ಕಸ ವಿಲೇವಾರಿ:ದಂಡ ಪರಿಹಾರವಲ್ಲ

7

ಕಸ ವಿಲೇವಾರಿ:ದಂಡ ಪರಿಹಾರವಲ್ಲ

Published:
Updated:
ಕಸ ವಿಲೇವಾರಿ:ದಂಡ ಪರಿಹಾರವಲ್ಲ

ಬೆಂಗಳೂರು: `ಮೂಲದಲ್ಲೇ ಕಸ ವಿಂಗಡಿಸದೇ ಇದ್ದರೆ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ. ದಂಡ ಹಾಕುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಲು ಜನರ ಸಹಭಾಗಿತ್ವ ಅತ್ಯಗತ್ಯ~ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.`ಬೆಂಗಳೂರು ಕ್ಲೈಮೆಟ್ ಇನಿಷಿಯೇಟಿವ್- ಕರ್ನಾಟಕ~ (ಬಿಸಿಸಿಇ- ಕೆ), `ಸಿವಿಕ್~, `ದಿ ಫಿಫ್ತ್ ಎಸ್ಟೇಟ್~ ಹಾಗೂ `ಗ್ರಾಹಕ ಶಕ್ತಿ~ ಸಂಸ್ಥೆಗಳು ಜಂಟಿಯಾಗಿ ಶಾಸಕರ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ತ್ಯಾಜ್ಯ ನಿರ್ವಹಣೆ- ತಂತ್ರಜ್ಞಾನದ ಬಗ್ಗೆ ಅಲ್ಲ, ಅದು ಜನರ ಬಗ್ಗೆ~ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ದಂಡ ವಿಧಿಸಿ ಪವಾಡ ನಿರೀಕ್ಷಿಸಲು ಸಾಧ್ಯವಿಲ್ಲ. ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಜನರನ್ನು ಸಕ್ರಿಯವಾಗಿ ತೊಡಗಿಸಿದ ಹೊರತು ದಂಡದಂತಹ ಕ್ರಮವಾಗಲಿ ಅಥವಾ ತಂತ್ರಜ್ಞಾನ ಅಳವಡಿಕೆಯಾಗಲಿ ಕಸದ ಬಿಕ್ಕಟ್ಟನ್ನು ಬಗೆಹರಿಸಲಾರವು~ ಎಂದು ಅವರು ತಿಳಿಸಿದರು.`ಘನ ತ್ಯಾಜ್ಯ ನಿರ್ವಹಣೆ ಹೇಗಿರಬೇಕೆಂಬುದನ್ನು ಸುಪ್ರೀಂ ಕೋರ್ಟ್ 12 ವರ್ಷಗಳ ಹಿಂದೆಯೇ ವಿವರವಾಗಿ ವಿವರಿಸಿತ್ತು. ಅದರ ಬಗ್ಗೆ ಬಿಬಿಎಂಪಿ ಆಗಲಿ, ಮಾಲಿನ್ಯ ನಿಯಂತ್ರಣ ಮಂಡಳಿ ಆಗಲಿ ಗಮನವನ್ನೇ ಹರಿಸಿರಲಿಲ್ಲ~ ಎಂದು ಅವರು ಹೇಳಿದರು.`ಇಂತಹ ಗಂಭೀರ ವಿಷಯದ ಬಗ್ಗೆಯೇ ಮುಂಬರುವ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಬೇಕು~ ಎಂದು ಅವರು ಸಲಹೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, `ತ್ಯಾಜ್ಯ ನಿರ್ವಹಣೆ ಗಂಭೀರ ಸಮಸ್ಯೆ. ಅದರ ಪರಿಹಾರಕ್ಕೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು~ ಎಂದರು.`ಯೋಜನಾ ಮಂಡಳಿ ಉಪಾಧ್ಯಕ್ಷನಾಗಿದ್ದಾಗ ನಾನು ಇಸ್ರೇಲ್‌ಗೆ ಭೇಟಿ ನೀಡಿದ್ದೆ. ಆ ದೇಶದ ಕಸ ನಿರ್ವಹಣೆ ತಂತ್ರದ ಬಗ್ಗೆ ಇಲ್ಲಿ ಹೇಳಿದರೆ ತಮ್ಮನ್ನೂ ಇಸ್ರೇಲ್‌ಗೆ ಕಳುಹಿಸಿಕೊಡಿ ಎಂದು ಕೇಳಿದವರೇ ಹೆಚ್ಚು~ ಎಂದು ಅವರು ಮಾರ್ಮಿಕವಾಗಿ ಹೇಳಿದರು.`ಗ್ರಾಹಕ ಶಕ್ತಿ~ ಸಂಸ್ಥೆಯ ಸ್ಥಾಪಕ ಸೋಮಶೇಖರ್, `ಕಸಕ್ಕೂ ಬೀದಿ ನಾಯಿಗಳ ಸಮಸ್ಯೆಗೂ ಸಂಬಂಧವಿದೆ. ಕಸ ವಿಲೇವಾರಿ ಸರಿಯಾಗಿ ಆದರೆ ನಾಯಿಗಳ ಕಾಟಕ್ಕೂ ಕಡಿವಾಣ ಬೀಳಲಿದೆ. ಹೆಬ್ಬಾಳ ಕೆರೆಗೆ ಕಸ ತಂದು ಸುರಿಯಲಾಗುತ್ತಿತ್ತು. ಪೊಲೀಸರಿಗೆ ಹೇಳಿದರೆ ಅದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದಿದ್ದರು. ಸಮಸ್ಯೆಯ ಪರಿಹಾರಕ್ಕೆ ಜನರನ್ನು ಒಳಗೊಳ್ಳುವುದೇ ಸೂಕ್ತ ಪರಿಹಾರ~ ಎಂದು ಅಭಿಪ್ರಾಯಪಟ್ಟರು.`ಸಿವಿಕ್~ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಮಾತನಾಡಿ, `ಕಾಯ್ದೆ ಪ್ರಕಾರ ಯಾವುದೇ ಸಂಸ್ಥೆಯು ಅದರ ಮುಖ್ಯ ಕಾರ್ಯವನ್ನು ಗುತ್ತಿಗೆ ಕಾರ್ಮಿಕರಿಂದ ಮಾಡಿಸುವಂತಿಲ್ಲ. ಕಸ ವಿಲೇವಾರಿ ಪಾಲಿಕೆಯ ಮುಖ್ಯ ಕಾರ್ಯ. 20 ವರ್ಷಗಳಿಂದ ಪಾಲಿಕೆ ನಿಯಮ ಬಾಹಿರವಾಗಿ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಿದೆ~ ಎಂದು ದೂರಿದರು.`ಹಸಿ ತ್ಯಾಜ್ಯವನ್ನು ಚೀಲದಲ್ಲಿ ಹಾಕಿಕೊಡುವಂತಿಲ್ಲ ಎಂದು ಪಾಲಿಕೆ ಹೇಳಿದೆ. ಸೋರುವ ಮತ್ತು ಕೆಟ್ಟ ವಾಸನೆಯ ಹಸಿ ತ್ಯಾಜ್ಯವನ್ನು ಪೌರ ಕಾರ್ಮಿಕರಿಗೆ ನೀಡುವುದು ಎಷ್ಟರ ಮಟ್ಟಿಗೆ ಸರಿ~ ಎಂದು ಪ್ರಶ್ನಿಸಿದ ಅವರು, `ಹಸಿ ತ್ಯಾಜ್ಯವನ್ನು ಮುಚ್ಚಿದ ಸ್ಥಿತಿಯಲ್ಲಿ ಕೊಡಲು ಜೈವಿಕ ಚೀಲಗಳನ್ನು ಒದಗಿಸುವ ಬಗ್ಗೆ ಪಾಲಿಕೆ ಕ್ರಮ ತೆಗೆದುಕೊಳ್ಳಬೇಕು~ ಎಂದು ಅವರು ಹೇಳಿದರು.ಮುಖ್ಯಮಂತ್ರಿಯವರ ಸಲಹೆಗಾರ (ನಗರ ವ್ಯವಹಾರ) ಎ.ರವೀಂದ್ರ ಮಾತನಾಡಿ, `ಸಮಸ್ಯೆಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು. ಬಿಬಿಎಂಪಿ ತಡವಾಗಿಯಾದರೂ ಎಚ್ಚೆತ್ತು, ಕಾರ್ಯೋನ್ಮುಖವಾಗಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಸಮಸ್ಯೆ ಪರಿಹಾರ ಸುಲಭವಾಗುತ್ತದೆ~ ಎಂದರು. `ಸಿವಿಕ್~ ಸಂಸ್ಥೆಯ ಮ್ಯಾಥ್ಯೂ ಥಾಮಸ್ ಮೊದಲಾದವರು ಉಪಸ್ಥಿತರಿದ್ದರು.ಬನ್ನೇರುಘಟ್ಟದಲ್ಲಿ 2 ವೈಜ್ಞಾನಿಕ ವಿಲೇವಾರಿ ಘಟಕ

ಬೆಂಗಳೂರು: `ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ಎರಡು ಸ್ಥಳಗಳನ್ನು ಪಾಲಿಕೆ ಗುರುತಿಸಿದೆ. ಇದರೊಂದಿಗೆ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಒತ್ತು ನೀಡಲು ಎಸ್‌ಎಲ್ ಸಮೂಹ ಸಂಸ್ಥೆಯೊಂದಿಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ~ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ಮಾಹಿತಿ ನೀಡಿದರು.ನಗರಾಭಿವೃದ್ಧಿ ಇಲಾಖೆಯು ಕ್ಯಾಪಿಟಲ್ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. `ಕಸ ವಿಂಗಡಣೆ ಯೋಜನೆಗೆ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಈಗಾಗಲೇ ಶೇ 34 ರಷ್ಟು ಪ್ರಮಾಣದಲ್ಲಿ ಕಸ ವಿಂಗಡಣೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುವುದು~ ಎಂದು ಭರವಸೆ ನೀಡಿದರು.`ತ್ಯಾಜ್ಯ ವಿಂಗಡಣೆಯ ಕುರಿತು ಪೌರಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದ್ದು, ಮನೆ ಮನೆಗೆ ತೆರಳಿ ಪ್ರಾಯೋಗಿಕವಾಗಿ ತಿಳಿಸಿಕೊಡುವಲ್ಲಿ ಪಾಲಿಕೆ ಸಿಬ್ಬಂದಿ ಶ್ರಮಹಿಸುತ್ತಿದ್ದಾರೆ. ಕಸಮುಕ್ತ ನಗರವಾಗಿಸಲು ಶತಪ್ರಯತ್ನ ನಡೆಸಲಾಗುತ್ತಿದೆ~ ಎಂದು ತಿಳಿಸಿದರು.ಮುಖ್ಯಮಂತ್ರಿಯವರ ಸಲಹೆಗಾರ (ನಗರ ವ್ಯವಹಾರ ) ಎ.ರವೀಂದ್ರ, `ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವ ಕಾಯಿದೆಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ~ ಎಂದರು.ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್, `ದೇವಸ್ಥಾನಗಳು ಹೆಚ್ಚಿರುವ ಉಡುಪಿ ನಗರದಲ್ಲಿ ಪೂಜಾಸಾಮಗ್ರಿಯ ಕಸ, ಚಿಕ್ಕಮಗಳೂರಿನಲ್ಲಿ ಕಾಫಿ  ಬೆಳೆಯಿಂದ ದೊರೆಯುವ ತ್ಯಾಜ್ಯಗಳಿರುವಂತೆ ಆಯಾ ನಗರದ ವಿಶೇಷಕ್ಕೆ ಅನುಗುಣವಾಗಿ ಹೊಸ ಬಗೆಯ ತ್ಯಾಜ್ಯ ಉತ್ಪಾದನೆಗೊಂಡಿರುತ್ತದೆ.ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಬಳಕೆ ಮಾಡುವುದರ ಬಗ್ಗೆ ಚಿಂತನೆ ನಡೆಸಬೇಕು~ಎಂದು ತಿಳಿಸಿದರು. ಘನ ತ್ಯಾಜ್ಯ ನಿರ್ವಹಣೆ ಕುರಿತ ಸುಪ್ರೀಂ ಕೋರ್ಟ್ ಸಮಿತಿಯ ಸದಸ್ಯೆ ಅಲ್ಮಿತ್ರಾ ಎಚ್ ಪಾಟೀಲ ಇತರರು ಉಪಸ್ಥಿತರಿದ್ದರು.`ಪೌರ ಕಾರ್ಮಿಕರ ಸ್ಥಿತಿ ಕಸಕ್ಕಿಂತ ಕೆಟ್ಟದಾಗಿದೆ...~

ಬೆಂಗಳೂರು: `ಮಹಾನಗರದಲ್ಲಿ ನಮ್ಮ (ಪೌರ ಕಾರ್ಮಿಕರು) ಸಂಖ್ಯೆ ಹದಿನಾಲ್ಕು ಸಾವಿರ. ಅದರಲ್ಲಿ ಶೇಕಡಾ 95ರಷ್ಟು ಮಹಿಳೆಯರು. ನಮ್ಮ ಸ್ಥಿತಿ ಕಸಕ್ಕಿಂತ ಕೆಟ್ಟದಾಗಿದೆ. ನಮ್ಮನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿಟ್ಟು, ಮಹಾನಗರವನ್ನು ಸ್ವಚ್ಛಗೊಳಿಸುವ ಮತ್ತು ಚೆಂದಗೊಳಿಸುವ ಪ್ರಯತ್ನ ಸರಿಯೇ~

-ಇದು ಗುತ್ತಿಗೆ ಪೌರ ಕಾರ್ಮಿಕ ಸಂಘಟನೆಯಾದ `ವೇಸ್ಟ್ ಕಲೆಕ್ಟರ್ಸ್ ಟ್ರೇಡ್ ಯೂನಿಯನ್~ನ ಅಧ್ಯಕ್ಷ ಬಾಲನ್ ಅವರ ಪ್ರಶ್ನೆ.ಶಾಸಕರ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ತ್ಯಾಜ್ಯ ನಿರ್ವಹಣೆ- ತಂತ್ರಜ್ಞಾನದ ಬಗ್ಗೆ ಅಲ್ಲ, ಅದು ಜನರ ಬಗ್ಗೆ~ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಬೆಂಗಳೂರಿನ ಕಸ ಮಾಫಿಯಾವನ್ನು ಎರಡು ಕುಟುಂಬಗಳು ನಿಯಂತ್ರಿಸುತ್ತಿದ್ದು, ಕಸ ವಿಲೇವಾರಿಗೆ ಪಾಲಿಕೆ ನೀಡುತ್ತಿರುವ ಹಣವೆಲ್ಲವೂ ಆ ಕುಟುಂಬಗಳ ಪಾಲಾಗುತ್ತಿದೆ~ ಎಂದು ಅವರು ಆರೋಪಿಸಿದರು.`ಕಳೆದ ಏಪ್ರಿಲ್‌ವರೆಗೂ ನಮಗೆ ಕೊಡುತ್ತಿದ್ದ ಸಂಬಳ ತಿಂಗಳಿಗೆ ಎರಡು ಸಾವಿರ ರೂಪಾಯಿ. ದೊಡ್ಡ ಹೋರಾಟದ ನಂತರ ಅದನ್ನು ಹೆಚ್ಚಿಸಲಾಯಿತು. ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ~ ಎಂದು ಅವರು ದೂರಿದರು.`ಒಂದು ಕಡೆ ನಮ್ಮ ಸಂಬಳವನ್ನು ಗುತ್ತಿಗೆದಾರರು ಲೂಟಿ ಹೊಡೆಯುತ್ತಿದ್ದಾರೆ. ಇನ್ನೊಂದೆಡೆ ಮಹಿಳಾ ಕಾರ್ಮಿಕರ ಮೇಲೆ ಗುತ್ತಿಗೆದಾರರು, ಮೇಸ್ತ್ರಿಗಳು, ಸ್ಥಳೀಯ ಗೂಂಡಾಗಳು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ನಾವು ದೂರು ಕೊಟ್ಟರೂ ಸ್ಪಂದಿಸುವವರಿಲ್ಲ~ ಎಂದು ಅವರು ತಿಳಿಸಿದರು.`ಕಾರ್ಮಿಕರ ಹಿತರಕ್ಷಣೆಗಾಗಿ ಕಾನೂನುಗಳೇನೋ ಭಾರಿ ಸಂಖ್ಯೆಯಲ್ಲಿ ಇವೆ. ಆದರೆ ನಮ್ಮ ಪಾಲಿಗೆ ಒಂದೂ ಇಲ್ಲ. ಮಲ ಹೊರುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಆದರೆ ಪ್ರತಿದಿನ ಬೆಳಿಗ್ಗೆ ರಸ್ತೆಯಲ್ಲಿ ಶ್ರೀಮಂತರು ತಮ್ಮ ನಾಯಿಗಳಿಂದ ಶೌಚ ಮಾಡಿಸುತ್ತಾರೆ. ಅದನ್ನು ನಾವೇ ತೆಗೆದು ಹಾಕಬೇಕು. ಮತ್ತೆ ನಿಷೇಧಕ್ಕೆ ಏನು ಬೆಲೆ~ ಎಂದು ಅವರು ಪ್ರಶ್ನಿಸಿದರು.`ಮುಖ, ಕೈಗಳಿಗೆ ಗವಸುಗಳನ್ನು ಕೊಟ್ಟಿಲ್ಲ. ಉಡುಪುಗಳನ್ನು ತೊಳೆಯುವ ಸಾಬೂನು, ಭತ್ಯೆಯನ್ನು ಕೊಡುವುದಿಲ್ಲ. ಡೆಟ್ಟಾಲ್ ನೀಡುವುದಿಲ್ಲ. ನಮಗೆ ಶೌಚಾಲಯವೂ ಇಲ್ಲ, ಮೂತ್ರಾಲಯವೂ ಇಲ್ಲ. ಕಡೇ ಪಕ್ಷ ಕುಡಿಯುವ ನೀರು ಸಹ ಕೊಡುವುದಿಲ್ಲ. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಇಲ್ಲ. ಭತ್ಯೆಯೂ ಇಲ್ಲ~ ಎಂದು ಅವರು ನೊಂದು ನುಡಿದರು.`ಮಹಿಳಾ ಕಾರ್ಮಿಕರು ಬೆಳಿಗ್ಗೆ 5.30ಕ್ಕೆ ಮನೆ ಬಿಟ್ಟು ಕಸ ಗುಡಿಸಲು ಹೋಗುತ್ತಾರೆ. ಮಕ್ಕಳನ್ನು ಯಾರು ನೋಡಿಕೊಳ್ಳಬೇಕು?~ ಎಂದು ಕೇಳಿದ ಅವರು, `ರಸ್ತೆಯಲ್ಲಿ ಗುಡಿಸುವಾಗ ವಾಹನಗಳು ಡಿಕ್ಕಿ ಹೊಡೆದು ಗಾಯವಾದರೆ, ಮೃತ ಪಟ್ಟರೆ ಯಾವ ಪರಿಹಾರವೂ ಇಲ್ಲ~ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry