ಕಸಾಪ ಕನ್ನಡಿಗರ ಹೋರಾಟದ ಕೇಂದ್ರವಾಗಲಿ: ಚಂಪಾ

7

ಕಸಾಪ ಕನ್ನಡಿಗರ ಹೋರಾಟದ ಕೇಂದ್ರವಾಗಲಿ: ಚಂಪಾ

Published:
Updated:
ಕಸಾಪ ಕನ್ನಡಿಗರ ಹೋರಾಟದ ಕೇಂದ್ರವಾಗಲಿ: ಚಂಪಾ

ಕೊಡಗಿನ ಗೌರಮ್ಮ ವೇದಿಕೆ (ಮಡಿಕೇರಿ): ‘ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅನುದಾನಕ್ಕಾಗಿ ಕಾಯುವ ಸಂಸ್ಥೆಯಾಗದೆ ಕನ್ನಡಿಗರ ಹೋರಾಟದ ಕೇಂದ್ರವಾಗಲಿ’ ಎಂದು ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಪ್ರತಿಪಾದಿಸಿದರು.ಸಾಹಿತ್ಯ ಸಮ್ಮೇಳನದ ಅಂಗವಾಗಿ ಬುಧವಾರ ‘ಸಾಮಾಜಿಕ ವಲಯದಲ್ಲಿ ಕನ್ನಡದ ಸ್ಥಾನಮಾನ’ ಕುರಿತ ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು.‘ಕೈ ಹಿಡಿದು ಕೇಳಬೇಕಾದ ಕನ್ನಡಿಗರು ಕೈ ಮುಗಿದು ಕೇಳಬೇಕಾದ ಪರಿಸ್ಥಿತಿ ನಾಚಿಕೆಗೇಡು. ಅನುದಾನ ನೀಡದಿದ್ದರೆ ಸಾಹಿತ್ಯ ಪರಿಷತ್ತನ್ನು ಮುಚ್ಚುತ್ತೇವೆ ಎನ್ನಲು ಅಧ್ಯಕ್ಷ ಪುಂಡಲೀಕ ಹಾಲಂಬಿ ಯಾರು? ಮುಚ್ಚಲು ಸರ್ಕಾರಕ್ಕೆ ಏನು ಹಕ್ಕಿದೆ? ‘ಕಸಾಪ ಸ್ವಾಯತ್ತ ಸಂಸ್ಥೆ. ಜನಪ್ರತಿ­ನಿಧಿಗಳು ಹಸ್ತಕ್ಷೇಪ ಮಾಡದೆ ಘನತೆಯಿಂದ, ಪ್ರೀತಿಯಿಂದ ಅನುದಾನ ನೀಡಲಿ. ಹಂಗಿಸಿ ಕೊಡಬಾರದು’ ಎಂದು ಸಲಹೆ ನೀಡಿದರು.‘ಕಸಾಪ ಖಾಸಗಿ ಹೋಟೆಲಲ್ಲ. ಸರ್ಕಾರದ ಅಂಗಸಂಸ್ಥೆಯಲ್ಲ. ಇದನ್ನು ಉಳಿಸಿ, ಬೆಳೆಸುವುದು ಕನ್ನಡಿಗರ ಕರ್ತವ್ಯ. ಆರು ಕೋಟಿ ಕನ್ನಡಿಗರ ಕಸಾಪಕ್ಕೆ ಧಕ್ಕೆ ಬಂದರೆ ಸಾತ್ವಿಕ ಸಿಟ್ಟನ್ನು ಹೊರಗೆಡವಬೇಕು. ಆದರೆ, ಸಾಹಿತ್ಯ ಸಮ್ಮೇಳನ­ದಲ್ಲಿ ರಾಜಕಾರಣಿಗಳು ಮೆರೆಯುವುದಲ್ಲ. ಅಲ್ಲದೆ, ಸಮ್ಮೇಳನದ ಅಧ್ಯಕ್ಷರ ಮಾತಿಗೆ ಕತ್ತರಿ ಹಾಕಬಾರದು. ಈ ಸಂಬಂಧ ಕಸಾಪ ಅಧ್ಯಕ್ಷರು ಕ್ಷಮೆ ಕೇಳಲಿ. ಕೇಳಿದರೆ ಸಣ್ಣವರಾಗುವುದಿಲ್ಲ’ ಎಂದು ಕಿವಿಮಾತು ಹೇಳಿದರು.‘ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರ ತನ್ನ ಪ್ರತಿನಿಧಿಯನ್ನು ಕಳಿಸಬೇಕು. ಎಲ್ಲ ಗೋಷ್ಠಿಗಳಲ್ಲಿ ಹಾಜರಿದ್ದು ಸರ್ಕಾರ ಗಮನಿಸುವ ಹಾಗೆ ವರದಿ ಸಲ್ಲಿಸಲಿ. ಇಲ್ಲದಿದ್ದರೆ ನಾವು ಡಿಂಡಿಮ ಬಾರಿಸುತ್ತಲೇ ಇರುತ್ತೇವೆ ಅಷ್ಟೆ. ಇದರೊಂದಿಗೆ ಪ್ರತಿ ಸಮ್ಮೇಳನದಲ್ಲಿ ಅನೇಕ ನಿರೀಕ್ಷೆಗಳಿ­ರುತ್ತವೆ. ನಿರ್ಣಯಗಳನ್ನು ಕೈಗೊಳ್ಳ­ಲಾಗು­ತ್ತದೆ. ಆದರೆ, ಮುಂದಿನ ಸಮ್ಮೇಳನದಲ್ಲಿ ಮತ್ತೆ ಅವೇ ಸಮಸ್ಯೆಗಳ ಕುರಿತು ಚರ್ಚಿಸುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಕರ್ನಾಟಕವಾದ ಮೇಲೆ ಕನ್ನಡದ ಮಾನ– ಕರ್ನಾಟಕದ ಮಾನ ಒಂದೆ. ಆದರೆ, ಬೇರೆ ರಾಜ್ಯಗಳಲ್ಲಿ ಈ ಪರಿಸ್ಥಿತಿಯಿಲ್ಲ. ಆದರೆ, ಕನ್ನಡಕ್ಕೆ ಧಕ್ಕೆ ಬಂದಾಗ ಚಳವಳಿ ನಡೆದಿವೆ. 1983ರಲ್ಲಿ ಕನ್ನಡ ಚಳವಳಿಯೊಂದಿಗೆ ರೈತ ಚಳವಳಿ ಸೇರಿಕೊಂಡು ಪರಿಣಾಮ ಗುಂಡೂರಾವ್‌ ಸರ್ಕಾರ ಬಿದ್ದು­ಹೋಯಿತು. ಇದು ಇಡೀ ಜಗತ್ತಲ್ಲಿ ಅಪರೂಪ’ ಎಂದು ಸ್ಮರಿಸಿದರು.‘ಶಿಕ್ಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ನೀತಿಯನ್ನು ಸುಪ್ರೀಂಕೋರ್ಟ್‌ ನೀಡಲಿದೆ. ಅದು ಕನ್ನಡದ ಪರವಾಗಿ ಬರದಿದ್ದರೆ ಏನು ಮಾಡಬಹುದು ಎನ್ನುವ ಜನಪ್ರತಿನಿಧಿಗಳ ಬಳಿ ಹೋಗಿ ಚರ್ಚಿಸೋಣ’ ಎಂದು ಹೇಳಿದರು.ಆಧುನೀಕರಣ: ‘ಕರ್ನಾಟಕದ ಗಡಿ ಸಂಬಂಧಿತ ಸವಾಲುಗಳು’ ಕುರಿತು ಮಾತನಾಡಿದ ಸಾಹಿತಿ ಮೋಹನ ನಾಗಮ್ಮನವರ, ಬೆಂಗಳೂರು ಹಾಗೂ ನಗರಗಳಿಗೆ ಸೀಮಿತಗೊಂಡಿರುವ ಮಾಹಿತಿ ತಂತ್ರಜ್ಞಾನದ ಲಾಭವನ್ನು ಗಡಿಭಾಗದ ಪಂಚಾಯತ್‌ರಾಜ್‌ ವ್ಯವಸ್ಥೆಗೂ ವರ್ಗಾಯಿಸಿ ಆಧುನೀಕರಣ­ಗೊಳಿಸ­ಬೇಕಿದೆ ಎಂದರು.ಹೆಚ್ಚಿದ ವಲಸೆ: ‘ರಾಜ್ಯದ ಎಲ್ಲ ಹಳ್ಳಿ, ತಾಲ್ಲೂಕು, ಜಿಲ್ಲಾಕೇಂದ್ರಗಳಿಂದ ಬೆಂಗಳೂರಿಗೆ ವಲಸೆ ಹೆಚ್ಚುತ್ತಿದೆ. ಜತೆಗೆ ಉದ್ಯೋಗದಲ್ಲಿ ಸಾಮಾಜಿಕ ನ್ಯಾಯ ಎನ್ನುವ ಹಿಂದಿನ ಕಾಳಜಿ ಮಾಯವಾಗುತ್ತಿದೆ. ಅಲ್ಲದೆ, ಉದ್ಯೋಗಾವಕಾಶದಲ್ಲಿ ಲಿಂಗ ತಾರತಮ್ಯ ಹೋಗಲಾಡಿಲ್ಲ’ ಎಂದು ಡಾ.ಹೇಮಲತಾ ಮಹಿಷಿ ಕಳವಳ ವ್ಯಕ್ತಪಡಿಸಿದರು.‘ಕನ್ನಡಿಗರು ಮತ್ತು ಉದ್ಯೋಗಾವ­ಕಾಶಗಳು’ ಕುರಿತು ಅವರು ಮಾತನಾಡಿದರು. ‘ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣದ ಪರಿಣಾಮ ಸರ್ಕಾರಗಳಿಗೆ ಖಾಸಗಿ ಸಂಸ್ಥೆಗಳ ಮೇಲೆ ಅಧಿಕಾರ ಇಲ್ಲದಂತಾಗಿದೆ. ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಕೇಳುವ ಧೈರ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಏಕೆಂದರೆ, ಬಂಡಾವಳ ಹೂಡಬನ್ನಿ ಎಂದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಕರೆದು ನಮ್ಮ ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಕೇಳುವ ಶಕ್ತಿ ಇಲ್ಲ. ಇದರ ಪರಿಣಾಮ ಸರ್ಕಾರ ಹಾಗೂ ಸಾರ್ವಜನಿಕ  ವಲಯದಲ್ಲಿ ಉದ್ಯೋಗಾ­ವಕಾಶಗಳು ಕಡಿಮೆಯಾಗಿವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಡಾ.ವಿ.ಪಿ. ನಿರಂಜನ ಆರಾಧ್ಯ, ಈ ನಾಡಿನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹತ್ತನೇ ತರಗತಿಯವರೆಗೆ ಕನ್ನಡವನ್ನು ಕಡ್ಡಾಯವಾಗಿ ಶಿಕ್ಷಣ ಮಾಧ್ಯಮವಾಗಿ ಮಾಡಬೇಕು ಎಂದು ಹೇಳಿದರು.‘ಮಕ್ಕಳು, ಪಾಲಕರೂ ಬಯಸುವ ಕನ್ನಡೇತರ ಭಾಷೆಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಸಲು ಅಗತ್ಯ ಕ್ರಮ ಕೈಗೊಳ್ಳುವುದರಿಂದ ಮಾತ್ರ ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಸಾಧ್ಯವಾಗುತ್ತದೆ. ಇದೊಂದು ರಾಜಕೀಯ ಇಚ್ಛಾಶಕ್ತಿಯ ನಿರ್ಧಾರ. ಇದಕ್ಕಾಗಿ ಈ ಸಮ್ಮೇಳನದ ಮೂಲಕ ಒಕ್ಕೊರಲಿನಿಂದ ಒತ್ತಾಯಿಸಬೇಕಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry