ಕಸ ಸಂಗ್ರಹದಲ್ಲಿ ಲೋಪ: ಉಚಿತ ಸಹಾಯವಾಣಿ

7

ಕಸ ಸಂಗ್ರಹದಲ್ಲಿ ಲೋಪ: ಉಚಿತ ಸಹಾಯವಾಣಿ

Published:
Updated:

ಮಂಗಳೂರು: ನಗರದ ಎಲ್ಲಾ ವಾರ್ಡ್‌ಗಳ ವ್ಯಾಪ್ತಿಯಲ್ಲೂ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಶೀಘ್ರ ಆರಂಭವಾಗಲಿದ್ದು, ಸಂಗ್ರಹ ಕಾರ್ಯದಲ್ಲಿ ಯಾವುದೇ ಲೋಪವಾದರೆ ತಕ್ಷಣ ಪಾಲಿಕೆಯ ಗಮನಕ್ಕೆ ತರುವ ಸಲುವಾಗಿ ಉಚಿತ ಸಹಾಯವಾಣಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.ಎಸ್‌ಎಂಎಸ್ ಅಥವಾ ಧ್ವನಿ ಆಧಾರಿತ ಸಹಾಯವಾಣಿ ಇದಾಗಿದ್ದು, ನಿಗದಿತ ದಿನ ಕಸ ಸಾಗಿಸಲು ಗುತ್ತಿಗೆದಾರರು ಬಾರದಿದ್ದರೆ ಸಹಾಯವಾಣಿಗೆ ಸಂದೇಶ ರವಾನಿಸಬಹುದು ಅಥವಾ ಕರೆ ಮಾಡಿ ದೂರು ಸಲ್ಲಿಸಬಹುದು. ಪಾಲಿಕೆ ತಕ್ಷಣ ವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಒಳಚರಂಡಿ, ನೀರು ಪೂರೈಕೆ, ಬೀದಿದೀಪದಂತಹ ಹಲವು ವಿಷಯಗಳಿಗೂ ಈ ಸಹಾಯವಾಣಿಯ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.

ಹೊಸದಾಗಿ ರೂಪಿಸಲಾಗಿರುವ ಎಂಟು ಪ್ಯಾಕೇಜ್‌ಗಳ ಕಸ ವಿಲೇವಾರಿ ಯೋಜನೆಯಂತೆ ಗುತ್ತಿಗೆದಾರ ಮನೆ ಮನೆಯಿಂದ ಘನ ತ್ಯಾಜ್ಯ ಸಂಗ್ರಹಿಸಬೇಕಾಗುತ್ತದೆ. ಪ್ಲಾಸ್ಟಿಕ್ ವಸ್ತುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕಾಗುತ್ತದೆ. ಗುತ್ತಿಗೆದಾರರು ಸಿಮೆಂಟ್ ಮತ್ತು ಲೋಹದ ಕಸದ ತೊಟ್ಟಿಗಳಿಂದ ದಿನನಿತ್ಯ ಕಸ ಸಂಗ್ರಹಿಸಿ ಸಾಗಣೆ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಆನ್‌ಲೈನ್‌ನಲ್ಲೇ ಗಮನಿಸುವ ತಂತ್ರಜ್ಞಾನವನ್ನು ಪಾಲಿಕೆ ಅಭಿವೃದ್ಧಿಪಡಿಸಿಕೊಳ್ಳಲಿದೆ ಎಂದು ಅವರು ತಿಳಿಸಿದರು.ಪ್ಲಾಸ್ಟಿಕ್ ನಿರ್ಬಂಧ ಆರಂಭದಲ್ಲಿ ಉತ್ತಮ ಫಲಿತಾಂಶ ನೀಡಿದರೂ, ಇದೀಗ ಮತ್ತೆ ಪ್ಲಾಸ್ಟಿಕ್ ಹಾವಳಿ ಕಾಣಿಸಿದೆ ಎಂದು ಹರಿನಾಥ್ ದೂರಿದರು. ಕಸದ ತೊಟ್ಟಿಗಳು ತುಂಬಿ ತುಳುಕುತ್ತಿರುವ ವಿಚಾರವನ್ನು ಇತರ ಸದಸ್ಯರು ಸಭೆಯ ಗಮನಕ್ಕೆ ತಂದರು.`ಮನೆ ಮನೆಯಿಂದ ಕಸ ಸಂಗ್ರಹಿಸುವಾಗ ತೊಟ್ಟಿಗಳ ಪ್ರಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ. ಆದರೂ ನಗರದಲ್ಲಿ ಕನಿಷ್ಠ 100 ತೊಟ್ಟಿಗಳು ಬೇಕೆಂದು ಅಂದಾಜಿಸಲಾಗಿದೆ. 30 ಹೊಸ ತೊಟ್ಟಿಗಳು ಬಂದಿದ್ದು, ಹಳೆಯ 25 ತೊಟ್ಟಿಗಳನ್ನು ದುರಸ್ತಿ ಮಾಡಲಾಗಿದೆ, ಇನ್ನೂ 30 ತೊಟ್ಟಿಗಳು ಶೀಘ್ರ ನಗರಕ್ಕೆ ಬರಲಿವೆ ಎಂದು ಆಯುಕ್ತರು ವಿವರ ನೀಡಿದರು.ಸಭೆಯ ಆರಂಭವಾಗುತ್ತಿದ್ದಂತೆಯೇ ಮರಿಯಮ್ಮ ಥಾಮಸ್ ಅವರು ಶಕ್ತಿನಗರದಲ್ಲಿ ಕಟ್ಟಡ ನಿರ್ಮಾಣಗಾರರೊಬ್ಬರು ರಸ್ತೆ ಸಹಿತ ಸಾರ್ವಜನಿಕ ಆಸ್ತಿಯನ್ನು ಅತಿಕ್ರಮಿಸಿದ್ದು, ತೆರವು ಮಾಡಲು ಹೊರಟ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು. ಈ ಆರೋಪ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಕೊನೆಗೆ ಶಶಿಧರ ಹೆಗ್ಡೆ ಮಾತನಾಡಿ, ಮೇಯರ್ ಆದೇಶದಂತೆ ಸತ್ಯಶೋಧನಾ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆ. ಪಾಲಿಕೆಯ ನಿಯಮಕ್ಕೆ ತಕ್ಕಂತೆ ನಡೆದುಕೊಳ್ಳುವುದಾಗಿ ಕಟ್ಟಡ ನಿರ್ಮಾಣಗಾರರು ಭರವಸೆ ನೀಡಿದ್ದಾರೆ ಎಂದರು.ಸರ್ಕಾರಿ ಕಚೇರಿಗಳು, ಕಟ್ಟಡಗಳಿಂದ ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ಪಾಲಿಕೆ ಕಟ್ಟುನಿಟ್ಟಾಗಿ ನಡೆದುಕೊಳ್ಳುತ್ತಿಲ್ಲ ಎಂದು ಶಂಕರ್ ಭಟ್ ದೂರಿದರು. ಕಂದಾಯ ಅಧಿಕಾರಿ ಅವರ ಕಾರ್ಯವೈಖರಿಯನ್ನೂ ಅವರು ಟೀಕಿಸಿದರು. ಆದರೆ ಜೇಮ್ಸ ಡಿಸೋಜ, ಮರಿಯಮ್ಮ ಥಾಮಸ್ ಇತರರು ಅಧಿಕಾರಿಯನ್ನು ಸಮರ್ಥಿಸಿದರು.ತೆರಿಗೆಗೆ ಸಮೀಕ್ಷೆ: ಆಸ್ತಿ ತೆರಿಗೆ, ನೀರಿನ ಬಿಲ್, ಒಳಚರಂಡಿ ಕರ ಸಹಿತ ಸಮಗ್ರ ತೆರಿಗೆ ಮತ್ತು ವರಮಾನದ ಲೆಕ್ಕಾಚಾರ ಮಾಡುವುದಕ್ಕಾಗಿ ಒಂದು ಅಥವಾ 2 ವಾರ್ಡ್‌ಗಳಲ್ಲಿ ಸಮಗ್ರ ತೆರಿಗೆ ಸಮೀಕ್ಷೆ ನಡೆಸಲಾಗುವುದು. ಅದರ ವರದಿ ಆಧರಿಸಿ ಇತರ ಎಲ್ಲಾ ವಾರ್ಡ್‌ಗಳಿಗೂ ಈ ಸಮೀಕ್ಷೆ ಮುಂದುವರಿಸಲಾಗುವುದು.ಮುಂದಿನ ಹಣಕಾಸು ವರ್ಷ ಆರಂಭಕ್ಕೆ ಮೊದಲು ಇದನ್ನು ಪೂರ್ಣಗೊಳಿಸಿ ವರದಿ ಸಿದ್ಧಪಡಿಸಲಾಗುವುದು. ಮುಂದಿನ ಹಣಕಾಸು ವರ್ಷದಿಂದ ಈ ವರದಿ ಆಧಾರದಲ್ಲೇ ವಾರ್ಡ್‌ಗಳಿಗೆ ಬಜೆಟ್ ಮೀಸಲಿಡುವ ಚಿಂತನೆ ನಡೆಸಲಾಗಿದೆ ಎಂದು ಹರೀಶ್ ಕುಮಾರ್ ಹೇಳಿದರು. ಒಳರಸ್ತೆಗಳಲ್ಲಿ ಹೊಂಡ ಮುಚ್ಚುವ ಕೆಲಸ ನಡೆಯದೆ ಇರುವುದಕ್ಕೆ ಜಯಂತಿ, ನಾಗೇಂದ್ರ ಕುಮಾರ್ ಇತರರು ಆಕ್ಷೇಪ ಎತ್ತಿದರು. ಮೇಯರ್ ಗುಲ್ಜಾರ್ ಬಾನು, ಉಪಮೇಯರ್ ಅಮಿತಕಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry