ಶುಕ್ರವಾರ, ನವೆಂಬರ್ 15, 2019
20 °C

ಕಸೂತಿ ಎಳೆಯಲ್ಲಿ ಬದುಕಿನ ಚಿತ್ತಾರ

Published:
Updated:

ಮನೆಯಲ್ಲಿ ಕುಳಿತು ಕಾಲಹರಣ ಮಾಡುವುದು ಸಲ್ಲ ಎಂದುಕೊಂಡು ವಿನ್ಯಾಸವೃತ್ತಿಗಿಳಿದವರು ಸುಜಯಾ ಮಹೇಶ್. ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ. ಮೌಂಟ್‌ಕಾರ್ಮೆಲ್ ಕಾಲೇಜಿನಲ್ಲಿ ಗೃಹ ವಿಜ್ಞಾನ ಉಪನ್ಯಾಸಕಿಯಾಗಿ 18 ವರ್ಷಗಳ ಕಾಲ ವೃತ್ತಿ ಜೀವನ ನಡೆಸಿದರು.ಪತಿಗೆ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ವರ್ಗಾವಣೆಯಾದಾಗ ಕೆಲಸ ಬಿಡಬೇಕಾದ ಪರಿಸ್ಥಿತಿ ಬಂತು. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದುಕೊಂಡು ಗೃಹಿಣಿಯಾಗಿ ಮನೆ, ಮಕ್ಕಳ ಜವಾಬ್ದಾರಿ ಕೈಗೆತ್ತಿಕೊಂಡರು. ಮನೆಗೆಲಸವೆಲ್ಲಾ ಮುಗಿದ ಮೇಲೆ ಸಮಯ ಸಿಕ್ಕಾಗ ಬಟ್ಟೆಯ ಮೇಲೆ ಕಸೂತಿ ಮಾಡಲು ಕುಳಿತರು. ಈಗ ಕಸೂತಿಯೇ ಅವರ ವೃತ್ತಿ.ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ಕೋರಮಂಗಲದ ತಮ್ಮ ಮನೆಯಲ್ಲಿಯೇ ಈಗ ಬೊಟಿಕ್ ಇಟ್ಟುಕೊಂಡಿದ್ದಾರೆ. ಜತೆಗೆ ಕಲಿಯುವ ಹುಮ್ಮಸ್ಸಿರುವವರಿಗೆ ಶಿಕ್ಷಕಿಯಾಗಿದ್ದಾರೆ. ತಾವು ಸಾಗಿಬಂದ ಹಾದಿಯ ಕುರಿತು, ವಿನ್ಯಾಸದ ಕುರಿತು ಸುಜಯಾ ಮಾತು ಹಂಚಿಕೊಂಡಿದ್ದು ಹೀಗೆ...ಕಸೂತಿಯೇ ಏಕೆ ನಿಮ್ಮ ಮಾಧ್ಯಮವಾಯಿತು?

ಇಂದು ಫ್ಯಾಷನ್ ಹೆಸರಿನಲ್ಲಿ ಹಲವಾರು ಬಟ್ಟೆಗಳು ಮಾರುಕಟ್ಟೆಗೆ ಬಂದಿವೆ. ಎಲ್ಲಿಯಾದರೂ ಕಸೂತಿಯ ಚಿತ್ತಾರವಿರುವ ದಿರಿಸನ್ನು ನೋಡಿದಾಗ ಕಂಗಳು ಸಹಜವಾಗಿಯೇ ಅತ್ತ ಸೆಳೆಯುತ್ತದೆ. ಇದು ಕಸೂತಿಗಿರುವ ಶಕ್ತಿ. ಇದು ಅಳಿಯಬಾರದು ಎಂಬ ಉದ್ದೇಶದಿಂದ ನಾನು ಕಸೂತಿಯನ್ನು ಆರಿಸಿಕೊಂಡೆ.ವಸ್ತ್ರವಿನ್ಯಾಸಕ್ಕೆ ಸ್ಫೂರ್ತಿ?

ವಸ್ತ್ರ ವಿನ್ಯಾಸದಲ್ಲಿ ಇಂದು ನಾನು ಏನೇ ಮಾಡಿದರೂ ಅದರ ಫಲ ಅಮ್ಮನಿಗೇ ಸೇರಬೇಕು. ಚಿಕ್ಕವಳಿರುವಾಗ ಅಮ್ಮ ಕಸೂತಿ ಮತ್ತು ಹೊಲಿಗೆ ಹೇಳಿಕೊಡುತ್ತಿದ್ದರು. ಒಂದು ನೂಲಿನ ಎಳೆಯಲ್ಲಿ ಚಿತ್ತಾರ ಬಿಡಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಏಕಾಗ್ರತೆ, ತಾಳ್ಮೆ ಬೇಕು. ಅಪ್ಪ ಕೂಡ ನನ್ನ ಕಲಿಕೆಗೆ ಸ್ಫೂರ್ತಿಯಾಗಿದ್ದರು.ಯಾವ ರೀತಿಯ ವಿನ್ಯಾಸ ಮಾಡುತ್ತೀರಿ?

ಸೀರೆ, ಡ್ರೆಸ್ ಮೇಲೆ ಲಖನೌ ಕಸೂತಿ, ಪ್ರಿಂಟ್, ಚಿಕನ್ ವರ್ಕ್, ಕಟ್ ವರ್ಕ್, ಪ್ಯಾಚ್ ವರ್ಕ್ ಮುಂತಾದ ವಿನ್ಯಾಸಗಳನ್ನು ಮಾಡುತ್ತೇನೆ. ಜತೆಗೆ ರೆಡಿಮೇಡ್ ಬ್ಲೌಸ್‌ಗಳನ್ನು ನಾನು ಇಲ್ಲಿಯೇ ಸಿದ್ಧಪಡಿಸುತ್ತೇನೆ.ನಿಮ್ಮ ಈ ಕೆಲಸಕ್ಕೆ ಮನೆಯವರ ಬೆಂಬಲ ಹೇಗಿದೆ?

ಮನೆಯವರ ಬೆಂಬಲ ಪ್ರತಿ ಹೆಣ್ಣುಮಗುವಿಗೂ ತುಂಬಾ ಮುಖ್ಯ. ನಾನು ಮಾಡಿದ ವಿನ್ಯಾಸ ನೋಡಿ ಪತಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದರಿಂದ ಮನಸ್ಸಿಗೆ ಖುಷಿಯಾಗುತ್ತದೆ. ಜತೆಗೆ ನನ್ನಿಂದ ಸಾಧನೆ ಮಾಡಲು ಸಾಧ್ಯವಿದೆ ಎಂಬ ಭರವಸೆ ಮೂಡುತ್ತದೆ.ಕಲಿಯುವುದಕ್ಕೆ ಎಷ್ಟು ಜನ ವಿದ್ಯಾರ್ಥಿಗಳು ಬರುತ್ತಾರೆ?

ಮೊದಲು ಶುರು ಮಾಡಿದಾಗ ಯಾರೂ ಬರುತ್ತಿರಲಿಲ್ಲ. ಈಗ ಕಲಿಯುವ ಆಸಕ್ತಿಯಿಂದ ತುಂಬಾ ಜನ ಬರುತ್ತಾರೆ. ನನಗೆ ಗೊತ್ತಿರುವುದನ್ನು ಹೇಳಿಕೊಡುತ್ತೇನೆ. ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ಶನಿವಾರ ಹೆಚ್ಚಾಗಿ ಉದ್ಯೋಗಸ್ಥ ಮಹಿಳೆಯರು ಬರುತ್ತಾರೆ. ನಮ್ಮಲ್ಲಿದ್ದ ವಿದ್ಯೆಯನ್ನು ಇನ್ನೊಬ್ಬರಿಗೆ ಹಂಚಿದರೆ ಮಾತ್ರ ಅದು ಮುಂದಿನ ಜನಾಂಗದವರಿಗೆ ತಲುಪಲು ಸಾಧ್ಯ, ನಾವು ಕಲಿತದ್ದು ಸಾರ್ಥಕವಾಗುತ್ತದೆ. ಮಾರುಕಟ್ಟೆ ಹೇಗಿದೆ? ಡಿಸೈನರ್ ಬಟ್ಟೆ ತುಂಬಾ ದುಬಾರಿ ಅಂತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ವಸ್ತ್ರ ವಿನ್ಯಾಸದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಇರುತ್ತೇನೆ. ಹೀಗಾಗಿ ಜನರ ಪರಿಚಯವಾಗುತ್ತದೆ. ಕೆಲವರು ವಿಳಾಸ ಪಡೆದುಕೊಂಡು ನಂತರ ಮನೆಗೆ ಬಂದು ತಮ್ಮಿಷ್ಟದ ಉಡುಪುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಬಾಳಿಕೆ ಚೆನ್ನಾಗಿ ಬರುವುದರಿಂದ ಈ ಡಿಸೈನರ್ ಬಟ್ಟೆಗಳು ದುಬಾರಿ. ನನ್ನ ಬಳಿ ಇರುವ ಬಟ್ಟೆ ಅಷ್ಟು ದುಬಾರಿಯಲ್ಲ. ಜನ ಇಷ್ಟಪಟ್ಟು ಕೊಳ್ಳುತ್ತಾರೆ.ನಗರದಲ್ಲಿ ವಿನ್ಯಾಸಗಾರರಿಗೆ ಅವಕಾಶ ಹೇಗಿದೆ?

ಇಂದು ಹೆಚ್ಚಿನವರು ವಿನ್ಯಾಸ ವೃತ್ತಿಗೆ ಇಳಿದಿದ್ದಾರೆ. ಹೊಸ ಹೊಸ ವಿನ್ಯಾಸಗಳು ಪರಿಚಯವಾಗುತ್ತಿದೆ. ಹಾಗಾಗಿ ಅವಕಾಶಗಳು ಹೆಚ್ಚಿವೆ.ಜನರ ಪ್ರತಿಕ್ರಿಯೆ ಹೇಗಿದೆ?

ಸೀರೆ, ಕುರ್ತಾ, ಮಕ್ಕಳ ಬಟ್ಟೆಗೆ ಬೇಡಿಕೆ ಇದೆ. ಕಸೂತಿ ಹಾಕಿ ಮಾಡಿದ ಬಟ್ಟೆಗಳನ್ನು ಇಷ್ಟಪಡುತ್ತಾರೆ. ಮಾಜಿ ಸಚಿವೆ ರಾಣಿ ಸತೀಶ್, ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಕ್ರೀಡಾಪಟು ಅಶ್ವಿನಿ ನಾಚಪ್ಪ ಅವರು ನಾನು ಕಸೂತಿ ಹಾಕಿದ ಸೀರೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನನಗೂ ತುಂಬಾ ಹೆಮ್ಮೆ ಅನಿಸುತ್ತೆ.ಮಹಿಳೆಯರಿಗೆ ನಿಮ್ಮ ಸಲಹೆ?

ಹೊರಗಡೆ ಹೋಗಿ ದುಡಿದರೆ ಮಾತ್ರ ಜೀವನವಲ್ಲ. ಮನೆಯಲ್ಲಿಯೇ ಕುಳಿತು ಮಾಡುವಂತಹ ಬೇಕಾದಷ್ಟು ಕೆಲಸಗಳಿವೆ. ಇದರಿಂದ ಮನೆಯವರೊಂದಿಗೆ ಕಾಲ ಕಳೆದ ಹಾಗೂ ಆಗುತ್ತದೆ. ನಾವು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಕೈ ಚೆಲ್ಲಿ ಕುಳಿತುಕೊಳ್ಳಬೇಡಿ. ನಿಮ್ಮ ಹವ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ.  ಸಮಯ ವ್ಯರ್ಥ ಮಾಡಬೇಡಿ.ಮಾಹಿತಿಗೆ: 9845275153/9482707544

 

ಪ್ರತಿಕ್ರಿಯಿಸಿ (+)