ಕಸಾಬ್‌ಗೆ ಗಲ್ಲುಶಿಕ್ಷೆ ಕಾಯಂ

7

ಕಸಾಬ್‌ಗೆ ಗಲ್ಲುಶಿಕ್ಷೆ ಕಾಯಂ

Published:
Updated:ಮುಂಬೈ (ಪಿಟಿಐ): ಪಾಕಿಸ್ತಾನಿ ಉಗ್ರ ಅಜ್ಮಲ್ ಅಮೀರ್ ಕಸಾಬ್‌ಗೆ ಕೆಳಹಂತದ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಕಾಯಂಗೊಳಿಸಿದೆ.ಮುಂಬೈ ಮೇಲೆ 2008ರ ನವೆಂಬರ್ 11ರಂದು ನಡೆದ ದಾಳಿ ಸರ್ಕಾರವನ್ನು ಅಸ್ಥಿರಗೊಳಿಸುವ ಪೂರ್ವಯೋಜಿತ ಪ್ರಯತ್ನ. ಇದರಲ್ಲಿ ಭಾಗಿಯಾಗಿರುವ ಕಸಾಬ್ ಅಮಾಯಕರ ಪ್ರಾಣಗಳಿಗೆ ಎರವಾಗುವ ಮೂಲಕ ಅತ್ಯಂತ ಕ್ರೂರ ಹಾಗೂ ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂದು ನ್ಯಾಯಮೂರ್ತಿ ರಂಜನಾ ದೇಸಾಯಿ ಹಾಗೂ ಆರ್.ವಿ.ಮೋರೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು ತನ್ನ ತೀರ್ಪಿನಲ್ಲಿ ತಿಳಿಸಿತು.ಸೋಮವಾರ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅಜ್ಮಲ್ ಕಸಾಬ್ ಪರದೆಯ ಮೇಲೆ ಕಾಣಿಸಿಕೊಂಡ ನಂತರ ಅವನಿಗೆ ಶಿಕ್ಷೆ ಕಾಯಂಗೊಳಿಸಿದ್ದನ್ನು ಪ್ರಕಟಿಸಿದರು.“ಈ ನ್ಯಾಯಾಲಯವು ನಿಮಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿಯುತ್ತದೆ. ನೀವೀಗ ಈ ತೀರ್ಪನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದು” ಎಂದು ನ್ಯಾಯಮೂರ್ತಿಗಳು ಕಸಾಬ್‌ಗೆ ತಿಳಿಸಿದರು.ಇದೇ ವೇಳೆ ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಫಾಹೀಂ ಮತ್ತು ಸಬಾವುದ್ದೀನ್‌ರನ್ನು ಬಿಡುಗಡೆ ಮಾಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪೀಠವು ವಜಾ ಮಾಡಿತು.‘ಇವರಿಬ್ಬರ ಮೇಲಿರುವ ಆಪಾದನೆಗಳನ್ನು ಸಮರ್ಥಿಸುವಂತಹ ಯಾವುದೇ ಅಂಶಗಳೂ ಕೋರ್ಟಿಗೆ ಕಂಡು ಬರುತ್ತಿಲ್ಲ. ಇವರು ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಸಾಕ್ಷ್ಯಗಳು ದೃಢಪಡಿಸುತ್ತಿಲ್ಲ.ಇವರ ಮೇಲಿನ ಆಪಾದನೆಗಳಿಗೆ ಸಂಬಂಧಿಸಿದ ಯಾವುದೋ ಒಂದು ವಿಶ್ವಾಸಾರ್ಹ ಅಂಶ ಇಲ್ಲೆಲ್ಲೊ ತನ್ನ ಕೊಂಡಿಯನ್ನು ಕಳಚಿಕೊಂಡಂತಿದೆ’ ಎಂದು ವ್ಯಾಖ್ಯಾನಿಸಿತು.ಸ್ವಪ್ರೇರಿತ ಕೃತ್ಯ: ‘ಕಸಾಬ್ ಬೇರೆ ಯಾರಿಂದಲೂ ಪ್ರೇರಿತನಾಗಿ ಈ ಕೃತ್ಯ ಎಸಗಿಲ್ಲ. ಅವನು ಸ್ವಂತ ತನ್ನ ಬುದ್ಧಿ ಉಪಯೋಗಿಸಿಕೊಂಡೇ ಎಲ್ಲಾ ಕುಕೃತ್ಯಗಳನ್ನು ನಡೆಸಿದ್ದಾನೆ. ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾಕ್ಕೆ ಸೇರಿ ದುಷ್ಕೃತ್ಯಗಳನ್ನು ಕಾರ್ಯಗತಗೊಳಿಸಿದ್ದಾನೆ’ ಎಂದು ಪೀಠವು ಹೇಳಿತು.ಕಸಾಬ್ ಪಾಕಿಸ್ತಾನದ ನೆಲದಲ್ಲಿ ಕುಳಿತು ಭಾರತದ ವಿರುದ್ಧ ಯುದ್ಧವನ್ನು ಸಾರಲು ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು ಅಸ್ಥಿರಗೊಳಿಸುವ ತಂತ್ರಗಳನ್ನು ಹೆಣೆದಿದ್ದಾನೆ ಎಂಬ ಆಪಾದನೆಗಳನ್ನು ಈ ಸಂದರ್ಭದಲ್ಲಿ ಪೀಠವು ಪ್ರಮುಖವಾಗಿ ಉಲ್ಲೇಖಿಸಿತು. ಆತ್ಮಹತ್ಯಾ ದಳಕ್ಕೆ ಸೇರಿದ ಪಾಕ್ ನೆಲದ ಉಗ್ರರು ಭಾರತದ ಸೈನಿಕರು ಮತ್ತು ಪೊಲೀಸರಿಗೆ ಸವಾಲೊಡ್ಡಿದ್ದಾರೆ. ದೇಶದ ಜಾತ್ಯತೀತ ಕಲ್ಪನೆಗೆ ಭಂಗ ಉಂಟು ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಮತ್ತು ವಿಜಯ್ ಸಲಾಸ್ಕರ್ ಅವರನ್ನು ಕೊಂದು ಹಾಕಿದ್ದಾರೆ.  ಈಗಾಗಲೇ ಕಸಾಬ್ ಈ ಮುನ್ನ ನೀಡಿರುವ ತನ್ನ ಹೇಳಿಕೆಯಲ್ಲಿ ‘ಆತ್ಮಹತ್ಯಾ ದಳಕ್ಕೆ ಇನ್ನಷ್ಟು ಉಗ್ರರು ಸೇರಬೇಕೆಂಬ’ ಅಂಶವನ್ನು ಗಮನಿಸಿದಾಗ ಈ ಉಗ್ರರ ಉದ್ದೇಶಗಳು ಎಂತಹವರಿಗೂ ಸ್ಪಷ್ಟವಾಗುತ್ತವೆ. ಇಂತಹ ಹೀನ ಕೃತ್ಯ ಎಸಗಿದವರನ್ನು ಕೋರ್ಟ್ ಸುಮ್ಮನೇ ಬಿಡುವುದು ತರವಲ್ಲ. ಇಲ್ಲದೇ ಹೋದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಪ್ರಕರಣಗಳಲ್ಲಿ ಕೋರ್ಟ್ ಮೃದು ಧೋರಣೆ ಪ್ರದರ್ಶಿಸಿದರೆ ಸಾರ್ವಜನಿಕರು ನ್ಯಾಯಾಂಗ ಸಾಮರ್ಥ್ಯದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಪೀಠವು ತಿಳಿಸಿತು.ಮರಣದಂಡನೆ ಶಿಕ್ಷೆಯನ್ನು ಕಾಯಂಗೊಳಿಸಿದ ಹೈಕೋರ್ಟ್‌ನ ತೀರ್ಪು ಒಟ್ಟು 1208 ಪುಟಗಳಷ್ಟು ಸುದೀರ್ಘವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry