ಕಸಾಪ ಚಟುವಟಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಎ.ಕೆ.ರಾಮೇಶ್ವರ ಸಲಹೆ

ಮಂಗಳವಾರ, ಜೂಲೈ 16, 2019
28 °C

ಕಸಾಪ ಚಟುವಟಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಎ.ಕೆ.ರಾಮೇಶ್ವರ ಸಲಹೆ

Published:
Updated:

ಆಳಂದ: ನಮ್ಮ ರಾಜ್ಯದಲ್ಲಿ ಕನ್ನಡಿಗರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದುಗಿಸುವ ಮೂಲಕ ಸರ್ಕಾರವು ಕನ್ನಡದ ಬದುಕು ಕಟ್ಟುವಲ್ಲಿ ನೆರವಾಗಬೇಕು ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಭಿಪ್ರಾಯಪಟ್ಟರು.ಪಟ್ಟಣದ ಶರಣ ಏಕಾಂತರಾಮಯ್ಯ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತ ಘಟಕದ ಕಾರ್ಯಚಟುವಟಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಸರ್ಕಾರವು ಇಂಗ್ಲಿಷ್ ಭಾಷೆ ಕಲಿಸಲಿ; ಆದರೆ ಒಂದು ಮಾಧ್ಯಮವಾಗಿ ಕಲಿಸುವುದು ಸರಿಯಲ್ಲ. ಇದು ಭವಿಷ್ಯದ ಕನ್ನಡ ಸಾಂಸ್ಕೃತಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಕನ್ನಡ ಶಾಲೆಗಳ ಗುಣಾತ್ಮಕತೆ ಹೆಚ್ಚಾದಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ದೊರೆತ್ತಿರುವುದಕ್ಕೆ ಸಾರ್ಥಕ ಎಂದು ಎ.ಕೆ.ರಾಮೇಶ್ವರ ನುಡಿದರು.ಶಾಸಕ ಸುಭಾಷ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒಂದು ವರ್ಷದೊಳಗೆ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು ಮತ್ತು ತಾಲ್ಲೂಕಿನ ಸಮಗ್ರ ಪರಿಚಯ ಮಾಡಿಕೊಡುವ ತಾಲ್ಲೂಕು ದರ್ಶನದ ಪುಸ್ತಕ ಹೊರತರಲು ಪರಿಷತ್ತಿಗೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿ, ಕನ್ನಡವು ಅನ್ನದ ಭಾಷೆಯಾದರೆ, ಇಂಗ್ಲಿಷ್ ಕಿಸೆಯ ಭಾಷೆಯಾಗಿದೆ. ಅದಕ್ಕಾಗಿ ಇಂಗ್ಲಿಷ್ ವ್ಯಾಮೋಹದಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಹೊರಬರಬೇಕು ಎಂದು ಹೇಳಿದರು.ಖಜೂರಿಯ ಮುರುಘೇಂದ್ರ ಕೋರಣೇಶ್ವರ ಮಹಾಸ್ವಾಮಿ, ಹಿರಿಯ ಸಾಹಿತಿ ಆರ್.ಎಸ್.ಸ್ವಾಮಿ,  ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಮಾತನಾಡಿದರು.ಕಸಾಪ ತಾಲ್ಲೂಕು ಅಧ್ಯಕ್ಷ ಡಾ.ಅಪ್ಪಾಸಾಬ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಭಕರೆ, ಗುಲ್ಬರ್ಗಾ ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಎಸ್.ಮಾಲಿಪಾಟೀಲ್, ಶರಣಬಸಪ್ಪ ಜೋಗುರ, ಸಾಹೇಬಗೌಡ ಪಾಟೀಲ್, ಶ್ರೀಮಂತ ಗೊದೆ, ಅಪ್ಪಾಸಾಹೇಬ ತೀರ್ಥೆ, ಪಂಡಿತರಾವ ಬಳಬಟ್ಟಿ, ಶ್ರೀಶೈಲ್ ಕಂಬಾರ ಇತರರಿದ್ದರು.ಕಲಾವಿದರಾದ ಶಂಕರ ಹೂಗಾರ, ಬಸು ಆಳಂದ ಮತ್ತು ಅಮರ್ಜಾ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ನೆರವೇರಿತು.ಗಜಾನಂದ ಕುಂಬಾರ ನಿರೂಪಿಸಿದರು. ಮರೇಪ್ಪ ಬಡಿಗೇರ ಸ್ವಾಗತಿಸಿದರು. ಮಹಾದೇವ ಹತ್ತಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry