ಶನಿವಾರ, ಆಗಸ್ಟ್ 24, 2019
28 °C

ಕಸಿ ಪ್ರವೀಣ ಅಜ್ಜ

Published:
Updated:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಹಳೆನೇರಂಕಿ ಗ್ರಾಮದ ಕಲ್ಲೇರಿಗೆ ಕೆಲಸದ ನಿಮಿತ್ತ ಹೋದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಮನೆಯೊಂದರ ಮುಂಭಾಗದಲ್ಲಿ ಸರಿಸುಮಾರು 90 ವರ್ಷದ ವೃದ್ಧರೊಬ್ಬರು ಪಾಲಿಥಿನ್ ಚೀಲಗಳಲ್ಲಿ ಹಾಕಿದ ಸುಮಾರು 10- 20 ಗುಲಾಬಿ ಗಿಡದ ಸೇವೆ ಮಾಡುತ್ತ ಯುವಕರ ರೀತಿ ಓಡಾಡುತ್ತಿರುವುದು ಕಂಡಿತು.ಈ ಇಳಿ ವಯಸ್ಸಿನಲ್ಲಿ ಅವರೇನು ಮಾಡುತ್ತಿದ್ದಾರೆ ಎಂದು ಬಳಿ ಹೋಗಿ ವಿಚಾರಿಸಿದೆ. `ನಾನು ಕಸಿಕಟ್ಟಿದ ಈ ಹೂವಿನ ಗಿಡಗಳು ಚಿಗುರುತ್ತಿದೆಯೋ ಎಂದು ನೋಡುತ್ತಿದ್ದೇನೆ. ಅವುಗಳ ಆರೈಕೆ ಮಾಡುತ್ತಿದ್ದೇನೆ' ಎಂದಾಗ ಅವರ ಉತ್ಸಾಹ ಕಂಡು ಬೆರಗಾದೆ. `ಕಸಿಕಟ್ಟುವುದು ಒಂದು ಕಲೆ. ಬಾಲ್ಯದಲ್ಲಿ ಗಿಡಗಳಿಗೆ ಕಸಿ ಕಟ್ಟುವುದನ್ನು ಕಲಿತ ನಾನು ಈ ವಿದ್ಯೆಯನ್ನು ಹೂವು, ಹಣ್ಣು, ತರಕಾರಿ ಇತ್ಯಾದಿ ಗಿಡಗಳಿಗೆ ಬಹಳ ಆಸಕ್ತಿಯಿಂದ ಪ್ರಯೋಗ ಮಾಡಿ ಯಶಸ್ಸು ಪಡೆದೆ. ಹವ್ಯಾಸವಾದ ಈ ವಿದ್ಯೆ ನಂತರ ನನ್ನ ಬದುಕನ್ನೇ ಬೆಳಗಿಸಿತು. ನಾನು ಕಲಿತ ಈ ಕಲೆಯನ್ನು ನನ್ನ ಮಕ್ಕಳಿಗೆ ಮತ್ತು ಆಸಕ್ತಿಯುಳ್ಳ ಹಲವಾರು ಜನರಿಗೆ ತಿಳಿಸಿ ಕೊಟ್ಟಿದ್ದೇನೆ. ಇವುಗಳ ಜೊತೆ ಇರುವಾಗ ನನ್ನ ವಯೋಮಾನವನ್ನೇ ಮರೆಯುತ್ತೇನೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನಾರಾಯಣ ಕೆದಿಲಾಯ.1964ರಲ್ಲಿ ಕಸಿಕಟ್ಟಲು ಪ್ರಾರಂಭ ಮಾಡಿದ ಇವರು ಹಲವಾರು ತಳಿಯ ಮಾವು, ಹಲಸು, ಗೇರು ,ಪನ್ನೇರಳೆ, ಸೀಬೆಹಣ್ಣಿನ ಗಿಡಗಳು, ಹೂವು, ತರಕಾರಿ, ಕಾಳುಮೆಣಸು ಲಿಂಬೆ ಇತ್ಯಾದಿ ಲೆಕ್ಕವಿಲ್ಲದಷ್ಟು ಗಿಡಗಳನ್ನು ಕಸಿಮಾಡಿ ಮಾರಾಟ ಮಾಡಿದ್ದಾರೆ. ಕಸಿಗಿಡಗಳನ್ನು ತಯಾರು ಮಾಡುವುದರ ಜೊತೆಗೆ ಇವರು ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಕುದನೆ ಗಿಡಕ್ಕೆ ಉಡುಪಿಗುಳ್ಳ ಬದನೆಯ ಗಿಡವನ್ನು ಕಸಿಕಟ್ಟಿದ ಇವರ ಪ್ರಯೋಗ ಬಹಳ ಯಶಸ್ವಿಯಾಗಿದ್ದು ಈ ಗಿಡವು ಸುಮಾರು ಹದಿನಾರು ವರ್ಷ ಬಾಳುವುದಲ್ಲದೆ ವರ್ಷ ಪೂರ್ತಿ ಇಳುವರಿ ಕೊಡುತ್ತದೆ. ಹಾಗೆ ಲಿಂಬೆಗಿಡಕ್ಕೆ ಕಸಿಕಟ್ಟಿ ಕಿತ್ತಳೆ ಮತ್ತು ಮೂಸಂಬಿ ಇತ್ಯಾದಿ ಹಣ್ಣಿನ ಗಿಡವನ್ನೂ ತಯಾರಿಸಿದ್ದಾರೆ.ಹಲವು ಪ್ರಶಸ್ತಿ

ಇವರ ಸಾಧನೆಗೆ ಹಲವಾರು ಪ್ರಶಸ್ತಿ ಸಂದಿವೆ. 1974ರಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ 1976ರಲ್ಲಿ ರಾಜ್ಯಮಟ್ಟದಲ್ಲಿ ಕರ್ನಾಟಕ ಕೃಷಿ ಇಲಾಖೆ ಸೇರಿದಂತೆ ಹಲವು ಕಡೆಗಳಿಂದ ಇವರಿಗೆ ಪ್ರಶಸ್ತಿ ದೊರೆತಿವೆ. ಧರ್ಮಸ್ಥಳ ಕೃಷಿ ಪ್ರತಿಷ್ಠಾನ, ಉಡುಪಿ, ಮಂಗಳೂರು, ಬ್ರಹ್ಮಾವರ, ಕುಂದಾಪುರ ಹೀಗೆ ಹಲವಾರು ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಇವರು ಉಪನ್ಯಾಸ ಹಾಗೂ ತರಬೇತಿಯನ್ನೂ ನೀಡಿದ್ದಾರೆ. 90ರ ಇಳಿ ವಯಸ್ಸಿನಲ್ಲಿನ ಇವರ ಉತ್ಸಾಹ ಯುವಕರಿಗೂ ಮಾದರಿ.

 

Post Comments (+)