ಸೋಮವಾರ, ಅಕ್ಟೋಬರ್ 21, 2019
24 °C

ಕಸುಬುದಾರಿಕೆಯ ಆಟ

Published:
Updated:

ಚಿತ್ರ: ಪ್ಲೇಯರ್ಸ್

ಚಿನ್ನದ ಗಟ್ಟಿಗಳನ್ನು ದರೋಡೆ ಮಾಡುವ ಕಥೆಯ ಹಾಲಿವುಡ್‌ನ `ದಿ ಇಟಾಲಿಯನ್ ಜಾಬ್~ 1969ರಲ್ಲೇ ಅಪಾರ ಜನಪ್ರಿಯತೆ ಪಡೆದ ಚಿತ್ರ. ಅದರ ಮತ್ತೊಂದು ಭಾಗ ಸಹ 2003ರಲ್ಲಿ ಬಂದಿತ್ತು. ಅದೇ ಕಥೆಯನ್ನು ಹಿಂದಿಯ ಜಾಯಮಾನಕ್ಕೆ ಒಗ್ಗಿಸಿದ್ದಾರೆ ನಿರ್ದೇಶಕ ದ್ವಯರಾದ ಅಬ್ಬಾಸ್ ಮತ್ತು ಮಸ್ತಾನ್. ದರೋಡೆಕೋರರ ತಂಡದಲ್ಲೇ ನಾಯಕ, ನಾಯಕಿಯನ್ನು ಕಾಣುವ ಚಿತ್ರಗಳ ಗುಂಪಿಗೆ `ಪ್ಲೇಯರ್ಸ್~ ಸೇರುತ್ತದೆ.ಆರಂಭದಿಂದ ಅಂತ್ಯದವರೆಗೆ ಹಲವು ತಿರುವುಗಳನ್ನು ಪಡೆಯುತ್ತ ಕುತೂಹಲ ಮೂಡಿಸುವ ಕಥೆ ಚಿತ್ರದ ಪ್ರಧಾನ ಅಂಶ. ಕಳ್ಳತನ, ದರೋಡೆಯ ಕಥಾವಸ್ತುವಿನಲ್ಲಿ ಹುಟ್ಟಿದ ಚಿತ್ರಗಳು ಬಾಲಿವುಡ್‌ಗೆ ಹೊಸತಲ್ಲ. `ಧೂಮ್~ನಂತಹ ಚಿತ್ರದ ಬೆನ್ನಲ್ಲೇ ಹಲವು ಚಿತ್ರಗಳು ಬಂದಿವೆ. ಇವುಗಳ ನಡುವೆ `ಪ್ಲೇಯರ್ಸ್~ ವಿಭಿನ್ನವಾಗಿದೆ.ರಷ್ಯದಿಂದ ರೊಮೇನಿಯಾಕ್ಕೆ ಸಾಗಿಸುವ ಚಿನ್ನವನ್ನು ದರೋಡೆ ಮಾಡುವುದು ನಾಯಕ ಚಾರ್ಲಿಯ (ಅಭಿಷೇಕ್ ಬಚ್ಚನ್) ಗುರಿ. ಅವನಿಗೆ ತಂಡ ಕಟ್ಟಲು ಅವನ ಗುರು ವಿಕ್ಟರ್ ದಾದಾ (ವಿನೋದ್ ಖನ್ನಾ) ನೆರವಾಗುತ್ತಾನೆ. ಕಳ್ಳತನ ಚಾರ್ಲಿಯ ಪ್ರವೃತ್ತಿಯಾದರೂ ಅನಾಥ ಮಕ್ಕಳಿಗಾಗಿ ಶಾಲೆ ನಿರ್ಮಿಸುವ ಅವನ ಬಯಕೆಯೇ ದರೋಡೆಯ ಉದ್ದೇಶ!ಬಾಬ್ಬಿ ಡಿಯೋಲ್, ಬಿಪಾಶಾ ಬಸು, ನೀಲ್‌ನಿತಿನ್ ಮುಖೇಶ್, ಸಿಖಂದರ್ ಖೇರ್ ಮತ್ತು ಓಮಿ ವೈದ್ಯರಂತಹ ಪ್ರತಿಭಾವಂತ ಕಲಾವಿದರ ದಂಡು ಇಲ್ಲಿದೆ. ತೀವ್ರ ಕುತೂಹಲ ಕೆರಳಿಸುವ ಮೊದಲಾರ್ಧದ ಅಂತ್ಯದಲ್ಲಿ ಕಥೆಯ ದಿಕ್ಕು ಬದಲಾಗುತ್ತದೆ. ದರೋಡೆಕೋರರ ಈ ಗುಂಪಿನಲ್ಲೇ ಖಳನಾಯಕ ಕಾಣುವುದೂ ಇಲ್ಲೇ. ರಷ್ಯದಲ್ಲಿ ಮುಗಿಯುವ ದರೋಡೆ ಕಥೆಯ ಎರಡನೇ ಅಧ್ಯಾಯ ಪ್ರಾರಂಭವಾಗುವುದು ನ್ಯೂಜಿಲೆಂಡ್‌ನಲ್ಲಿ. ಕಳೆದುಕೊಂಡ ಚಿನ್ನವನ್ನು ಮರಳಿ ಪಡೆಯುವುದು ಈ ಪಯಣದ ಗುರಿ. ಉಳಿದದ್ದು ಪ್ರೇಕ್ಷಕ ಊಹಿಸಿಕೊಂಡಂತೆ ನಡೆದರೂ ಪ್ರತಿ ಸನ್ನಿವೇಶ ಕೌತುಕ ಹುಟ್ಟಿಸುತ್ತದೆ.ಹಾಲಿವುಡ್ ಚಿತ್ರಗಳಿಗೆ ಕಡಿಮೆಯಿಲ್ಲ ಎಂಬಂತೆ ತಂತ್ರಜ್ಞಾನದ ಬಳಕೆ `ಪ್ಲೇಯರ್ಸ್~ನಲ್ಲಿ ಎದ್ದು ಕಾಣುತ್ತದೆ. ಅಚ್ಚುಕಟ್ಟಾದ ನಿರೂಪಣಾ ಶೈಲಿ ನಿರ್ದೇಶಕರ ಕಸಬುದಾರಿಕೆಗೆ ಸಾಕ್ಷಿ. ಸಾಹಸ ಸನ್ನಿವೇಶಗಳನ್ನು ಅದ್ಭುತವಾಗಿ ಸೆರೆಹಿಡಿದಿರುವ ಛಾಯಾಗ್ರಹಣವೂ ಮೆಚ್ಚುವ ಅಂಶ. ಆದರೆ ಪಾತ್ರಕ್ಕೆ ಜೀವ ತುಂಬುವ ಪ್ರಕ್ರಿಯೆಯಲ್ಲಿ ಅಭಿಷೇಕ್ ಬಚ್ಚನ್ ಹಿಂದೆ ಬೀಳುತ್ತಾರೆ. ಸೋನಮ್ ಕಪೂರ್ ನಟನೆ ಪೇಲವ. ನೀಲ್ ನಿತಿನ್ ಮುಖೇಶ್ ಖಳನಾಯಕರಾಗಿಯೂ ಇಷ್ಟವಾಗುತ್ತಾರೆ. ಬಿಪಾಶಾ ಬಸು ಸಮರ್ಥವಾಗಿ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಓಮಿ ವೈದ್ಯ ಮತ್ತು ಜಾನಿ ಲಿವರ್ ನಟನೆಯ ಕೊರತೆಗಳನ್ನು ತುಂಬುತ್ತಾರೆ. ಬಾಬ್ಬಿ ಡಿಯೋಲ್ ಮತ್ತು ಸಿಖಂದರ್ ಖೇರ್ ಪಾತ್ರಗಳಿಗೆ ಅಷ್ಟೇನೂ ಮಹತ್ವವಿಲ್ಲ.ಕಳ್ಳತನ, ದರೋಡೆ ಕಥೆಗಳುಳ್ಳ ಗೆದ್ದ ಸಿನಿಮಾಗಳ ಜಾಡಿನಲ್ಲಿ ಬಂದು ಹೋಗುವ ಮತ್ತೊಂದು ಸಿನಿಮಾ ಎನ್ನಿಸಿದರೂ ಮನರಂಜನೆ ಮತ್ತು ತಾಂತ್ರಿಕ ದೃಷ್ಟಿಯಲ್ಲಿ `ಪ್ಲೇಯರ್ಸ್~ ಗೆಲ್ಲುತ್ತದೆ.

 

Post Comments (+)