ಕಸ ವಿಂಗಡಣೆ: ಯುಲಿಟಿಕ್ಸ್‌ನಿಂದ ಜಾಗೃತಿ ಅಭಿಯಾನ

7

ಕಸ ವಿಂಗಡಣೆ: ಯುಲಿಟಿಕ್ಸ್‌ನಿಂದ ಜಾಗೃತಿ ಅಭಿಯಾನ

Published:
Updated:

ಬೆಂಗಳೂರು: ನಗರದ ಜನರಲ್ಲಿ ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸಲು ಯುಲಿಟಿಕ್ಸ್ ಸ್ವಯಂ ಸೇವಾ ಸಂಸ್ಥೆಯು ಶನಿವಾರ ರೆಸಿಡೆನ್ಸಿ ರಸ್ತೆಯ ಬ್ರಿಗೇಡ್ ಜಂಕ್ಷನ್‌ನಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿತು.ಸಂಸ್ಥೆಯ ಸದಸ್ಯರು ವಿವಿಧ ಬಗೆಯ ವೇಶಭೂಷಣ ತೊಟ್ಟು ಕಸ ವಿಂಗಡಣೆಯ ಮಾಹಿತಿಯುಳ್ಳ ಕರಪತ್ರಗಳನ್ನು ಬ್ರಿಗೇಡ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಂಚಿದರು.ಮನೆಗಳಲ್ಲಿ ಉತ್ಪಾದನೆಯಾಗುವ ಹಸಿತ್ಯಾಜ್ಯ, ಒಣತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.`ಮನೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಸರಿಯಾಗಿ ವಿಂಗಡಣೆ ಮಾಡಿದರೆ ಕಸದ ಸಮಸ್ಯೆ ಅರ್ಧದಷ್ಟು ಪರಿಹಾರವಾದಂತೆ. ಆದರೆ, ಈ ಬಗ್ಗೆ ನಗರದ ನಾಗರಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ಜಾಗೃತಿ ಅಭಿಯಾನ ಆರಂಭಿಸಲಾಗಿದೆ~ ಎಂದು ಸಂಸ್ಥೆಯ ಸಂಚಾಲಕ ನವೀನ್ ಹೇಳಿದರು.`ಜಾಗೃತಿ ಅಭಿಯಾನದ ಮೊದಲ ಹಂತವಾಗಿ ಬ್ರಿಗೇಡ್ ರಸ್ತೆಯಲ್ಲಿ ಕಸ ವಿಂಗಡಣೆಯ ಬಗ್ಗೆ ಮಾಹಿತಿ ಇರುವ ಕರಪತ್ರಗಳನ್ನು ಹಂಚಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಕೊಳೆಗೇರಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರು ವಾಸಿಸುವ ಕಡೆಗಳಲ್ಲಿ ಕಸ ವಿಂಗಡಣೆಯ ಅಗತ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು~ ಎಂದು ಅವರು ತಿಳಿಸಿದರು.`ರಾಜಕೀಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆಯ ಉದ್ದೇಶದಿಂದ ಸ್ಥಾಪನೆಯಾಗಿರುವ ಯುಲಿಟಿಕ್ಸ್ ಸಂಸ್ಥೆಗೆ ನಗರದಲ್ಲಿ 300ಕ್ಕೂ ಹೆಚ್ಚು ಜನ ಸದಸ್ಯರಿದ್ದಾರೆ. ನಗರದ ಕಸದ ಸಮಸ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಅನಿವಾರ್ಯವಿದೆ~ ಎಂದು ಅವರು ಹೇಳಿದರು.

ಮುಂದುವರಿದ ಕಸದ ಸಮಸ್ಯೆ: ನಗರದ ವಿವಿಧ ಭಾಗಗಳಲ್ಲಿ ಶನಿವಾರವೂ ಕಸ ರಾಶಿ ಬಿದ್ದಿರುವುದು ಕಂಡುಬಂತು. ಕೆ.ಆರ್.ಮಾರುಕಟ್ಟೆ, ಮಡಿವಾಳ ಮಾರುಕಟ್ಟೆಯ ಬಳಿ ಹೆಚ್ಚಿನ ಪ್ರಮಾಣದಲ್ಲಿ ಕಸ ರಾಶಿ ಬಿದ್ದಿತ್ತು.ನ್ಯೂ ಗುಡ್ಡದಹಳ್ಳಿ, ಯಶವಂತಪುರ, ವಿಜಯನಗರ, ಹಲಸೂರು ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಶನಿವಾರ ಕಸ ವಿಲೇವಾರಿಯಾಗದೇ ರಸ್ತೆಯ ಬದಿಯಲ್ಲೇ ಉಳಿದಿದ್ದ ದೃಶ್ಯ ಸಾಮಾನ್ಯವಾಗಿತ್ತು.`ಮಾರುಕಟ್ಟೆಗಳಲ್ಲಿ ಉತ್ಪಾದನೆಯಾಗುವ ಹೆಚ್ಚಿನ ಪ್ರಮಾಣದ ಕಸವನ್ನು ಸಾವಯವ ಗೊಬ್ಬರಕ್ಕೆ ಬಳಸಲು ತೆಗೆದುಕೊಂಡು ಹೋಗುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಈಗ ಕಸ ರಾಶಿ ಬಿದ್ದಿದ್ದರೂ ಎತ್ತುತ್ತಿಲ್ಲ~ ಎಂದು ಯಶವಂತಪುರ ತರಕಾರಿ ಮಾರುಕಟ್ಟೆಯ ವ್ಯಾಪಾರಿ ದೇವರಾಜ್ ದೂರಿದರು.`ತ್ಯಾಜ್ಯ ನಿರ್ವಹಣೆಯ ಬಗ್ಗೆ ಆರಂಭ ಶೂರತ್ವ ಪ್ರದರ್ಶಿಸಿದ ಬಿಬಿಎಂಪಿ ಈಗ ಕಸ ನಿರ್ವಹಣೆಯ ಬಗ್ಗೆ ಅನಾಸಕ್ತಿ ತೋರುತ್ತಿದೆ. ಸಮರ್ಪಕವಾಗಿ ಕಸದ ನಿರ್ವಹಣೆ ಮಾಡಲಾಗದ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.`ಒಂದು ವಾರದಿಂದಲೂ ರಸ್ತೆಯಲ್ಲಿ ಕಸ ರಾಶಿ ಬಿದ್ದಿದ್ದು, ವಿಲೇವಾರಿ ಮಾಡಲಾಗಿಲ್ಲ. ಕಸದಿಂದ ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ವಿಪರೀತ ತೊಂದರೆಯಾಗಿದೆ. ಬಿಬಿಎಂಪಿ ಆದಷ್ಟು ಬೇಗ ಕಸ ವಿಲೇವಾರಿ ಮಾಡಬೇಕು~ ಎಂದು ನ್ಯೂ ಗುಡ್ಡದಹಳ್ಳಿಯ ಶೋಭಾ ಟೆಂಟ್ ರಸ್ತೆಯ ನಿವಾಸಿ ಮಂಜುಳಾ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry