ಮಂಗಳವಾರ, ಏಪ್ರಿಲ್ 20, 2021
27 °C

ಕಸ ಸಂಗ್ರಹಣಾ ಘಟಕಕ್ಕೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕಿನ ಮಾವಳಿಪುರದಲ್ಲಿ ರಾಮ್ಕಿ ಸಂಸ್ಥೆ ನಿರ್ವಹಿಸುತ್ತಿರುವ ಬಿಬಿಎಂಪಿ ಕಸ ಸಂಗ್ರಹಣಾ ಘಟಕವನ್ನು ಕೂಡಲೇ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಕಾರ್ಯಕರ್ತರು ಹಾಗೂ ಸ್ಥಳೀಯ ಗ್ರಾಮಗಳ ನಿವಾಸಿಗಳು ಘಟಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಯೋಜಕ ವಿ.ನಾಗರಾಜ್, ಮಾವಳಿಪುರ ಗ್ರಾಮದಲ್ಲಿ ರಾಮ್ಕಿ ಸಂಸ್ಥೆಯವರು ಕಾನೂನುಬಾಹಿರವಾಗಿ ಕಸ ಸಂಗ್ರಹಣಾ ಘಟಕವನ್ನು ನಿರ್ವಹಿಸುತ್ತಿದ್ದು, ಘನ ತ್ಯಾಜ್ಯದಿಂದ ಬರುವ ವಿಷಪೂರಿತ ಲಿಚೆಟ್ ನೀರನ್ನು ಕೆರೆಗಳಿಗೆ ಹೋಗುವಂತೆ ಮಾಡಿದ್ದಾರೆ. ಇದರ ಪರಿಣಾಮ ಅಂತರ್ಜಲ ಕಲುಷಿತವಾಗಿ ಗ್ರಾಮಸ್ಥರು ಹಾಗೂ ಪ್ರಾಣಿಪಕ್ಷಿ,ಜಾನುವಾರುಗಳು ಇದೇ ನೀರನ್ನು ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಗ್ರಾಮದ ಮುಖಂಡ ಬಿ.ಶ್ರೀನಿವಾಸ್ ಮಾತನಾಡಿ, ಘಟಕದಿಂದ ಸುತ್ತಮುತ್ತಲಿನ 15 ಗ್ರಾಮಗಳ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ 2005ರಿಂದಲೂ ಪಾಲಿಕೆ ಆಯುಕ್ತರೊಂದಿಗೆ ಹಲವಾರು ಸುತ್ತಿನ ಸಭೆಗಳು ನಡೆದಿದ್ದರೂ ಅಧಿಕಾರಿಗಳು ಕೇವಲ ಆಶ್ವಾಸನೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂದು ಅಳಲನ್ನು ತೋಡಿಕೊಂಡರು.ಈ ಎಲ್ಲ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ರಾಜಕಾರಣಿಗಳು, ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರಿಸರ ವಿರೋಧಿ ಧೋರಣೆ ಅನುಸರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೆ ಘಟಕವನ್ನು ಸ್ಥಳಾಂತರಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಇಂಜಿನಿಯರ್ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಾ.ಪಂ.ಮಾಜಿ ಅಧ್ಯಕ್ಷ ಡಿ.ರಾಜಣ್ಣ, ಮಾಜಿ ನಗರಸಭೆ ಸದಸ್ಯ ಸೋಮಶೇಖರ್, ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಹೆಬ್ಬಾಳ ವೆಂಕಟೇಶ್, ಜಿಲ್ಲಾ ಸಂಯೋಜಕ ಎಂ.ರಮೇಶ್, ಉತ್ತರ ತಾಲ್ಲೂಕು ಸಂಯೋಜಕ ಚಂದ್ರಶೇಖರ್ ಸೇರಿದಂತೆ ಗ್ರಾಮಸ್ಥರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.