`ಕಸ' ಈ ಹೊಲದ ಸ್ವಾರಸ್ಯ!

6

`ಕಸ' ಈ ಹೊಲದ ಸ್ವಾರಸ್ಯ!

Published:
Updated:

ವಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯಿಂದ ನಾಗೂರು ಗ್ರಾಮದಲ್ಲಿ ಇರುವ ಸಿದ್ದಣ್ಣ ಕಲ್ಲೂರ ಅವರ ಹೊಲಕ್ಕೆ ಕಾಲಿಡುತ್ತಿದ್ದಂತೆ ಹೊಲದ ತುಂಬೆಲ್ಲ ಕಸ-ಕಡ್ಡಿ ನಿಮ್ಮನ್ನು ಸ್ವಾಗತಿಸುತ್ತದೆ!`ಅಯ್ಯೋ ಇದೆಂಥ ಕಸವಪ್ಪ' ಎಂದುಕೊಳ್ಳುತ್ತ ಅನತಿ ದೂರದಲ್ಲಿ ದೃಷ್ಟಿ ಹಾಯಿಸಿದರೆ ಅಲ್ಲಿ ಹುಲುಸಾಗಿ ಬೆಳೆದ ಜೋಳ, ಮೆಕ್ಕೆಜೋಳ, ಈರುಳ್ಳಿ, ದ್ರಾಕ್ಷಿ ಬೆಳೆ ಕಂಗೊಳಿಸುತ್ತದೆ. ಸುಮಾರು 28 ಎಕರೆಯ ಈ ಹೊಲದಲ್ಲಿ ಇಷ್ಟೊಂದು ಅದ್ಭುತ ಫಸಲು ಬರಲು ಕಾರಣ ಏನು ಗೊತ್ತಾ? ಅದೇ ಕಸ. `ಐದು ವರ್ಷಗಳಿಂದ ಕಸವೇ ನಮ್ಮ ಜೀವನ' ಎನ್ನುತ್ತಾರೆ ಸಿದ್ದಣ್ಣ.`ಬೆಳೆಗಳ ಕಸವನ್ನು ತೆಗೆಸದೇ ಹಾಗೇ ಬಿಡುವುದರಿಂದ ಭೂಮಿ ಮೃದುವಾಗುತ್ತದೆ, ತಂಪಾಗಿರುತ್ತದೆ, ದೇಶಿಯ ಎರೆಹುಳುಗಳ ರಕ್ಷಣೆಯಾಗುತ್ತದೆ ಹಾಗೂ  ಸೂರ್ಯನ ಪ್ರಕಾಶ ತಡೆಯಲು ಸಾಧ್ಯವಾಗುತ್ತದೆ. ಅದರಿಂದ ಕೃಷಿ ಭೂಮಿ ಫಲವತ್ತಾಗಿ ಉಳಿಯುವುದರೊಂದಿಗೆ ನಾವು ಬಿತ್ತಿದ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ. ಇದೇ ಕಸದ ಸ್ವಾರಸ್ಯ ಎನ್ನುವುದು ಅವರ ಹೆಮ್ಮೆಯ ಮಾತು.`ಶೂನ್ಯ ಬಂಡವಾಳದಲ್ಲಿ  ನೈಸರ್ಗಿಕ ಕೃಷಿ' ಎಂಬ ವಿಷಯದ ಕುರಿತು ಐದು ವರ್ಷಗಳ ಹಿಂದೆ ಕೂಡಲಸಂಗಮದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದೆ. ಅಲ್ಲಿ ಕೃಷಿ ತಜ್ಞ ಸುಭಾಷ ಪಾಳೇಕರ ಅವರ ನೈಸರ್ಗಿಕ ಕೃಷಿ ಕುರಿತ ಉಪನ್ಯಾಸ ಕೇಳಿದ ಮೇಲೆ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಅಂದಿನಿಂದ ಇಂದಿನವರೆಗೂ ಅದನ್ನೇ ಅಳವಡಿಸುತ್ತಿದ್ದೇನೆ. ಈ ಪದ್ಧತಿಯಲ್ಲಿ ಕೃಷಿ ಆರಂಭಿಸಿದರೆ ಮೊದಲ ವರ್ಷದಲ್ಲಿ ಶೇ 30 ಇಳುವರಿ ಬಂದರೆ, ಎರಡನೇ ವರ್ಷ ಶೇ 60 ಇಳುವರಿ ಬರುತ್ತದೆ. ಮೂರನೇ ವರ್ಷ ನಿರೀಕ್ಷೆ ಮೀರಿ ಇಳುವರಿ ಬರುತ್ತದೆ' ಎಂಬುದು ಅವರ ಅನುಭವದ ಮಾತು.ಕೀಟಬಾಧೆಯಿಂದ ದ್ರಾಕ್ಷಿ ಮುಕ್ತ

ದ್ರಾಕ್ಷಿ ಬೆಳೆಗೆ ಇದುವರೆಗೆ ಯಾವುದೇ ರಾಸಾಯನಿಕ ಅವರು ಬಳಸಿಲ್ಲ. ಬೆಳೆಗೆ ಬೇವಿನ ಎಲೆಗಳು ಸೇರಿದಂತೆ ವಿವಿಧ ಗಿಡಗಳ ಎಲೆಗಳನ್ನು ದೇಶಿಯ ಗೋಮೂತ್ರದೊಂದಿಗೆ ಕುದಿಸಿ ಸಿಂಪಡಿಸುತ್ತಿದ್ದಾರೆ. ಅದರಿಂದ ದ್ರಾಕ್ಷಿಗೆ ಇದುವರೆಗೆ ಕೀಟಬಾಧೆ ಆಗಿಲ್ಲ.

  ಅಲ್ಲದೆ ದ್ರಾಕ್ಷಿ ಬಳ್ಳಿಯ ಕೆಳಗೆ ಮತ್ತು ಸುತ್ತಮುತ್ತ ಬೆಳೆಯುವ ಕಸವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದೆ. ನೈಸರ್ಗಿಕ ಕೃಷಿಯ ನಾಲ್ಕು ಚಕ್ರಗಳು ಎಂದು ಕರೆಯುವ ಜೀವಾಮೃತ, ಬೀಜಾಮೃತ ಹಾಗೂ ಹೊದಿಕೆ ವಿಧಾನಗಳನ್ನು ಅನುಸರಿಸುವುದರಿಂದ ಉತ್ತಮ ಫಸಲು ತೆಗೆಯಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಸಿದ್ದಣ್ಣ.ಜೀವಾಮೃತ: ಹತ್ತು ಲೀಟರ್ ದೇಶಿಯ ತಳಿಗಳ ಗೋಮೂತ್ರ, 2 ಕೆ.ಜಿ ದ್ವಿದಳ ಧಾನ್ಯದ ಹಿಟ್ಟು, 1 ಕೆ.ಜಿ. ಬೆಲ್ಲ, ಒಂದು ಹಿಡಿಯಷ್ಟು ಹೊಲದ ಬದುವಿನ ಗಿಡದ ಕೆಳಗಿನ ಮಣ್ಣನ್ನು 200 ಲೀಟರ್ ನೀರಿನಲ್ಲಿ 48 ಗಂಟೆಗಳ ಕಾಲ ನೆನೆಯಿಸಬೇಕು.  ನಂತರ 1 ಎಕರೆ ಹೊಲಕ್ಕೆ ನೀರಿನೊಂದಿಗೆ ಬೆಳೆಗಳಿಗೆ ಕೊಡುವುದರಿಂದ ಬೆಳೆಗಳು ಹುಲುಸಾಗಿ ಬೆಳೆಯುತ್ತದೆ.ಬೀಜಾಮೃತ: 20 ಲೀಟರ್ ನೀರಿನಲ್ಲಿ 1 ಕೆ.ಜಿಯಷ್ಟು ಸಗಣಿಯನ್ನು 6 ಗಂಟೆ ನೆನೆಯಿಸಿ ನಂತರ 50 ಗ್ರಾಮ ಸುಣ್ಣ ಹಚ್ಚಿ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು.ಘನ ಜೀವಾಮೃತ: 1 ಕ್ವಿಂಟಾಲ್ ಸಗಣಿ, 1 ಕೆ.ಜಿ. ಬೆಲ್ಲ ಹಾಗೂ 2 ಕೆ.ಜಿ ದ್ವಿದಳ ಧಾನ್ಯದ ಹಿಟ್ಟು ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಿ 1 ಎಕರೆ ಬೆಳೆಗೆ ಗೊಬ್ಬರ ರೂಪದಲ್ಲಿ (ಎಣ್ಣೆ ಕಾಳು ಬೆಳೆಗಳನ್ನು ಹೊರತುಪಡಿಸಿ)  ಪ್ರತಿ ಎಕರೆಗೆ ಕೊಡುವುದರಿಂದ ಬೆಳೆಗಳಿಗೆ ಉತ್ತಮ ಗೊಬ್ಬರವಾಗುತ್ತದೆ.ಹೊದಿಕೆ: ಭೂಮಿಯನ್ನು ಕಸ ಕಡ್ಡಿಗಳಿಂದ ಹೊದಿಕೆ ಮಾಡುವುದರಿಂದ ಸೂರ್ಯನ ಪ್ರಕಾಶ ತಡೆದು ಬೆಳೆಗಳನ್ನು ತಂಪಾಗಿಡುತ್ತದೆ ಹಾಗೂ ಕೃಷಿ ಭೂಮಿ ಮೃದುವಾಗಿರುತ್ತದೆ. ಇದರಿಂದ ಬಿತ್ತಿದ ಬೆಳೆಗಳು ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.`ಈ ರೀತಿ ನೈಸರ್ಗಿಕ ಪದ್ಧತಿ ಅಳವಡಿಸುವುದರಿಂದ ದ್ರಾಕ್ಷಿ ಆರಂಭದಲ್ಲಿ ಒಂದು ಎಕರೆಗೆ 4 ಟನ್ ಇಳುವರಿ ಬಂದಿತ್ತು. ಎರಡನೇ ವರ್ಷದಲ್ಲಿ 8 ಟನ್, 3ನೇ ವರ್ಷದಲ್ಲಿ 12 ಟನ್, 4ನೇ ವರ್ಷದಲ್ಲಿ 16 ಟನ್‌ನಷ್ಟು ಇಳುವರಿ ಬಂದಿದೆ. ಅಲ್ಲದೇ ಹಣ್ಣುಗಳು ರುಚಿಯಾಗಿವೆ. ರಾಸಾಯನಿಕಗಳನ್ನು ಬಳಸಿ ಬೆಳೆದ 4 ಕೆ.ಜಿ ದ್ರಾಕ್ಷಿಗೆ 1 ಕೆ.ಜಿ. ಮಣುಕ ಮಾಡಬಹುದು. ಆದರೆ ನೈಸರ್ಗಿಕ ಕೃಷಿ ಪದ್ಧತಿಯಿಂದ 3 ಕೆ.ಜಿ ದ್ರಾಕ್ಷಿಗೆ 1 ಕೆ.ಜಿ ಮಣುಕ ಬರುತ್ತದೆ ಎಂದು ವಿವರಿಸುವ ಅವರು ಈ ವರ್ಷ ಒಂದು ಎಕರೆಗೆ 40 ಕ್ವಿಂಟಾಲ್ ಮೆಕ್ಕೆ ಜೋಳ ಬೆಳೆಯುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಂಚರಂಗಿಣಿ ವಿಧಾನ

ಸಿದ್ದಣ್ಣ ಕಲ್ಲೂರ ಅವರು ಜಮೀನಿನ ಒಂದು ಎಕರೆಯಲ್ಲಿ ಪಂಚರಂಗಿಣಿ ವ್ಯವಸ್ಥೆಯಲ್ಲಿ  ನೈಸರ್ಗಿಕ ಪದ್ಧತಿಯಲ್ಲಿ ಬೆಳೆಯುವ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ. ಐದು ವಿಧದ ಗಿಡಮರಗಳನ್ನು ಬೆಳೆಯುವುದರಿಂದ ಇದಕ್ಕೆ ಪಂಚರಂಗಿಣಿ ವ್ಯವಸ್ಥೆ ಎಂದು ಕರೆಯುತ್ತಾರೆ. ಸುಮಾರು ಐದು ಎಕರೆಯಲ್ಲಿ ಬೆಳೆಯುವ ಗಿಡ ಮರಗಳನ್ನು ಒಂದೇ ಎಕರೆಯಲ್ಲಿ ಬೆಳೆಯುತ್ತಿರುವ ಅವರು ಒಂದು ಎಕರೆಯಲ್ಲಿ  33 ಹುಣಸೆ ಗಿಡ, 33 ಮಾವಿನ ಗಿಡ, 33 ನೇರಳೆ ಹಣ್ಣಿನ ಗಿಡ, 120 ಸೀತಾಫಲ ಹಾಗೂ 600 ನುಗ್ಗೆ ಗಿಡಗಳನ್ನು ಬೆಳೆಸುತ್ತ್ದ್ದಿದಾರೆ. ಈ ಪದ್ಧತಿ ಉತ್ತರ ಕರ್ನಾಟಕದಲ್ಲೇ ಮೊದಲ ಪ್ರಯೋಗವಾಗಿದೆ ಎಂದು ಹೇಳುವ ಅವರು ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ಬನ್ನೂರಿನ ರೈತರಾದ ಬನ್ನೂರು ಕೃಷ್ಣಪ್ಪನವರು ಈ ವಿಧಾನ ಅನುಸರಿಸಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ.ಬರದಲ್ಲಿ ಬೆಳೆ

`ಆಗಾಗ್ಗೆ ಬರದಿಂದ ತತ್ತರಿಸುವ ನಮಗೆ ನೀರಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಬಸವನಬಾಗೇವಾಡಿಯ ವಲಯ ಅರಣ್ಯ ಅಧಿಕಾರಿ ಪಿ.ಎಸ್.ಖೇಡದ ಅವರ ಸೂಚನೆ ಮೇರೆಗೆ ನುಗ್ಗೆ ಹಾಗೂ ಸೀತಾಫಲ ಗಿಡಗಳನ್ನು ಬೆಳೆಸಿದೆ. ಸಮ್ಮಿಶ್ರ ಬೆಳೆಗಳಿಂದ ಎಕರೆಗೆ ವರ್ಷ ಒಂದಕ್ಕೆ 50 ಸಾವಿರದಿಂದ 2 ಲಕ್ಷದ ವರೆಗೆ ಲಾಭ ಪಡೆಯಬಹುದು. ಸಸಿ ನೆಟ್ಟ ಮೊದಲನೇ ವರ್ಷದಲ್ಲಿ ನುಗ್ಗೆ ಗಿಡಗಳು ಕಾಯಿ ಕೊಡುತ್ತಿವೆ. ಎರಡನೇ ವರ್ಷ ಸೀತಾಫಲ ಗಿಡಗಳು ಹಣ್ಣು ಕೊಡುತ್ತಿವೆ. ಈಗಾಗಲೇ 2 ವರ್ಷಗಳಿಂದ ಲಾಭ ಪಡೆಯುತ್ತಿದ್ದೇನೆ' ಎಂದು ಹೇಳುತ್ತಾರೆ. ಇವರ ಸಾಧನೆ ಗುರುತಿಸಿ ಈಗಾಗಲೇ ಹಲವು  ಪ್ರಶಸ್ತಿಗಳು ಲಭಿಸಿವೆ. ಸಂಪರ್ಕಕ್ಕೆ 99012 37513.                             

                                

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry