ಕಸಾಬ್ ಮರಣದಂಡನೆ ಮೇಲ್ಮನವಿ ವಿಚಾರಣೆ ಅಂತ್ಯ: ಫೆ. 7ಕ್ಕೆ ತೀರ್ಪು

7

ಕಸಾಬ್ ಮರಣದಂಡನೆ ಮೇಲ್ಮನವಿ ವಿಚಾರಣೆ ಅಂತ್ಯ: ಫೆ. 7ಕ್ಕೆ ತೀರ್ಪು

Published:
Updated:

ಮುಂಬೈ  (ಪಿಟಿಐ): ಮುಂಬೈ ದಾಳಿ ಪ್ರಕರಣದಲ್ಲಿನ ತನ್ನ ಪಾತ್ರಕ್ಕಾಗಿ ವಿಧಿಸಿರುವ ಮರಣ ದಂಡನೆ ಶಿಕ್ಷೆ ವಿರುದ್ಧ ಪಾಕಿಸ್ತಾನಿ ಉಗ್ರ ಅಜ್ಮಲ್ ಕಸಾಬ್ ಸಲ್ಲಿಸಿದ ಮೇಲ್ಮನವಿ ಬಗ್ಗೆ ಸೋಮವಾರ ಬಾಂಬೆ ಹೈಕೋರ್ಟ್ ತನ್ನ ಆದೇಶವನ್ನು ಫೆಬ್ರುವರಿ 7ರವರೆಗೆ ಕಾಯ್ದಿರಿಸಿತು.

ಈ ಕುರಿತು ಕೋರ್ಟ್ ಮೂರು ತಿಂಗಳವರೆಗೆ ವಾದಗಳನ್ನು ಆಲಿಸಿತ್ತು. ಶಂಕಿತ ಎಲ್‌ಇಟಿ ಉಗ್ರರಾದ ಫಹೀಮ್ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ಖುಲಾಸೆ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತ ಆದೇಶವನ್ನು ಕೂಡ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ನ್ಯಾಯಮೂರ್ತಿ ಆರ್.ವಿ. ಮೋರೆ ಕಾಯ್ದಿರಿಸಿದರು.

ಅನ್ಸಾರಿ ಮತ್ತು ಅಹ್ಮದ್ ಅವರು ಉಗ್ರರು ಗುರಿ ಸಾಧಿಸಲು ನಿಗದಿತ ಸ್ಥಳಗಳ ನಕ್ಷೆಗಳನ್ನು ಒದಗಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ವಾದಗಳು ಸೋಮವಾರ ಮುಕ್ತಾಯಗೊಂಡಿದ್ದು ಆ ಬಳಿಕ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿದರು. ಅಕ್ಟೋಬರ್ 18ರಿಂದ ವಿಚಾರಣೆ ನಡೆದ ಹೈಕೋರ್ಟ್ ಕಟ್ಟಡದ ಎರಡನೇ ಮಹಡಿಯ ನಂ. 49ರ ಕೋರ್ಟ್ ಕೊಠಡಿ  ಬಿಗಿ ಭದ್ರತೆಯೊಂದಿಗೆ ಅಕ್ಷರಶಃ ಕೋಟೆ ಆಗಿತ್ತು.

ಪ್ರತಿ ದಿನ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸುತ್ತಿತ್ತು. ಪತ್ರಕರ್ತರು ಮತ್ತು ವಕೀಲರಿಗೆ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗಿತ್ತು. ಮೊದಲ ಬಾರಿಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್‌ನ ಸಂಪರ್ಕ ಕಲ್ಪಿಸಲಾಗಿತ್ತು. ಕಸಾಬ್ ಜೈಲಿನಿಂದಲೇ ವಿಚಾರಣೆಯನ್ನು  ಕೇಳಿಸಿಕೊಳ್ಳಲು ಕೋರ್ಟ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಆರಂಭದಲ್ಲಿ ಕಸಾಬ್ ಕೆಲವು ದಿನ ವಿಡಿಯೊ ಪರದೆ ಮೇಲೆ ಕಾಣಿಸಿಕೊಂಡಿದ್ದನು. ಎರಡನೇ ದಿನ ಆತ ಕೋಪ ಪ್ರದರ್ಶಿಸಿ ವೆಬ್ ಕ್ಯಾಮೆರಾಗೆ ಉಗುಳಿದ್ದನಲ್ಲದೆ ಜೈಲಿನ ಕಾವಲು ಸಿಬ್ಬಂದಿಯೊಂದಿಗೆ  ವಾಗ್ವಾದ ನಡೆಸಿದ್ದನು. ತನ್ನನ್ನು ಅಮೆರಿಕಕ್ಕೆ ಕಳುಹಿಸಬೇಕು ಎಂದೂ ಆತ ಕೋರ್ಟ್‌ಗೆ ಹೇಳಿದ್ದು ಕೋರ್ಟ್ ಇದನ್ನು ತಿರಸ್ಕರಿಸಿ ಸರಿಯಾಗಿ ನಡೆದುಕೊಳ್ಳುವಂತೆ ಎಚ್ಚರಿಕೆ ನೀಡಿತ್ತು.

ಉಗ್ರರ ದಾಳಿಯಲ್ಲಿ 166 ಮಂದಿ ಬಲಿಯಾಗಿದ್ದು ಇಂತಹ ಹೀನ ಅಪರಾಧದಲ್ಲಿ ಭಾಗಿಯಾದ ಆತನಿಗೆ ಮರಣದಂಡನೆ ಶಿಕ್ಷೆ ಆಗಲೇ ಬೇಕು ಎಂದು ಸರ್ಕಾರದ ಪರ ವಕೀಲ ಉಜ್ವಲ್ ನಿಕ್ಕಂ ಶಿಕ್ಷೆಯನ್ನು ಸಮರ್ಥಿಸಿಕೊಂಡಿದ್ದರು.

ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಸ್‌ನ ಒಳಗೆ ಮತ್ತು ಹೊರಗೆ ಕಸಾಬ್ ಮತ್ತು ಅಬು ಇಸ್ಮಾಯಿಲ್ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದನ್ನು ತೋರಿಸುವ ಛಾಯಾಚಿತ್ರಗಳನ್ನು ನಿಕ್ಕಂ ವಿಚಾರಣೆ ವೇಳೆ ಪ್ರದರ್ಶಿಸಿದ್ದರು. ಮಾಧ್ಯಮದ ಛಾಯಾಗ್ರಾಹಕರು ಈ ಚಿತ್ರಗಳನ್ನು ಸೆರೆಹಿಡಿದಿದ್ದರು. ಟರ್ಮಿನಸ್‌ನಲ್ಲಿ ಆರೋಪಿಗಳು ರೈಫಲ್ ಹಿಡಿದು ಓಡಾಡಿದ್ದು ಕೂಡ ದಾಖಲಾಗಿದ್ದು ಈ ಕುರಿತ ಸಿಸಿಟಿವಿಯ ದೃಶ್ಯಗಳನ್ನು ಕೋರ್ಟ್‌ನಲ್ಲಿ ಪ್ರದರ್ಶಿಸಲಾಗಿತ್ತು.

ಎಲ್‌ಇಟಿ ಪರವಾಗಿ ಪಾಕಿಸ್ತಾನದಿಂದ  ಕಸಾಬ್ ಮತ್ತು ಇತರರು ದಾಳಿ ನಡೆಸಲೆಂದೇ ಮುಂಬೈಗೆ ಆಗಮಿಸಿದ್ದರು. ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಮತ್ತು ಕಾಶ್ಮೀರ ವಿಮೋಚನೆ ಬೇಡಿಕೆಗಾಗಿ ಆದಷ್ಟು ಜನರನ್ನು ಒತ್ತೆಯಾಳಾಗಿಸಿಕೊಳ್ಳಲು ಅವರಿಗೆ ಸೂಚಿಸಲಾಗಿತ್ತು ಎಂದು ಸರ್ಕಾರ ಪರ ವಕೀಲರು ವಾದಿಸಿ ಉಗ್ರರು ಪಾಕಿಸ್ತಾನದವರ ಜತೆ ನಡೆಸಿದ ದೂರವಾಣಿ ಮಾತುಕತೆಗಳಿಂದ ಇದು ಸ್ಪಷ್ಟವಾಗಿದೆ ಎಂದೂ ಹೇಳಿದ್ದರು.

ಗಿರ್ಗಾಮ್ ಚೌಪಟಿಯಲ್ಲಿ ಕಾರ್ಯಾಚರಣೆ ನಡೆಸಿದ ನಂತರ ಪೊಲೀಸರು ಕಸಾಬ್‌ನನ್ನು ಬಂಧಿಸಿದರು ಎಂದು ನಿಕ್ಕಂ ಹೇಳಿದ್ದರೆ, ತನ್ನನ್ನು ದೋಷಿಯಾಗಿ ಮಾಡಲು ಪೊಲೀಸರು ಸುಳ್ಳು ಕಾರ್ಯಾಚರಣೆ ನಡೆಸಿದರು ಎಂದು ಕಸಾಬ್ ಆರೋಪಿಸಿದ್ದನು.

ಕಳೆದ ಮೇ 6ರಂದು ವಿಚಾರಣಾ ಕೋರ್ಟ್ ಕಸಾಬ್‌ಗೆ ಮರಣದಂಡನೆ ವಿಧಿಸಿತ್ತು. ಆದರೆ ಫಾಹೀಂ ಮತ್ತು ಸಬಾವುದ್ದೀನ್ ಅವರನ್ನು ಸೂಕ್ತ ಪುರಾವೆಗಳಿಲ್ಲದ ಕಾರಣ ಬಿಡುಗಡೆ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry