ಸೋಮವಾರ, ಮಾರ್ಚ್ 1, 2021
31 °C

ಕಸ ವಿಲೇವಾರಿ ವಿರುದ್ಧ ಪಾಲಿಕೆಯಲ್ಲಿ ದನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಸ ವಿಲೇವಾರಿ ವಿರುದ್ಧ ಪಾಲಿಕೆಯಲ್ಲಿ ದನಿ

ಬೆಂಗಳೂರು: ನಗರದ ಯಲಹಂಕ ಸಮೀಪದ ಮಾವಳ್ಳಿಪುರ ಬಳಿ `ರಾಮ್ಕಿ~ ಕಂಪೆನಿಯು ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದೆ ಎಂದು ಆರೋಪಿಸಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, ಕಂಪೆನಿಗೆ ವಿದ್ಯುತ್ ಘಟಕ ಸ್ಥಾಪಿಸಲು ಅನುಮತಿ ನೀಡಿರುವ ಪಾಲಿಕೆ ಆಡಳಿತದ ಔಚಿತ್ಯವನ್ನೇ ಪ್ರಶ್ನಿಸಿದರು.ಬಿಬಿಎಂಪಿಯ 2012-13ನೇ ಸಾಲಿನ ಬಜೆಟ್ ಮೇಲೆ ನಡೆದ ಮುಂದುವರಿದ ಚರ್ಚೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, `ಹಸಿರು ತ್ಯಾಜ್ಯ ಸಂಸ್ಕರಣೆ ನಿರ್ವಹಣೆ ಮಾಡಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹಲವು ಕಂಪೆನಿಗಳು ಆಸಕ್ತಿ ತೋರಿದ್ದರೂ ಜಾಗತಿಕ ಟೆಂಡರ್ ಕರೆಯದೆ `ರಾಮ್ಕಿ~ ಕಂಪೆನಿಗೆ ವಿದ್ಯುತ್ ಘಟಕ ಸ್ಥಾಪಿಸಲು ಅನುಮೋದನೆ ನೀಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ~ ಎಂದು ಆರೋಪಿಸಿದರು.`ಇದುವರೆಗೆ ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಕಂಪೆನಿಯು ವಿಫಲವಾಗಿದೆ. ಪರಿಣಾಮ ಸುತ್ತಮುತ್ತಲಿನ ವಾತಾವರಣ ಹಾಳಾಗಿದೆ. ಅಂತರ್ಜಲ ಮಲಿನಗೊಂಡಿದೆ. ಮಾವಳ್ಳಿಪುರ ಕೆರೆ ಕಲುಷಿತಗೊಂಡಿರುವುದರಿಂದ ಅದರ ನೀರು ತೊರೆಕಾಡನಹಳ್ಳಿ ಕೆರೆಗೂ ಬಂದು ಸೇರುತ್ತಿದೆ. ಮಾವಳ್ಳಿಪುರ ಕೆರೆ ನೀರು ಕುಡಿಯಲು ಯೋಗ್ಯವಾಗಿಲ್ಲ. ಪಾಲಿಕೆಯು ಸ್ಥಳೀಯರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಬಹುದು. ಆದರೆ, ಶಾಶ್ವತ ಪರಿಹಾರ ಏನು?~ ಎಂದರು.`ಮಾವಳ್ಳಿಪುರದ ಬಳಿ ಪ್ರತಿ ದಿನ 450 ಟನ್‌ಗಳಷ್ಟು ಕಸ ವಿಲೇವಾರಿ ಮಾಡಲಾಗುತ್ತಿದೆ. ತಿಂಗಳಿಗೆ 10ರಿಂದ 12 ಸಾವಿರ ಟನ್ ಕಸವನ್ನು ಸುರಿಯುತ್ತಿದ್ದರೂ ಸುಮಾರು ಐದು ಲಕ್ಷ ಟನ್‌ಗಳಷ್ಟು ಕಸ ಈಗಲೂ ಸಂಸ್ಕರಣೆಯಾಗದ ಹಾಗೇ ಬಿದ್ದಿದೆ. ಇದು ಸುತ್ತಲಿನ ಗ್ರಾಮಗಳ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಗ್ರಾಮಸ್ಥರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ~ ಎಂದು ಸಭೆಯ ಗಮನ ಸೆಳೆದರು.`ರಾಮ್ಕಿ~ ಕಂಪೆನಿಯು ಇಷ್ಟೆಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದರೂ ಮಾನವೀಯ ನೆಲೆಗಟ್ಟಿನಲ್ಲಾದರೂ ಅದರ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ. ಕಡಿಮೆ ಮೊತ್ತ ನಮೂದಿಸಿದ ಅನೇಕ ಕಂಪೆನಿಗಳು ಬಿಡ್ ಮಾಡಲು ಮುಂದೆ ಬಂದರೂ `ರಾಮ್ಕಿ~ ಕಂಪೆನಿಗೇ ವಿದ್ಯುತ್ ಘಟಕ ಸ್ಥಾಪಿಸಲು ಅನುಮತಿ ನೀಡುವ ಅವಶ್ಯಕತೆ ಏನಿತ್ತು?~ ಎಂದು ಅವರು ಪ್ರಶ್ನಿಸಿದರು.`ಮಾವಳ್ಳಿಪುರ ಬಳಿ ವಿದ್ಯುತ್ ಘಟಕ ಸ್ಥಾಪಿಸಲು `ರಾಮ್ಕಿ~ ಕಂಪೆನಿಗೆ ಅನುಮತಿ ನೀಡುವ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಸ್ತಾವವನ್ನು ಸಭೆಗೆ ಮರು ಮಂಡಿಸಿ ಅನುಮೋದನೆ ಪಡೆಯಬೇಕು~ ಎಂದು ಅವರು ಆಗ್ರಹಿಸಿದರು.ಜುಲೈ 8 ಅಥವಾ 9ರಂದು ಭೇಟಿ

ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಡಿ. ವೆಂಕಟೇಶಮೂರ್ತಿ, `ಬಜೆಟ್ ಮೇಲಿನ ಚರ್ಚೆ ಮುಗಿದ ನಂತರ ಈ ತಿಂಗಳ 8 ಅಥವಾ 9ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಿದ್ದೇನೆ~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.