ಭಾನುವಾರ, ಆಗಸ್ಟ್ 25, 2019
20 °C

ಕಸ ವಿಲೇವಾರಿ: ಬಿಬಿಎಂಪಿ ಹೊಸ

Published:
Updated:

ನವದೆಹಲಿ: ಬೆಂಗಳೂರು ನಗರದ ಘನತ್ಯಾಜ್ಯ ವಿಲೇವಾರಿಗೆ 2012ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸದಾಗಿ ಕರೆದಿದ್ದ ಅಂದಾಜು 1200 ಕೋಟಿ ರೂಪಾಯಿ ಮೊತ್ತದ ಟೆಂಡರ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  ತಳ್ಳಿಹಾಕಿದೆ.ಬಿ.ಎಸ್. ಚೌಹಾಣ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಬಿ.ಆರ್. ಗಣೇಶ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದರು. ತ್ಯಾಜ್ಯ ವಿಂಗಡಣೆ, ಸಾಗಣೆ ಮತ್ತು ವಿಲೇವಾರಿಗಾಗಿ 2012ರ ಸೆಪ್ಟೆಂಬರ್ 18ರಂದು ಹೊಸದಾಗಿ ಟೆಂಡರ್ ಕರೆಯಲು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ವಿಭಾಗೀಯ ಪೀಠ ಒಪ್ಪಿಗೆ ನೀಡಿತ್ತು.

ಪ್ರಕ್ರಿಯೆಯಲ್ಲಿ ಹಲವಾರು ಲೋಪದೋಷಗಳಿವೆ ಎಂದು ಆಕ್ಷೇಪಿಸಿ ಗಣೇಶ್ ಹಾಗೂ ಇತರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ವಿಷಯದಲ್ಲಿ ಮಧ್ಯೆಪ್ರವೇಶಿಸಲು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.ಕಸ ವಿಲೇವಾರಿಗಾಗಿ ಸೆಪ್ಟೆಂಬರ್ 18ರಂದು ಟೆಂಡರ್ ಕರೆಯಲಾಗಿತ್ತು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೇವಲ ನಾಲ್ಕು ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಸೆ.19ರಂದು ರಜಾದಿನ ಮತ್ತು 20ರಂದು ಭಾರತ ಬಂದ್ ಇತ್ತು. ಮುಂದಿನ ಎರಡು ದಿನ `ಇ-ಪೋರ್ಟಲ್' ಕಾರ್ಯನಿರ್ವಹಿಸುತ್ತಿರಲಿಲ್ಲ.

ಹೀಗಾಗಿ ಬಹಳ ಜನರಿಗೆ ಅರ್ಜಿ ಸಲ್ಲಿಸಲು ಆಗಿರಲಿಲ್ಲ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಿರಿಯ ವಕೀಲ ವಿಶ್ವನಾಥ್ ಶೆಟ್ಟಿ ಮತ್ತು ಇ.ಸಿ. ವಿದ್ಯಾಸಾಗರ್ ಅವರು ಬಿಬಿಎಂಪಿ ಪರ ಮತ್ತು ಲಕ್ಷ್ಮಿನಾರಾಯಣ ಅವರು ಅರ್ಜಿದಾರರ ಪರ ವಾದ ಮಂಡಿಸಿದರು.

Post Comments (+)