ಕಸ ವಿಲೇವಾರಿ ಕಗ್ಗಂಟು

ಶುಕ್ರವಾರ, ಮೇ 24, 2019
30 °C

ಕಸ ವಿಲೇವಾರಿ ಕಗ್ಗಂಟು

Published:
Updated:

ಬೆಂಗಳೂರಿನ ವಸತಿ ಪ್ರದೇಶಗಳ ಹಾದಿ-ಬೀದಿಗಳಲ್ಲಿ ಕಸ, ರಾಶಿ ರಾಶಿಯಾಗಿ ಬಿದ್ದಿದೆ. ಮೂರು-ನಾಲ್ಕು ದಿನಗಳಿಂದ ಘನತ್ಯಾಜ್ಯ ವಿಲೇವಾರಿ ಆಗಿಲ್ಲ. ಗುಡ್ಡೆ ಬಿದ್ದಿರುವ ಕಸ ಕೊಳೆತು ದುರ್ನಾತ ಬೀರತೊಡಗಿದೆ. ನಗರ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ಒದಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವ ಸಾಧ್ಯತೆಗಳೇ ಅಧಿಕ. ಕಸ ತುಂಬುವ ಕ್ರಿಯೆಯಲ್ಲಿ ಎಲ್ಲರೂ ಭಾಗಿಗಳೇ. ಆದರೆ, ನಿರ್ವಹಣೆ ಹೇಗೆ ಎಂಬ ವಿಚಾರದಲ್ಲಿ ಯಾರಿಗೂ ಕಾಳಜಿ ಇಲ್ಲ. ಅದರ ಪರಿಣಾಮವನ್ನು ಬೆಂಗಳೂರು ಒಳಗೊಂಡಂತೆ ಎಲ್ಲ ನಗರಗಳೂ ಈಗ ಎದುರಿಸುತ್ತಿವೆ. ರಾಜಧಾನಿಯಲ್ಲಿ ಪ್ರತಿನಿತ್ಯ ಸುಮಾರು ಐದು ಸಾವಿರ ಟನ್ ಕಸ ಸಂಗ್ರಹವಾಗುತ್ತಿದೆ. ಕಸ ಸಂಗ್ರಹ ಮತ್ತು ಸಾಗಣೆ ವಹಿವಾಟು ವಾರ್ಷಿಕ 200 ಕೋಟಿ ರೂಪಾಯಿಯಷ್ಟು ಬೃಹತ್ ಬಾಬ್ತು. ಈ ಹೊಣೆಯನ್ನು 70 ಮಂದಿ ಗುತ್ತಿಗೆದಾರರು ಹೊತ್ತಿದ್ದಾರೆ. ಆದರೆ, ಸಂಗ್ರಹಿಸಿದ ಕಸವನ್ನು ಎಲ್ಲಿ ಸುರಿಯಬೇಕು ಎನ್ನುವ ಗುತ್ತಿಗೆದಾರರ ಪ್ರಶ್ನೆಗೆ ಉತ್ತರ ಹೇಳುವ ಸ್ಥಿತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಲ್ಲ. ಈ ಪ್ರಶ್ನೆ ಆಗಿಂದಾಗ್ಗೆ ತಲೆದೋರುತ್ತಲೇ ಇದೆ. ಶಾಶ್ವತ ಪರಿಹಾರ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಕಸ ವಿಲೇವಾರಿಗೆ ಈಗಲೂ ಇದೇ ಅಂಶ ತೊಡಕಾಗಿ ಪರಿಣಮಿಸಿದೆ.ಸಾಮಾನ್ಯ ಕಸ ಹಾಗೂ ಹತ್ತಾರು ಬಗೆಯ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಂಗಡಿಸಿ, ವಿಲೇವಾರಿ ಮಾಡುವಂತಹ ಸಮರ್ಪಕ ವ್ಯವಸ್ಥೆಯೇ ಬೆಂಗಳೂರಿನಲ್ಲಿ ಇಲ್ಲ. ನಗರದ ಕಸವನ್ನು ವಾಹನಗಳಲ್ಲಿ ತುಂಬಿಕೊಂಡು ಹೊರವಲಯದ ಗ್ರಾಮಗಳ ಖಾಲಿ ಜಮೀನಿನಲ್ಲಿ ಸುರಿಯುವುದಕ್ಕೆ ಗ್ರಾಮಸ್ಥರು ಈಗ ಅವಕಾಶ ಕೊಡುತ್ತಿಲ್ಲ. ಹೊಸಕೋಟೆ ಬಳಿಯ ಮಂಡೂರು, ಯಲಹಂಕ ಹೊರವಲಯದ ಮಾವಳ್ಳಿಪುರ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡ್ಲಹಳ್ಳಿ ಹೊರವಲಯದಲ್ಲಿ ಕಸ ಸುರಿಯಲಾಗುತ್ತಿತ್ತು. ಸ್ಥಳೀಯರ ವಿರೋಧದ ಕಾರಣ ಮಾವಳ್ಳಿಪುರ ಸಮೀಪ ಕಸ ಸುರಿಯುವುದನ್ನು ಕೆಲವು ದಿನಗಳ ಹಿಂದೆ ಪಾಲಿಕೆ ಸ್ಥಗಿತಗೊಳಿಸಿತ್ತು. ಗುಂಡ್ಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಂದಲೂ ಈಗ ಪ್ರತಿಭಟನೆಯ ಧ್ವನಿ ಮೊಳಗಿದ ಕಾರಣ ಪಾಲಿಕೆ ಇಕ್ಕಟ್ಟಿಗೆ ಸಿಲುಕಿದೆ. ಗೊಬ್ಬರ ಉತ್ಪಾದಿಸುವುದಾಗಿ ಹೇಳಿಕೊಂಡು ಖಾಸಗಿ ಕಂಪೆನಿಯೊಂದು ಇಲ್ಲಿ ಕಸ ರಾಶಿ ಹಾಕಿದೆ.ವರ್ಷಗಳು ಉರುಳಿದರೂ ಉತ್ಪಾದನೆ ಮಾತ್ರ ಆರಂಭವಾಗಿಲ್ಲ. ಬದಲಿಗೆ ಕಸದಿಂದ ರೋಗ-ರುಜಿನಗಳು ಹೆಚ್ಚಿವೆ ಎಂಬುದು ಸ್ಥಳೀಯರ ಆರೋಪ. ಕಸದ ನಿರ್ವಹಣೆ ಪಾಲಿಕೆಯ ಜವಾಬ್ದಾರಿಯಾದರೂ ಕಸ ಹಾಕಲು ಬೇಕಾದ ಜಮೀನನ್ನು ಮತ್ತು ಸಂಸ್ಕರಿಸಲು ಅಗತ್ಯ ನೆರವನ್ನು ಒದಗಿಸುವ ವಿಷಯದಲ್ಲಿ ಸರ್ಕಾರದ ಜವಾಬ್ದಾರಿಯೂ ಇದೆ. ಕಸ ನಿರ್ವಹಣೆ ಸಮಸ್ಯೆಯನ್ನು ಇವೆರಡೂ ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ. ಅಂತೆಯೇ ಹೋಟೆಲ್‌ಗಳು, ಕಲ್ಯಾಣ ಮಂಟಪಗಳು, ಆಸ್ಪತ್ರೆ, ಅಂಗಡಿ ಮುಂಗಟ್ಟುಗಳ ಕಸವನ್ನೆಲ್ಲ ಬೀದಿಗೆ ಎಸೆದು ಅದನ್ನು ಪಾಲಿಕೆಯೇ ಹೊರಕ್ಕೆ ಸಾಗಿಸಲಿ ಎನ್ನುವ ಸಾರ್ವಜನಿಕರ ಧೋರಣೆಯೂ ಬದಲಾಗಬೇಕು. ಈ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಜತೆಗೆ ಶಾಶ್ವತವಾದ ಪರಿಹಾರ ಮಾರ್ಗ ಕಂಡುಕೊಳ್ಳುವುದು ತುರ್ತು ಅಗತ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry