ಕಸ ವಿಂಗಡಣೆಗೆ ಪೌರಾಯುಕ್ತರ ಸೂಚನೆ

6

ಕಸ ವಿಂಗಡಣೆಗೆ ಪೌರಾಯುಕ್ತರ ಸೂಚನೆ

Published:
Updated:

ಚಿಂತಾಮಣಿ: ನಗರದ ಮನೆ, ಅಂಗಡಿ ಮಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಂದ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲು ಬರುವ ಸಂಗ್ರಹಣೆಗಾರರಿಗೆ ಪ್ರತಿನಿತ್ಯ ಉತ್ಪಾದನೆಯಾಗುವ ಕಸವನ್ನು ವಿಂಗಡಣೆ ಮಾಡಿ ನೀಡಬೇಕು ಎಂದು ಪೌರಾಯುಕ್ತ ಡಾ.ರಾಮೇಗೌಡ ಮನವಿ ಮಾಡಿದ್ದಾರೆ.  ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಸವನ್ನು ವಿಂಗಡಣೆ ಮಾಡುವಾಗ ಹಸಿಕಸ, ಒಣಕಸ ಹಾಗೂ ನಿರುಪಯುಕ್ತ ತ್ಯಾಜ್ಯ ವಸ್ತುಗಳಾಗಿ ಮೂರು ವಿಧದಲ್ಲಿ ವಿಂಗಡಿಸಬೇಕು.

ತರಕಾರಿ, ಹೂವು, ಹಣ್ಣು, ಆಹಾರ ಪದಾರ್ಥಗಳು ಹಾಗೂ ಇತರೆ ಕೊಳೆಯುವ ವಸ್ತುಗಳನ್ನು ಹಸಿಕಸವಾಗುತ್ತದೆ.

ಇಂತಹ ತ್ಯಾಜ್ಯವನ್ನು ಪ್ರತಿನಿತ್ಯ ಮನೆ ಮನೆಗೂ ಬರುವ ಕಸ ಸಂಗ್ರಹಣೆಗಾರರಿಗೆ ನೀಡಬೇಕು. ಕಾಗದ, ಪ್ಲಾಸ್ಟಿಕ್, ಮರ, ರಬ್ಬರ್, ಕಬ್ಬಿಣದ ಚೂರುಗಳು, ಗಾಜು, ಲೋಹ, ವೈರ್, ಚರ್ಮ ಮತ್ತು ಚರ್ಮದ ವಸ್ತುಗಳು.

ಪೀಠೋಪಕರಣಗಳು, ಥರ್ಮಾಕೋಲ್, ಚಿಂದಿ ಬಟ್ಟೆ ಹಾಗೂ ಇತರೆ ಪುನರ್ ಬಳಕೆ ಮಾಡಬಹುದಾದಂತಹ ತ್ಯಾಜ್ಯಗಳನ್ನು ಒಣಕಸವಾಗಿ ವಿಂಗಡಿಸಿ ನೀಡಬೇಕು. ಇದಕ್ಕಾಗಿಯೇ ಪ್ರತಿ ಮನೆಗೂ ಒಂದು ಚೀಲವನ್ನು ನೀಡಲಾಗಿದ್ದು, ವಾರಕ್ಕೊಮ್ಮೆ ಮನೆ ಮನೆಗೂ ಬರುವ ಒಣ ತ್ಯಾಜ್ಯ ಸಂಗ್ರಹಗಾರರಿಗೆ ಒಣಕಸವನ್ನು ನೀಡಬೇಕು. 

 

ಅಪಾಯಕಾರಿ ತ್ಯಾಜ್ಯಗಳಾದ ವಿವಿಧ ಬಲ್ಬ್‌ಗಳು, ಬ್ಯಾಟರಿಗಳು, ಬಣ್ಣದ ಡಬ್ಬಿಗಳು, ಸೌಂದರ್ಯ ವರ್ಧಕಗಳು, ಕೀಟನಾಶಕಗಳು, ಸ್ಯಾನಿಟರಿ ನ್ಯಾಪ್‌ಕಿನ್ಸ್ ಹಾಗೂ ಬ್ಯಾಂಡೇಜ್ ಇತ್ಯಾದಿ ನಿರುಪಯುಕ್ತ ತ್ಯಾಜ್ಯವನ್ನು ಬೇರೆ ಕಸದೊಂದಿಗೆ ಬೆರಸದೆ ಪ್ರತಿದಿನ ಬರುವ ಕಸ ಸಂಗ್ರಹಗಾರರಿಗೆ ನೀಡಬೇಕು ಎಂದು ಸೂಚಿಸಿದ್ದಾರೆ.    ಸುಂದರ ಹಾಗೂ ಸ್ವಚ್ಛ ನಗರವನ್ನಾಗಿ ಕಾಪಾಡಲು ಕಡ್ಡಾಯವಾಗಿ ಕಸ ವಿಲೇವಾರಿ ಸೂಚನೆಗಳನ್ನು ಪಾಲಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಕಾನೂನಿನಂತೆ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕಸವನ್ನು ಮನೆಗಳ ಸುತ್ತಮುತ್ತಲು, ರಸ್ತೆಗಳಲ್ಲಿ ಹಾಕುವುದು ಕಂಡುಬಂದರೆ ಕರ್ನಾಟಕ ಪುರಸಭೆಗಳ ಅಧಿನಿಯಮದಂತೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದರೂ, ಕೆಲವರು ಅನಧಿಕೃತವಾಗಿ ಕದ್ದುಮುಚ್ಚಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ನಗರ ನಾಗರಿಕರು ಬಳಕೆ ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡಿದರೆ ದಂಡದಲ್ಲಿ ಶೇ 10 ರಷ್ಟನ್ನು ಬಹುಮಾನವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry