ಕಸ ವಿಲೇವಾರಿ ಘಟಕ ಸ್ಥಾಪನೆ: ಡಿಸಿ ಕಚೇರಿಗೆ ಮುತ್ತಿಗೆ

7

ಕಸ ವಿಲೇವಾರಿ ಘಟಕ ಸ್ಥಾಪನೆ: ಡಿಸಿ ಕಚೇರಿಗೆ ಮುತ್ತಿಗೆ

Published:
Updated:

ರಾಮನಗರ: ಬಿಬಿಎಂಪಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಜನಾಂದೋಲನ ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬಿಡದಿ ಹೋಬಳಿಯಲ್ಲಿ ಬೆಂಗಳೂರು ಕಸವನ್ನು ಸುರಿಯಲು ನಿರ್ಧರಿಸಿರುವ ಸರ್ಕಾರದ ಧೋರಣೆಯನ್ನು ವಿರೋಧಿಸಿ ಪ್ರತಿಭಟಿಸಿದರು. ಜಿಲ್ಲೆಯಲ್ಲಿ ಪರಿಸರ ನಾಶವಾಗುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ಅವರು ಕೂಡಲೇ ತಮ್ಮ ಮೌನವನ್ನು ಮುರಿದು, ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್‌ಗೌಡ ಒತ್ತಾಯಿಸಿದರು.

ಅಖಿಲ ಕರ್ನಾಟಕ ದಲಿತ ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ, `ಸರ್ಕಾರ ತಕ್ಷಣ ತನ್ನ ತೀರ್ಮಾನವನ್ನು ಹಿಂಪಡೆಯದ್ದಿದ್ದರೆ, ಹೋರಾಟ ಮತ್ತಷ್ಟು ತೀವ್ರವಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ವಿ.ಶ್ರಿರಾಮ ರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, `ಕೋಡಿಯಾಲ ಕರೇನಹಳ್ಳಿ ಬಳಿಯ 40 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ಕೆಲವು ಅಂಶಗಳ ಬಗ್ಗೆ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ ಜಿಲ್ಲಾಡಳಿತ ಅದಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ' ಎಂದು ಸ್ಪಷ್ಟಪಡಿಸಿದರು.  ಪ್ರತಿಭಟನಾಕಾರರು ನೀಡಿದ ಮನವಿಯನ್ನು ಸ್ವೀಕರಿಸಿದ ಅವರು ಸರ್ಕಾರದ ಗಮನಕ್ಕೆ ಇದನ್ನು ಕಳುಹಿಸಲಾಗುವುದು ಎಂದರು.

ಬೈರಮಂಗಲ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಡಿ.ಗೋಪಾಲ್, ಸದಸ್ಯ ಸತೀಶ್, ಗ್ರಾಮಸ್ಥರಾದ ನಾಗರತ್ನ, ಕೆ.ಜಿ.ನಾಗರಾಜ್, ಎಸ್. ಗೋಪಾಲ್, ಬಿ.ಭೂಪಾಲ್, ರಮೇಶ್ ಕೋಡಿಯಾಲ, ಕಾಶಿನಾಥ್ ಪೈ, ಚಂದ್ರಶೇಖರ್ ವೇದಿಕೆಯ ಪ್ರಮುಖರಾದ ಯೋಗಿಶ್, ಮಂಗಳಮ್ಮ, ಹೆಗ್ಗರೆ ರೂಪಾ, ಗೀತಾ ರವೀಂದ್ರ, ನಾಗಲಕ್ಷ್ಮಿ ಗೌಡ, ಕೆಂಪಮ್ಮ, ಅಖಿಲ ಕರ್ನಾಟಕ ದಲಿತ ಹಿಂದುಳಿದ ವರ್ಗಗಳ ಯುವ ಘಟಕದ ಅಧ್ಯಕ್ಷ ಪಿ.ಸಿ.ಮರಿಯಪ್ಪ, ಸಿದ್ದವೀರಯ್ಯ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry