ಶುಕ್ರವಾರ, ಮೇ 7, 2021
18 °C

ಕಸೋದ್ಯಾನ: ನಗರಸಭೆ ವಿನೂತನ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಜನತೆಯ ಬೇಡಿಕೆಗೆ ಅನುಗುಣವಾಗಿ ರೈಸ್ ಪಾರ್ಕ್, ತೊಗರಿ ಪಾರ್ಕ್, ಜವಳಿ ಪಾರ್ಕ್, ಥೀಮ್ ಪಾರ್ಕ್ ಹೀಗೆ ನಾನಾ ವಿಧದ ಪಾರ್ಕುಗಳನ್ನು ಸರ್ಕಾರ ನಿರ್ಮಾಣ ಮಾಡುತ್ತದೆ. ಆದರೆ ಕಸ ಮತ್ತು ತಿಪ್ಪೆ, ತ್ಯಾಜ್ಯ ಸಂಗ್ರಹಕ್ಕಾಗಿಯೆ ಪಾರ್ಕ್ ಒಂದನ್ನು ನಿರ್ಮಾಣವಾದರೆ ಹೇಗೆ....?ಇಂತದ್ದೊಂದು ಆಲೋಚನೆ ಹೊಳೆದಿದ್ದೆ ತಡ ಇಲ್ಲಿನ ನಗರಸಭೆ `ಕಸೋದ್ಯಾನಕ್ಕೊಂದು ಪಾರ್ಕ್~ ನಿರ್ಮಾಣದ ಪ್ರಾಯೋಗಕ್ಕೆ ಕೈಹಾಕಿ ಬಿಟ್ಟಿದೆ. ಪರಿಣಾಮ ನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಕಡೆ `ಕಸೋದ್ಯಾನ~  ನಿರ್ಮಾಣವಾಗಿ ಬಿಟ್ಟಿವೆ.ಅದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಸುಮಾರು 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಸೋದ್ಯಾನ ತಲೆ ಎತ್ತಿವೆ, ಇನ್ನಷ್ಟು ಕಡೆ ನಿಧಾನವಾಗಿ ತಮ್ಮಿಂದ ತಾವೇ ನಿರ್ಮಾಣಗೊಂಡು ಸಾರ್ವಜನಿಕರ ಸಹಕಾರದಿಂದ ಬೃಹದಾಕಾರಕ್ಕೆ ಬೆಳೆಯುತ್ತಿವೆ.ಏನೀ ಕಸೋದ್ಯಾನ?:
ಸಾರ್ವಜನಿಕ ಕುತೂಹಲಕ್ಕೆ ಕಾರಣವಾಗಿರುವ ಕಸೋದ್ಯಾನ ಎಂದರೆ ಜನ ತಮ್ಮ ದೈನಂದಿನ ಬದುಕಿನಲ್ಲಿ ಉಪಯೋಗಿಸಿ ಬಿಸಾಡುವ ತ್ಯಾಜ್ಯದಿಂದ ಉಂಟಾಗುವ ಕಸಕಡ್ಡಿ ತಂದು ವಾರ್ಡಿನಲ್ಲಿ ಉದ್ಯಾನ ನಿರ್ಮಾಣಕ್ಕೆ ಮೀಸಲಿಟ್ಟ ಸ್ಥಳದಲ್ಲಿ ಸುರಿದು ಗುಡ್ಡೆ ಹಾಕುವುದು. ಹಾಗೆಯೇ ಸಂಗ್ರಹವಾದ ಕಸಕಡ್ಡಿ, ತ್ಯಾಜ್ಯವನ್ನು ನಗರಸಭೆಯ ನೈರ್ಮಲ್ಯ ನಿವಾರಕ ಸಿಬ್ಬಂದಿ ಅಪ್ಪಿತಪ್ಪಿಯೂ ಸಕಾಲಕ್ಕೆ ವಿಲೇವಾರಿ ಮಾಡದೇ ತಿಂಗಳುಗಟ್ಟಲೆ ಬಿಟ್ಟರೆ ತಿಪ್ಪೆಗುಂಡಿ ನಿರ್ಮಾಣವಾಗಿ ಅದೇ ಕಸೋದ್ಯಾನವಾಗಿ ಮಾರ್ಪಾಡುತ್ತದೆ.ಯಾರಿಗೆ ಏನು ಲಾಭ?:
ನಗರದಲ್ಲಿ ಸುಮಾರು 200ಕ್ಕೂ ಹೆಚ್ಚು ಸಾರ್ವಜನಿಕ ಉದ್ಯಾನ ಇವೆ ಎಂದು ನಗರಸಭೆ ದಾಖಲೆಗಳ ಅಂದಾಜು. ಈಗಾಗಲೆ ಬಹುತೇಕ ಶೇ. 75ರಷ್ಟು ಉದ್ಯಾನಗಳು ಪ್ರಭಾವಿಗಳಿಂದ ಒತ್ತುವರಿಯಾಗಿ ಬಿಡಿಸಿಕೊಳ್ಳಲಾಗದ ಕಗ್ಗಂಟಾಗಿವೆ.ಇನ್ನುಳಿದ ಉದ್ಯಾನವನಗಳ ಅಭಿವೃದ್ಧಿಗೆ ಅನುದಾನದ ಕೊರತೆಯಿಂದ ಪ್ರಗತಿ ಮರೀಚಿಕೆಯಾಗಿದ್ದರಿಂದ ಅಂತಿಮವಾಗಿ ಒದು ನಿರ್ಧಾರಕ್ಕೆ ಬಂದಿರುವ ನಗರಸಭೆ ಸಾರ್ವಜನಿಕ ಸ್ಥಳ ಉಳಿಸಿಕೊಳ್ಳುವ ಗುರಿಯೊಂದಿಗೆ ಕಸೋದ್ಯಾನ ಕಲ್ಪನೆಯೊಂದಿಗೆ ಅಖಾಡಕ್ಕಿಳಿದಿದೆ.ಎಂ.ಪಿ.ಗೆ ಮೊದಲ ಯೋಗ: ಕೊಪ್ಪಳ ಲೋಕಸಭಾ ಕ್ಷೇತ್ರದ  ಸಂಸದ ಎಸ್. ಶಿವರಾಮಗೌಡ ವಾಸಿಸುವ ವಿವೇಕಾನಂದ ಕಾಲೊನಿಯ ಅವರ ಮನೆಗೆ ಕೂಗಳತೆಯ ಹತ್ತಿರ ಇರುವ ಸ್ಥಳದಲ್ಲಿ ಕಸೋದ್ಯಾನ ನಿರ್ಮಿಸುವ ಮೂಲಕ ನಗರಸಭೆ ಮೊದಲ ಕಾಣಿಕೆ ಸಂಸದರಿಗೆ ನೀಡಿದೆ.ನೈರ್ಮಲ್ಯ ಸಿಬ್ಬಂದಿ ಕೊರತೆ, ಉದ್ಯಾನಕ್ಕೆ ಮೀಸಲಾದ ಸ್ಥಳ ಅಭಿವೃದ್ಧಿಗೆ ಹಣಕಾಸಿನ ಸಮಸ್ಯೆ, ಅಧಿಕಾರಿಗಳಲ್ಲಿನ ಇಚ್ಛಾಶಕ್ತಿ ಕೊರತೆ, ಕೊನೆಯದಾಗಿ ಆಡಳಿತ ಮಂಡಳಿಯವರ ಅಡ್ಡಗಾಲಿನಿಂದಾಗಿ ಸಾರ್ವಜನಿಕ ಸ್ಥಳ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.