗೊಬ್ಬರ ತಯಾರಿ'. ಅದು ಪತಿ ಶಿವರಾಮ ಶರ್ಮರಿಗೆ ಸೇರಿದ್ದು.ಗೊಬ್ಬರ ತಯಾರಿ

ನಿತ್ಯ ಸಂಗ್ರಹವಾದ ಕಸವನ್ನು ಶರ್ಮ ಪ್ಲಾಸ್ಟಿಕ್ ಚೀಲಕ್ಕೆ ತುಂಬುತ್ತಾರೆ. ಒಂದು ವಾರಕ್ಕೆ ಒಂದೊಂದು ಚೀಲ ಭರ್ತಿ. `ನಲ್ವತ್ತೈದು ದಿನಗಳ ನಂತರ ಕಡುಗಪ್ಪಿನ ಕಳಿತ ಗೊಬ್ಬರ ಬಳಕೆ ಸಿದ್ಧ'- ಶಿವರಾಮ ಶರ್ಮ ಸಂಭ್ರಮದಿಂದ ವಿವರಿಸುತ್ತಾರೆ. ಕೆಲವೊಮ್ಮೆ ಅಡುಗೆ ತ್ಯಾಜ್ಯದ ಹಸಿ ಕಸವನ್ನು ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ತುಂಬಿ, ಅದರೊಳಗೆ ಎರೆ ಹುಳುಗಳನ್ನು ಬಿಟ್ಟು, ಅಷ್ಟೇ ದಿನಗಳಲ್ಲಿ ಎರೆ ಗೊಬ್ಬರವನ್ನೂ ತಯಾರಿಸುತ್ತಾರೆ ಶರ್ಮ ದಂಪತಿ.

ಎರಡು ಮೂರು ತಿಂಗಳಿಗೆ ಅಂದಾಜು 25ರಿಂದ 30 ಕೆ.ಜಿ ಗೊಬ್ಬರ ತಯಾರಾಗುತ್ತದೆ. ಮಹಡಿಯಲ್ಲಿರುವ ಎಲ್ಲ ಗಿಡಗಳಿಗೂ ಸಕಾಲದಲ್ಲಿ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಕೊಡುತ್ತಾರೆ. ಎರೆಗೊಬ್ಬರ, ಕಾಂಪೋಸ್ಟ್ ಗೊಬ್ಬರ ಉಂಡ ಗಿಡಗಳು ಸಮೃದ್ಧವಾಗಿ ಬೆಳೆದಿವೆ.`ಹೊರಗಿನಿಂದೇನೊ ಗೊಬ್ಬರ ಖರೀದಿಸಬಹುದು. ಆದರೆ ದುಬಾರಿ. ರಸಗೊಬ್ಬರಗಳನ್ನು ಬಳಸೋಣ ಎಂದರೆ, ಅವು ಮಣ್ಣನ್ನೇ ಸಾಯಿಸುತ್ತವೆ. ಅಂಥ ಗೊಬ್ಬರ ಬಳಸಲು ಮನಸಾಗುವುದಿಲ್ಲ. ಮನೆಯ ಕಸ, ಗಿಡಗಳು ಉದುರಿಸುವ ತರಗೆಲೆ, ಜೊತೆಗೆ ಮಣ್ಣಲ್ಲಿ ಮಣ್ಣಾಗುವ ಗೃಹ ತ್ಯಾಜ್ಯ... ಇವು ಉತ್ಕೃಷ್ಟ ಗೊಬ್ಬರಕ್ಕೆ ಉತ್ತಮ ಒಳಸುರಿ. ಇದರಿಂದ ಮನೆ ಕಸವೂ ಖಾಲಿ. ಗೊಬ್ಬರವೂ ಲಭ್ಯ' - ಸ್ವಾವಲಂಬನೆ, ಪರಿಸರ ಕಾಳಜಿ ವ್ಯಕ್ತಪಡಿಸುತ್ತಾರೆ ಅವರು.ಕಸ ವಿಲೇವಾರಿ- ಗೊಬ್ಬರ ತಯಾರಿ ಎರಡೂ ಬಹಳ ಸುಲಭ' ಅಡುಗೆ ಮನೆಯಲ್ಲಿ ಎಚ್ಚರಿಕೆಯಿಂದ ಕಸ ವಿಂಗಡಿಸಿಕೊಂಡರೆ ಸಾಕು. ಶೇ 50ರಷ್ಟು ಕಸದ ಸಮಸ್ಯೆಗೆ ಅಡುಗೆ ಮನೆಯಲ್ಲೇ ಪರಿಹಾರ ಸಿಗುತ್ತದೆ. `ಮೊದಲು ಕರಗುವ ಕಸವನ್ನು ಬೇರೆ ಮಾಡಿ. ಕರಗದ ಗಾಜು, ಪ್ಲಾಸ್ಟಿಕ್, ಹಾಲಿನ ಕವರ್‌ನಂತಹ ತ್ಯಾಜ್ಯಗಳನ್ನು ಸಮೀಪದ ಗುಜರಿ ಅಂಗಡಿಗಳಿಗೆ ರವಾನಿಸಿ. ದಿನದಲ್ಲಿ ಒಂದು ಗಂಟೆ ಶ್ರಮವಹಿಸಿದರೆ, ಕಸ ವಿಲೇವಾರಿಗೆ ಮುಕ್ತಿ. ದಿನಕ್ಕೆ ಒಂದು ಗಂಟೆ ಸಸ್ಯಗಳ ಒಡನಾಟವಿದ್ದರೆ ಮನಸ್ಸಿಗೆ ಹಿತ, ಆರೋಗ್ಯ ವೃದ್ಧಿ, ಉತ್ತಮ ವ್ಯಾಯಾಮವಾಗುತ್ತದೆ' ಎನ್ನುವ ಶರ್ಮ ದಂಪತಿಯ ಮಾತುಗಳು ಅನೇಕರಿಗೆ ಕಿವಿಮಾತೂ ಹೌದು.

ಗೊಬ್ಬರ ತಯಾರಿ ವಿಧಾನ

ಖಾಲಿ ಸಿಮೆಂಟ್ ಚೀಲದ ತಳಭಾಗಕ್ಕೆ ತೆಂಗಿನ ನಾರನ್ನು ಹಾಸಿ. ಅದರ ಮೇಲೆ ಅರ್ಧ ಅಡಿಯಷ್ಟು ಒಂದು ಪದರ ಅಡುಗೆ ತ್ಯಾಜ್ಯ ಹರಡಿ. ಆ ಪದರದ ಮೇಲೆ ಒಣಗಿದ ತ್ಯಾಜ್ಯಗಳನ್ನು ಹಾಕಿ. ಮತ್ತೆ ಹಸಿ ತ್ಯಾಜ್ಯ ಸುರಿಯಿರಿ. ಲಭ್ಯವಿದ್ದರೆ ಒಣಗಿದ ಎಲೆ (ತರಗೆಲೆ), ಹಸಿರೆಲೆಗಳನ್ನು ಪ್ರತಿ ಪದರದಲ್ಲಿ ಬಳಸಬಹುದು.

ಈ ಪ್ರಕ್ರಿಯೆಯನ್ನು ಚೀಲ ತುಂಬುವವರೆಗೂ ಪುನರಾವರ್ತಿಸಿ. ನಂತರ ಚೀಲದ ಬಾಯಿಯನ್ನು ಬಿಗಿಯಾಗಿ ಕಟ್ಟಿ. ಚೀಲ ಬಿಸಿಯಾಗುತ್ತದೆ. 20ರಿಂದ 25 ದಿನಗಳ ನಂತರ ಒಮ್ಮೆ ಚೀಲದಲ್ಲಿರುವ ಕಸವನ್ನು ತಳಮೇಲು ಮಾಡಿ. ಕಸವೆಲ್ಲ ಕರಗಿ ಕಪ್ಪಾಗಿರುತ್ತದೆ. ಮತ್ತೆ ಚೀಲವನ್ನು ಯಥಾಸ್ಥಿತಿ ಕಟ್ಟಿಡಿ. 45 ದಿನಗಳ ನಂತರ ಕಡುಗಪ್ಪಿನ, ಉತ್ಕೃಷ್ಟ ಸಾವಯವ ಗೊಬ್ಬರ ಸಿದ್ಧ.

ಪ್ರತಿಕ್ರಿಯಿಸಿ (+)