ಗುರುವಾರ , ಏಪ್ರಿಲ್ 15, 2021
22 °C

ಕಸ ವಿಲೇವಾರಿ ಸಂಘರ್ಷ: ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಸ ವಿಲೇವಾರಿ ಸಂಘರ್ಷ: ವ್ಯಕ್ತಿ ಸಾವು

ಯಲಹಂಕ: ತ್ಯಾಜ್ಯ ವಿಲೇವಾರಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆಯಲ್ಲಿ ಕುಸಿದು ಬಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಪರಿಣಾಮ ಮಾವಳ್ಳಿಪುರದಲ್ಲಿ ಗುರುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಕುರುಬರಹಳ್ಳಿ ನಿವಾಸಿ ಅಡುಗೆ ಕೆಲಸದ ಗುತ್ತಿಗೆದಾರ ಶ್ರೀನಿವಾಸ್ (27) ಮೃತಪಟ್ಟವರು.ಉಪಮುಖ್ಯಮಂತ್ರಿ ಆರ್.ಅಶೋಕ ಅವರು ಮಾವಳ್ಳಿಪುರದ ಕಸ ವಿಲೇವಾರಿ ಘಟಕ ಪುನರಾರಂಭದ ಬಗ್ಗೆ ಬುಧವಾರ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಬಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಮ್ಮಂದಿಗೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು ಮಾತುಕತೆ ನಡೆಸಲಿದ್ದಾರೆ ಎಂದು ಸ್ಥಳೀಯರಿಗೆ ಮಾಹಿತಿ ನೀಡಿದರು.ಆದರೆ, ಮೂರು ಗಂಟೆ ಕಾದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲಿಲ್ಲ. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜಯ್ಯ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ಇಲ್ಲಿ ಕಸ ವಿಲೇವಾರಿ ಮಾಡಲಾಗುವುದು. ಕಸದ ವಾಹನವನ್ನು ತಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಸ್ಥಳೀಯರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಸ ವಿಲೇವಾರಿ ಘಟಕಕ್ಕೆ ತಡೆಯಾಜ್ಞೆ ನೀಡಿರುವ ಆದೇಶದ ಪ್ರತಿಯನ್ನು ಪ್ರದರ್ಶಿಸಿ, ಕಸ ವಿಲೇವಾರಿ ಮಾಡಲು ನಿಮ್ಮ ಬಳಿ ಯಾವುದಾದರೂ ಆದೇಶವಿದೆಯೇ? ಇದ್ದರೆ ಅದನ್ನು ತೋರಿಸಿ ಎಂದು ಪ್ರಶ್ನಿಸಿದರು. ಆದೇಶವನ್ನು ನಿಮಗೆ ತೋರಿಸುವ ಅವಶ್ಯಕತೆಯಿಲ್ಲ. ಗೃಹ ಇಲಾಖೆಯಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ನೀವು ಯಾವುದೇ ಕಾರಣಕ್ಕೂ ತಡೆಯಬಾರದು ಎಂದು ಎಸ್ಪಿ ವಾದಿಸಿದರು ಎನ್ನಲಾಗಿದೆ.ಈ ಹಂತದಲ್ಲಿ ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಶ್ರೀನಿವಾಸ್ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತ ಶ್ರೀನಿವಾಸ್

ಪ್ರತಿಭಟನಾನಿರತ ಶ್ರೀನಿವಾಸ್ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ಮಾವಳ್ಳಿಪುರದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ `ರಾಮ್ಕಿ~ ಸಂಸ್ಥೆಯ ವಾಹನವನ್ನು ತಡೆದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಕ್ರಿಮಿನಲ್ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದಾಗ, ಕೆಲಕಾಲ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾ.ಪಂ. ಸದಸ್ಯ ಬಿ.ಶ್ರೀನಿವಾಸ್, ಪೊಲೀಸರು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಬಿಬಿಎಂಪಿ ಅಧಿಕಾರಿಗಳು ಬರಲಿದ್ದಾರೆ ಎಂದು ತಮ್ಮನ್ನು ಆಹ್ವಾನಿಸಿ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೆ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಗ್ರಾಮದಲ್ಲಿ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದು ದೂರಿದರು.ಪರಿಹಾರಕ್ಕೆ ಒತ್ತಾಯ:

ಮೃತ ಶ್ರೀನಿವಾಸ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಅವರ ಸಾವಿಗೆ ಕಾರಣರಾದ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಹಾಗೂ ಉಪ ಮುಖ್ಯಮಂತ್ರಿ ಅಶೋಕ್ ವಿರುದ್ಧ ಕೊಲೆ ದೂರು ದಾಖಲಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಡಿ.ಪ್ರಕಾಶ್ ಮಾತನಾಡಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರಿಶೀಲನೆಗಾಗಿ ಇಲ್ಲಿಗೆ ಭೇಟಿ ನೀಡಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರದ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿ ಮೃತಪಟ್ಟರೆ ಪೊಲೀಸರಾಗಲಿ ಅಥವಾ ಬೇರೆಯವರಾಗಲಿ ಜವಾಬ್ದಾರರಾಗುವುದಿಲ್ಲ. ಅವರು ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎಂಬುದು ವೈದ್ಯಕೀಯ ಪರೀಕ್ಷೆಯ ನಂತರ ತಿಳಿಯಲಿದೆ ಎಂದು ಹೇಳಿದರು.ದಲಿತ ಸಂಘಟನೆ ಮುಖಂಡರಾದ ವಿ.ನಾಗರಾಜ್, ಮುನಿಆಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಚಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ, ಗೋಪಿನಾಥ್, ಪ್ರಕಾಶ್, ಜೆಡಿ(ಎಸ್) ಮುಖಂಡರಾದ ಡಿ.ಜಿ. ಅಪ್ಪಯಣ್ಣ, ಪ್ರೇಂಕುಮಾರ್, ರೈತ ಸಂಘದ ಮುಖಂಡರಾದ ವಿ.ಆರ್.ನಾರಾಯಣರೆಡ್ಡಿ, ಕಡತನಮಲೆ ಸತೀಶ್ ಮೊದಲಾದವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.