ಭಾನುವಾರ, ಡಿಸೆಂಬರ್ 15, 2019
18 °C

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಚಂಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಚಂಪಾ

ಹುಬ್ಬಳ್ಳಿ: `ಏಪ್ರಿಲ್‌ನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ~ ಎಂದು ಹಿರಿಯ ಸಾಹಿತಿ ಮತ್ತು ಕಸಾಪ ಮಾಜಿ ಅಧ್ಯಕ್ಷ ಡಾ. ಚಂದ್ರಶೇಖರ ಪಾಟೀಲ ಪ್ರಕಟಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, `ಅಧಿಕೃತವಾಗಿ ಚುನಾವಣಾ ದಿನಾಂಕ ಪ್ರಕಟವಾದ ಮೇಲೆ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ~ ಎಂದು ತಿಳಿಸಿದರು. `ನಾಡು-ನುಡಿಗೆ ಸಂಬಂಧಿಸಿದಂತೆ ನನ್ನ ಖಚಿತ ನಿಲುವು ಹಾಗೂ ಕನ್ನಡದ ಚಳವಳಿಗಳಲ್ಲಿ ನಾನು ವಹಿಸಿದ ಪಾತ್ರದ ಆಧಾರದ ಮೇಲೆ ನಾನು ಚುನಾವಣೆ ಎದುರಿಸಲಿದ್ದೇನೆ~ ಎಂದು ಹೇಳಿದರು.`ರಾಜ್ಯದ ಹಿತಾಸಕ್ತಿ ಪ್ರತಿಪಾದನೆ ಮತ್ತು ರಕ್ಷಣೆಗಾಗಿ ಕಸಾಪವನ್ನು ಪ್ರಬಲ ಪ್ರಜಾಸತ್ತಾತ್ಮಕ ವೇದಿಕೆಯಾಗಿ ರೂಪಿಸುವುದು, ಸಮಕಾಲೀನ ಎಲ್ಲ ವಿಚಾರಧಾರೆಗಳ ಸಾಹಿತಿಗಳ ಕೂಡು ತಾಣವಾಗಿ ಪರಿಷತ್ತನ್ನು ಮಾರ್ಪಾಡು ಮಾಡುವುದು, ಕನ್ನಡದ ಎಲ್ಲ ಸಂಘಟನೆಗಳ ಪ್ರತಿನಿಧಿಗಳನ್ನು ಒಂದೆಡೆ ಕರೆತಂದು ಹೋರಾಟಕ್ಕೆ ವೈಚಾರಿಕ ಆಯಾಮ ನೀಡುವುದು ನನ್ನ ಮೊದಲ ಆದ್ಯತೆಗಳಾಗಿವೆ~ ಎಂದು ಅವರು ವಿವರಿಸಿದರು.`ಆಡಳಿತಾವಧಿಯ ಮೊದಲ ವರ್ಷದಲ್ಲಿ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಹೋರಾಟ ನಡೆಸಲು ಉದ್ದೇಶಿಸಿದ್ದೇನೆ. ಕಸಾಪ ಶತಮಾನೋತ್ಸವ 2014ರ ಮೇ 15ರಿಂದ ಆರಂಭವಾಗಲಿದ್ದು, ಜಗತ್ತಿನ ಎಲ್ಲೆಡೆ ಸಮ್ಮೇಳನ ನಡೆಸಲು ಪೂರ್ವ ತಯಾರಿಗೆ ಸಮಿತಿ ರಚಿಸುವ ಉದ್ದೇಶ ಹೊಂದಿದ್ದೇನೆ~ ಎಂದು ಹೇಳಿದರು.`ಕಸಾಪದ ನನ್ನ ಹಿಂದಿನ ಆಡಳಿತಾವಧಿಯಲ್ಲಿ ಆರಂಭಿಸಿದ್ದ ಪ್ರತಿ ಶನಿವಾರದ ಪುಸ್ತಕ ಸಂತೆಯನ್ನು ನಂತರ ಬಂದ ಅಧ್ಯಕ್ಷರು ಮುಂದುವರಿಸಿಕೊಂಡು ಹೋಗಲಿಲ್ಲ. ಸಾಹಿತಿಗಳು, ಪ್ರಕಾಶಕರು ಮತ್ತು ಓದುಗರನ್ನು ಒಂದೆಡೆ ತರುವ ಈ ಸಂತೆಯನ್ನು ಮತ್ತೆ ಆರಂಭಿಸಲಾಗುವುದು. ಸಾಧ್ಯವಾದ ಜಿಲ್ಲಾ ಕೇಂದ್ರಗಳಲ್ಲಿ ತಿಂಗಳಿಗೊಮ್ಮೆ ಪುಸ್ತಕ ಸಂತೆ ನಡೆಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಚಂಪಾ ಭರವಸೆ ನೀಡಿದರು.`ವಿಶ್ವವಿದ್ಯಾಲಯಗಳಲ್ಲಿ ಮಂಡನೆಯಾಗುವ ಕನ್ನಡಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆಯೂ ನಿಂತುಹೋಗಿದ್ದು, ಅದನ್ನೂ ಪುನರಾರಂಭ ಮಾಡಲಾಗುವುದು. ಕಸಾಪ ಸದಸ್ಯರ ಸಂಖ್ಯೆಯನ್ನು 1.75 ಲಕ್ಷದಿಂದ 3ಲಕ್ಷಕ್ಕೆ ಹೆಚ್ಚಿಸಲು ಪ್ರಯತ್ನಿಸಲಾಗುವುದು~ ಎಂದು ತಿಳಿಸಿದರು.`ಜಾತ್ಯತೀತ ನೆಲೆಗಟ್ಟಿನ ಮೇಲೆ ಸಾಹಿತ್ಯ ಪರಿಷತ್ತನ್ನು ಬೆಳೆಸುವುದು ನನ್ನ ಆದ್ಯತೆಯಾಗಿದೆ. ನವ್ಯ, ಬಂಡಾಯ ಮತ್ತು ದಲಿತ ಸಾಹಿತಿಗಳು ಕಸಾಪದಿಂದ ದೂರವೇ ಉಳಿದಿದ್ದು, ಅವರನ್ನು ಹತ್ತಿರಕ್ಕೆ ಕರೆತರಲಾಗುವುದು~ ಎಂದು ಅವರು ಹೇಳಿದರು. `ಯಾವ ಪಕ್ಷಗಳಿಗೂ ರಾಜ್ಯದ ಹಿತಾಸಕ್ತಿ ಕಡೆಗೆ ಗಮನ ಇಲ್ಲ. ಹೀಗಾಗಿ ಕನ್ನಡದ ಎಲ್ಲ ವಿಷಯಗಳಿಗೆ ಕಸಾಪ ನೇತೃತ್ವದಲ್ಲಿ ಜನಾಂದೋಲನ ರೂಪಿಸಲಾಗುವುದು~ ಎಂದು ಭರವಸೆ ನೀಡಿದರು.`ಮಹಿಷಿ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆ ಸಂವಾದ ನಡೆಸಲಾಗುವುದು. ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಹೋರಾಟ ಮಾಡಲಾಗುವುದು. ಪ್ರಶ್ನೋತ್ತರ ಮಾದರಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಮಹಿಷಿ ವರದಿ ಕುರಿತು ಮಾಹಿತಿ ನೀಡಿ, ಆಂದೋಲನವನ್ನು ಗಟ್ಟಿಗೊಳಿಸಲಾಗುವುದು~ ಎಂದರು. `ಅಕ್ರಮ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಮುಚ್ಚಲು ಸರ್ಕಾರಕ್ಕೆ ಅಗತ್ಯ ಸಹಕಾರವನ್ನು ಪರಿಷತ್ ವತಿಯಿಂದ ನೀಡಲಾಗುವುದು~ ಎಂದು ಚಂಪಾ ವಿವರಿಸಿದರು.`ಆಳುವ ಪಕ್ಷದ ರಾಜಕಾರಣಿಗಳು ವಿನಾಕಾರಣ ಪರೋಕ್ಷವಾಗಿ ತಮ್ಮ ಸಿದ್ಧಾಂತಗಳ ಪ್ರಚಾರಕ್ಕೆ ಕಸಾಪ ಸಮ್ಮೇಳನಗಳನ್ನು ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಅಧಿಕಾರದ ಬಲದಿಂದ ವೇದಿಕೆ ಏರಲು ಯಾರಿಗೂ ಅವಕಾಶ ನೀಡುವುದಿಲ್ಲ. ಸ್ವಾಮಿಗಳು ತಮ್ಮ ಆಶೀರ್ವಚನವನ್ನು ಮಠಗಳಲ್ಲಿ ನೀಡಬೇಕೇ ವಿನಃ ಸಮ್ಮೇಳನಗಳಲ್ಲಿ ಅಲ್ಲ. ಕಸಾಪ ಪಕ್ಷಾತೀತ ಮತ್ತು ಜಾತ್ಯತೀತ ಸಂಘಟನೆಯಾಗಿದೆ~ ಎಂದು ಅವರು ಗುಡುಗಿದರು.ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ಜಗದೀಶ ಮಂಗಳೂರುಮಠ, ಸುಭಾಷ ನರೇಂದ್ರ, ಮೋಹನ ಏಕಬೋಟೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)